Wednesday, October 27, 2010

ಪಯಣ

ನಾನು ನಡೆವುದೇ ಹಾದಿ


ನನ್ನದೇ ದಾರಿ
ಅವರಿವರ ಹಂಗೇಕೆ
ಅವರಿವರ ಅನುಕರಣೆ ಏಕೆ
ತೋಚಿದಂತೆ ಗೀಚುವ...
ನನ್ನ ದಾರಿಯೇ ಬೇರೆ

ಬಾಳ ಪಯಣವು
ಏಕಮುಖವಾಗಿದೆ ಎಂದೂ
ಮರಳಿ ಬಾರದು ಮತ್ತೆ
ನನ್ನ ಜೀವನ ಪಯಣದಿ

ನನ್ನ ದಾರಿಯೇ ಬೇರೆ
ಈ ಲೋಕಕೆ ಬರುವಾಗಲೂ
ನನ್ನ ದಾರಿ ಬೇರೆಯಾಗಿತ್ತು
ಮತ್ತೆ ಪರಲೋಕಕೆ
ಮರಳುವಾಗಲೂ
ವಿಧಿಯ ಸೇರುವೆ ಏಕಾಂಗಿಯಾಗಿ

Saturday, October 9, 2010

ಪ್ರೇಮ ಗಂಗೆ

ಅಂತರಾಳವ ಕವಿದಿರುವ ಮಂಜು
ವಿರಸ, ನೋವುಗಳಿಂದ ಹೆಪ್ಪುಗಟ್ಟಿದ ಮನಸ್ಸು
ಬೆಚ್ಚನೆಯ ಪ್ರೀತಿಯಿಂದ ಕರಗಬೇಕಾಗಿದೆ


ದುಗುಡ ನೋವುಗಳ ಭ್ರೂಣ ಬಿರಿದು
ಸಂತಸವು ಪ್ರಸವಿಸಲು ಸಮಯ ಸರಿಯಬೇಕು
ಹಿಮಾಲಯದೆತ್ತರದಿಂದ ಮಂಜು ಕರಗಿ
ಪ್ರೇಮ ಗಂಗೆ ಪ್ರವಹಿಸಬೇಕು


ನಮ್ಮಿಬ್ಬರ ಮಧ್ಯದಲಿ ತೆಲೆಯೆತ್ತಿರುವ
ವೈಮನಸ್ಸಿನ ಗೋಡೆಯ ಪರದೆ
ಸರಿದು ಬೆಳಕು ತೂರಿ ಬರಬೇಕು ಬಾಳಿನಲಿ
ಬಂಜರಾದ ಮನದಲಿ ಪ್ರೇಮ ಮೊಳಕೆಯೊಡೆಯಬೇಕು


ನೋವಿನ ಆಲಾಪದಲಿ
ಕಾಲ ಕಳೆಯುವವನಲ್ಲ ನಾನು
ನಿನ್ನೆಡೆಗೆ ಅಡಿಯಿಡುತ ಸಾಗುತಿರುವೆ
ಮತ್ತೆ ಮಿಲನದ ವಸಂತ ಮೂಡಿಬರಲಿ

ಸವತಿ

ನನ್ನ ಕವಿತೆಯೊಂದಿಗೆ
ಲೀನವಾಗಿ
ಭಾವ-ಭಾವನೆಗಳ ಆಳದಲಿ
ಸರಸ-ಸಲ್ಲಾಪದಲಿ ತೇಲುತ್ತ-ಮುಳುಗುತ್ತ
ತಲ್ಲೀನವಾಗಿರಲು

ಮನೆಯಾಕೆಯ ಮಾತುಗಳು
ಮನದಾಳಕೆ ಮುಟ್ಟದೆ
ಕಣ್ಣು ಕಿವಿಗಳನು ಮನದನ್ನೆಯತ್ತ
ತೆರೆದು, ಹೂಂ ಗುಟ್ಟಿ ನಡೆಯುತಿರೆ

ನನ್ನ ಸವತಿಯರ ನೆನಯುತ
ನಿಮ್ಮದೇ ಗುಂಗಿನಲಿರುತ
ನನ್ನ ಮಾತುಗಳ ಕೇಳದಿರುವ ನೀವು
ಹಿತ್ತಾಳೆ ಕಿವಿಯವರು
ಎಂದಳಾ ನನ್ನವಳು

Thursday, October 7, 2010

ದೈನಂದಿನ ಪಾಡು

ಮುಂಜಾನೆ ಹಿತವಾದ ಹೊಂಬಿಸಿಲು

ಸೂರ್ಯ ಮಾರುದ್ದ ಮೇಲೇರಿದ ಮೇಲೆ
ತಂಗಾಳಿಯು ಕರಗಿ ಹೋಗಿ
ಕಣ್ಣುಗಳಲಿ ಕತ್ತಲೆ ಬರಿಸುವ ಉರಿಬಿಸಿಲು

ಹಾಗೋ ಹೀಗೋ ನೆರಳಿನಾಸರೆ ಪಡೆದು
ವಿಶ್ರಮಿಸುವ ಹೊತ್ತಿಗೆ
ಧುತ್ತೆಂದು ತುಂತುರು ಮಳೆಯಿಂದ
ಪ್ರತ್ಯಕ್ಷನಾಗುವ ವರುಣ

ರೈತನ ಒಡಲಿನಲ್ಲಿ ಉರಿಯೆಬ್ಬಿಸುವಂತೆ
ಧಾರಾಕಾರವಾಗಿ ಸುರಿಯುವನು
ಬಡವರ ಗುಡಿಸಿಲು, ಮನೆಗಳಲ್ಲಿ
ಎಲ್ಲಿ ನೋಡಿದಲ್ಲಲ್ಲಿ ನೀರೋ-ನೀರು


ತೊಳೆದು ಹೋಗುವುದು
ಕೊಳೆಗೇರಿಗಳ ಕೊಳೆಯು
ಹಾಗೇ ಅಲ್ಲಲ್ಲಿ ಕೂಡಿಟ್ಟಿರುವ
ಬಡ-ಬಗ್ಗರ ಬಟ್ಟೆ-ಬರೆ, ಧಾನ್ಯ

ದಿನವೆಲ್ಲ ತುತ್ತು ಕೂಳಿಗಾಗಿ ದುಡಿದು
ದಣಿದ ದೇಹವನು ಹಾಸಿಗೆಯಲ್ಲಿ ಎಸೆಯುವ
ನೆಮ್ಮದಿಯೂ ಹರಿದುಹೋಗುವುದು
ವರುಣನ ಪ್ರವಾಹದಲ್ಲಿ