Thursday, October 17, 2013

ಸಖೀ ಗೀತ

ಅವಳೆಡೆಗೆ
ನೋಡ-ನೋಡುತ್ತಿದ್ದಂತೆಯೇ
ಬರಿದಾಗಿತ್ತು ಎನ್ನೆದೆಯ ಗೂಡು
ಹಿಡಿ ಗಾತ್ರದ ಹೃದಯ ಬಡಿಯುತ್ತಿದ್ದರೂ
ಮಿಡಿತ ಎನ್ನದಾಗಿರಲಿಲ್ಲಾ...

ಅವಳೆಡೆಗೆ ನೋಡಿದಾ ಕ್ಷಣ
ನೋಟಗಳೆರೆಡೂ ಸಂಧಿಸಿದಾ ಕ್ಷಣ
ಅಚ್ಚಂರಿಯಿಂದ ಬೆರಗಾಗಿ
ನೋಡುವಾಗಲೇ
ಹೃದಯವನು ಕದ್ದೊಯ್ದಳವಳು

ಎನ್ನೆಡೆಗೆ ಅವಳು ಕೈ-ಚಾಚಿದ್ದು ಕಾಣಲಿಲ್ಲ
ಅಥವಾ
ಅವಳ ಕಣ್ಣೆವೆಗಳಲಿ ಲೀನವಾಗಿರುವಾಗ
ಜರುಗಿದ ವಿಸ್ಮಯವ !!!
ನಾ ಗಮನಿಸಲಿಲ್ಲಾ...

ಎನ್ನ ಹೃದಯವನು ಅವಳು ಕದ್ದಳೋ
ಬಾಲೆಯೆಡೆಗೆ ತಡಬಡಿಸಿ
ಹೃದಯವೇ ಹಿಂಬಾಲಿಸಿತೋ
ನನಗೇನೂ ತಿಳಿಯದು...
ಎದೆಯ ಗೂಡಿನಲಿ ಮಂದ್ರವಾಗಿ ಹರಿಯುತಿದೆ
ಅವಳ ಪ್ರೇಮದಾ ಸಂಗೀತ...

Saturday, September 14, 2013

ಆಚೀಚೆ ನೋಡಿದಾಗ....

ಬಿಸಿಲು ಹರಡುವ ಅವನ
ದೈನಂದಿನ ಕ್ರಿಯೆಗೆ
ಒಮ್ಮೊಮ್ಮೆ...


ಅಡಚಣೆ ಮಾಡುತ್ತಿವೆ ಮೋಡಗಳು....
ಆದರೂ
ಇಣುಕಿ ನೋಡುತ್ತಾನೆ
ಆಗಾಗ ಮೋಡಗಳ ಮರೆಯಿಂದ...

ಅವನು ಗೋಚರಿಸಿದಾಗಲೆಲ್ಲಾ
ಹೂವುಗಳ ಮೊಗದಲ್ಲಿ ಮಂದಹಾಸ...
ಗರಿಕೆಯಂಚನು ಅಲಂಕರಿಸಿದ
ಮುತ್ತಿನ ಹನಿಯಲ್ಲಿ ಮುಗುಳ್ನಗು ಮೂಡಿ
ಆಗಸವನ್ನು ಅಲಂಕರಿಸುವಾ
ಸಪ್ತವರ್ಣದ ಕಾಮನಬಿಲ್ಲು....

ಇಳೆ, ಹೂವು, ಹಸಿರನ್ನು
ನೋಡುವ ಅವನ ಬಯಕೆಗಳಿಗೆ
ಅಡ್ಡ ಬರುವ ಮೋಡಗಳೂ
ಅವನ ತಾಪಕ್ಕೆ
ಕರಗಿ ಹನಿಯುತ್ತವೆ....
ಒಮ್ಮೊಮ್ಮೆ
ನಿಟ್ಟುಸಿರು ಬಿಡುವ ಪ್ರೇಯಸಿಯಂತೆ
ಆವಿಯಾಗಿ ಕಣ್ಮರೆಯಾಗುತ್ತವೆ

Wednesday, September 4, 2013

ಹಾಗೇ ಸುಮ್ಮನೇ....

ಹೇಳದೇ ಹೋಗುವುದು....
ಕಾಲ ಮತ್ತು "ನಾನು" ಮಾತ್ರ.....

ಕಾಲ ಸರಾಗವಾಗಿ ಓಡುತ್ತೆ
ನಮ್ಮ ಸಂತಸದ ಸಮಯದಲಿ
ಕಾಲಕೂ ಹೆಜ್ಜೆಗಳು ಭಾರ
ನಮ್ಮ ಸಂಕಷ್ಟ ಸಮಯದಲಿ

ಅರಿವು ಬಂದಾಗಲೇ ಅಂದುಕೊಂಡೆ
"ನಾನು" ಹೋಗಬೇಕೆಂದು
ಹೆಜ್ಜೆ ಇಟ್ಟಾಗಲೊಮ್ಮೆ ಸಾಬೀತಾಗಿದೆ
ಅದು ಸುಲಭದಲಿ ಸಾಧಿಸುವದಿಲ್ಲವೆಂದು.....

ಗೋಜಲು, ಗೊಂದಲ ಸಂಬಂಧಗಳ
ಸುಳಿಯಲ್ಲಿ ಸಿಲುಕಿಕೊಂಡು
ನಿಶ್ಚಲವಾಗಿದೆ, ವಿಹ್ವಲವಾಗಿದೆಯೆನ್ನ ಮನ
ಇದಕ್ಕೆ ಕಾಲವೇ ಸಾಕ್ಷಿ...

ಕತ್ತಲೆಯ ಮೂಲೆಯಲಿದ್ದರೂ
ಗೋಚರಿಸುತ್ತಿದೆ
ಎಲ್ಲ ಕಳಚಿ ಬಯಲಾಗುವವರೆಗೆ
"ನಾನು" ಹೋಗುವುದು ಸಾಧ್ಯವಿಲ್ಲವೆಂದು....

Saturday, August 31, 2013

ಅತಿಥಿ

ಬಾಗಿಲು ತೆರೆದ ಮನೆಯೊಡತಿ "ಅವರಿಲ್ಲವಲ್ಲಾ..." ಎಂದುಸಿರಿದಾಗ, ಭಾರವಾದ ಮನಸು ಹೊತ್ತು ವಿಷಣ್ಣತೆಯಿಂದ ಹಿಂದಿರುವಷ್ಟರಲಿ ಯಾವುದೋ ಕುತೂಹಲಕ್ಕೆ ಇಣುಕಿ ನೋಡಿದ ಅವರು ನನಗೂ ಕಾಣಿಸಿದ ತಪ್ಪಿಗೆ, ಅನಿವಾರ್ಯವಾಗಿ ನನಗೆ ಮನೆಯೊಳಗೆ ಪ್ರವೇಶ ದೊರಕಿತು.

ಸ್ವಾಭಾವಿಕವಾಗಿ ಉಭಯಕುಶಲೋಪರಿ ಮಾತುಗಳಲ್ಲೇ "ಅವರು ಅಲ್ಲಿ ಇರಲಿಲ್ಲ" ಎನ್ನುವುದು ನನಗೂ ಅರಿಯಾಯ್ತು...

ಸಂ-ಶೋಧನೆ

ಮನವ
ಮುದಗೊಳಿಸಲು
ಏನೋ !!
ಅರಸುತ್ತಿರುವ
ನೋಟ...

ಇಲ್ಲಿಯೇ ಇತ್ತು
ಕೈಗೆಟುವಂತೆ !!
ಎಲ್ಲಿ ಹೋಯಿತೋ
ಎಂದು
ಹುಡುಕುತ್ತಿರುವ
ಕರಗಳು....

ಒಂದೆಡೆಗೆ
ನಿಲ್ಲದೇ
ಜೀವನವಿಡೀ
ನೆಮ್ಮದಿಯನರಸಿ
ಅಲೆಯುವಾ
ಕಾಲುಗಳು....

ನನ್ನದಲ್ಲದ
ಸಂಗತಿಯೊಳಗೆ ತೂರಿ
ನನ್ನತನವನು
ಅರಸುತ್ತಿರುವ ಮನ

ಎಲ್ಲ ಗೋಜಲುಗಳ
ನಡುವೆ
ಕಳೆದು ಹೋಗಿರುವ
ನಾನು.....

ಸಖೀ ಗೀತ

ಸಖೀ....
ತೆರಳುವುದಕ್ಕೂ
ಪೂರ್ವದಲಿ ಎನ್ನ
ಎದೆಯೊಳಗೆ ಮುಖ
ಹುದುಗಿಸಿ
ಬಿಟ್ಟ ನಿಟ್ಟುಸಿರುನ
ಕಾವು
ಇನ್ನೂ ಇದೆ....

ಅರೆಗಳಿಗೆಯಾದರೂ
ಸಿಕ್ಕ ಅನುಭೂತಿಗೆ
ಅನುಗಾಲದಿಂದ
ಹೆಪ್ಪುಗಟ್ಟಿದ
ನೋವು ಕರಗಿ
ಆ...
ಜೀವದುಂಬಿದ ಕಂಗಳಿಂದ
ಉದುರಿದ
ಕಂಬನಿಗಳು
ಎನ್ನೆದೆಯ ಚಿಪ್ಪಿನೊಳಗೆ
ಮುತ್ತಾಗಿವೆ...

ವ್ಯಥೆ

ತೊರೆಯಲು ಮನಸಿಲ್ಲದೇ... ಹೊರಡುವ ಸಮಯವೆಂದು ಹಿಡಿದ ಕರವನ್ನು ಕೊಸರಿಕೊಂಡು ಸಾಗಿದ ಅವಳನ್ನು ಕಣ್ಣು ತುಂಬಿ ಮಂಜಾಗಿದ್ದರೂ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಭ್ರಮೆಯಲ್ಲಿ ಕಣ್ಮರೆಯಾಗುವವರೆಗೂ ನೋಡಿ... 
ಅವಳು ಮರೆಯಾಗುತ್ತಲೇ... 
ವಿದಾಯಕ್ಕೆ ನಿಟ್ಟುಸಿರಿನೊಂದಿಗೆ ವಿರಾಮ ಹಾಕಿದ...
ಅದುವರೆಗೂ ಸ್ಪಟಿಕದಂತೆ ಸ್ಪಷ್ಟವಾಗಿದ್ದ ನೋಟ ಮಂಜಾಗಿರುವುದುನ್ನು ಅರಿತು... ಕರಗಳಿಂದ ಕಣ್ಣೊರೆಸಿಕೊಂಡು... 
ಬೊಗಸೆಯಲಿ ಇಣುಕಿ ನೋಡಿದಾಗಲೇ... 
ಅವನಿಗೆ ಅಂಗೈಯಲ್ಲಿ ಪ್ರೇಮ ರೇಖೆ ಅವಳು ಕೊಸರಿಕೊಂಡು ಹೊರಟಾಗಲೇ ಅಳಿಸಿಹೋಗಿರುವುದು ಕಂಡು ಬಂತು....

ಕವಲು

ಅವನು ಹೇಗೋ ಏನೋ ಮಾಡಿಕೊಂಡು... 
ತನ್ನ ಹೃದಯಕೊಂದು ಮಿಡಿತ ತಂದುಕೊಂಡು... 
ಕಿರುಬೆರಳಿನಾಸರೆಯಲಿ ಕನಸಿನೂರಿನತ್ತ ಸಾಗುವಾಗ.... ಧೃತಿಗೆಟ್ಟು ನಿಂತಿದ್ದು ಕಂಡ ಕವಲು ದಾರಿಯಲಿ... 
ಗಮ್ಯ ಸೇರುವುದು ದುರ್ಭರವೆನಿಸಿ ಹಿಡಿದ ಕೈ-ಗಳ ಸಡಿಲಿಸಿ.... ಹಿಂತಿರುಗಿ ನೋಡಿದರೇ...
ಊರಿನತ್ತ ಮರಳಿ ಸಾಗಿದರೂ.... ಮನೆ ಸೇರಲು ಮತ್ತೆ ಕವಲು ದಾರಿಗಳು...
 
ಮನ ಒಂದಾದರೂ ಮನೆಯೊಂದಾದೀತೇ....
ಮುಂದೆ ಸಾಗುವುದು ಕಷ್ಟ... ಹಿಂದಿರುಗುವುದು ಕ್ಲಿಷ್ಟ....

ಕನವರಿಕೆ

ತಾನೇ ಹರಡಿರುವ ಬೆಳದಿಂಗಳನ್ನು ಗುಡಿಸುತ್ತಾ ಪಶ್ಚಿಮಾಭಿಮುಖವಾಗಿ ತನ್ನ ಗೂಡಿನೆಡೆಗೆ ಚಂದ್ರ ನಿಧಾನವಾಗಿ ಚಲಿಸುತ್ತಿರುವಾಗ, ಮರಗಳ ಮರೆಯಿಂದ ಅವಳು ಮಂದಗಮನೆಯಾಗಿ ಬಂದಳು, 

ಯಾಕಿಷ್ಟು ತಡವಾಯ್ತು ನಿನ್ನ ನಿರೀಕ್ಷೆಯಲಿ ತಾರೆಗಳನೆಲ್ಲಾ ಎಣಿಸಿ-ಗುಣಿಸಿದ್ದೇ ಬಂತು ಎಂದು ಕೇಳಬೇಕೆನಿಸಿದರೂ, ಸಿಕ್ಕ ಅಲ್ಪ ಸಮಯವನ್ನು ಕಾರಣ-ಸಬೂಬುಗಳಿಗೆ ವ್ಯಯ ಮಾಡುವುದು ಬೇಡವೆಂದೆಣಿಸಿ ಮುಗುಳ್ನಕ್ಕು ಅವಳನ್ನು ಸ್ವಾಗತಿಸಿದೆ...

ನೀನು ನನ್ನ ದೇಹಸಿರಿಯನ್ನು ನೋಡಿ ಪ್ರೀತಿಸಿರುವದಿಲ್ಲವೆಂದು ಗೊತ್ತು... ಆದರೂ ಹೇಳಿ ನೀವು ಪ್ರೀತಿಸುವುದು ನನ್ನ ರೂಪಲಾವಣ್ಯವೋ ಅಥವಾ ನಿಮಗೆ ಅಂತರಂಗ ಸೌಂದರ್ಯ ಇಷ್ಟವೋ ಎಂದು ಪಿಸುಮಾತಿನಲಿ ಅವಳು ಉಲಿದಳು. 

ಪ್ರೇಮ ಪಯಣದಲಿ ಮರಳಲಾರದಷ್ಟು ದೂರ ಸಾಗಿ ಬಂದಿದ್ದರೂ ಇದೇನು ಈ ಪ್ರಶ್ನೆ ಎಂದು ಕೇಳಬೇಕೆನಿಸಿದರೂ.... ಅವಳಾಗಲೇ ಎನ್ನ ಬಾಹುಗಳ ಸೇರಿದ್ದರಿಂದ.... ಸುಮ್ಮನಾಗಿ ನನಗೆ ನೀನು ಹೇಗಿದ್ದರೂ ಇಷ್ಟ ಸಖೀ ಎಂದೆ. ನಿಟ್ಟುಸಿರುನೊಂದಿಗೆ ಮೆಲ್ಲನೇ ಎದೆಗೊರಗಿದ ಮೊಗವನ್ನು ಅವಳು ಮೇಲೆತ್ತಿದಾಗ...

ಅವಳ ಮೊಗದಲ್ಲಿ ಮೀಸೆಗಳು ಮೂಡಿದ್ದವು... 
ನನ್ನ ಎದೆಯಲ್ಲಿ ನಡುಕ ಮೂಡುತ್ತಾ ಬೆನ್ನ ಹುರಿಯಲ್ಲಿ ಏನೋ ಅವ್ಯಕ್ತ ಕಂಪನ... 
ಅನತಿ ದೂರದ ಗುಡಿಯಲ್ಲಿ ಮೀಸೆ, ಕೋರೆಹಲ್ಲುಗಳಿಂದ ಅಲಂಕೃತವಾಗಿರುವ ಗ್ರಾಮದೇವಿಯ ಮುಖ ಕಣ್ಣಮುಂದೆ ಬಂತು...

ಹಾಗೂ-ಹೀಗೂ ಸಾವರಿಸಿಕೊಂಡು...
ನನಗೆ ನೀನು ಹೇಗಿದ್ದರೂ ಇಷ್ಟ ಸಖೀ ಎಂದು ಮತ್ತೊಮ್ಮೆ ಹೇಳಿದೆ....
ಏನಾಶ್ಚರ್ಯ !!!
ಅವಳ ಮೊಗದಲ್ಲೀಗ ಮೀಸೆಗಳು ಕಣ್ಮರೆಯಾಗಿ ಚಂದ್ರಿಕೆಯು ಬೆಳಗುತ್ತಿದ್ದಾಳೇ...
ಅಷ್ಟರಲ್ಲಾಗಲೇ ಚಂದ್ರ ಶರಧಿಯೊಡಲನ್ನು ಸೇರಿಕೊಂಡಿದ್ದ...

ಮೋಹನ ರಾಗ

ಪಾರಿಜಾತದ
ಬಾಹುಗಳಲಿ ವಿರಮಿಸುತ್ತಿರುವ
ಮೋಹನನ ಶಲ್ಯ...
ಅಲ್ಲಿಯೇ
ಕೊಂಚ ದೂರ
ಮುರಳಿಯೊಡನೆ ನವಿಲುಗರಿ

ಕಾಣುವನೆಂದು
ಕಣ್ಣರಳಿಸಿ ನೋಡಿದರೇ
ಮೋಹನನಿಲ್ಲ, ರಾಧೆಯೂ ಇಲ್ಲಾ...
ರಮಿಸುತ್ತಿರಬೇಕು ಮೋಹನ
ರಾಧೆಯ ಪರಿ-ಪರಿಯಾಗಿ
ರಸಮಯ ಸಮಯದಿ ಸರಸವಾಡುತ್ತಾ
ವಿರಮಿಸುತ್ತಿರಬೇಕು
ರಾಧೆಯ ಒಡಲಿನಲಿ

ಮುರಳಿಯೂ ಮುನಿಸಿಕೊಂಡು
ಮೌನದಲಿ ರೋದಿಸುತ್ತಿದೆ
ಮೋಹನನ ಅಧರಗಳು ತನ್ನ
ಚುಂಬಿಸದೇ
ರಾಧೆಯೊಡನಾಟದಲಿ ಮೈ-ಮರೆತಿರುವ
ಪರಮಾತ್ಮನ ನೆನೆದು

ಪಾರಿಜಾತದಿಂದುದುರಿದಾ
ಹೂವುಗಳು ಹೇಳುವ ಕಥೇಯೇ ಬೇರೆ
ಪರಮಾತ್ಮ ಅಲ್ಲಿಯೇ ಇದ್ದ
ರಾಧೆಯೊಡನೆ ಒಡನಾಟವಾಡುತ್ತಾ....
ಅಮರ ಪ್ರೇಮಿಗಳಡಿಯಲಿ ಸಿಲುಕಿ
ಒಲುಮೆಯಾಟದಿ ಸಿಕ್ಕು ಘಾಸಿಕೊಂಡರೂ
ಮುದಗೊಂಡು ನುಡಿಯುತಿವೆ
ಪ್ರೀತಿ ಅಮರ....
ರಾಧೆಯೂ......

ಹನಿ

ನನ್ನೊಡನೆ
ಆಗಸದಿಂದ ಉದುರಿದ
ಹನಿಗಳಲಿ....

ಹಲವು
ಭೂತಾಯ ಮಡಿಲು
ಸೇರಿ
ಅವರಿವರ ಹಸಿವು
ತಣಿಸುವಾ
ಕಾಳು
ಮೊಳಕೆಯೊಡೆಯಲು
ಕಾರಣವಾದವು

ಕೆಲವು
ಕಾದ ರಸ್ತೆಗಳ
ಮೇಲುರುಳಿ
ಚುರ್ರನೆ ಅವಿಯಾಗಿ
ಮತ್ತೆ
ಮೋಡಗಳ ಸೇರಿದವು

ಅದೇನು
ಮಾಯೆಯೋ....
ನಾನು
ಶರಧಿಯಂತರಾಳದಿ
ಬಾಯ್ದೆರೆದು
ಕುಳಿತಿರುವ
ನಿನ್ನೊಡಲ
ಸೇರಿ ಮುತ್ತಾದೆ.....

Saturday, August 17, 2013

ಬೆಳಕು

ಸಂಧ್ಯಾಕಾಲದ
ಭಾಸ್ಕರನ ಪ್ರತಿಫಲಿಸುತ್ತಾ
ಮಂದಗಮನೆಯಾಗಿ
ಸಾಗಿ ಬರುತ್ತಿರುವ
ಅವಳ ಕಣ್ಣುಗಳಲ್ಲಿ
ಮೂಡಿದೆ...
ಅರುಣೋದಯದ ಬೆಳಕು

ಅವನ ಬದುಕಿನ
ಬೆಳಗೂ-ಬೈಗೂ
ಹೊತ್ತು ತಿರುಗುತ್ತಿರುವ
ಚಂಚಲೆಯ
ಸುತ್ತಲೇ...
ಸುತ್ತುವುದು ಅವನ ಧ್ಯಾನ....

"ಅವನಿ"ಗೆ
ಅವಳೇ ಬಾಳ ಬೆಳಕು

ಕನವರಿಕೆ...

ನಿನ್ನ ಸನಿಹವನ್ನು ತೊರೆದು
ನಾನು ಬದುಕುವುದಾದರೇ....

ಗ್ರಹಣವೇ ಆಪೋಷನಗೊಂಡ ಸೂರ್ಯನಂತೆ
ಇರುಳ ರಂಗೋಲಿಯಲಂತೆ
ದಿನಗಳೆಲ್ಲಾ ಖಾಲಿ-ಖಾಲಿ...
ಕನಸುಗಳು, ಕನವರಿಕೆಗಳಿಲ್ಲದಾ
ಸುದೀರ್ಘ ಇರುಳುಗಳು

ನಿನ್ನೊಡನಾಟದಿ ನಾ-ನೆಲ್ಲವನೂ ನೋಡಬಲ್ಲೆ
ಮೊದಲಿಗೂ ಪ್ರೇಮಸಾಗರದಿ
ಒಲವಿನಾ ಅಲೆಗಳ ಸೆಳೆತಕೆ ಸಿಲುಕಿ
ನಾ ತೇಲಿರುವುದುಂಟು, ಮುಳುಗಿರುವುದುಂಟು
ಆದರೇ....
ತೀವ್ರತೆಯ ಪರಿಣಾಮವಿಂತಿರಲಿಲ್ಲಾ

ನಮಗೀರ್ವರಿಗೂ ಅರಿವಿದೆ
ನಮ್ಮ ಕನಸುಗಳೆಂದಿಗೂ ಮಧುರ
ಕಾಲಾತೀತ ಮಂಜುಳಗಾನ
ಕರೆದೊಯ್ಯುವವು ನಮ್ಮನು ಗಂಧರ್ವಲೋಕಕೆ

ಜೊತೆಯಾಗಿ ಸಾಗುವ ಬಾ, ಕೈ-ಹಿಡಿದು
ಒಪ್ಪಿಕೋ ಎನ್ನ, ಅಪ್ಪಿಕೋ ಎನ್ನ
ನಿನ್ನೊಡನಾಟವಿರದೇ
ನಾ.... ಬದುಕಲಾರೆ...

ಸಖೀ ಗೀತ

ಇತ್ತ ನೋಡು ಸಖೀ
ನಿನ್ನ ಚಂಚಲ ಕಣ್ಣುಗಳ ತಿರುಗಿಸಿ
ಸವಿನೆನಪುಗಳ ಹೊತ್ತು
ಬಳಲುತ್ತ ಸಾಗಿರುವ ಜೀವಕೆ
ನಿನ್ನ ನೋಟವೇ ಸಂಜೀವಿನಿ...

ಸುತ್ತಲೂ ಚೆಲ್ಲಿದೆ
ಪ್ರಕೃತಿಯ ಚೆಲುವು
ಚೆಲುವೆ ನೀನೇ ಪ್ರಕೃತಿ
ಈ ಪುರುಷನಿಗೆ
ಹಸಿರಾಗುವೆ ನಿನ್ನ ಬಾಳಿನಲಿ
ಉಸಿರಾಗು ನೀ ಎನ್ನ ಪ್ರೇಮದಲಿ....

ಸಂದೇಶ

ನನಗೆ ಗೊತ್ತು ಆ ಸಂದೇಶದಿಂದ ನಿನಗೆ ಕೋಪ ಬರಬಹುದು ಅಂತ... 
ಆದರೆ ಆ ಕ್ಷಣದಲ್ಲಿ ನನಗೆ ಅನಿಸಿದ್ದನ್ನು ನಾನು ಹೇಳಿದೆ... 
ನನ್ನ ವಿವರಣೆಯೂ ನಿನಗೆ ಸರಿ ಎನಿಸಲಿಲ್ಲ ಅಲ್ವಾ... 
ಮನದಲ್ಲಿ ತಳಮಳವಿದ್ದರೆ ಮಂಕು ಕವಿದು ಅನರ್ಥವಾಗುತ್ತದೆ... ಅದಕ್ಕೇ .... ಪುನಃ ಅದೇ ಸಾಲುಗಳನ್ನು...
ನಿಧಾನವಾಗಿ ಓದು ಅಂತ ಕಳುಹಿಸಿದೆ.....
ನೀನು ಅಂತವಳಲ್ಲ ನನಗೆ ಗೊತ್ತು ಸುಬ್ಬೀ...
...
ನನಗೆ ಪೆಟ್ಟು ಕೊಡೋದಿಕ್ಕೆ ಕೈ ಉಜ್ಜಿಕೋತಿದ್ದೀಯಾ...
ಕೆನ್ನೆ ಮುಂದೆ ಮಾಡಿದ್ದೇನೆ...
ನಿನಗೆ ಇಷ್ಟ ಬಂದದ್ದು ಕೊಡು...

ವಿದಾಯ

ಸಮಯ
ಮುಗಿದ ನಂತರ
ಹೊರಡಲೇ ಬೇಕು.

ನಿಲ್ಲುವ ಹಾಗಿಲ್ಲಾ,
ಸ್ವಲ್ಪ ಹೊತ್ತು
ಕುಳಿತಿರಬಹುದಾದರೂ
ಹೊತ್ತು ಕಳೆಯುವ
ಜಾಗವಿದಲ್ಲಾ.

ಹೊರಡುವ ಸಮಯ
ಹೊರಟೆ ಅಷ್ಟೇ !!!

ಎಲ್ಲಿಗೆ ಹೋಗುವುದು
ತಲೆಯಿಂದ ಕಾಲುಗಳಿಗೆ
ಸೂಚನೆಯೇನೂ ಬಂದಿಲ್ಲ
ಕಾಲುಗಳು
ತಮ್ಮ ಹೆಜ್ಜೆ-ಹೆಜ್ಜೆಯಲಿ
ದೂರವನು
ಕ್ರಮಿಸುತ್ತಾ ಸಾಗಿವೆ...

ಸೇರಬೇಕಾಗಿರುವ
ಗಮ್ಯದ ಬಗೆಗೆ
ಸೂಚನೆ
ದೊರಕುವವರೆಗೆ
ಸುಮ್ಮನೇ
ಗೊತ್ತು-ಗುರಿಯಿಲ್ಲದಾ
ಅಲೆದಾಟ...

ಸಖೀ ಗೀತ

ಸಖೀ...

ಮುನಿಯದಿರು, ಕೊರಗದಿರು
ಗೋಪಿಕೆಯರೊಡನಾಟದಿ
ಮುರಳಿ ಮರೆತಿಹನೆಂದು....

ಜಗದುದ್ದಗಲ ತಿರುಗಿದರೂ
ತಿರುಗಿ ಬರುವೆ
ನಿನ್ನೊಲವ ಸೆಳೆತಕೆ....

ತಿರುಗಿ ನೋಡು
ಎನ್ನ ಕಣ್ಣಾಲಿಗಳಲಿ
ಮೂಡಿದೇ ನಿನ್ನದೇ ಬಿಂಬ...

ವಿರಹಾ....

ಒಲುಮೆಯಾ
ಮಿಲನವೊಂದು ಮುಗಿದು
ಪ್ರತಿಬಾರಿ ನೀನು
ನಿರ್ಗಮಿಸಿದಾಗಲೂ
ಶೂನ್ಯದತ್ತಲೇ
ಎನ್ನ ಗಮನ...

"ಏನಾಯ್ತು, ಹೀಗೇಕೆ"
ಎಲ್ಲರಾ ಕಳವಳದ ಮಾತು
ಗಾಯವಿಲ್ಲಾ
ನೋವಿನಾ ಗುರುತಿಲ್ಲಾ
ಪೇಲವ ನಗೆಯೊಂದೇ
ಎನ್ನ ಉತ್ತರಾ....

ಪ್ರತಿ ಇರುಳಿನ
ಎನ್ನ ಏಕಾಂತದಲಿ
ಎಲ್ಲಿಹಳು ಎನ್ನವಳು
ಎಂಬ ಪ್ರಶ್ನೆಯೊಡನೆ
ಮನದ ಭಿತ್ತಿಯಲಿ
ಮೂಡುವಾ ನಿನ್ನ ಪ್ರತಿಬಿಂಬ...

ವಿದಾಯದೊಂದಿಗೆ
ಕೊನೆಗೊಳ್ಳುವಾ
ನಮ್ಮ ಮಿಲನಗಳು....
ಪುನರ್ಮಿಲಕೆ
ಮುನ್ನುಡಿಯಾಗಲಿ
ನಮ್ಮ ವಿದಾಯಗಳು....

ವಿರಹಾ.....

ಶೀತಲ ಸಮರ
ಮಂಜುಗಟ್ಟಿದೆ ಮನಸು
ಬಿಸಿಯುಸಿರಲಿ ಬೆಸೆದು
ಕರಗಿಸಬೇಕು...

ಒಬ್ಬರಿಂದೊಬ್ಬರು
ವಿಮುಖರಾಗಿದ್ದರೂ
ಚಿತ್ತವೆಲ್ಲವೂ ತುಂಬಿದೆ
ಮನೋರಮೆಯ ಚಿತ್ರ...

ತೊರೆಯ ದಡಗಳ ಆಚೆ
ಸಂತ್ರಸ್ತ ಪ್ರೇಮದ ತುಣುಕುಗಳು
ತೆರೆ ಕರಗಿ ಒಂದಾಗಲು
ಬೇಕಿದೆ ನೀಳ ಬೆರಳುಗಳ ಸ್ಪರ್ಷ...

ಒಂದಿನಿತು ವಿರಹಾ
ಅದುವೇ ತರಹ ತರಹಾ
ನಿಟ್ಟುಸಿರಿನ ಬೇಗೆ
ಕರಗುತಿದೆ ಮಂಜಿನಾ ತೆರೆ.....

ಉಚ್ವಾಸ-ನಿಸ್ವಾಸ
ನಮ್ಮುಸಿರು ಪ್ರೀತಿಯೇ
ಮನದ ಮಾಲಿನ್ಯ ಕರಗಿ
ಮಾಲಿನಿಯ ನೋಟದಲಿ ಲೀನವಾಗಬೇಕು...

Wednesday, August 7, 2013

ಸಖೀ ಗೀತ

ನನ್ನ ಕನಸುಗಳು
ಕನವರಿಕೆಗಳು
ಸದಾ ಕಾಲ
ಏಕಾಗ್ರಚಿತ್ತದಿಂದ
ಅವಳ ಸುತ್ತಲೇ
ಸುಳಿದಾಡುತ್ತವೆ....

ಬರೆಯಬೇಕೆಂಬ
ಬಯಕೆಯಿಂದ
ಬಿಳಿಯ ಕಾಗದ
ಕೈಗೆತ್ತಿಕೊಳ್ಳುತ್ತಲೇ
ಅಕ್ಷರಗಳಿಗೂ ಮೊದಲು
ಅವಳ
ಪ್ರತಿಬಿಂಬ ಮೂಡುತ್ತದೆ

ಹಾಗೋ ಹೀಗೋ
ಭಾವಗಳಿಗೆ ಪದಗಳ ಹೆಕ್ಕಿ
ಹೊಂದಿಸುವಾಗ
ಮತ್ತದೇ
ಅವಳ ತುಂಟ-ನೋಟ
ಮಂದಸ್ಮಿತ ಭಾವ
ಕವಿತೆಯಾಗುತ್ತದೆ....

Thursday, August 1, 2013

ದುಂಬಿ

ಎದೆ ತುಂಬ
ಜೇನ ಸ್ಪುರಿಸಿ
ದುಂಬಿಗಾಗಿ
ಕಾದಿತ್ತು
ಹೂವೊಂದು...

ಗೋಕುಲದಾ
ಕಡೆಯಿಂದಾ
ಹಾರಿ ಬಂದ
ದುಂಬಿಯೋ....
ಹೂವಿನಾ
ಎದೆ ಬಗೆದು
ಅಮೃತವಾ ಹೀರಿ...

ಹಿಂತಿರುಗಿ
ನೋಡದೇ...
ಮತ್ತೆ ನಡೆದಿತ್ತು
ಅರಳಿ ನಿಂತ
ಮತ್ತೊಂದು
ಹೂವಿನೆಡೆಗೆ....

ಏನೋ ತೋಚಿದ್ದು....

ಬಾನು
ಯಾವಾಗಲೂ
ಬಯಲು
ಭಾನುವಿನ ಆಟೋಟಕೆ....

ಬಾನಿನಲಿ
ಏನೂ ಇಲ್ಲಾ
ಹಗಲು ಬೆಳಗುವ
ಭಾಸ್ಕರ
ಇರುಳಿನಲಿ
ಅಲಂಕರಿಸುವ
ಚಂದ್ರ ತಾರೆಗಳು

ಆಗಾಗ
ಸೂರ್ಯ-ಚಂದ್ರರ
ಮರೆ ಮಾಚುವಾ
ಮೋಡಗಳು
ಯಾವುದೂ...
ಬಾನಿನದಲ್ಲಾ

ಬಾನು
ಬಯಲೇ
ಆಕಾಶ ಕಾಯಗಳ
ನೇತು ಹಾಕಿರುವ
ಗೋಡೆಯಂತೇ....

Tuesday, July 23, 2013

ಕಾಲಚಕ್ರ

ಕಾಲ
ಕಾಯುವದಿಲ್ಲ...

ಕಾರಿನಲಿ ಹೋದರೇನು
ಕಾಲ್ನಡಿಗೆಯಾದರೇನು
ಕಾಲನಡಿಗೆ
ಸಿಲುಕಿ
ಸಂವತ್ಸರವೊಂದು
ಉರುಳಿದೆ

ಬಾಳ ಪಯಣದಲಿ
ಅತ್ತಿತ್ತ ನೋಡುತ್ತಾ
ಸಾಗುವಾಗ
ಕೈ-ಬೀಸಿ
ಕರೆದವರು ಕೆಲವರು
ಕೈ-ಕುಲುಕಿ
ಜೊತೆಗೆ
ನಡೆದವರು ಕೆಲವು

ಅಪರಿಮಿತ ಜಾಗ
ಹೃದಯಾಂತರಾಳದೊಳಗೆ
ಸೇರಿ ನಲಿದಾಡುತಿಹರು
ಕೆಲವರು
ಅಂತರಂಗದಲಿ
ರಂಗು-ರಂಗಿನ
ರಂಗೋಲಿ ಬಿಡಿಸುತಾ
ಹರಿಸುವರು ಅನವರತ
ಸವಿ-ನೆನಪ ಧಾರೆ......

Saturday, March 16, 2013

ಹೀಂಗsssss ಒಮ್ಮೊಮ್ಮೆ....

ಒಬ್ಬ ವ್ಯಕ್ತಿಯ ಆಸಕ್ತಿ, ಹವ್ಯಾಸಗಳು ಎಷ್ಟೇ ಅಪರಿಮಿತವಾಗಿದ್ದರೂ ಅವುಗಳನ್ನು ವ್ಯಕ್ತಪಡಿಸುವ ಮಾಧ್ಯಮಗಳು ಅವಶ್ಯಕ, ತೋಚಿದ್ದನ್ನೆಲ್ಲ ಗೀಚುವ ವ್ಯಕ್ತಿಯಾಗಿರುವ ನಾನು, ನನ್ನ ಆಸಕ್ತಿಗೆ ಅನುಗುಣವಾದ, ಸೂಕ್ತವಾದ ಸ್ನೇಹಿತರು ಬಳಗವನ್ನು ಅವಲಂಬಿಸಿರುತ್ತೇನೆ. ಸಮಾನ ಮನಸ್ಕರ ವೇದಿಕೆಯೊಂದು ಪರಸ್ಪರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದರಲ್ಲಿ ಸಂಶಯವಿಲ್ಲ. ಹೀಗೆ ಒಂದು ವೇದಿಕೆಯಲ್ಲಿ ಸೇರಿದ ಗೆಳೆಯರ ಬಳಗ ಕೆಲವು ಅನವಶ್ಯಕ ಘಟನೆಗಳು, ಅಹಿತಕರ ಪ್ರತಿಕ್ರಿಯೆಗಳು ಮುಂತಾದ ಕಾರಣಗಳಿಂದ ಅನುಕೂಲಕರ ವಾತಾವರಣ ಅರಸಿ, ಅನ್ವೇಷಣೆಯಲ್ಲಿ ಪುನಃ ಮತ್ತೊಂದು ವೇದಿಕೆಯತ್ತ ಮುಖ ಮಾಡುವುದು ಬೆಳವಣಿಗೆಗೆ ಸರಿಯಾದ ವಿಚಾರವಾದರೂ ಇದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತ ಹೋದರೆ ಪಲಾಯನವಾದಕ್ಕೆ ಸಿಲುಕುವ ಅಪಾಯವಿರುತ್ತದೆ.
ಲೋಕದಲ್ಲಿ ವಿಧ-ವಿಧ ವ್ಯಕ್ತಿಗಳು, ವಿವಿಧ ಅಭಿಪ್ರಾಯಗಳು, ಪೂರಕ-ಮಾರಕ ಪ್ರತಿಕ್ರಿಯೆಗಳು ಸಹಜವಾದದ್ದು. ನಾವು ನಡೆಯುವಾಗ ರಸ್ತೆಯಲ್ಲಿ ಬಿದ್ದಿರುವ ಕಸ-ಕಡ್ಡಿ, ಮಲಿನ ಪದಾರ್ಥ, ಕಲ್ಲು-ಮುಳ್ಳು(ಮೆಟ್ರೋ ನಗರದಲ್ಲಿ ಇರುವದಿಲ್ಲ) ಗಳನ್ನು ದಾಟಿ ಮುನ್ನಡೆಯುವಂತೆ, ಬಾಳ ಪಯಣದಲ್ಲಿ ಋಣಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ ಮುನ್ನಡೆಯಬೇಕು. ಹಾಗೆಯೇ ನಮ್ಮ ಪಯಣದಲ್ಲಿ ನಮ್ಮ ಮನಸ್ಸಿಗೆ ಮುದ ನೀಡುವ ಹೂವಿನ ಪರಿಮಳ, ಚಿಟ್ಟೆಗಳ ಹಾರಾಟ, ದೂರದಿಂದ ಕೇಳಿ ಬರುವ ಸಂಗೀತ, ಆಗಸದಲ್ಲಿ ಕಾಣುವ ಮೋಡಗಳ ಚಿತ್ತಾರ, ತುಂತುರು ಮಳೆ ಮುಂತಾದವುಗಳನ್ನು ಸವಿಯುವಂತೆ ಅನುಕೂಲಕರ ಸಂಗತಿಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ನಮಗೆ ಯಾವುದು ಸೂಕ್ತ ಎಂಬುದನ್ನು ನಾವು ನಿರ್ಧರಿಸಬೇಕು. ಕೆಲವು ಸಂದರ್ಭದಲ್ಲಿ ನಮಗೆ ಅನುಕೂಲಕರ ಪ್ರತಿಕ್ರಿಯೆ, ಅಭಿಪ್ರಾಯಗಳು ದೊರಕದಿದ್ದರೆ ಮನಸು ವಿಹ್ವಲಗೊಳ್ಳದಂತೆ ನಿಯಂತ್ರಿಸಿ, ಈ ತೆರನಾದ ಘಟನೆಗಳಿಗೆ ಕಾರಣವಾದ ಅಂಶಗಳನ್ನು ಅರಿಯುವ ಸಾಮರ್ಥ್ಯ ಪಡೆಯಬೇಕು. ಆತ್ಮಾವಲೋಕನದ ಇಂತಹ ಸಾಮರ್ಥ್ಯ ನಿಧಾನವಾಗಿ ಸಿದ್ಧಿಸುವುದಾದರೂ ಒಮ್ಮೆ ಮನೋ ನಿಯಂತ್ರಣ ಸಾಧಿಸಿದರೆ, ಪರನಿಂದೆ ನಮ್ಮನೆಂದೂ ಬಾಧಿಸದು.
ನಮ್ಮ ಎದುರಿಗೆ ಇರುವ ವ್ಯಕ್ತಿ ಆ ಇನ್ನೊಬ್ಬರು ಆ ರೀತಿಯಲ್ಲಿ ಋಣಾತ್ಮಕ ಪ್ರತಿಕ್ರಿಯೆ ನೀಡಲು ಕಾರಣವೇನು ? ಇಂತಹ ಸ್ಥಿತಿಗೆ ಕೇವಲ ಎರಡು ಸಾಧ್ಯತೆಗಳು ಇರುತ್ತವೆ. ಒಂದೋ ನಮ್ಮ ಅಭಿಪ್ರಾಯ, ಅಭಿವ್ಯಕ್ತಿ ದೋಷಪೂರಿತವಾಗಿರಬಹುದು ಇದನ್ನು ನಿವಾರಿಸಲು ಆತ್ಮಾವಲೋಕನ ಅವಶ್ಯಕ. ನಮ್ಮ ಬೆನ್ನಹಿಂಬದಿ ನಮಗೆ ಕಾಣದಿರುವಂತೆ, ನಮ್ಮ ದೋಷಗಳೂ ಸಹ ನಮಗೆ ಸ್ಪಷ್ಟವಾಗಿ ನಮಗೆ ಗೋಚರಿಸುವದಿಲ್ಲ. ಬೇರೆಯವರು ಹೇಳಿದ್ದನ್ನು ಕುರಿತು ಶಾಂತ ಮನಸಿನಿಂದ ಸ್ವಲ್ಪ ಯೋಚಿಸಿದರೆ, ನನ್ನತನವನ್ನು ಬಿಟ್ಟು ಅವರ ಸ್ಥಾನದಲ್ಲಿ ನಿಂತು ಯೋಚಿಸಿದರೆ, ಪ್ರಾಯಶಃ ನಮ್ಮ ದೋಷಗಳು ನಮಗೆ ಗೋಚರಿಸಬಹುದು. ಇನ್ನೊಂದು ಸಂಭಾವ್ಯತೆ ನಮ್ಮ ಎದುರಿನ ವ್ಯಕ್ತಿಯ ವಿಚಾರಗಳು ದೋಷಪೂರ್ಣವಾಗಿದ್ದರೆ ಒಂದೆರಡು ಸಾರಿ ಅವರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳಬಹುದು. ವೈಚಾರಿಕ ಸಂಗತಿಗಳನ್ನು ವಿವರಿಸುವ ನಮ್ಮ ಪ್ರಯತ್ನಗಳು ಫಲ ನೀಡದಿದ್ದರೆ, ಅವರ ಪಾಡಿಗೆ ಅವರನ್ನು ಬಿಟ್ಟು ನಮ್ಮ ಪಯಣ ಮುಂದುವರೆಸುವುದು ಸೂಕ್ತ.
"ಲೋಕೋಭಿನ್ನ ರುಚಿ" ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಅವರವರ ಭಾವಕ್ಕೆ ತಕ್ಕಂತೆ ರುಚಿ-ಅಭಿರುಚಿ ಬದಲಾಗುತ್ತ ಹೋಗುತ್ತವೆ. ರಸ್ತೆ ಬದಿಯಲ್ಲಿ ಕಳ್ಳೇಕಾಯಿ ಮಾರುವವನಿಂದ ಎರಡು ರೂಪಾಯಿಯ ಶೇಂಗಾ ಬೀಜ ತಿನ್ನುವ ವ್ಯಕ್ತಿಯ ಸಂತೃಪ್ತಿ ಹಾಗೂ ತಾರಾ ಮೌಲ್ಯದ ಹೋಟಲ್ ಒಂದರಲ್ಲಿ ಹೋಗಿ ವಿವಿಧ ತಿಂಡಿ-ತಿನಿಸುಗಳನ್ನು ತಿನ್ನುವ ವ್ಯಕ್ತಿಯ ಸಂತೃಪ್ತಿಯ ಮಟ್ಟ ಒಂದೇ ಆಗಿರುತ್ತದೆ. ಹೊಟ್ಟೆಗೆ ಏನಾದರೂ ಹಾಕಬೇಕು, ಬಡವನಿರಲಿ-ಸಿರಿವಂತನಿರಲಿ ಎಲ್ಲರದೂ ಹೊಟ್ಟೆಪಾಡಿನ ಜೀವನವೇ. ಹಸಿವು ಎನ್ನುವುದು ಕೆಲವರಿಗೆ ತೀವ್ರವಾಗಿರುತ್ತದೆ ಇನ್ನು ಕೆಲವರಿಗೆ ಹಸಿವಿನ ಭಾವನೆಗಳು ಬೇರೆಯಾಗಿರುತ್ತದೆ. ಬಡವನ ಹಸಿವು ಹೊಟ್ಟೆಹೊರೆಯುವುದಾದರೆ ಕೆಲವರಿಗೆ ಧನ-ಕನಕ ಗಳಿಸುವ ಹಸಿವು, ಕೆಲವರಿಗೆ ಹೆಸರು ಗಳಿಸುವ ಹಸಿವು ಹೀಗೇ ವ್ಯಕ್ತಿಯಿಂದ ವ್ಯಕ್ತಿಯ ರುಚಿ-ಅಭಿರುಚಿ ಬದಲಾವಣೆಗೊಳ್ಳುತ್ತವೆ.
ಎಲ್ಲರೂ ನಮ್ಮಂತೆಯೇ ಇರಬೇಕು, ನಮ್ಮ ಮಟ್ಟದ ಯೋಚನೆ-ಆಲೋಚನೆಯನ್ನು ಹೊಂದಬೇಕು, ನಮ್ಮ ವಿಚಾರ ಮೌಲ್ಯಗಳನ್ನು ಅರಿಯಬೇಕು-ಅನುಸರಿಬೇಕು ಎಂಬುವದು ಎಲ್ಲರೂ ಬಯಸುವ ವಿಷಯವೇ. ಇಂತಹ ವಾತಾವರಣ ನಿರ್ಮಾಣವಾಗಬೇಕಾದರೆ ಒಂದೋ ನಾವು ಅವರ ಮಟ್ಟದಲ್ಲಿ ಸಂವಹನ ನಡೆಸಬೇಕು ಇಲ್ಲವಾದರೆ ಅವರನ್ನು ನಮ್ಮ ಮಟ್ಟಕ್ಕೆ ಏರುವಂತೆ ಬೆಳವಣಿಗೆಗೆ ಪೂರಕವಾಗಿ ವಷಯಗಳನ್ನು ಮನದಟ್ಟಾಗುವಂತೆ ಹೇಳುವದನ್ನು ಕಲಿಯಬೇಕು. ಜೀವನದ ಪಾಠಶಾಲೆ ಮರಣದವರೆಗೂ ಕೊನೆಗೊಳ್ಳುವದಿಲ್ಲ ಅಲ್ಲವೇ......

ನೆನಪಿನಾಳದಿಂದ.....


ನಮ್ಮೂರೊಳಗ ಎಲ್ಲರೂ ನಮ್ಮಜ್ಜಗ ಮಾಸ್ತರ ಅಂತಲೇ ಕರೀತಿದ್ದರು. ಹಂಗ ನೋಡಿದ್ರ ಅವರಿಗೂ ಮಾಸ್ತರಿಕೆಗೂ ವೃತ್ತಿಯಿಂದ ಯಾವುದೇ ತರಹದ ಸಂಬಂಧ ಇರಲಿಲ್ಲ. ಆದರ ಅವರು ಕಲಿಯುವದಕ್ಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಪ್ರೋತ್ಸಾಹ ಕೊಡುತಿದ್ದರು. ಸುಮಾರು 1970ರ ದಶಕದಲ್ಲಿ ಶಿಕ್ಷಣಕ್ಕ ಇನ್ನೂ ಅಂತಹ ಪ್ರಾಶಸ್ತ ಸಿಕ್ಕಿರಲಿಲ್ಲ, ಜನರಿಗೆ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸಬೇಕು, ಕಲಿಸಬೇಕು ಅನ್ನೂ ತಿಳುವಳಿಕೆ ಬಂದಿರಲಿಲ್ಲ. ಆ ಸಮಯದಲ್ಲಿ ಸದ್ದಿಲ್ಲದೇ ನಮ್ಮಜ್ಜ ಎಲ್ಲಾ ಹುಡುಗರನ್ನ ಶಾಲೆಗೆ ಕಳಿಸಿರಿ ಅಂತ ಊರೊಳಗ ಎಲ್ಲರಿಗೂ ಹೇಳತಿದ್ದಾ. ಬಡವರಿಗೆ ಶಾಲೆಯ ಫೀಸು ತುಂಬತಿದ್ದಾ, ಅಗತ್ಯ ಇದ್ದವರಿಗೆ ಪುಸ್ತಕ ಕೊಡಸತಿದ್ದಾ.  ಒಟ್ಟಿಗೆ ಶಿಕ್ಷಣಕ್ಕ ಅಂದ್ರ ಅವನಿಗೆ ಒಂದು ತೆರನಾದ ಪ್ರೀತಿ. ಸಾಕ್ಷರತೆ ಎಲ್ಲರಿಗೂ ದೊರಕಬೇಕು ಅನ್ನೂದು ಅವನ ಸಿದ್ದಾಂತ ಆಗಿತ್ತು.
ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಸಮಯದಲ್ಲಿ ಶಾಲೆಯೊಳಗ ಕಲಿತದ್ದಕ್ಕಿಂತ ನಮ್ಮಜ್ಜನ ಕೈಯೊಳಗ ಕಲಿತದ್ದ ಹೆಚ್ಚು. ಇವತ್ತಿಗೂ ನನ್ನ ಗಣಿತ ವಿಶೇಷವಾಗಿ ಹೇಳಬೇಕಂದ್ರ ನನ್ನ ಬಾಯಿಲೆಕ್ಕ ಮುಂತಾದವುಗಳ ಜಾಣ್ಮೆ ನಮ್ಮಜ್ಜನ ಕಠಿಣವಾದ ತರಬೇತಿಯ ಕೊಡುಗೆ ಅಂತ ನಾ ಹೇಳಬಲ್ಲೆ. ನನಗ ಇಷ್ಟ ಇದ್ದರೂ, ಇಲ್ಲದಿದ್ದರೂ ಸಹ ನಾನು ಅವರ ಕೈಯೊಳಗ ಕಲಿಯಬೇಕಾಗಿತ್ತು. ಯಾಕಂದ್ರ ಮಾಸ್ತರ ಅಂದ್ರ ನಮ್ಮೂರೊಳಗ ಎಲ್ಲರಿಗೂ ವಿಶೇಷ ಗೌರವ ಇತ್ತು. ನಮ್ಮಜ್ಜನ ಕಡೆ ಗಣಿತ ಹೇಳಿಸಿಕೊಳ್ಳಿಕ್ಕೆ ಊರಿನ ಎಲ್ಲಾ ಮನಿಯವರು ತಮ್ಮ ಮಕ್ಕಳನ ನಮ್ಮಜ್ಜನ ಕಡೆ ಕಲಿಸಾಕ ಕಳಿಸಿಕೊಡತಿದ್ರು. ಹಿಂಗಾಗಿ ನನ್ನ ಜೊತೆಗೆ ನನಗಿಂತ ದೊಡ್ಡವರೂ ನಮ್ಮಜ್ಜನ ಕೈಯೊಳಗ ತರಬೇತಿ ತಗೋತಿದ್ರು. ಆದರ ನಮ್ಮಜ್ಜ ಬಹಳ ಶಿಸ್ತಿನ ಮನುಷ್ಯಾ ಕಲಿಸೂದರೊಳಗ ಬಹಳ ಕಟ್ಟುನಿಟ್ಟು. ಎಷ್ಟಕ್ಕಾತಿ ಅಷ್ಟು ತಿಳಿಸಿ ಹೇಳತಿದ್ರು ನಡು-ನಡುವ ದಡ್ಡರಿಗೆ ಛಡಿಏಟಿನ ಶಿಕ್ಷೆ ಇರತಿತ್ತು. ಅವರು ಕೊಡು ಏಟಿಗೆ ಬಹಳ ಮಂದಿ ಅರ್ಧಕ್ಕ ಬಿಟ್ಟು ಹೋಗತಿದ್ದರು. ಆದರ ನಮ್ಮಜ್ಜ ಬಂದವರಿಗೆ ಕಲಿಸತಿದ್ದಾ, ಹೋದವರ ಮರಿತಿದ್ದಾ. ಅದು ಅವರವರ ಸಾಮರ್ಥ್ಯ ಅಂತ ಸುಮ್ಮನಾಗತಿದ್ದ. ಈ ರೀತಿ ಇರುವಾಗ ನನಗ ನನ್ನ ಜೊತೆ ಇರುವ ದೊಡ್ಡ ಹುಡುಗರ ಪುಸ್ತಕ ಉಚಿತವಾಗಿ ಸಿಗತಿದ್ದವು. ನಾನು ಯಾವುದೇ ಕ್ಲಾಸು ಇದ್ದರೂ ಸಹ ನನ್ನ ಕ್ಲಾಸಿನ ಅಭ್ಯಾಸದ ಜೊತೆಗೆ ನನಗಿಂತ ದೊಡ್ಡವರ ಪುಸ್ತಕದೊಳಗಿನ ಅಭ್ಯಾಸ ನನಗ ನಮ್ಮಜ್ಜ ಮಾಡಸತಿದ್ದ.
ನಾನು ಆಗ ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಯಾವ ಕ್ಲಾಸ್ ಓದಿದರೇನು ನನಗ ಯಾವಾಗಲೂ ಹಳೇ ಪುಸ್ತಕ ಮಾತ್ರ ಸಿಗತಿದ್ದವು. ಈಗಿನಂಗ ಅವಾಗ ಎಲ್ಲರೂ ಹೊಸ ಪುಸ್ತಕಾನ ತೊಗೋಬೇಕು ಅಂತ ಇರಲಿಲ್ಲ. ಇದೂ ಅಲ್ಲದ ನಂದು ಸರ್ಕಾರಿ ಶಾಲೆ ಈಗಿನಂಗ ಅವಾಗ ಎಲ್ಲರಿಗೂ ಉಚಿತ ಪುಸ್ತಕ ಕೊಡೂ ಯೋಜನಾ ಇರಲಿಲ್ಲ. ಹಳೇ ಪುಸ್ತಕ ಓದಿ-ಓದಿ ಅವನ್ನ ನೋಡಿ-ನೋಡಿ ನನಗ ಬಹಳ ಬೇಜಾರಾಗ್ತಿತ್ತು. ಆದ್ರ ನನಗ ನಮ್ಮಜ್ಜ ಹೊಸ ಪುಸ್ತಕ ಕೊಡಸ್ತಿರಲಿಲ್ಲ. ಕೇಳಿದ್ರ "ಪುಸ್ತಕ ಹಳೇದಾದ್ರೇನು ಹೊಸದಾದ್ರೇನು ಅದರೊಳಗ ಏನು ಇರಬೇಕು ಅದ ಇರತತಿ.... ಪುಸ್ತಕ ಹೆಂಗೈತಿ ಅಂತ ನೋಡಬೇಡ ಅದರೊಳಗಿನ ಜ್ಞಾನ ಏನದ ಅಂತ ನೋಡಬೇಕು" ಅಂತಿದ್ದಾ.
ಈ ಮಾತ ಎಲ್ಲರೂ ಒಪ್ಪಬೇಕಾದದ್ದೇ ಆದರ ಅದನ್ನ ಅರ್ಥ ಮಾಡಿಕೊಳ್ಳೋ ತಿಳುವಳಿಕೆನೂ ಇರಲಿಲ್ಲ ತಿಳಕೊಳ್ಳುವಂತ ವಯಸ್ಸೂ ಗಿರಲಿಲ್ಲ. ನನಗೂ ಎಲ್ಲಾರಂಗ ಹೊಸ ಪುಸ್ತಕ ಬೇಕು ಅನ್ನೂದ ನನಗ ಬಹಳ ಆಸೆ ಆಗ್ತಿತ್ತು. ಹಳೇ ಪುಸ್ತಕ ಇದ್ರೂ ಅವನ್ನ ಹೊಲದು (ಈಗಿನಂಗ ಅವಾಗ ಬೈಂಡಿಂಗ್ ಅಂಗಡಿ ಇರಲಿಲ್ಲ) ಗಟ್ಟಿ ಮಾಡಿ ಕೊಡತಿದ್ರು. ಹಿಂಗ ಇರುವಾಗ  ಹೆಂಗಾದ್ರೂ ಮಾಡಿ ಹೊಸ ಪುಸ್ತಕ ಕೊಡಿಸಿಕೊಳ್ಳಬೇಕು ಅಂತ ನಾನು ಒಂದು ಐಡಿಯಾ ಮಾಡಿದೆ. ಪುಸ್ತಕ ಗಟ್ಟಿ ಇದ್ರ ಹೊಸಾದು ಕೊಡಸೂದಿಲ್ಲ ಅದಕ್ಕ ಅದನ್ನ ನಡುವ ಅಡ್ಡಡ್ಡ ಹರಿದು, ಹೊಸ ಪುಸ್ತಕ ಕೊಡಸ್ರಿ ಅಂತ ನಮ್ಮಜ್ಜಗ ಕೇಳಿದೆ. ಹೊಸ ಪುಸ್ತಕ ಬೇಕು ಕೊಡಸ್ರಿ ಅಂದ್ಯಾ, "ಈಗ್ಯಾಕ ಹೊಸ ಪುಸ್ತಕ ನಿನಗ ?" ಅಂದ್ರು, ಇಲ್ಲ ನನ್ನ ಪುಸ್ತಕ ಹರದತಿ ಅದಕ ಇದೊಂದ್ಸಲಾ ಹೊಸಾದು ಕೊಡಸ್ರಿ ಅಂತ ಕೇಳಿದೆ. "ಯಾರವ ನಿನ್ನ ಪುಸ್ತಕ ಹರದಾವ, ನಡಿ ನಾ ನಿನ್ನ ಶಾಲೆಗೆ ಬರ್ತೀನಿ, ನಮ್ಮ ಹುಡುಗನ ಪುಸ್ತಕ ಯಾರು ಹರದಾರ ಅಂತ ಕೇಳ್ತೀನಿ" ಅಂದ ನಮ್ಮಜ್ಜ. 
ನಮ್ಮಜ್ಜಗ ನಮ್ಮೂರೊಳಗ ಯಾರೂ ಎದುರು ಮಾತಾದ್ತಿಲ್ಲಾ, ಶಾಲಿಯೊಳಗ ನಮ್ಮ ಶಿಕ್ಷಕರು ಮಾಸ್ತರ ಮೊಮ್ಮಗ ಮೇಲಾಗಿ ಅವರ ಕೈಯೊಳಗ ತಯಾರಾಗ್ಯಾನ, ಕ್ಲಾಸಿಗೇ ಫರ್ಸ್ಟ ಬರತಾನ ಅಂತ ನನಗೂ ಒಂದು ರೀತಿ ವಿಶೇಷ ಗೌರವ ಕೊಡತಿದ್ರು. ಇಷ್ಟಾಗಿ ಹೊಸಾ ಪುಸ್ತಕ ಕೊಡಸ್ರೀ ಅಂತ ಗಂಟಬಿದ್ರ, ಗಟ್ಟಿಯಾಗಿರೂ ಪುಸ್ತಕ ಹರಿದಿದ್ದ ಪ್ರಕರಣ ಇನ್ನ ಹೊರಬೀಳತೈತಿ ಅಂತ ನಾನು ಬ್ಯಾಡಬಿಡ್ರಿ ಇದರೊಳಗ ಈ ವರ್ಷ ಹೆಂಗರ ಕಳೀತಿನ ಅಂತ ಹೇಳಿ ಪ್ರಕರಣಕ್ಕ ಕೊನೆ ಹಾಡಿದೆ.
ಅವತ್ತ ನಮ್ಮಜ್ಜ ಹೇಳಿದಂತ ಮಾತು, ನನ್ನ ಮನಸಿನೊಳಗ ಬೇರೂರಿತು. ಪುಸ್ತಕ ಹರಿದ ಈ ಪ್ರಕರಣ ಪುಸ್ತಕಗಳ ಬಗ್ಗೆ ಪ್ರೀತಿ ಬೆಳೆಸಿತು, ಪುಸ್ತಕಗಳನ್ನು ಬಹಳ ಕಾಳಜೀಪೂರ್ವಕ ಇಟಕೋಬೇಕು ಅನ್ನೋ ಪಾಠ ಕಲಿಸಿತು. ಅಂದಿನಿಂದ ನನ್ನ ಎಲ್ಲಾ ಪಠ್ಯಪುಸ್ತಕಗಳು ಅತ್ಯಂತ ನೀಟಾಗಿ ಇಟ್ಟುಕೊಳ್ಳೊ ಹವ್ಯಾಸ ಬೆಳೀತು. ಇವತ್ತಿಗೂ ಪುಸ್ತಕ ಯಾವುದೇ ಇರಲಿ ಅದನ ಜತನದಿಂದ ಇಟ್ಕೊಳ್ಳೋದು ಇಂದಿಗೂ ನನಗ ಅಭ್ಯಾಸ ಆಗಿದೆ.....

ಪಯಣ

ಬಸ್ಸಿನ ಬಾಗಿಲಿಗೆ ಅಡ್ಡಡ್ಡ ನಿಂತು ಕಂಡಕ್ಟರ್ ಹುಬ್ಬಳ್ಳಿ, ಹುಬ್ಬಳ್ಳಿ, ನಾನ್-ಸ್ಟಾಪ್ ಹುಬ್ಬಳ್ಳಿ ಅಂತ ಕರಿಯೂವಾಗ ಓಡಿ ಬಂದು ನಾನೂ ಬಸ್ ಹತ್ತಿದೆ, ಏನೇನೋ ತುರ್ತು ಕೆಲಸಗಳು, ಹೋಗಲೇಬೇಕು ಸರಿಯಾದ ಟೈಮಿಗೆ ಹೋಗದಿದ್ರ ಕೆಲಸ ಆಗೂದುಲ್ಲ. ಅಲ್ಲಿ ಹೋದ ಮ್ಯಾಲೆ ಅವರು ಸಿಗ್ತಾರೋ ಇಲ್ಲೋ, ಮನಸಿನ್ಯಾಗ ಚಿಂತೆಗಳ ಮೆರವಣಿಗೆ ನಡೆದಿರುವಾಗಲೇ... ಏನೋ ಪರಿಮಳ ಚುಂಬಕದಂತೆ ಎಳೆಯುತ್ತ ನನ್ನ ಕಲ್ಪನಾಲೋಕಕ್ಕೆ ಬ್ರೇಕ್ ಬಿತ್ತು. ಈಗಂತೂ ಹೊಂಟೇನಿ ಮುಂದ ಏನಾಕ್ಕತಿ ನೋಡೂಣು ಅನಕೊಂತ ಸೀಟಿಗಾಗಿ ಬಸ್ಸಿನ ತುಂಬ ಕಣ್ಣು ಹಾಯಿಸಿದೆ. ಎಲ್ಲೂ ಸೀಟ್ ಇಲ್ಲ ಒಂದ್ ಕಡೆ ಬಿಟ್ಟು... ಅಲ್ಲಿಂದಲೇ ಆ ಪರಿಮಳ ನನ್ನ ಸೆಳೆದದ್ದು ಸುಂದರವಾದ ತರುಣಿ, ಸೀದಾ ಹೇಳಬೇಕಂದ್ರ... ಕೈ-ತೊಳಕೊಂಡು ಮುಟ್ಟುವಂತಹ ಸುಂದ್ರಿ... ಹಂಗ ಮುಂದ ಸರದು ಮ್ಯಾಡಂ ಅಂತ ನಾನು ಅನ್ನೂದರೊಳಗ ತನ್ನ ಜಂಬದ ಚೀಲ ಸರಿಸಿ, ಬರ್ರೀ ಕುತಕೋರ್ರೀ ಅಂತ ಕೋಗಿಲೆ ಕಂಠ ಉಲಿಯಿತು... ಎಲಾ ಇವನ ಮದುವೆಯಾಗಿ ಹನ್ನೆರಡು ವರಷಾ ವನವಾಸದಂಗ ಸಂಸಾರ ಮಾಡ್ತಿದ್ರೂ ಇನ್ನೂ ಇದೆಂಥಾ ಆಕರ್ಷಣೆ ನನಗ ಅನಕೊಂತ ಆ ಸುಂದರೀ ಬಾಜೂಕ ಆಸೀನನಾದೆ...
ರಂಭಾ-ಊರ್ವಸಿಯರನ್ನು ಮೀರಿದ ಸುಂದ್ರಿ ಬಾಜೂಕ ಕುಳಿತಿದ್ರ ಮನಸಿನ್ಯಾಗ ಏನೋ ಪುಳಕ... ನೀವು ಎಲ್ಲಿಗೆ ಹೊರಟೀರಿ, ನನಗ ಹುಬ್ಬಳ್ಳಿಗೆ ಹೋಗಬೇಕಾಗೇದ, ಫಸ್ಟ ಟೈಮ್ ಹುಬ್ಬಳ್ಳಿಗೆ ಹೊಂಟೇನಿ, ಈ ಅಡ್ರೆಸ್ (ಕಾರ್ಡ್ ತೋರಿಸಿ) ಎಲ್ಲಿ ಬರ್ತದ ನನಗ ಹೇಳಿ, ಎಲ್ಲಿಗೆ ಇಳೀಬೇಕು ಅಂತ ಹೇಳ್ರೀ... ಫುಲ್-ಸ್ಟಾಪ್ ಇಲ್ಲದ ಅವಳ ಮಾತುಗಳು ಅಲ್ಲಲ್ಲ ವಿಚಾರಣೆಯ ಪ್ರಶ್ನೆಗಳು... ನಾನು ಎಲ್ಲಿಗೆ ಹೊಂಟೇನಿ ಅನ್ನೂದ ಹೇಳಾಕ ಬಿಡವಲ್ಲಳು...
ನಾನೂ ಹುಬ್ಬಳ್ಳಿಗೇ ಹೊರಟೇನಿ, ಹೇಳ್ತೇನಿ ಬಿಡ್ರಿ ಅಂತ ಮುಂದಿನ ಪ್ರಶ್ನೆಗೆ ಆಸ್ಪದ ಕೊಡದಂಗ ಮಾತ ಮುಗಿಸಿದೆ...
ಮಾತಾಡಿಕೊಂತ ಕುಂತ್ರ ಅಕಿ ಮುಖ ನೋಡಾಕ ಆಗೂದಿಲ್ಲ ಮತ್ತು ಈಗ ನೋಡದಿದ್ರ ಈ ಜನ್ಮದಾಗ ಮತ್ತೊಮ್ಮೆ ಇಂಥಾ ಸೌಂದರ್ಯ ಸಿಗೂದುಲ್ಲ ಅನಕೊಂತ ಕಳ್ಳನೋಟದಿಂದ ಅವಳ ಚೆಲುವು ನೋಡಾಕಹತ್ತಿದೆ....
ಹೊರಗ ಆಕಾಶದಾಗ ಮೋಡಗಳ ನಡುವ ತ್ರಾಸ್ ತಗೊಂಡು ಸೂರ್ಯನ ಕಿರಣ ಚಿತ್ತ-ಚಿತ್ತಾರ ಮಾಡ್ತಿದ್ರ, ಅವನೂ ಮರಿಯೊಳಗಿಂದ ಇಕಿನ್ನ ನೋಡಾಕ ಹತ್ಯಾನ ಅನ್ನೂ ಸಂಶಯ ನನಗ, ಬಸ್ಸಿನೊಳಗ ಎಲ್ಲಾರೂ ನನ್ನ ಕಡೆ ನೋಡಾಕ ಹತ್ಯಾರ ಅಂತ ಮನಸಿನ್ಯಾಗ ಒಂಥರಾ ಹಳವಂಡ...
ನನ್ನ ಮೌನವನ್ನ ತಿಳಕೊಂಡಂಗ ಸುಂದ್ರಿ ಸುಮ್ಮನಾಗಿ ಕಿಟಕಿಯೊಳಗಿನಿಂದ ಹೊರಗ ದೃಷ್ಟಿಹಾಯಿಸಿದಳು... ಕಿಟಕ್ಯಾಗಿಂದ ಬೀಸಿದ ತಂಗಾಳಿಗೆ ಅವಳ ಮುಂಗುರುಳು ಹಾರಿ ನನ್ನ ಮುಖಕ್ಕ ಕಚಗುಳಿ ಇಡತಿದ್ರ.... ಸುಂದ್ರೀ ಜೊತಿಗೆ.... ಸರಸ ಆಡಕೊಂತ ಮೋಡಗಳ ನಡುವ ನಾನ ಹೊಂಟೇನಿ ಅನ್ನೂ ಕನಸು...
ಆವಳ ಮುಂಗುರುಳು ಹಾರಿ ನನ್ನ ಮುಖದ ಮ್ಯಾಲೆ ಡ್ಯಾನ್ಸ್ ಮಾಡ್ತಿದ್ರ...
ಆ....
...
...
,,,,
ಆಆ....
.....
....
ಆಕ್ಷೀ.....
ಅವಳ ಮುಂಗುರುಳು ನನ್ನ ನಾಸಿಕದೊಳಗ ಕಚಗುಳಿ ಇಟ್ರ ಇನ್ನೇನಾಕೈತಿ...

Friday, March 8, 2013

ಸ್ತ್ರೀ

ಇಹಲೋಕದಲಿ
ಕಣ್ಣು-ಬಿಡುವ ಮೊದಲೇ
ಜೀವ ಮೊಳಕೆಯೊಡೆದಾಗ
ನವಿರಾಗಿ ನೇವರಿಸಿ
ಕರುಳ ಕುಡಿಯನು
ಹೆತ್ತು-ಹೊತ್ತು
ಒತ್ತಾಸೆಯಿಂ ಬೆಳೆಸಿ

ಮಾತೆಯಾ ಮಡಿಲಿನಲಿ
ಒಡಹುಟ್ಟಿ
ಒಡನಾಟದಿ ನಲಿಸಿ
ನೋವು-ನಲಿವಿಗೆ
ನಲ್ಮೆಯಿಂ ಸಂತೈಸಿ
ಬಾಳ ಪಯಣದಿ
ಜೊತೆಯಾಗಿ ನಿಂತು

ಮತ್ತೆ ಬೆಳಗಲು
ಮನೆಯ ಮಗಳಾಗಿ ಜನಿಸಿ
ಪುರುಷನಾ
ಸಲುಹಿ, ಸಂತೈಸಿ
ಪರಿಪೂರ್ಣಗೊಳಿಸುವ
ಪ್ರಕೃತಿ
ಇದೋ ನಿನಗೆ
ನನ್ನೊಲವ ಹಾರೈಕೆ......

ಜೀವಮಾನದಿ
ಬೆನ್ನೆಲುಬಾಗಿ ಜೊತೆನೀಡಿ
ಚೇತನಕೆ ಚೈತನ್ಯ ನೀಡುತ

ಜೀವನದ ಜೀವಾಳವಾಗಿರುವ ನಿನಗೆ
ಅನುದಿನವೂ, ಅನುಕ್ಷಣವೂ
ಒಲವಿನಾ ನಮನ
ಅದಕೂ ಏಕೆ ಬೇಕು
ತೋರಿಕೆಯದೊಂದು ದಿನ.....

Thursday, February 28, 2013

ಪರಮಾತ್ಮ ನಕ್ಕಾಗ

ಸರ್ ನೀವು ಒಂದ ಸಲಾ ಅಲ್ಲಿಗೆ ಬರ್ರೀ.... ನೀವು ನಿಮ್ಮ ಸಮಸ್ಯೆ ಬಗ್ಗೆ ಅವರಿಗೆ ಹೇಳೂದು ಬ್ಯಾಡ.... ನಿಮ್ಮನ್ನ ನೋಡಿದ್ರ ಹಂಗ ಪುಸ್ತಕ ಓದಿದಂಗ ನಿಮ್ಮ ಮನಸೊಳಗ ಏನೈತಿ.... ನಿಮಗ ಏನೇನು ತ್ರಾಸ ಅವ... ಅಂತ ಅವರೇ ಹೇಳಿ ಬಿಡ್ತಾರ... ಅಷ್ಟ ಅಲ್ಲ ನಿಮ್ಮ ತ್ರಾಸು ಕಡಿಮೆ ಆಗೋದಿಕ್ಕೆ ಏನು ಮಾಡಬೇಕು ಅನ್ನೂದು ಹೇಳಿಕೊಡ್ತಾರ... ಇಷ್ಟೆಲ್ಲಾ ಅವರು ಹೇಳಿದರು ಅಂದ್ರ ನಿಮಗ ನಂಬಿಕೆ ಬರಬಹುದು...

ಏನು ಓದೇವಿ... ಅದರಿಂದ ನಮ್ಮ ಜೀವನಕ ಏನು ಉಪಯೋಗ ಆಗ್ತದ... ಇಂಥಾ ಪರಿ ಓದಿದ್ದು ನಮ್ಮ ಜೀವನಕ್ಕ ಹೆಂಗ ಉಪಯೋಗ ಬೀಳತದ ಅನ್ನೂದು ಗೊತ್ತಿರದಿದ್ರೂ, ಓದು ಮುಗಿಸಿ ಕೆಲಸಕ್ಕೆ ಅಲೆಯೋ ಆ ದಿನಗಳಲ್ಲಿ ನಮ್ಮ ನಿರುದ್ಯೋಗ ಮಂಡಳಿಯಲ್ಲಿ ಇಂಥಾ ನಾಟಕ ಪ್ರತಿ ರವಿವಾರ ನಡಿತಿತ್ತು... ಹಿಂಗ ಪ್ರತಿ ಸಲ ಅವರು ಹೇಳಿದಾಗಲೂ ನನಗ ಅಲ್ಲಿಗೆ ಹೋಗಲೇಬೇಕು ಅಂತ ಅನಿಸಲಿಲ್ಲ.... ಖರೇ ಅಂದ್ರ ನನಗ ಕೊರಗುವಂತಾ ಸಮಸ್ಯೆಗಳೇ ಇರಲಿಲ್ಲ... ನಿರುದ್ಯೋಗ ನಮ್ಮ ದೇಶದಲ್ಲಿ ಒಂದು ಸಮಸ್ಯೆಯೇ ಅಲ್ಲ ಅಂತ ನನಗ ಅವಾಗಲೂ ಅನಿಸುತ್ತಿತ್ತು, ಈಗಲೂ ಅನ್ನಿಸ್ತದ.... ಕೆಲಸ ಅಂತ ಸಿಕ್ಕರ ನಮ್ಮ ಸಾಮರ್ಥ್ಯದ ಮೇಲೆ ಸಿಗ್ತದ... ಕೆಲಸ ಸಿಕ್ಕರ ಮುಂದ ಬದುಕು ಸಾಗ್ತದ ಅಂತ ನಾನು ವಾಸ್ತವವಾದಿ ಆಗಿದ್ದೆ....

ನಮ್ಮ ಊರಿನ ಹತ್ತಿರ ಒಂದು ಹಳ್ಳಿಯೊಳಗ ಒಬ್ರು ಮಠದ ಸ್ವಾಮಿಗಳು ಇದ್ರು... ಅವರು ಬಹಳ ಸಾಧನೆ ಮಾಡಿ ಅದ್ಭುತ ಶಕ್ತಿಗಳನ್ನ ಸಿದ್ಧಿಸಿಕೊಂಡಿದ್ದು ಭಕ್ತರಿಗೆಲ್ಲಾ ಪರಿಹಾರ ಕೊಡ್ತಾರ ಅಂತ ಸುತ್ತಮುತ್ತಲಿನ ಪ್ರದೇಶದಲ್ಲಿ ಅವರ ಖ್ಯಾತಿ ಹರಡಿತ್ತು.... ಸಮಸ್ಯೆ ಎಂಥಾದ ಇರಲಿ, ಏನರ ಇರಲಿ... ಅವರು ಮನಸು ಮಾಡಿದ್ರ ಖಂಡಿತ ಪರಿಹಾರ ಸಿಗ್ತದ ಅಂತ ಸುದ್ದಿಯೂ ಹಬ್ಬಿತ್ತು... ಬರ್ತಾ ಬರ್ತಾ ಭಕ್ತರು ತಮ್ಮ ಸಮಸ್ಯೆ ಎಲ್ಲರೆದುರಿಗೆ ಹೇಳಿಕೊಳ್ಳೋಕೆ ಹಿಂಜರಿತಾರ ಅಂತ.... ಭಕ್ತರ ಮನಸೊಳಗ ಏನದ ಅಂತ ತಿಳಕೊಂಡು... ಸುಮ್ಮನ ಅವರು ಭಸ್ಮ ಪ್ರಸಾದ ಕೊಟ್ಟರ ಪರಿಹಾರ ಸಿಗ್ತದ ಅನ್ನೋವಷ್ಟರ ಮಟ್ಟಿಗೆ ಸ್ವಾಮಿಗಳ ಖ್ಯಾತಿ ಬೆಳದಿತ್ತು....

ನನ್ನ ಆಂತರ್ಯ ಅವರಿಗೆ ಅರ್ಥವಾಗಿ.... ಹಂಗಲ್ರೀ ಸರ್ ಹೆಂಗಿದ್ದರೂ ನಾವು ಹೊಂಟೇವಿ... ನಮ್ಮ ಜೊತೆ ಕಂಪನಿ ಅಂತ ಬರ್ರೀ... ನಿಮ್ಮ ನಂಬಿಕೆ ನಿಮಗ ಇರಲಿ, ನಮ್ಮ ಸಮಸ್ಯೆಗೆ ಪರಿಹಾರ ಸಿಕ್ಕರ ಅವರ ಸಾಧನೆ ಬಗ್ಗೆ ನಿಮಗೂ ಖಾತ್ರಿ ಆಗತದ... ಹೀಂಗ ಏನೇನೋ ಹೇಳಿದಾಗ ಅನಿವಾರ್ಯವಾಗಿ ಹೋಗಲೇಬಾಕಾಯ್ತು.... ಆತು ನಡೀರಪಾ... ನಿಮ್ಮ ಸ್ವಾಮಿಗೋಳ ಕಥಿ ಏನದ ನೋಡಿಕೊಂಡ ಬರೂಣ ಅಂತ ನಾನು ಒಪ್ಪಿಗೆ ಕೊಟ್ಟೆ... ಏ ಏ ನೀ ಬಂದು ಸ್ವಾಮಿಗೋಳಿಗೆ ಏನೇನರ ಕೇಳಿ ಅವರನ್ನ ಪರೀಕ್ಷೆ ಮಾಡಾಕ ಹೋಗಬ್ಯಾಡ ಮತ್ತ... ಹಂಗ ಮಾಡಿದವರು ಘೋರ ಶಿಕ್ಷಾ ಅನುಭವಿಸ್ತಾರ... ಮತ್ತೊಬ್ಬ ಎಚ್ಚರಿಕೆ ನೀಡಿದ... ನಾ ಏನರ ಕಿತಾಪತಿ ಮಾಡುದರೊಳಗ ಅವನ ಸಮಸ್ಯೆಗೆ ಪರಿಹಾರ ಸಿಗೋದು ಹೋಗಲಿ... ಸ್ವಾಮಿಗೋಳ ಕಡೆ ಕರ್ಕೊಂಡ ಬಂದಿದ್ದಕ್ಕ ಮತ್ತೇನರ ಶಾಪ-ಗೀಪ ತಟ್ಟೀತು ಅಂತ ಅವನ ಕಳಕಳಿ ಆತಂಕ... ಇಲ್ಲ ಮಾರಾಯ ನಾನು ಏನೂ ಮಾಡೋದಿಲ್ಲ, ಮಾತಾಡೋದಿಲ್ಲ, ಬಾ ಅಂದ್ರ ಬರ್ತೇನಿ, ಬ್ಯಾಡ ಅಂತ ಹೇಳಬ್ಯಾಡ್ರಿ ಇಷ್ಟು ದಿನ ಕೊರದು-ಕೊರದು ನನಗ ಹೂಂ ಅನಿಸೀರಿ, ಇವಾಗ ಬಿಟ್ಟು ಹೋದರ ನಿಮ್ಮನ್ನ ಹಂಗ ಬಿಡೂದುಲ್ಲ.... ನನ್ನ ಮೊಂಡತನ ಶುರುವಾಯ್ತು... ಏ ಇಷ್ಟ ದಿನಾ ನಮ್ ಜೊತೆ ಇದ್ರೂ ಅವರು ಯಾರಿಗೂ ತ್ರಾಸ್ ಕೊಟ್ಟಿಲ್ಲ ಬರ್ಲಿ ಬಿಡ್ರೋ... ನೀವು ಬರ್ರೀ ಸರ್ ಅಂತ ಮತ್ತೊಬ್ರು ಪರ್ಮಿಶನ್ ಕೊಟ್ಟರು... ಮುಂದಿನ ಪ್ರಯಾಣ ಸ್ವಾಮಿಗೋಳ ದರ್ಶನಕ್ಕ ಮಠದ ಕಡೆ....

ನಿರುದ್ಯೋಗಿಗಳು ಇವಾಗಿನಂಗ ಗಾಡಿ, ಕಾರು, ಟ್ಯಾಕ್ಸಿ ಮಾಡಿಕೊಂಡು ಹೋಗೊವಂತ ಸ್ಥಿತಿ ಇರಲಿಲ್ಲ… ನಡಕೊಂತ ರೇಲ್ವೇ ಸ್ಟೇಶನ್ ಹೋಗಿ… ಅಲ್ಲಿಂದ ಸ್ವಾಮಿಗಳ ಮಠದ ಊರಿಗೆ ಹೊರಟಿವಿ… ರೇಲ್ವೇದೊಳಗ ಮೊದಲನೇ ಹಂತ…. ಆಮೇಲೆ ಅಲ್ಲಿಂದ ಜಾತ್ರೆಯನ್ನೇ ತುಂಬಿಕೊಂಡ ಹೊಂಟಂತ ಟೆಂಪೋ ಒಳಗ ಎರಡನೇ ಹಂತದ ಪ್ರಯಾಣ… ಪುಣ್ಯಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ಹೋಗುವುದು ಶ್ರೇಷ್ಟ ಅಂತ ಅವರಿವರ ಹೊಲ-ಗದ್ದೆ ತೋಟ ಸುತ್ತಾಡಿ…. ಪುಣ್ಯ ಕ್ಷೇತ್ರದ ಪಾವಿತ್ರ್ಯತೆಯನ್ನು ಗೌರವಿಸಲು ಯಾರದೋ ತೋಟದ ಭಾವಿಯಲ್ಲಿ ಮಿಂದು ಪರಿಶುದ್ಧವಾಗಿ…. ಮಠದ ಆವರಣಕ್ಕೆ ಪ್ರವೇಶಿಸಿದೆವು….

ಏನ್ರೀ ಯಾವೂರಿಂದ ಬಂದ್ರಿ… ಬರ್ರೀ ಅಪ್ಪುಗೋಳು ಗೌಡರ ಜೊತೆ ಏನೋ ಮಾತಾಡಾಕ ಹತ್ತಿದಾರ… ಈಗ ಒಳಗ ಯಾರನೂ ಬಿಡಬ್ಯಾಡ ಅಂತ ಹೇಳ್ಯಾರ… ನೀವು ಪ್ರಸಾದ ತಗೋರಿ… ನಾವು ಮಠದ ಒಳಗ ಕಾಲು ಇಡತಿದ್ದಂಗ ಧ್ವನಿ ಕೇಳಿಸಿದ ಕಡೆ ಎಲ್ಲರೂ ತಿರುಗಿ ನೋಡಿದ್ವಿ… ಮೌನವೇ ನಮ್ಮ ಉತ್ತರ ಆಗಿತ್ತು… ಅಲ್ಲ ಏನರ ಮಾತಾಡ್ರೀ…. ಯಾವ ಊರು ನಿಮ್ಮದು… ಏನಾಗಬೇಕಾಗಿತ್ತು… ನೋಡ್ರೀ ನಾವು ಸ್ವಾಮಿಗೋಳ ದರ್ಶನಕ್ಕ ಬಂದೇವಿ, ಎಲ್ಲರೂ ಸುಮ್ಮನ ಇದ್ದದ್ದು ನೋಡಿ ನಾನು ಹೇಳಿದೆ… ಏನಾಗಬೇಕಾಗಿತ್ತು… ಏನು ಸಮಸ್ಯೆ ಅದ ನಿಮ್ಮದು… ಇಷ್ಟೆಲ್ಲಾ ಜನ ಕೂಡಿ ಬಂದಿರೀ ಅಂದ್ರ ಏನರ ಹುಡುಗೀ ಲಫಡಾ ಏನರ ಮಾಡಿ ಬಂದೀರೇನು ಮತ್ತ… ಆ ಮಠದ ಮರಿ ಮತ್ತ ಕಾಲು ಕೆದರಿದಾ… ಯಾಕ್ರೀ ಏನರ ಲಫಡಾ ಇಲ್ಲದಿದ್ರ ನಿಮ್ಮ ಮಠದೊಳಗ ಬಿಡೂದಿಲ್ಲೇನು… ಭಕ್ತಿಯಿಂದ ಬಂದವರಿಗೆ ನಿಮ್ಮ ಸ್ವಾಮಿಗೋಳು ದರ್ಶನ ಕೊಡುದುಲ್ಲೇನು… ನನ್ನ ಪ್ರಶ್ನೆಗೆ ಆ ಮಠದ ಮರಿ ಅಷ್ಟ ಅಲ್ಲ ನಮ್ಮವರೂ ಕೆಕ್ಕರಿಸಿ ನೋಡಿದ್ರು… ಸುಮ್ಮನಾಗದ ಗತಿ ಇರಲಿಲ್ಲ ನನಗ…

ಹೂಂ ಹಂಗಂದ್ರ ಹೆಂಗ ರೀ… ನಿಮ್ಮಂಥ ಜನ ಇನ್ನೂ ಇರೂದಕ್ಕ ಮಠಕ್ಕ ಸ್ವಲ್ಪ ಕಿಮ್ಮತ್ತ ಉಳದೈತಿ… ಇವಾಗೆಲ್ಲ ಅಪ್ಪಗೋಳು ಅವರಿವರ ಸಮಸ್ಯೆ ಬಗಿ ಹರಿಸೂದರೊಳಗ ದಿನ ಕಳೀತಾರ… ಅದರಿಂದ ದೇಣಿಗಿ ಬಂದು ಮಠಾನು ಬೆಳಿತದ ನೋಡ್ರೀ… ನಿಮ್ಮದೇನೂ ಸಮಸ್ಯೆ ಇಲ್ಲ ಅಂದ್ರ ಸ್ವಾಮಿಗೋಳ ದರ್ಶನ ಸಿಗೂದು ಅಪರೂಪ… ಏನರ ಹರಿಕೆ ಹೊತ್ತಿದ್ರ ಹೇಳ್ರೀ ಸ್ವಾಮಿಗೋಳಿಗೆ ಭೇಟಿ ಮಾಡಿಸ್ತೇನಿ ಅಂದ ಮಠದ ಮರಿ… ನನ್ನ ಕರಕೊಂಡ ಹೋದವರ ಮುಖ ಸಾರಾಯಿ ಕುಡಿದ ಮಂಗ್ಯಾನಂಗ ಆಗಿತ್ತು… ಹಂಗ ವಾಪಸ ಬಂದ್ರ ಅವಮಾನ ಆಗೂದಲ್ಲದ ಮತ್ತ ನನ್ನ ಕಡೆ ಕೊನೆತನಕ ಅನಿಸಿಕೋಬೇಕು ಅಂತ ಅವರಿಗೆ ಸಂಕಟಾ… ಏನೇನೋ ಕಥೆ ಹೇಳಿ ಸ್ವಾಮಿಗೋಳ ದರ್ಶನ ಮಾಡಿಸಲಿಕ್ಕೆ ಮಠದ ಮರಿಗೆ ಅವರು ಒಪ್ಪಿಸಿದ್ರು….

ಶಂಭೋ….. ಶಿವ-ಶಂಭೋ… ಏನು ಹುಡುಗೋರ ಎಲ್ಲಿಂದ ಬಂದೀರಿ… ನೀವು ಎಲ್ಲಿಂದ ಬಂದರೇನು… ನಿಮ್ಮಂಥವರಿಂದ ಮಠಕ್ಕ ಫಾಯದಾ ಏನೂ ಇಲ್ಲ… ನಿಮ್ಮಿಂದ ಮಠಕ್ಕ ಏನು ಕೊಡಾಕ ಆಗತದ…. ಎಷ್ಟರ ಕೊಟ್ಟೀರಿ… ಬಾಜೂಕ ಪ್ರಸಾದ ವ್ಯವಸ್ಥಾ ಅದ… ನಿಮ್ಮ ಭಕ್ತಿ ಅಲ್ಲೇ ಪೆಟಿಗ್ಯಾಗ ಹಾಕಿ…. ಪ್ರಸಾದ ತಗೊಂಡು ಹೋಗ್ರೀ…. ಇದು ಸ್ವಾಮಿಗೋಳ ಅಮೃತವಾಣಿ ಮೊಳಗಿತು…

ಪೆಚ್ಚು ಮೋರಿ ಹಾಕಿದ ನನ್ನ ಮಿತ್ರ ಮಂಡಳಿ ಸ್ವಾಮಿಗೋಳಿಗೆ ಅಡ್ಡಬಿದ್ದು ಪ್ರಣಾಮ ಮಾಡಿದ್ರು... ನಾನು ದೂರದಿಂದ ಕೈಮುಗಿದು ಹಿಂತಿರುಗಿ ನಡೆಯೂವಾಗ ಸ್ವಾಮಿಗೋಳ ಹಿಂದ ಇದ್ದ ಕ್ಯಾಲೆಂಡರ್ ಒಳಗ ಪರಮಾತ್ಮ ಶಿವ ನಮ್ಮ ಅಂತರಾಳ ತಿಳಕೊಂಡು ನಕ್ಕೊಂತ ಕುಳಿತಿದ್ದಾ…

Wednesday, January 30, 2013

ಸಂಗಾತಿ

ಅವಳು
ನಾಕ-ನರಕ
ಎಲ್ಲಿಯಾದರೂ ಸರಿ
ನಾನು ಹೋದಲ್ಲೆಲ್ಲಾ
ಬರುವುದಾಗಿ ಹೇಳಿ
ನನ್ನ ಜೊತೆಯಲ್ಲಿಯೇ
ಹೆಜ್ಜೆ ಹಾಕುವಳು

ನೆರಳು
ತಾನೇನೂ ಕಡಿಮೆಯಲ್ಲ
ಅಂತ
ನನ್ನ ಹೆಜ್ಜೆಯಿಂದಲೇ
ಒಡಮೂಡಿ
ಹಿಂಬಾಲಿಸುತ್ತಿತ್ತು

ಬಾಳ ಪಯಣದಲ್ಲಿ
ಕತ್ತಲು ಕವಿದಾಗ
ನೆರಳು ಕಣ್ಮರೆಯಾಗಿತ್ತು
ಕೈಹಿಡಿದು ಬರುವ ಅವಳು
ಮೃದುವಾಗಿ ಕೈಯೊತ್ತಿ
ನಸುನಕ್ಕು
ಪಿಸುಮಾತಿನಲಿ
ಮೆಲ್ಲಗೆ ಉಲಿದಳು
ಇನಿಯಾ.....
ನಾನಿಲ್ಲವೇ ಜೊತೆಗೆ

ಅವಳು

ಅವಳು

ನೆರಳಿಗಿಂತಲೂ ಮಿಗಿಲು
ಅನವರತ ಜೊತೆಗಿರುವಳು
ಹಗಲಿರುಳು
ಅವಳು.....
ವಿಕ್ರಮನ ಹೆಗಲೇರಿದ
ಬೇತಾಳನಿಗೂ ಮಿಗಿಲು

ವಿಕ್ರಮನಿಗಾದರೋ
ಹೊತ್ತು ಸಾಗುವ
ನೋವು ಮರೆಯಲು
ಬೇತಾಳನ ಕಥೆಯಿತ್ತು
ಕೊನೆಗೊಮ್ಮೆ
ಬಿಡುಗಡೆಯಿತ್ತು
ಬೇತಾಳನ ಪ್ರಶ್ನೆಗೆ
ಉತ್ತರಿಸಿದಾಗ

ಅವಳು ಹಾಗಲ್ಲ
ಕೊನೆಯುಸಿರವರೆಗೂ
ಬೆಂಬತ್ತಿರುವ ಅವಳು
ದೂರದರ್ಶನದ
ಧಾರಾವಾಹಿಯಂತೆ
ತಲೆ-ತಲಾಂತರ ಕಳೆದರೂ
ಮುಗಿಯದು ಅವಳ
ಕಥಾಸಾಗರ

ಪ್ರಶ್ನೆಗಳೋ !!!
ಎಂದೂ ಮುಗಿಯದ
ಅಕ್ಷಯ ಪಾತ್ರೆ
ಉತ್ತರಿಸಲು ತತ್ತರಿಸಿ
ಮುನ್ನಡೆಯುತ್ತಿರುವೆ
ಮೂಕ ಯಕ್ಷನಂತೆ..... :)