Wednesday, September 14, 2011

ಅಕ್ಷರಮಾಲೆ

ಅಕ್ಷರಗಳ ನಾನೂ ಕಲಿತೆ

ಎಲ್ಲರೂ ಕಲಿತರು

ಅವರು ಅಕ್ಷರಗಳ ಪೋಣಿಸಿ
ಮಾತಿನ ಮಾಲೆ ಕಟ್ಟಿದರು
ಮಾತಿಗೆ ಮಾತು ಬೆಳೆಸುತ್ತಾ
ಜನರನೆಲ್ಲ ಮರುಳು ಮಾಡಿದರು...

ಇವರು ಅಕ್ಷರಗಳನು
ಹೂದೋಟದಲಿ ಬಿತ್ತಿದರು
ದುಂಬಿಯ ರೆಕ್ಕೆಗೆ, ಜಿಹ್ವೆಗೆ ಕಟ್ಟಿ
ಸವಿಜೇನ ಹರಿಸಿದರು...

ಮತ್ತೊಬ್ಬರು ಅಕ್ಷರಗಳಿಗೆ
ಭಾವನೆಗಳ ಬಟ್ಟೆ ತೊಡಿಸಿದರು
ಪದಗಳನೆಲ್ಲ ಮುತ್ತುಗಳಂತೆ ಪೋಣಿಸಿ
ಪದವನ್ನು ಕಟ್ಟಿದರು...

ಅವರು ಅಕ್ಷರಗಳಿಗೆ
ಬದುಕಿನ ಬಣ್ಣ ನೀಡಿದರು
ಅನುಭವಾಮೃತ ಸಾರವನು ಹರಿಸಿ
ಸಾಹಿತ್ಯ ರಸವನು ಉಣಬಡಿಸಿದರು...


ಅಕ್ಷರವನು ನಾನೂ ಕಲಿತೆ...
ಎಲ್ಲರೂ ಕಲಿತರು..
ಕ್ಷಯವಾಗದ್ದು ಅಕ್ಷರವೆಂದರು...

ವಿಸ್ಫೋಟ

ಮತ್ತದೇ ಸದ್ದು

ಘಟಸ್ಪೋಟದ ನಂತರ
ಸ್ಮಶಾನ ಮೌನ....


ನಲುಗಿದ್ದು ಜೀವಗಳು
ಅಳಿದುಳಿದ ಅವಶೇಷಗಳು ಹೇಳಲಾರವು
ಕೈ-ಕಾಲು ರುಂಡಗಳ ಜಾತಿ-ಮತ ಧರ್ಮವನು...


ವಿಚ್ಛಿದ್ರಗೊಂಡ ದೇಹಗಳೆದುರು
ಇವನಾರವ ಇವನಾರವ ಎಂಬದೊಂದೇ ಗೋಳು
ಚಿರಶಾಂತಿಯಲಿ ಮಲಗಿದವರೆಲ್ಲ ನಮ್ಮವರು...


ಕಂಪಿಸುವ ಮನಗಳಿಗೆಲ್ಲಿದೆ ಶಾಂತಿ
ಕಂಬನಿಯು ಕಪೋಲದ ಮೇಲೆ ಒಣಗಿಹೋಗಿದೆ
ಹೃದಯವಿದ್ರಾವಕವಾಗಿ ಶಾಂತಿಯೂ ರೋದಿಸುತ್ತಿದೆ....


ಬಂದವರು ಕೊಂದಿದ್ದು ನಮ್ಮನ್ನಲ್ಲ
ನಮ್ಮೊಳಗಿನ ಸಹಬಾಳ್ವೆಯ ನಂಬಿಕೆಯನ್ನು
ಬೇಡ ನಮಗಿಂತಹ ಸದ್ದು...


ಬೇಡ ನಮಗಿಂತಹ ಸದ್ದು
ಕಾಲವಾದವರೂ ಕಂಪಿಸುತಿಹರು
ಶಾಂತಿ, ಶಾಂತಿ ಶಾಂತಿಃ.....

ಸಖೀಗೀತ

ಸಖೀ....

ಒಮ್ಮೆ ನಿನ್ನನೊಪ್ಪಿದ ಜೀವ
ತನ್ನತನವನ್ನೂ ಕಳಚಿ
ಅಪ್ಪಿಕೊಂಡಿದೆ ನಿನ್ನ ಅನವರತ....

ಕಾಲಗಣನೆಯ ಮೀರಿ
ವಿರಹ, ಮಿಲನ, ಕೀಟಲೆ-ಕೋಟಲೆ
ವಾಚಾಳಿತನವ ಮೀರಿ
ಬೆಸದುಕೊಂಡಿದೆ ನಮ್ಮ ಸಂಬಂಧಗಳು...

ನಿನ್ನೊಲುಮೆಯ ಬಳ್ಳಿ
ಬದುಕಿನಲೆಲ್ಲ ಬೆಸೆದುಕೊಂಡು
ಹಸಿರು ತಂದಿರಲು ಬಾಳಲಿ
ಕೊನೆಯುಸಿರವರೆಗೆ ಬತ್ತದೆನ್ನ ಪ್ರೀತಿಯ ಚಿಲುಮೆ

ಕಾಲವನು ಮೀರಿ ಪ್ರೀತಿಸುವೆ
ನಾ ಕಾಲವಾದರೂ ಪ್ರೀತಿಸುವೆ
ಪಾಳು ಬಯಲಿನಲಿ
ನಿಂತ ಮಾಸ್ತಿ(ಮಹಾಸತಿ) ಕಲ್ಲಿನಂತೆ

ನಿರೀಕ್ಷೆ

ಸಖೀ...
ಇರುಳೆಲ್ಲ ಕಾದೆ ನಾನು

ಬಾನಿನಂಗಣದಲ್ಲಿ ಮಿನುಗುವ
ತಾರೆಯ ಬೆಳಕಿಗೆ
ಮೇಘಗಳೂ ಇದ್ದವು ಅಲ್ಲಿ

ಕಾಯುತ್ತ-ಕಾಯುತ್ತ
ಮೂಡಣವು ಕೆಂಪೇರಿತು
ಆದರೂ ತಲುಪಲೇ ಇಲ್ಲ
ಎನ್ನ ಪ್ರೇಮ ಸಂದೇಶ
ನನ್ನ ಮಿನುಗು ತಾರೆಗೆ

ಕಾಳಿದಾಸನೂ ಕಣ್ಮರೆಯಾದ
ಮೇಘವೂ ಕರಗಿತು
ಭಾಸ್ಕರನ ಬೆಳಕಿಗೆ
ಎನ್ನ ಬಿಸಿಯುಸಿರಿಗೆ...

ಸಖೀಗೀತ

ಸಖೀ...

ನಿನ್ನ ಪ್ರೇಮದ
ಬೆಳದಿಂಗಳಿನಲ್ಲಿ ಮಿಂದು
ಅಮೃತ ಶಿಲೆಯಾಗಿದೆ ಮನಸು...

ಓರೆ-ಕೋರೆಯಾಗಿದ್ದರೇನು ನಾನು
ಕೆತ್ತಬೇಕು, ಕೊರೆಯಬೇಕು
ನಿನ್ನ ಪ್ರೇಮಮೂರ್ತಿಯ ನೀನು...

ಸಖೀ...
ನಿನ್ನ ಪ್ರೇಮರಾಗದಿ
ಒಲವಿನ ಹಾಡಾಗಿದ್ದೇನೆ ನಾನು
ನುಡಿಸಬೇಕು, ನುಡಿಯಬೇಕು
ಬಾಳಗೀತೆಯ ನೀನು

ಸಖೀಗೀತ

ಸಖೀ....

ಮನದಾಳದ ಪುಟಗಳನ್ನು
ತಿರುವಿ ಹಾಕುತ್ತಿದ್ದೆ...
ಯಾಕೋ ಏನೋ...
ಒಂದು ಪುಟದಿಂದ
ಕಣ್ಣು ಕೀಳಲೇ ಇಲ್ಲ....
ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ
ನೋಟ ಸ್ಥಗಿತವಾಯಿತು
ಚಿತ್ರದಂತೆ
ಅಲ್ಲಿ ನೀನು ಬರೆದಿದ್ದು
ನಮ್ಮ ಸ್ನೇಹದ ಮುನ್ನುಡಿ...

ಹಲವಾರು ಪುಟಗಳಲಿ
ನಿನ್ನೊಂದಿಗೆ
ಬೆಟ್ಟದ ಮೇಲೇರಿ ಬಂಡೆಗಲ್ಲಿನ
ಮೇಲೆ ಕುಳಿತು ಹರಟಿದ ಮಾತುಗಳು
ಕೀಟಲೆ, ತುಂಟಾಟಗಳು
ಮುನಿಸು, ಕೋಪಗಳು
ಏನೆಲ್ಲಾ ಇದ್ದರೂ
ಅಪೂರ್ಣಗೊಳ್ಳುವುದು ಎನ್ನ
ಜೀವನ ಸಂಪುಟ
ನೀನು ನನ್ನೊಳಗೆ ಇರದಿದ್ದರೆ....

ಸಖೀಗೀತ

ಸಖೀ...

ನಾವಿಬ್ಬರೂ ಕೈಹಿಡಿದು ನಡೆದ
ಹೂಬನದ ಹಾದಿಯಲ್ಲಿ
ಹಸಿರುಪಾಚಿ ಬೆಳೆದು
ಅನಂತದೆಡೆಗೆ ಸೆಳೆಯುತ್ತಿದೆ...

ನಾವು ಕನಸು ಕಟ್ಟಿದ
ಬಂಡೆಗಲ್ಲಿನ ಮೇಲೆ
ಅರಿಷಿಣ ಕುಂಕುಮವ ಚಿಮುಕಿಸಿ
ಬೆಳಗಿಸಿದ ಗಂಧದ ಕಡ್ಡಿಯ
ಹೊಗೆಯಲ್ಲೂ ನಿನ್ನ ಚಿತ್ತಾರ ಮೂಡುತಿದೆ

ಕಂದೀಲು ಹಿಡಿದ ನೀನು
ಕಣ್ಮರೆಯಾಗಿ ಹೋದಾಗ
ಅಂಧಕಾರವನ್ನು ಹೊದ್ದು
ಚಿರನಿದ್ರೆಯತ್ತ ಜಾರುವ ಮನಸು...
ಆದರೂ ಗೋಚರಿಸುತ್ತಿದೆ
ನಕ್ಷತ್ರಗಳ ಬೆಳಕು...