Saturday, January 22, 2011

ಹದಿಹರಯದ ವಯಸು

ಹದಿಹರಯದ ವಯಸು

ಪೊರೆ ಕಳಚಿದ
ಹಾವಿನಂತೆ ಚುರುಕು
ಮೈ ಮನದಲ್ಲಿ
ಕಾಮನೆಗಳ ಘೋರ
ಪ್ರವಾಹ

ಅತ್ತಿತ್ತ ಎತ್ತಲೋ
ಸುಳಿದಾಡುವ
ಸುಂಟರಗಾಳಿಯ ಮನಸು
ಹೂವನರಸುವ ದುಂಬಿಯಂತೆ
ಸೃಷ್ಟಿಯ ಸೌಂದರ್ಯವನೆಲ್ಲ
ಬೇಟೆಯಾಡುವ ಹಸಿದ ಕಂಗಳು
ಸುತ್ತಿ-ಸುತ್ತಿ
ಮಧುವ ಹೀರುವ ಬಯಕೆಗಳು

ಈಗ ಇಲ್ಲಿಯೇ
ಎನ್ನುವಷ್ಟರಲ್ಲಿ
ಎಲ್ಲೆಲ್ಲಿಗೋ ಪಯಣಿಸುವ
ಹುಚ್ಚು ಮನಸು
ಅಲ್ಲಿ ಏಕೆ ? ಇದು ಬೇಡ
ಯಾವುದೂ ಅರಿಯದು
ಅದು ಬೇಕು, ಇದೂ ಬೇಕು
ಬಯಕೆಗಳ ಮಹಾಪೂರ

ಅವರಿವರು ಹೇಳುವ
ಹಿತ ನುಡಿಗಳು
ಕರ್ಣಕಠೋರ, ಕರ್ಕಶ
ಕೇಳುವುದಕ್ಕಿಲ್ಲ ವ್ಯವಧಾನ
ಅಂಬಿಗನಿಲ್ಲದ ನಾವೆಯಂತೆ
ದಶದಿಕ್ಕುಗಳಿಗೂ
ಕ್ಷಣಮಾತ್ರದಲ್ಲಿ ಹರಿಯುವುದು
ಅದು ಹದಿಹರಯದ ವಯಸು

No comments:

Post a Comment