Friday, December 30, 2011

ಸಖೀ ಗೀತ

ಸಖೀ.....
ಮತ್ತೊಂದು ಸಂಜೆ

ಪಡುವಣದಿ
ದಾಪುಗಾಲು ಇಡುತ್ತಿರುವ
ಭಾಸ್ಕರ
ದೂರದಿಗಂತದಾಚೆ
ಶರಧಿ ಭೂಮಿಯ ಸಂಗಮದಿ
ಮಿಲನದ ಕಲರವ

ರವಿತೇಜನ ರಭಸಕೆ
ಅಲೆಗಳ ನಲಿದಾಟ
ಭುಗಿಲೆದ್ದ ನೆನಪುಗಳು
ಎದೆಯಾಳದಿಂದ ಹೊಮ್ಮಿ
ನೀಲಾಕಾಶದಿ ಚಿಮ್ಮಿ
ಇರುಳಿನಲಿ ಬೆಳಗುವುದು
ತಾರೆಗಳ ರಂಗೋಲಿ

ನಿನ್ನ ಒಡನಾಟದ ಪ್ರತಿಕ್ಷಣ
ಅಚ್ಚೊತ್ತಿದೆ ಎನ್ನ ಅಂತರಂಗದಲಿ
ಹಿತವಾದ ನೋವು
ಹೃದಯದಲಿ ಬಾಧಿಸಿದೆ
ನೀನಿಲ್ಲವೆಂಬುದು ನೆಪಮಾತ್ರವಾಗಿ
ಅನುಕ್ಷಣವೂ ನಲಿಯುವೆ
ಮನದಾಳದಲ್ಲಿ.... :)

ಸಖೀ ಗೀತ

ಸಖೀ

ಒಡಲಾಳದಲ್ಲಿ
ಏನೋ ತಳಮಳ
ಭಾವ ತರಂಗಗಳ
ಸುಳಿಯಲ್ಲಿ
ಇಣುಕಿ ನೋಡಿದರೆ
ಆಳಕ್ಕಿಳಿದಂತೆ
ಪಾತಾಳ ದರ್ಶನ
ರಸಾತಳದಾಚೆಗೂ
ಕಾಣುವುದು
ನಿನ್ನದೇ ಪ್ರತಿರೂಪ

ಸುನಾಮಿ ಅಬ್ಬರವ
ಅವಿತಿಟ್ಟುಕೊಂಡು
ಬಿಮ್ಮು ತೋರಿಸುವ
ಶಾಂತ ಸಾಗರದ
ಮುಖವಾಡ
ಅಂತರಾಳದಲ್ಲಿ ತುಮುಲ
ಭುಗಿಲೇಳುವ ಸಮಯ
ಮುಸ್ಸಂಜೆಯಲಿ
ದಿಗಂತದಾಚೆ ಮೂಡುವುದು
ನಿನ್ನ ಪ್ರತಿಬಿಂಬ

ತೀರದಾಚೆ ನಿಂತು
ಕೈಬೀಸಿ ಕರೆಯುವ
ನಿನ್ನ ಪರಿಯು
ಉಕ್ಕಿ ಹರಿಯುವ ನದಿಯಲಿ
ಸೊಕ್ಕಿನಿಂದ ಜಿಗಿದು
ನಿನ್ನ ಸೇರುವ ಹಂಬಲ
ಗುರಿಯೊಂದೇ ಮಿಲನ
ಗಮಿಸುವ ದಾರಿಯತ್ತ
ಇಲ್ಲವೆನ್ನ ಗಮನ....

Friday, November 11, 2011

ಕವಿತೆ

ಅವಳು ಅನುಕ್ಷಣವೂ ಕಾಡುತ್ತಾಳೆ
ಅರುಣೋದಯದ ಸೊಬಗಿನಲ್ಲಿ
ಅದೇ ತಾನೆ
ಅರಳಿರುವ ಹೂವಿನ ಸೊಬಗಿನಲ್ಲಿ
ಕಣ್ಣಿಗೆ ಕಾಣದಿದ್ದರೂ
ಸೆಳೆಯುವ ಪರಿಮಳದಲ್ಲಿ

ಅವಳು ಕಾಣುತ್ತಾಳೆ
ಹೊಟ್ಟೆಪಾಡಿಗಾಗಿ ಓಡುವ
ದುಡಿಯುವ ಶ್ರಮಜೀವಿಗಳ ಕೈಗಳಲ್ಲಿ
ದಿನವಿಡೀ ದುಡಿದು ಜೀವಾಮೃತವನರಸುವ
ಕುಡುಕರ ದಾಹದ ಕಂಗಳಲಿ

ಅವಳು ಕಾಣುತ್ತಾಳೆ
ಹಸಿವಿನ ಪಾತ್ರೆ ಹೊತ್ತು ತಿರುಗುವ
ನಿರ್ಗತಿಕ ಭಿಕ್ಷುಕರ ನೋಟದಲ್ಲಿ
ಅಜೀರ್ಣವಾಗುವಷ್ಟು ತಿಂದು
ಅರಗಿಸಲು ಯತ್ನಿಸುವ ಜನರ ಪರಿಶ್ರಮದಲ್ಲಿ

ಅವಳು ಕಾಣುತ್ತಾಳೆ
ಪ್ರೇಮಿಯನು ಕಾಯುತ್ತಿರುವ
ಕಂಗಳ ನಿರೀಕ್ಷೆಯಲ್ಲಿ
ಸುಂದರಿಯರ ಮುಡಿಯನೇರಲು
ಕಾದಿರುವ ಹೂಮಾಲೆಯಲ್ಲಿ

ಅವಳು ಕಾಣುತ್ತಾಳೆ
ಭ್ರೂಣವನು ಹೊತ್ತು ತಿರುಗುವ
ಗರ್ಭಿಣಿಯ ಪ್ರಸವ ವೇದನೆಯಂತೆ
ಮನದಲ್ಲೇ ಮುಲುಕುತ್ತ
ಭಾವನೆಗಳ ಸೋಸಿ ಪದಗಳ ಮೂಸೆಗೆ
ಇಳಿಯುವ ಕವಿ ಹೃದಯದಲ್ಲಿ.....

Sunday, October 2, 2011

ಸಖೀಗೀತ

ಸಖೀ....
ಒಂದು ಮುಗುಳ್ನಗೆಯ
ಮುನ್ನುಡಿಯಿಂದ
ಪಿಸುಮಾತು ಆಡುತ್ತಾ
ಮಾತಿಗೊಂದು ಮಾತು
ನಡುವೆ ಹುಸಿಮುನಿಸು, ಕೋಪ
ಕೀಟಲೆ ಮಾಡುತ್ತ
ಸುತ್ತಲೂ ಚುಕ್ಕೆಗಳನಿಟ್ಟು
ನಿನ್ನಿಷ್ಟದಂತೆ ಚುಕ್ಕಿಗಳ ಜೋಡಿಸಿ
ರೇಖೆಗಳನೆಳೆಯುತ್ತಾ
ಮನಸವನ್ನು ಆವರಿಸಿ
ಹೃದಯದೊಳಗೆ ಇಳಿದಾಗಲೇ
ಅರಿವಾಗಿದ್ದು ನನಗೆ
ನಿನ್ನ ಪ್ರೀತಿಯ ರಂಗೋಲಿ
ಚಕ್ರವ್ಯೂಹದಂತೆ
ನನ್ನ ಬದುಕೆಲ್ಲವನ್ನೂ ಆವರಿಸಿ
ಸುತ್ತುವರೆದಿದೆ ಎಂದು...


ನೀನಿಟ್ಟ ಚುಕ್ಕಿಗಳ
ಮೋಡಿಯಲಿ ಮೈಮರೆತು
ನಿನ್ನಿಷ್ಟಕ್ಕೆ ತಲೆದೂಗುತ್ತಾ
ನಿನ್ನ ರಂಗೋಲಿಯ
ಲಕ್ಷ್ಮಣ ರೇಖೆಯನು ದಾಟಲಾರದೇ
ನನ್ನತನವನೆಲ್ಲಾ ಮರೆತು
ನಿನ್ನಲಿ ನಾನೇ ಕಳೆದುಹೋದರೂ
ಅರಿವಾಗಲಿಲ್ಲವೆನಗೆ

ಪ್ರೀತಿ-ಪ್ರೇಮದ ನೋವು
ಹಿತವಾಗಿದೆ ಎಂಬುದಕ್ಕೆ
ನಿನ್ನ ಹೃದಯದಲಿ ಬಂಧಿಯಾಗಿರುವ
ಪಾರತಂತ್ರ್ಯವೇ ಸಮ್ಮತಿ
ಈ ಮನಕೆ....

Wednesday, September 14, 2011

ಅಕ್ಷರಮಾಲೆ

ಅಕ್ಷರಗಳ ನಾನೂ ಕಲಿತೆ

ಎಲ್ಲರೂ ಕಲಿತರು

ಅವರು ಅಕ್ಷರಗಳ ಪೋಣಿಸಿ
ಮಾತಿನ ಮಾಲೆ ಕಟ್ಟಿದರು
ಮಾತಿಗೆ ಮಾತು ಬೆಳೆಸುತ್ತಾ
ಜನರನೆಲ್ಲ ಮರುಳು ಮಾಡಿದರು...

ಇವರು ಅಕ್ಷರಗಳನು
ಹೂದೋಟದಲಿ ಬಿತ್ತಿದರು
ದುಂಬಿಯ ರೆಕ್ಕೆಗೆ, ಜಿಹ್ವೆಗೆ ಕಟ್ಟಿ
ಸವಿಜೇನ ಹರಿಸಿದರು...

ಮತ್ತೊಬ್ಬರು ಅಕ್ಷರಗಳಿಗೆ
ಭಾವನೆಗಳ ಬಟ್ಟೆ ತೊಡಿಸಿದರು
ಪದಗಳನೆಲ್ಲ ಮುತ್ತುಗಳಂತೆ ಪೋಣಿಸಿ
ಪದವನ್ನು ಕಟ್ಟಿದರು...

ಅವರು ಅಕ್ಷರಗಳಿಗೆ
ಬದುಕಿನ ಬಣ್ಣ ನೀಡಿದರು
ಅನುಭವಾಮೃತ ಸಾರವನು ಹರಿಸಿ
ಸಾಹಿತ್ಯ ರಸವನು ಉಣಬಡಿಸಿದರು...


ಅಕ್ಷರವನು ನಾನೂ ಕಲಿತೆ...
ಎಲ್ಲರೂ ಕಲಿತರು..
ಕ್ಷಯವಾಗದ್ದು ಅಕ್ಷರವೆಂದರು...

ವಿಸ್ಫೋಟ

ಮತ್ತದೇ ಸದ್ದು

ಘಟಸ್ಪೋಟದ ನಂತರ
ಸ್ಮಶಾನ ಮೌನ....


ನಲುಗಿದ್ದು ಜೀವಗಳು
ಅಳಿದುಳಿದ ಅವಶೇಷಗಳು ಹೇಳಲಾರವು
ಕೈ-ಕಾಲು ರುಂಡಗಳ ಜಾತಿ-ಮತ ಧರ್ಮವನು...


ವಿಚ್ಛಿದ್ರಗೊಂಡ ದೇಹಗಳೆದುರು
ಇವನಾರವ ಇವನಾರವ ಎಂಬದೊಂದೇ ಗೋಳು
ಚಿರಶಾಂತಿಯಲಿ ಮಲಗಿದವರೆಲ್ಲ ನಮ್ಮವರು...


ಕಂಪಿಸುವ ಮನಗಳಿಗೆಲ್ಲಿದೆ ಶಾಂತಿ
ಕಂಬನಿಯು ಕಪೋಲದ ಮೇಲೆ ಒಣಗಿಹೋಗಿದೆ
ಹೃದಯವಿದ್ರಾವಕವಾಗಿ ಶಾಂತಿಯೂ ರೋದಿಸುತ್ತಿದೆ....


ಬಂದವರು ಕೊಂದಿದ್ದು ನಮ್ಮನ್ನಲ್ಲ
ನಮ್ಮೊಳಗಿನ ಸಹಬಾಳ್ವೆಯ ನಂಬಿಕೆಯನ್ನು
ಬೇಡ ನಮಗಿಂತಹ ಸದ್ದು...


ಬೇಡ ನಮಗಿಂತಹ ಸದ್ದು
ಕಾಲವಾದವರೂ ಕಂಪಿಸುತಿಹರು
ಶಾಂತಿ, ಶಾಂತಿ ಶಾಂತಿಃ.....

ಸಖೀಗೀತ

ಸಖೀ....

ಒಮ್ಮೆ ನಿನ್ನನೊಪ್ಪಿದ ಜೀವ
ತನ್ನತನವನ್ನೂ ಕಳಚಿ
ಅಪ್ಪಿಕೊಂಡಿದೆ ನಿನ್ನ ಅನವರತ....

ಕಾಲಗಣನೆಯ ಮೀರಿ
ವಿರಹ, ಮಿಲನ, ಕೀಟಲೆ-ಕೋಟಲೆ
ವಾಚಾಳಿತನವ ಮೀರಿ
ಬೆಸದುಕೊಂಡಿದೆ ನಮ್ಮ ಸಂಬಂಧಗಳು...

ನಿನ್ನೊಲುಮೆಯ ಬಳ್ಳಿ
ಬದುಕಿನಲೆಲ್ಲ ಬೆಸೆದುಕೊಂಡು
ಹಸಿರು ತಂದಿರಲು ಬಾಳಲಿ
ಕೊನೆಯುಸಿರವರೆಗೆ ಬತ್ತದೆನ್ನ ಪ್ರೀತಿಯ ಚಿಲುಮೆ

ಕಾಲವನು ಮೀರಿ ಪ್ರೀತಿಸುವೆ
ನಾ ಕಾಲವಾದರೂ ಪ್ರೀತಿಸುವೆ
ಪಾಳು ಬಯಲಿನಲಿ
ನಿಂತ ಮಾಸ್ತಿ(ಮಹಾಸತಿ) ಕಲ್ಲಿನಂತೆ

ನಿರೀಕ್ಷೆ

ಸಖೀ...
ಇರುಳೆಲ್ಲ ಕಾದೆ ನಾನು

ಬಾನಿನಂಗಣದಲ್ಲಿ ಮಿನುಗುವ
ತಾರೆಯ ಬೆಳಕಿಗೆ
ಮೇಘಗಳೂ ಇದ್ದವು ಅಲ್ಲಿ

ಕಾಯುತ್ತ-ಕಾಯುತ್ತ
ಮೂಡಣವು ಕೆಂಪೇರಿತು
ಆದರೂ ತಲುಪಲೇ ಇಲ್ಲ
ಎನ್ನ ಪ್ರೇಮ ಸಂದೇಶ
ನನ್ನ ಮಿನುಗು ತಾರೆಗೆ

ಕಾಳಿದಾಸನೂ ಕಣ್ಮರೆಯಾದ
ಮೇಘವೂ ಕರಗಿತು
ಭಾಸ್ಕರನ ಬೆಳಕಿಗೆ
ಎನ್ನ ಬಿಸಿಯುಸಿರಿಗೆ...

ಸಖೀಗೀತ

ಸಖೀ...

ನಿನ್ನ ಪ್ರೇಮದ
ಬೆಳದಿಂಗಳಿನಲ್ಲಿ ಮಿಂದು
ಅಮೃತ ಶಿಲೆಯಾಗಿದೆ ಮನಸು...

ಓರೆ-ಕೋರೆಯಾಗಿದ್ದರೇನು ನಾನು
ಕೆತ್ತಬೇಕು, ಕೊರೆಯಬೇಕು
ನಿನ್ನ ಪ್ರೇಮಮೂರ್ತಿಯ ನೀನು...

ಸಖೀ...
ನಿನ್ನ ಪ್ರೇಮರಾಗದಿ
ಒಲವಿನ ಹಾಡಾಗಿದ್ದೇನೆ ನಾನು
ನುಡಿಸಬೇಕು, ನುಡಿಯಬೇಕು
ಬಾಳಗೀತೆಯ ನೀನು

ಸಖೀಗೀತ

ಸಖೀ....

ಮನದಾಳದ ಪುಟಗಳನ್ನು
ತಿರುವಿ ಹಾಕುತ್ತಿದ್ದೆ...
ಯಾಕೋ ಏನೋ...
ಒಂದು ಪುಟದಿಂದ
ಕಣ್ಣು ಕೀಳಲೇ ಇಲ್ಲ....
ಹಿಂದೆಯೂ ಇಲ್ಲ, ಮುಂದೆಯೂ ಇಲ್ಲ
ನೋಟ ಸ್ಥಗಿತವಾಯಿತು
ಚಿತ್ರದಂತೆ
ಅಲ್ಲಿ ನೀನು ಬರೆದಿದ್ದು
ನಮ್ಮ ಸ್ನೇಹದ ಮುನ್ನುಡಿ...

ಹಲವಾರು ಪುಟಗಳಲಿ
ನಿನ್ನೊಂದಿಗೆ
ಬೆಟ್ಟದ ಮೇಲೇರಿ ಬಂಡೆಗಲ್ಲಿನ
ಮೇಲೆ ಕುಳಿತು ಹರಟಿದ ಮಾತುಗಳು
ಕೀಟಲೆ, ತುಂಟಾಟಗಳು
ಮುನಿಸು, ಕೋಪಗಳು
ಏನೆಲ್ಲಾ ಇದ್ದರೂ
ಅಪೂರ್ಣಗೊಳ್ಳುವುದು ಎನ್ನ
ಜೀವನ ಸಂಪುಟ
ನೀನು ನನ್ನೊಳಗೆ ಇರದಿದ್ದರೆ....

ಸಖೀಗೀತ

ಸಖೀ...

ನಾವಿಬ್ಬರೂ ಕೈಹಿಡಿದು ನಡೆದ
ಹೂಬನದ ಹಾದಿಯಲ್ಲಿ
ಹಸಿರುಪಾಚಿ ಬೆಳೆದು
ಅನಂತದೆಡೆಗೆ ಸೆಳೆಯುತ್ತಿದೆ...

ನಾವು ಕನಸು ಕಟ್ಟಿದ
ಬಂಡೆಗಲ್ಲಿನ ಮೇಲೆ
ಅರಿಷಿಣ ಕುಂಕುಮವ ಚಿಮುಕಿಸಿ
ಬೆಳಗಿಸಿದ ಗಂಧದ ಕಡ್ಡಿಯ
ಹೊಗೆಯಲ್ಲೂ ನಿನ್ನ ಚಿತ್ತಾರ ಮೂಡುತಿದೆ

ಕಂದೀಲು ಹಿಡಿದ ನೀನು
ಕಣ್ಮರೆಯಾಗಿ ಹೋದಾಗ
ಅಂಧಕಾರವನ್ನು ಹೊದ್ದು
ಚಿರನಿದ್ರೆಯತ್ತ ಜಾರುವ ಮನಸು...
ಆದರೂ ಗೋಚರಿಸುತ್ತಿದೆ
ನಕ್ಷತ್ರಗಳ ಬೆಳಕು...

Friday, July 15, 2011

ಸಖೀಗೀತ

ಸಖೀ...
ನಾನು ನಿರೀಕ್ಷಿಸುತ್ತಿದ್ದೇನೆ
ನಮ್ಮಿಬ್ಬರ ಮಿಲನವನ್ನು
ಹನಿ ಪ್ರೀತಿಗೂ ಬರಗೆಟ್ಟವನಂತೆ
ಕಾಯುತ್ತಿದ್ದೇನೆ ನಿನ್ನ ಬರವನ್ನು....

ವಿರಹದ ಉರಿಗೆ ಮನಸು ಕಲ್ಲಾಗಿಸಿ
ನಮ್ಮ ಪ್ರೀತಿಗೆ ಕವಚ ತೊಡಿಸಿ
ಕಾಯುತ್ತಿದ್ದೇನೆ ನಾನು
ಶಾಪಗ್ರಸ್ಥ ಅಹಲ್ಯೆಯಂತೆ....

ನಿನ್ನೊಂದಿಗೆ ಕಳೆದಿರುವ ಕ್ಷಣಗಳ
ಸವಿನೆನಪುಗಳಲಿ ಲೀನವಾಗಿ
ಕಾಯುತ್ತಿದ್ದೇನೆ ನಾನು
ಅಶೋಕವನದ ಸೀತೆಯಂತೆ....

ಕಾಲಚಕ್ರದಡಿ ಹಣ್ಣಾಗಿ
ನನ್ನತನ ಕ್ಷಣ-ಕ್ಷಣವೂ ಕರಗಿಹೋಗಿ
ಹೃನ್ಮಗಳಲಿ ನಿನ್ನನ್ನೇ ಹೊತ್ತು
ಕಾಯುತ್ತಿದ್ದೇನೆ ನಾನು ಶಬರಿಯಂತೆ....

ಸಖೀ....
ನಿನ್ನನ್ನು ನನ್ನೊಳಗೇ ಅವಿತಿಟ್ಟುಕೊಂಡು
ಕಳೆದುಹೋಗಿರುವ ನನ್ನನು
ನಿನ್ನ ಕಣ್ಣಾಲಿಗಳಲಿ ಕಾಣಲು
ನಾನು ಕಾಯುತ್ತಿದ್ದೇನೆ ನಿನಗಾಗಿ....

Tuesday, July 12, 2011

ಹಾಗೇ ಸುಮ್ಮನೇ......


ವಸುಂಧರೆಯ ಒಡಲಿನಿಂದ
ಈಗ ತಾನೆ ಜನ್ಮಿಸಿದ
ಕೂಸಿನ ಅಳು ಕರೆಯುತಿದೆ
ಅರಳಿರುವ ಮೊಗ್ಗಿನ
ಪರಿಮಳವು ಸೆಳೆಯುವಂತೆ


ಇಲ್ಲಿ ಬಿರುಬಿಸಿಲು
ಬಾಯಾರಿದ ಭೂಮಿ
ನಿಟ್ಟುಸಿರಿನ ಬೇಗೆ
ಜಗವೊಂದೇ ಆದರೂ
ಅಲ್ಲಲ್ಲಿ ಬೆಳಗುತಿದೆ ಹಸಿರು


ಜಗವನೆಲ್ಲ ಬೆಳಗುವ
ಹಗಲೂ ಇಲ್ಲಿದೆ
ತೂಕಡಿಸುವ ಜನವ ತೂಗುವ
ಇರುಳೂ ಇಲ್ಲಿದೆ
ಎಲ್ಲವೂ ಭಾಸ್ಕರನ ಬಯಲಾಟ


ದುಡಿಮೆಯ ಅರಸುತ್ತ
ಓಡುವ ಜನಗಳು
ಬೊಜ್ಜು ಕರಗಿಸಲೂ
ಓಡುವ ಜನಗಳು
ಜೀವನ ನಿಲ್ಲದ ಪಯಣ


ಬೆನ್ನಿಗೆ ತಗುಲಿರುವ ಹೊಟ್ಟೆ
ಬಸಿರು ತುಂಬಿರುವ
ಹೊಟ್ಟೆಯ ಭಾರದಿ
ಬಳಲುವ ಬೆನ್ನೆಲುಬು
ಹೊಟ್ಟೆಪಾಡಿನ ಜೀವನ

ಸಖೀಗೀತ

ಸಖೀ...

ಎನ್ನ ಮನವು ಹೀಗೆಯೇ
ನಿನ್ನ ನೆನಪಿನಲ್ಲಿಯೇ
ಪುಳಕಗೊಳ್ಳುತ್ತದೆ


ಮೊಗ್ಗು ಹೂವಾಗಿ ಅರಳುವ ತೆರದಿ
ಮೊಳಕೆಯೊಡೆಯುವ ನೆನಪು
ಸಂಪೂರ್ಣವಾಗಿ ಆವರಿಸಿಬಿಡುತ್ತದೆ
ಹೂವಿನ ಪರಿಮಳದಂತೆ

ಅರುಣೋದಯದಿ ಮೆಲ್ಲಗೆ ಬೀಸುವ
ಮಂದ ಮಾರುತದಂತೆ
ನಿನ್ನ ನೆನಪಿನಲ್ಲಿಯೇ
ಮನವು ಮುದಗೊಳ್ಳುತ್ತದೆ


ಹೂದೋಟದಿ ಮಕರಂದ ಹೀರಿ
ಹೂವಿನ ಸುತ್ತ ನರ್ತಿಸುವ ದುಂಬಿಯಂತೆ
ನನ್ನ ಅಂತರಂಗ
ನಿನ್ನ ನೆನಪಿನ ಸುಳಿಯಲ್ಲಿ ಸುಳಿದಾಡುತ್ತದೆ


ಅಲ್ಲಿ-ಇಲ್ಲಿ ಉಲಿಯುವ
ಮಧುರ ಕಂಠಗಳಲಿ
ನಿನ್ನ ನುಡಿಯೇ ಎನ್ನ ಕಿವಿಗಳಲಿ
ಒಡಮೂಡಿಸುತ ಪುಳಕಗೊಳ್ಳುತ್ತದೆ


ದಡವನಪ್ಪುವ ಸಾಗರದ
ತೆರೆಗಳ ತೆರದಿ
ಮತ್ತೆ-ಮತ್ತೆ ಮರುಕಳಿಸಿ
ಎನ್ನ ಹೃದಯವನು ಮುತ್ತಿಕ್ಕುತ್ತದೆ

ಅಳಲು

ಮೂಲೆಯಲ್ಲಿ ಇಟ್ಟಿರುವ

ಒರಳು ಕಲ್ಲು
ನಿಶ್ಚಲದಿ ನಿಂತಿರುವ ಒನಕೆ
ಹಳೆಯ ನೆನಪುಗಳ
ಪಳೆಯುಳಿಕೆಯಂತೆ
ಮನವು ಜಡವಾಗಿದೆ


ಹೊಸ-ಹೊಸ ಆವಿಷ್ಕಾರಗಳು
ನೂರಾರು ಸಲಕರಣೆಗಳು
ಗುಂಡಿ ಒತ್ತಿದರೆ
ಕ್ಷಣಮಾತ್ರದಲಿ ಸಿಗುವ
ಸೌಕರ್ಯಗಳು
ನನ್ನೆಡೆಗೆ ಕಣ್ಣೆತ್ತಿಯೂ
ನೋಡದಂತೆ ಮಾಡಿವೆ


ಹಬ್ಬ-ಹರಿದಿನಗಳಲಿ ಪೂಜೆ
ಮನೆಯ ಮಹಾಲಕ್ಷ್ಮಿಯ ಪಟ್ಟ
ಧೂಫ ದೀಪವ ಬೆಳಗಿ
ಮತ್ತೆ ನಾಮವನು ಬಳಿದು
ಮತ್ತೊಂದು ಹಬ್ಬ ಬರುವವರೆಗೆ
ಮರೆತುಬಿಡುವರು ಎನ್ನ


ಎತ್ತುವುದು, ಕುಟ್ಟುವುದು
ಯಾರಿಗೂ ಇಲ್ಲ ಮನಸು
ಗುಂಡಿ ಒತ್ತುವುದರಲ್ಲಿಯೇ
ಅವರ ಮನಸು
ಹುಚ್ಚು ಕುದುರೆಯನೇರಿದ ಅವಸರ
ಎಲ್ಲರಿಗೂ ಹೊಸತನದ ಹಂಬಲ
ಹೊಸದಕ್ಕೇ ಬೆಂಬಲ

ಸಖೀಗೀತ

ಸಖೀ....
ನಿನ್ನ ಪ್ರೇಮದ ನೋಟವೊಂದು
ಹುಲ್ಲು-ಗರಿಕೆಯ ಅಂಚಿನಲಿ
ಇಬ್ಬನಿಯ ಬಿಂದುಗಳಲಿ
ಹೊಳೆವ ಸೂರ್ಯರಶ್ಮಿಯ ಭಾವ


ಅರಳಿರುವ ಹೂವಿನ ಸುತ್ತ
ಸುಳಿದಾಡುವ ಭ್ರಮರದಂತೆ
ಅನುಗಾಲ ಮನದಲ್ಲಿ
ನನ್ನ-ನಿನ್ನ ಸರಸಗಾನ


ಬಂಡೆಗಲ್ಲುಗಳ ಬಳಸಿ
ಮೆಲ್ಲಗೆ ಹರಿಯುವ ತೊರೆಯ
ಜುಳು-ಜುಳು ನೀನಾದದಂತೆ
ಮಿಡಿಯುವುದು ಹೃದಯ ನಿನಗಾಗಿ


ಹುಣ್ಣಿಮೆಯ ರಾತ್ರಿಯಲಿ
ಹಾಲು ಸುರಿದಂತೆ ಹರಡಿರುವ
ಚಂದ್ರಿಕೆಯ ಸಂಭ್ರಮದ ತೆರದಿ
ಹೃದಯದಲಿ ಬೆಳಗುವುದು ನಿನ್ನ ಪ್ರೇಮಜ್ಯೋತಿ

ಕನಸುಗಳು

ಈ ಕನಸುಗಳೇ ಹೀಗೆ
ಮನಸ್ಸಿಗೆ ಮುದ ನೀಡುತ್ತವೆ
ಕತ್ತಲೆಯ ಕಪ್ಪಿಗೆ ಬಣ್ಣ ಬಳಿದು
ರಂಗಿನ ಲೋಕ ತೋರಿಸುತ್ತವೆ

ಕನಸುಗಳೇ ಹೀಗೆ
ಇರಲಾರದ ಸಾಮಾಜ್ಯ ತೋರಿ
ದೊರೆಯಂತೆ ನಮಗೆ
ಮೆರೆಯಲು ಅವಕಾಶವೀಯುತ್ತವೆ


ಸೂರ್ಯಕಾಂತಿಯ ಬೆಳಕಿನಲ್ಲಿ
ಕೈಗೂಡದಿರುವ ಬಯಕೆಗಳು ಸೇರಿ
ಸಪ್ತವರ್ಣದ ಕಾಮನಬಿಲ್ಲೂ ನಾಚುವಂತೆ
ವರ್ಣಮಯ ಲೋಕ ತೋರಿಸುತ್ತವೆ


ಕನಸುಗಳೇ ಹೀಗೆ
ಕೈ-ಹಿಡಿದಾಕೆ ಪಕ್ಕದಲ್ಲಿದ್ದರೂ
ರಂಭೆ-ಊರ್ವಸಿಯರನ್ನೂ ನಾಚಿಸುವ
ಲಲನೆಯರೊಂದಿಗೆ ಲಲ್ಲೆಹೊಡೆಯುತ್ತವೆ


ಕನಸುಗಳೇ ಹೀಗೆ
ಕಣ್ಣು ಮುಚ್ಚಿದ್ದರೂ, ತ್ರಿಲೋಕ ದರ್ಶನ ನೀಡಿ
ಮನಸಿಗೆ ಮುದಗೊಳಿಸುತ
ನನಸಾಗಿಸಲು ಪ್ರೇರೇಪಿರುತ್ತವೆ


ಕನಸುಗಳು ಹೀಗೆಯೇ ಎನ್ನಲಾಗದು
ಭಯಂಕರ ಧೈರ್ಯದ ಮನುಜ
ಬೆಚ್ಚಿ-ಬೆದರಿ ಚೀತ್ಕರಿಸುವಂತೆ
ಭಯಾನಕ ಲೋಕವನ್ನೂ ತೋರುತ್ತವೆ

ಸಖೀಗೀತ

ನಾನಿಲ್ಲದೇ ಇರುವಾಗ
ಹೇಗಿದ್ದೆ ನಲ್ಲ
ನನ್ನ ವಿರಹದ ನೋವು ...
ಅಗಲಿಕೆಯ ನಿಟ್ಟುಸಿರು
ಬಾಧಿಸಿತೇ ನಿನ್ನ ಮನಕೆ
ಹಲವು ದಿನಗಳ ನಂತರ
ನನ್ನವಳು ಕಣ್ಣುಗಳಲ್ಲೀಯೇ
ಕುಡಿನೋಟದಿಂದ ಕೇಳಿದ್ದು


ಸಖೀ
ನೀ ನಿಲ್ಲದೇ ಹೋದರೆ
ನೀನು ನಿಲ್ಲದೇ ದೂರ ಹೋದರೆ
ನಾನೂ ನಿನ್ನೊಡನಿದ್ದೆ
ಅನುಕ್ಷಣವೂ ನಿನ್ನ
ಉಸಿರಿನಲ್ಲಿ ಉಸಿರಾಗಿ
ಹೃದಯದ ಮಿಡಿತವಾಗಿ
ನಿನ್ನೊಳಗೇ ಕರಗಿ ಹೋಗಿದ್ದೆ


ನೀನಿಲ್ಲದಿರುವಾದ ಎನ್ನಲು
ನೀನೆಲ್ಲಿ ಹೋಗಿದ್ದೆ ಸಖೀ
ನಿನ್ನ ಸವಿ-ನೆನಪುಗಳ ಸುಳಿಯಲ್ಲಿ
ನನ್ನನ್ನೂ ಸೆಳೆದುಕೊಂಡಿದ್ದೆ
ಎನ್ನ ಮನದಲ್ಲಿ
ಪಿಸುಮಾತು ಹೇಳುತ್ತ
ನನ್ನೊಡನೆಯೇ ಇದ್ದೆ ನೀನು


ಕಣ್ಣ ರೆಪ್ಪೆಗಳ ಅಡಿಯಲ್ಲಿ ಕುಳಿತು
ಕಣ್ಣು ಮುಚ್ಚಿದಾಗಲೋಮ್ಮೆ
ನಿನ್ನಿರವ ತೋರುತ ಮುದಗೊಳಿಸುತ್ತಿದ್ದೆ
ಹೃದಯವು ಮಿಡಿಯುವ
ಒಂದೊಂದು ಮಿಡಿತದಲಿ ಮಿಳಿತಗೊಂಡು
ಪಂಚಮದಲ್ಲಿ ಪ್ರೇಮರಾಗವ ನುಡಿಸುತ್ತಿದ್ದೆ
ನೀನು ನನ್ನೊಳಗಿಂದ ಹೋಗಲೇ ಇಲ್ಲ
ನಾನು ಕೊನೆಯುಸಿರೆಳೆಯುವ ವರೆಗೆ
ನೀನೆಲ್ಲಿಗೂ ಹೋಗುವುದಿಲ್ಲ

ಎಣಿಕೆ

ಜೀವನದಿ ಕಳೆದಿರುವ
ಕ್ಷಣಗಳನ್ನು ಕಣ್ಣೀರಿನ ಹನಿಗಳಿಂದ ಎಣಿಸಬೇಡ
ನಿನ್ನಿಂದ ನಕ್ಕು ನಲಿದಿರುವ ಸ್ನೇಹಿತರ
ಸಂತಸದ ಘಳಿಗೆಗಳಿಂದ ಎಣಿಸು

ಬಾಳ ಮುಸ್ಸಂಜೆಯಲಿ
ಆಯುಷ್ಯವನ್ನು ವರ್ಷಗಳಿಂದ ಅಳೆಯಬೇಡ
ಜೀವನದಾದ್ಯಂತ ಗಳಿಸಿರುವ
ಸ್ನೇಹಿತರ ಸಂಖ್ಯೆಯೊಡನೆ ಎಣಿಸು

ನಿನ್ನ ಕತ್ತಲೆಯ ಕ್ಷಣಗಳನ್ನು
ಅಂಧಕಾರದ ನೆರಳುಗಳಿಂದ ಎಣಿಸಬೇಡ
ಕಾರಿರುಳಿನಲ್ಲಿ ಬೆಳಗುತ್ತಿರುವ
ತಾರೆಗಳ ಸಂಖ್ಯೆಯೊಡನೆ ಎಣಿಸು

ನಿನ್ನ ದಿನಗಳನ್ನು
ಸೂರ್ಯರಶ್ಮಿಯ ಹೊಂಗಿರಣಗಳಿಂದ ಎಣಿಸು
ಆಗಸದಿ ಕವಿದಿರುವ
ಕಾರ್ಮೋಡಗಳ ಮರೆತು

ನಿನ್ನ ತೋಟದ ಅಂದವನು
ಅರಳಿರುವ ಸುಂದರವಾದ
ಹೂಗಳ ನೋಡಿ ಎಣಿಸು
ಉದುರುತ್ತಿರುವ ಎಲೆಗಳನ್ನು ಮರೆತು

ಸಖೀಗೀತ

ಅಂದು ಅವಳು
ಇದೇ ದಾರಿಯಲ್ಲಿ
ಬರುತ್ತಿದ್ದಳು ಮೆಲ್ಲಗೆ...
ಮಂದಗಮನೆಯಾಗಿ
ಮಲ್ಲಿಗೆ ಅರಳಿದಂತೆ
ಅವಳ ಮುಗುಳ್ನಗು
ಎನ್ನ ಹೃದಯ ಅರಳುತ್ತಿತ್ತು
ತಂಗಾಳಿ ಸೋಕಿದಂತೆ
ಮನದಲ್ಲಿ ಮಂದಹಾಸ


ಇಂದು ಅವಳು
ಎನ್ನ ಮನೋಮಂದಿರದಲ್ಲಿ
ಚಿರ ಸ್ಥಾಯಿಯಾಗಿಹಳು
ಮನದಲ್ಲೆಲ್ಲಾ ಬೆಳದಿಂಗಳು
ಹೃನ್ಮಗಳಲ್ಲಿ ಅವಳದೇ ರಾಗ
ಅವಳು ನೆಲೆಸಿದ ಮೇಲೆ
ನಾನು, ನನ್ನತನ ಎಲ್ಲವೂ
ಅವಳೊಂದಿಗೆ ಲೀನವಾಗಿ
ಬಾಳಲಿ ಮೊಳಗಿದೆ ತೋಂ.....ತನ

ಸಖೀ ಗೀತ

ಸಖೀ.....
ನೀನಿಲ್ಲದೇ ನಾನು
ಎಲ್ಲವನ್ನೂ ಕಳೆದುಕೊಂಡಿದ್ದೇನೆ...
ನಿನ್ನ ನೆನಪಿನಲ್ಲಿಯೇ
ನಾನೂ ಕಳೆದುಹೋಗಿದ್ದೇನೆ

ಶೂನ್ಯವನ್ನೇ ದೃಷ್ಟಿಸುವ
ನನ್ನ ಕಂಗಳು
ಶೂನ್ಯದಿಂದಲೂ ನಿನ್ನನ್ನು
ಬಗೆದು ತೆಗೆಯುತ್ತವೆ
ಕಣ್ಮುಂದೆ ನಿನ್ನದೇ ಪ್ರತಿರೂಪ


ಬಿಳಿ ಹಾಳೆಗಳ ಮೇಲೆ
ನೀನು ಚೆಲ್ಲಿರುವ ಶಾಯಿ ಗುರುತು
ಅದನ್ನೇ ಆಚೀಚೆ ಎಳೆದು
ಚಿತ್ರವನ್ನಾಗಿಸುವ ಎನ್ನ ಆಶಯ
ಮನದಲ್ಲಿ ನೂರೆಂಟು ಚಿತ್ರಗಳು


ಅಲ್ಲಿ-ಇಲ್ಲಿ ಹೋಗಿ ಬರುವವರ
ಸರಸರ ಸದ್ದು, ಹೆಂಗಳೆಯರ ಪಿಸುಮಾತು
ಕೈ-ಬಳೆ ಕಾಲ್ಗೆಜ್ಜೆಗಳ ನೀನಾದ
ನೀ ಮುಡಿದಾ ಮಲ್ಲಿಗೆಯ ಕಂಪು
ಸದಾ ನಿನ್ನದೇ ಕನವರಿಕೆ


ಸಖೀ ಬೇಗ ಬಾ
ಕಳೆದು ಹೋಗಿರುವ
ನನ್ನ ಇರವನ್ನು ತೋರು ಬಾ .....

ಅವಳು

ಸಮಾರಂಭದ ನಡುವೆ
ರಂಭೆಯಂತ ಸುಂದರಿ
ನಾಚಿಕೆಯೇ ಮೈವೆತ್ತಂತೆ ಕುಳಿತಿದ್ದಳು...
ತಲೆ ಎತ್ತಿ ನೋಡುವುದಿರಲಿ
ಮುಖವನ್ನೇ ನೆಲದಾಳಕ್ಕಿಳಿಸಿದಂತೆ
ಅವಳ ಹಾವ-ಭಾವ
ಆಗಾಗ ಮುಖದಲ್ಲಿ ಮೂಡುವ
ಅವಳ ಮಂದಹಾಸ
ಅಯ್ಯೋ ದೇವ್ರೇ ಈ ಕಾಲದಲ್ಲಿ
ಹೀಗೂ..... ಉಂಟೇ
ಅಂತ
ಹತ್ತಿರದಲ್ಲಿ ಹೋಗಿ ಇಣುಕಿ ನೋಡಿದರೆ
ಸುಂದರವಾದ ಅವಳ
ಕೈಬೆರಳುಗಳು
ಮೋಬೈಲ್ ಕೀಗಳ ಮೇಲೆ ನಲಿದಾಡುತ್ತಿವೆ
ಮೆಸೇಜುಗಳ ಪ್ರವಾಹದಲ್ಲಿ
ಅವಳು ಕೊಚ್ಚಿಹೋಗಿದ್ದಾಳೆ
ತನ್ನ ಇರುವಿಕೆಯನ್ನೇ ಮರೆತಂತೆ......

ದಾರಿ

ಭೂಮಿಯ ಮೇಲೆಲ್ಲಾ
ಗೆರೆ ಕೊರೆದಂತೆ ಕಾಣುವ ದಾರಿ
ನೇರವಾಗಿ, ಅಂಕು-ಡೊಂಕಾಗಿ...
ಜೇಡರ ಬಲೆಯಂತೆ
ನಡೆದವರ ಜಾಡು ದಾರಿಯೂ ಅರಿಯದು

ಅಲ್ಲಿ ಕೈಬೀಸಿ ಕರೆದವರ
ಕಾಯುತ್ತ ನಿಂತವರೂ ಇದ್ದರೂ
ಮುಂದೆ ಸಾಗದ ಅಸಹಾಯಕರಿಗೆ
ಕೈನೀಡಿ ಕರೆದೊಯ್ಯುವವರೂ ಇದ್ದರು
ಇದ್ಯಾವುದರ ಪರಿವೇ ಇಲ್ಲದಂತೆ
ಬಿದ್ದಿದೆ ದಾರಿ ಬಯಲಿನಲ್ಲಿ
ಸಂದಿ-ಗೊಂದಿಗಳಲ್ಲಿ


ಗೌತಮ ಮಧ್ಯರಾತ್ರಿಯಲಿ
ಎದ್ದು ಹೋಗಿದ್ದು ಇಲ್ಲಿಂದಲೇ
ಸೀತೆಯನು ಕದ್ದೊಯ್ದ ರಾವಣ
ರಾವಣನ ಅರಸುತ್ತ
ಸಾಗರೋಲ್ಲಂಘನ ಗೈದ ಹನುಮ
ದಾರಿಯನು ಗಮಿಸುತ್ತಲೇ
ಅಹಲ್ಯೆಯ ಶಾಪವಿಮೋಚನೆ
ಮಾಡಿದ ಮರ್ಯಾದಾಪುರುಷೋತ್ತಮ
ಎಲ್ಲರೂ ನಡೆದರು ಅವರವರ ದಾರಿಯಲಿ...

ನಡೆದವರು, ಮುನ್ನುಗ್ಗಿದವರು
ಮುಂದೆ ಸಾಗಿ ಗಮ್ಯ ಸೇರಿದರು
ಕಸಿವಿಸಿಯಿಂದ ಅಳುಕುತ್ತ, ತೆವಳುತ್ತ
ಸಾಗುವವರು, ಕವಲು ದಾರಿಯಲಿ ನಿಂತವರು
ಅಲ್ಲಲ್ಲಿ ಕಪ್ಪುಚುಕ್ಕೆಯಂತೆ ಗೋಚರಿಸುತಿಹರು
ಗಮಿಸಬೇಕು ದೂರವ
ನಿರ್ಗಮಿಸಬೇಕು ಗಮ್ಯದೆಡೆಗೆ......

ಮಾತುಗಳು

ಮಾತುಗಳು ಮಾತುಗಳು...ಅವೇ ಪದಗಳು......
ಪದಗಳ ಮೋಡಿ ಮರುಳಾಗಿಸುತ್ತೆ
ಪದಗಳು ಅವುಗಳೇ ಆದರೂ
ಭಾವಗಳು ಬೇರೆ-ಬೇರೆ
ಜೀವನದ ತುಡಿತದಲ್ಲಿ
ಪ್ರೇಮಭಾವ ಅರಳುವ ಹೂವಿನಂತೆ
ಸದ್ದಿಲ್ಲದೇ ಬಂದು
ಆವರಿಸುವ ಪರಿಮಳದಂತೆ


ಪದಗಳು
ಮೊನಚಾದ ಚೂರಿಯಂತೆ
ಒಮ್ಮೊಮ್ಮೆ ಹೃದಯವನ್ನು ಇರಿಯುತ್ತವೆ
ಪದಗಳು ಅವುಗಳೇ ಆದರೂ
ತಾತ್ಪರ್ಯ ಬೇರೆಯಾಗಿರುತ್ತೆ
ಆದರೂ ಬೇಕು ಸಂವಹನ
ಪದಗಳೂ ಬೇಕು ಆದರೆ ಎಲ್ಲಿಯವರೆಗೆ ?


ಕಣ್ಣುಗಳು ಮಾತನಾಡಿದರೆ
ನೋಡಿದಾ ಕ್ಷಣ ಅರಿಯುವಂತಾದರೇ
ಧ್ವನಿಯಲ್ಲಿನ ಭಾವವನ್ನು ಗ್ರಹಿಸುವಂತಾದರೇ
"ನಂಬಿಕೆ" ಎಂಬ ಮೂರೂವರೆ ಅಕ್ಷರ
"ಪ್ರೇಮ" ಮತ್ತು "ಪ್ರೀತಿ"ಯಲ್ಲಿ
ಆಳವಾಗಿ ಬೇರೂರಿದರೆ....
ಪದಗಳಿಗೆ ಅನರ್ಥವಿಲ್ಲ
ಬಾಳು ಸುಂದರವಾದ ಕವಿತೆಯಂತೆ

ಸಖೀಗೀತ

ಸಖೀ....
ಅದೇ ಕಲ್ಲುಬಂಡೆ
ಅಂದು ನಾವಿಬ್ಬರೂ...
ಕುಳಿತು ನಮ್ಮ ಜೀವನದ
ಕನಸುಗಳ ಕಟ್ಟಿದ್ದು
ತಂಗಾಳಿಯಲ್ಲಿ ತೇಲಿಹೋಗಿ
ಮೇಘಗಳ ನಡುವೆ ಮನೆಮಾಡಿದ್ದು

ಸುತ್ತಲೂ ಚೆಲ್ಲಿದ ಹಸಿರು
ಮೊಳಕೆಯೊಡೆದಿಹ ಪ್ರೀತಿಯಿಂದ
ನಮ್ಮ ಬಾಳು ಬಸಿರು ಕಟ್ಟಿದ್ದು
ಪಿಸುಮಾತಿನಲ್ಲಿ ನೀನು
ಅಂದು ಉಸಿರಿದ ಪ್ರೇಮಮಂತ್ರ
ಇಂದಿಗೂ ಕಿವಿಯಲ್ಲಿ ಮೊಳಗುತ್ತಿದೆ


ಬೆಟ್ಟದ ತುದಿಯ
ಬೋಳು ಬಂಡೆಯ ಮೇಲೆ
ಪ್ರೀತಿಯನೇ ಉಸಿರಾಡುತ್ತ ಕುಳಿತ ನಾವು
ಜಗವನ್ನೇ ಗೆದ್ದ ಸಂಭ್ರಮದಲ್ಲಿ
ಮನದಲ್ಲಿಯೇ ಕಟ್ಟಿದೆವು
ನೂರು-ಸಾವಿರ ಕನಸುಗಳ


ನೀನಿಲ್ಲದ ಈ ಸಂಜೆಯಲಿ
ಬೆಟ್ಟದ ತುದಿಯಲ್ಲಿ ನಿಂತು
ನಮ್ಮ ಪ್ರೀತಿಗೆ ಮುನ್ನುಡಿ ಬರೆದ
ಬಂಡೆಯನು ನೋಡುತಿರುವೆ
ಅಂದು ಮನಸಲ್ಲೇ ಚಿತ್ರಿಸಿದ ಜೀವನ
ಇಂದು ಹಸಿರಾಗಿ ಹರಡಿದೆ
ಶಿಲಾಶಾಸನವನ್ನೂ ಮೀರಿ
ಅಜರಾಮರವಾಗಿ ನಿಂತಿದೆ ನಮ್ಮ ಪ್ರೀತಿ.....

Sunday, May 8, 2011

ನಿರೀಕ್ಷೆ

ಸಖೀ.....
ನಿನ್ನ ಒಂದು


ನೋಟಕ್ಕಾಗಿ ಕಾಯುತ್ತಿದ್ದೇನೆ
ಅರುಣೋದಯದೊಂದಿಗೆ...
ನೆರಳಿನಂತೆ ಹಿಂಬಾಲಿಸುತ್ತ
ಕಾಲನ ಚಲನೆಯನುಸಾರ

ನನ್ನೊಡನೆ ಒಡನಾಡಿದ ನನ್ನ ನೆರಳು
ಉದ್ದುದ್ದ ಬೆಳೆದು, ಕಾಲಡಿಗೆ ಸೇರಿ
ಸುಸ್ತಾಗಿ ಕತ್ತಲೆಯಲ್ಲಿ
ಕರಗಿ ಹೋಗುವ ಸಮಯ
ಆದರೂ ನಿರೀಕ್ಷೆ ಮುಗಿಯದು

ಭೂಮಿಯನು ಸುತ್ತುವ
ಚಂದ್ರನಂತೆ ನಿನ್ನ ಸುತ್ತ
ಸುತ್ತಿ ಸುಳಿದಾಡುತ್ತಿದ್ದೇನೆ
ಗೊತ್ತು-ಗುರಿಯಿಲ್ಲದಂತೆ
ಸುಳ್ಳು ನೆವಗಳ ಮಾಡಿ

ಎಲ್ಲೋ ಅಂತರಾಳದ ಆಸೆ
ಕಣ್ಣುಗಳು ಮತ್ತೆ ಕಲೆತಾವು ಅಂತ
ನಿರೀಕ್ಷೆ ಮುಗಿಯುವುದೇ ಇಲ್ಲ
ಎನ್ನ ತಾಳ್ಮೆಯ ಪರೀಕ್ಷೆಯೂ
ಮುಗಿಯುವದಿಲ್ಲ

ಸ್ವಗತ

ವಸುಂಧರೆಯ ಒಡಲಿನಿಂದ
ಈಗ ತಾನೆ ಜನಿಸಿದ
ಕೂಸಿನ ಅಳು ಕರೆಯುತಿದೆ
ಅರಳಿರುವ ಮೊಗ್ಗಿನ
ಪರಿಮಳವು ಸೆಳೆಯುವಂತೆ

ಇಲ್ಲಿ ಬಿರುಬಿಸಿಲು
ಬಾಯಾರಿ ಬಾಯ್ದೆರೆದ ಭೂಮಿ
ನಿಟ್ಟುಸಿರಿನ ಬೇಗೆ
ಜಗವೊಂದೇ ಆದರೂ
ಅಲ್ಲಲ್ಲಿ ಬೆಳಗುತಿದೆ ಹಸಿರು


ಜಗವನೆಲ್ಲ ಬೆಳಗುವ
ಹಗಲೂ ಇಲ್ಲಿದೆ
ತೂಕಡಿಸುವ ಜನವ ತೂಗುವ
ಇರುಳೂ ಇಲ್ಲಿದೆ
ಎಲ್ಲವೂ ಭಾಸ್ಕರನ ಬಯಲಾಟ

ದುಡಿಮೆಯ ಅರಸುತ್ತ
ಓಡುವ ಜನಗಳು
ಬೊಜ್ಜು ಕರಗಿಸಲೂ
ಓಡುವ ಜನಗಳು
ಜೀವನ ನಿಲ್ಲದ ಪಯಣ

ಬೆನ್ನಿಗೆ ತಗುಲಿರುವ ಹೊಟ್ಟೆ
ಬಸಿರು ತುಂಬಿರುವ ತೆರದಿ
ಹೊಟ್ಟೆಯ ಭಾರ ಹೊತ್ತು
ಬಳಲುವ ಬೆನ್ನೆಲುಬು
ಹೊಟ್ಟೆಪಾಡಿನ ಜೀವನ

ಕಾಲ

 
ಗಡಿಯಾರದ ಮುಳ್ಳು
ಸದ್ದಿಲ್ಲದೇ ಓಡುತ್ತಿದೆ

ತಂತ್ರಜ್ಞಾನದ ಬೆಳೆದು
ಕಾಲವು ಮೊದಲಿನಂತೆ
ಟಿಕ್-ಟಿಕ್ ಸದ್ದು ಮಾಡುತ್ತಾ
ನಮಗೆ ಎಚ್ಚರಿಸುವುದಿಲ್ಲ
ಬೆಚ್ಚಿಬೀಳಿಸುವುದೂ ಇಲ್ಲ


ಕಾಲ ಸೂಚಕ ಮುಳ್ಳುಗಳಿಗೂ
ಇಲ್ಲ ಅಸ್ಥಿತ್ವದ ಅಭಯ
ಕಾಲಸೂಚಕ ಸಂಖ್ಯೆಗಳ ಮಧ್ಯದಲಿ
ಮಿನುಗುವ ಸಣ್ಣ ಚುಕ್ಕೆಗಳೆರಡು
ಗಡಿಯಾರದ ಮುಳ್ಳುಗಳಿಗೆ ಮುಳುವಾಗಿದೆ

ಕ್ಷಣ-ಕ್ಷಣಕೂ ವರ್ತಮಾನ ಕಳೆದು
ಭೂತದೊಳಗೆ ಲೀನವಾಗುತ್ತಿದೆ
ನಾಳೆಗೆ ಎಂದು
ತಲೆ ಮೇಲೆ ಕೈಹೊತ್ತು ಕುಳಿತವರೂ
ವರ್ತಮಾನಕ್ಕಿಳಿದು ಭೂಗತರಾಗುತ್ತಿದ್ದಾರೆ

ಕಾಲದ ಪರಿವೇ ಇಲ್ಲದೆ
ನಾವೂ ಕಳೆದುಹೋಗಿದ್ದೇವೆ

ಕೆಲವರಿಗೆ ಸಮಯವಿಲ್ಲ
ಸಮಯವಿದ್ದವರಿಗೆ ವ್ಯವಧಾನವಿಲ್ಲ
ಸಮಯಾತೀತರಾದ ಇನ್ನುಳಿದವರಿಗೆ
ಸಮಯ ಕಳೆದುಹೋಗುವ ಅರಿವೂ ಇಲ್ಲ

ಸಮಯದ ಸುಳಿಯೊಳಗೆ
ಸೆಳೆದುಕೊಂಡು ಕಾಲ ಸಕಲರನೂ
ಅನಂತದೆಡೆಗೆ ಒಯ್ಯುತ್ತಿದೆ
ಸಮಯ ಸೂಚಕ ಅವತಾರಗಳು
ನೂರಾದರೂ ಕಾಲನ ಚಲನೆ ಒಂದೇ........

ಮನೋಗತ

ಸಖೀ...

ಎನ್ನ ಮನವು ಹೀಗೆಯೇ
ನಿನ್ನ ನೆನಪಿನಲ್ಲಿಯೇ
ಪುಳಕಗೊಳ್ಳುತ್ತದೆ

ಮೊಗ್ಗು ಹೂವಾಗಿ ಅರಳುವ ತೆರದಿ
ಮೊಳಕೆಯೊಡೆಯುವ ನೆನಪು
ಸಂಪೂರ್ಣವಾಗಿ ಆವರಿಸಿಬಿಡುತ್ತದೆ
ಹೂವಿನ ಪರಿಮಳದಂತೆ

ಅರುಣೋದಯದಿ ಮೆಲ್ಲಗೆ ಬೀಸುವ
ಮಂದ ಮಾರುತದಂತೆ
ನಿನ್ನ ನೆನಪಿನಲ್ಲಿಯೇ
ಮನವು ಮುದಗೊಳ್ಳುತ್ತದೆ

ಹೂದೋಟದಿ ಮಕರಂದ ಹೀರಿ
ಹೂವಿನ ಸುತ್ತ ನರ್ತಿಸುವ ದುಂಬಿಯಂತೆ
ನನ್ನ ಅಂತರಂಗ ಸದಾ
ನಿನ್ನ ನೆನಪಿನ ಸುಳಿಯಲ್ಲಿ ಸುಳಿದಾಡುತ್ತದೆ

ಅಲ್ಲಿ-ಇಲ್ಲಿ ಉಲಿಯುವ ಹೆಂಗಳೆಯರ
ಮಧುರ ಕಂಠಗಳಲಿ
ನಿನ್ನ ನುಡಿಯೇ ಎನ್ನ ಕಿವಿಗಳಲಿ
ಒಡಮೂಡಿಸುತ ಪುಳಕಗೊಳ್ಳುತ್ತದೆ

ದಡವನಪ್ಪುವ ಶರಧಿಯ
ತೆರೆಗಳ ತೆರದಿ
ಮತ್ತೆ-ಮತ್ತೆ ಮರುಕಳಿಸಿ
ಎನ್ನ ಹೃದಯವನು ಮುತ್ತಿಕ್ಕುತ್ತದೆ

Thursday, April 28, 2011

ಪಯಣ

ಸುಮ್ಮನೇ ನಡೆಯುತ್ತಿರುವೆ
ಗುರಿಯೂ ಇಲ್ಲ, ಗುರುವೂ
ವಿಧಿ ಕರೆದೊಯ್ಯುವಲ್ಲಿಗೆ
ಎನ್ನ ಪಯಣ

ಚಲನೆಯೇ ಜೀವನ
ಎಂಬೆನ್ನ ಭಾವ
ಹೋದೀತೇ ಜೀವ
ಮರುಗುವುದು ಅಂತರಾಳ

ಹಿರಿಯರು ಬಿಟ್ಟ ನೆರಳು
ಸಂಸ್ಕಾರದ ತಿರುಳು
ಸ್ನೇಹಿತರ ಮುಗುಳ್ನಗುವಿಗೆ
ಕಾಲಕ್ಕೆ ತಕ್ಕಂತೆ ಎನ್ನ ಪಯಣ

ಅನುಭವಗಳೇ ಮುನ್ನಡಿ
ಕಾಲಡಿ ಮೆಟ್ಟಿ
ಅನುಭಾವದಿ ಕೈ ಬೀಸಿ
ಹಾಕುವ ಹೆಜ್ಜೆಗಳ ಪಯಣ
ಬಿಡಲಾರೆ ಕೆಚ್ಚೆದೆಯ ಸವಾರಿ

ನೆನಪುಗಳ ಲಗೇಜು
ಹೊತ್ತು ಸಾಗುವ ದಾರಿಯಲಿ
ಬೇತಾಳ-ವಿಕ್ರಮರಿಗೆ
ಹೆಣಭಾರ ಹೊರುವ ಸಂಧಾನ
ಮತ್ತೆ ಸಾಗುತ್ತಿದೆ ಪಯಣ

ಒಂದು ಚಿಗುರು, ನಗು
ಆಗ ತಾನೇ ಅರಳಿದ ಹೂವು
ಹುಲ್ಲಿನ ಗರಿಯಂಚಿನ ಮಂಜು
ಕ್ಷಣಕಾಲ ತಡೆಯುತ್ತವೆ ಎನ್ನ

ಎಚ್ಚರಿಸಿದ ಜೀವಾತ್ಮ ..!
ಸಾಗಿಬಂದ ದಾರಿಯ
ಅನುಭವಗಳ ಮೆಟ್ಟಿ,
ಸಾಗುತ್ತಿದೆ ಬಾಳ ಪಯಣ....

ಪ್ರಶ್ನೆಗಳು

ಕೆಲವು ಪ್ರಶ್ನೆಗಳಿಗೆ
ಇಲ್ಲ ಉತ್ತರ
ತತ್ತರಿಸಿಬಿಡುತ್ತವೆ ನಾವು
ಅದು ಯಾಕೆ ಹೀಗೆ ?
ಹೀಗೇಕೆ ??


ಅವಳ ಕಣ್ಣ ನೋಟವು
ಎನ್ನೆದೆಯ ಇರಿಯುವದೇಕೆ ?
ಪ್ರೀತಿಯ ಧಾರೆಗೆ
ಹೃದಯ ತಂಪಾಗುವುದೇಕೆ ?
ಮತ್ತೆ ಮತ್ತೆ ಮನಸು
ಅವಳತ್ತ ಸುಳಿಯುವದೇಕೆ ?


ಈ ಪ್ರೀತಿ ಮೂಡುವುದೆಲ್ಲಿ
ಮನದಲ್ಲೋ, ಹೃದಯದಲ್ಲಿಯೋ
ಪ್ರೇಮದಾಟದ ಕಾಮನಗೆಳು
ಮೈಮನಗಳ ತುಂಬಿ ಕೆಣಕುವುದೇಕೆ ?
ಆಂತರ್ಯದಲಿ ಪ್ರೀತಿಯಿದ್ದರೂ
ಮೈಮನಗಳು ಪುಳಕಗೊಳ್ಳುವದೇಕೆ ?


ಅವಳು ಬಂದಾಕ್ಷಣ
ಮೊದಲು ಮಾತನಾಡುವುದು ಕಣ್ಣುಗಳೇಕೆ ?
ನೂರು ಭಾಷೆಗಳು ಸಾವಿರ ಮಾತಾಗಿ
ಮತ್ತೆ ವಿದಾಯವನು ಹೇಳುವುದು
ಕಣ್ಣುಗಳೇಕೆ ?


ಉತ್ತರವಿಲ್ಲದ ಪ್ರಶ್ನೆಗಳಿಗೆ
ಸಖೀ ನಾವು ತತ್ತರಿಸುತ್ತೇವೆ....

Saturday, April 16, 2011

ಅವಳು....


ಅವಳು
ನನ್ನ ಮನದಲ್ಲಿ
ಹಾಡಾಗುತ್ತಾಳೆ
ನನ್ನೆದೆಯ ಗೂಡಿನಲ್ಲಿ
ಗುಬ್ಬಚ್ಚಿಯಂತೆ
ಚಿಲಿಪಿಲಿಯ ಕಲರವ
ನಾದ ಹೊರಡಿಸುತ್ತಾಳೆ
ನನ್ನ ಯೋಚನೆ
ಆಲೋಚನೆಗಳ ಆಳಕ್ಕಿಳಿದು
ಭ್ರಮರವ ಸುತ್ತುವ
ದುಂಬಿಯಂತೆ
ಗುಂಯ್ ಗುಟ್ಟುತ್ತಾಳೆ

ಅವಳು
ಸುಂದರಿಯರ
ತುಂಟ ನಗುವಿನಲ್ಲಿ
ಲಲನೆಯರ
ಬಿಗುಮಾನದಲ್ಲಿ
ತರುಣಿಯರ
ಕುಡಿನೋಟದಲ್ಲಿ
ಧುತ್ತನೆ ಪ್ರತ್ಯಕ್ಷವಾಗಿ
ಬೆರಗುಗೊಳಿಸುತ್ತಾಳೆ

ಅವಳು
ನೋಡುತ್ತಿರುವಂತೆಯೇ
ಎನ್ನ ಕಣ್ರೆಪ್ಪೆಗಳ
ಅಡಿಯಲ್ಲಿ ನೆಲೆಸಿ
ಕಣ್ಣು ಮುಚ್ಚಿದರೂ
ನಸುನಗೆಯ
ನೋಟ ಬೀರುತ್ತಾಳೆ

ಅರಿವು - ಇರುವೆ

ಕರಿ ಇರುವೆಯೊಂದನ್ನು
ಶಾಯಿ ದೌತಿಯಲ್ಲಿ ಅದ್ದಿ
ಕಾಗದದ ಮೇಲೆ
ಹರಿಯಬಿಟ್ಟರೆ
ಮೂಡುವ ಚಿತ್ತಾರದಂತೆ
ನನ್ನ ಕೈಬರಹ
ಗೊತ್ತು-ಗುರಿಯಿಲ್ಲದೇ
ಸಾಗುತ್ತದೆ ಮನಬಯಸಿದಂತೆ


ಅರ್ಥ ಬರುವಂತೆ
ಭಾವನೆಗಳನ್ನು ಪೋಣಿಸಿ
ಒಪ್ಪವಾಗಿ ಜೋಡಿಸಿದ ಪದಗಳು
ಸಕ್ಕರೆಯ ಹರಳನ್ನು
ಹೊತ್ತು ಸಂತಸದಿಂದ
ಸಾಗುತ್ತಿರುವ ಇರುವೆಗಳಂತೆ
ಮಧುರ ಕಾವ್ಯದ ತೆರದಿ


ಒಮ್ಮೊಮ್ಮೆ
ಪದಗಳ ಮೋಡಿಯಲಿ
ಭಾವನೆಗಳು ಸೋರಿ
ಸುಮ್ಮನೇ ಪೋಣಿಸಿ
ಗಂಟು ಹಾಕದಿರುವ
ಮುತ್ತಿನ ಸರದಂತೆ ಕೆಲವು
ಸಾರಹೀನ ಕವಿತೆಗಳ ವ್ಯಥೆಯೂ


ನಾನೂ ಕಲಿಯಬೇಕು
ತನ್ನ ಅನ್ನವನ್ನು, ತನ್ನದೇ
ಬದುಕಿನ ಭಾರವನ್ನು
ಹೊತ್ತು ಸಾಗುವ ಇರುವೆಯ
ಗುಣಗಳನು
ಎಲ್ಲರೊಡನೊಂದಾಗಿ
ಸಾಲು-ಸಾಲಾಗಿ ಸಾಗುತ್ತ
ದೊರೆತಿರುವ ಅನ್ನವನು
ತಮ್ಮವರೆಲ್ಲರೊಂದಿಗೆ
ಹಂಚಿ ತಿನ್ನುವ ಹಿರಿಮೆಯನು

ಸಖೀಗೀತ

ಬಿಳಿ ಹಾಳೆಯೊಂದ
ಮುಂದೆ ಇಟ್ಟುಕೊಂಡು
ಸುಮ್ಮನೆ ಗೀಚಿದ
ನಾಲ್ಕಾರು ಗೆರೆಗಳಲಿ
ಸಂಧ್ಯಾಕಾಲದ ಸೂರ್ಯನ
ಕೆಂಬಂಣ್ಣದಂತಹ ನಿನ್ನ
ಕೆನ್ನೆಯ ಮೇಲೆ ಲಾಸ್ಯವಾಡುತ್ತಿರುವ
ನಿನ್ನ ಮುಂಗುರುಳ
ಪ್ರತಿರೂಪ ತೋರುತ್ತವೆ

ಕಾಮನಬಿಲ್ಲಿನ ನಿನ್ನ
ಹುಬ್ಬುಗಳು ಮೂಡಿ
ಎನ್ನೆಡೆಗೆ ಹುಬ್ಬೇರಿಸಿ
ನನ್ನೆದೆಯ ಮಿಡಿತದ
ತಾಳವನ್ನು ಕೆಣಕುತ್ತದೆ
ಪ್ರೇಮಧಾರೆಯನು ಹರಿಸುವ
ನಿನ್ನ ಕಂಗಳ ಪ್ರತಿರೂಪ ಮೂಡಿ
ಕಾನನದಿ ಹರಿಯುವ
ಪುಟ್ಟ ತೊರೆಯಂತೆ
ಪ್ರೀತಿಯ ಚಿಲುಮೆ ಚಿಮ್ಮುತ್ತದೆ

ಸುಮ್ಮನೇ ಗೀಚಿದ ಗೆರೆಗಳು
ನನ್ನ ಅಂತರಾಳದಿ
ನೆಲೆಸಿರುವ ನಿನ್ನ ಇರುವನ್ನು
ಅನುಕ್ಷಣವೂ ಮರುಕಳಿಸುತ್ತಾ
ಎನ್ನ ಅಂಗೈಯಲ್ಲಿ
ಅದೃಷ್ಟರೇಖೆ ಕೊರೆಯುತ್ತಾ
ಬಾಳಿನ ಪುಟ-ಪುಟದಲ್ಲಿ
ಪ್ರೇಮಗಾಥೆಯ ಬರೆಯುತ್ತವೆ

ಕೃಷ್ಣ-ಲೀಲೆ

ಅವಳ ಚಂಚಲ ನೇತ್ರಗಳ
ತುಂಟ ನೋಟ
ತಿಳಿಗೊಳದಂತಹ
ಎನ್ನ ಮನದಲ್ಲಿ
ಕಲ್ಲೊಂದು ತೂರಿಬಂದಂತೆ
ಆಳಕ್ಕಿಳಿದು
ಪ್ರೇಮ ತರಂಗವನು
ರಿಂಗಣಿಸುತ್ತವೆ

ಮಧುರ ಭಾವನೆಗಳು
ಅಲೆ-ಅಲೆಯಾಗಿ
ಕಣ್ಣ ನೋಟದಿಂದ
ಘಾಸಿಯಾದ ಎನ್ನ
ಹೃದಯದಿಂದ ಹರಿದು
ಅನುಕ್ಷಣವೂ ಹೊರಹೊಮ್ಮಿಸುತ್ತವೆ


ಮನೆಯಲ್ಲಿರುವ ಸೀತೆಯ
ಪ್ರೇಮಸಾಗರದಿ ಅನುದಿನವೂ
ಮೀಯುತ್ತಿರುವ ಎನ್ನ ಮನ
ಅವಳ ಅವಿನಾನಾಭಾವ
ಅನನ್ಯ ಪ್ರೇಮಧಾರೆಗೆ ಸಿಲುಕಿ
ಏಕೋ ಪುಳಕಿತಗೊಳ್ಳುತ್ತದೆ


ನಾನು ರಾಮನಲ್ಲ
ಆದರೂ
ಎನ್ನ ಮನಕೆ ಗೋಪಿಕೆಯರ
ಸಂಗ ಸಾಂಗತ್ಯದ ಬಯಕೆ
ಅಲ್ಲಿ-ಇಲ್ಲಿ ಎಲ್ಲೆಲ್ಲಿಯೂ
ಕಾಣಿಸುವ ಲಲನೆಯರ
ಮುಖದಲ್ಲಿ
ಎನಗೆ ಮಧುರ ಕಾವ್ಯದ
ಧಾರೆ ಕಾಣಿಸುತ್ತದೆ


ಕಾಮನೆಗಳು ಕೆರಳಿ
ಕೃಷ್ಣಲೀಲೆ ಜಾಗೃತಗೊಂಡರೂ
ಎನ್ನ ಸೀತೆಯ ವದನ
ಕಣ್ಣೆದುರು ಬಂದು
ಮೆಲ್ಲಗೆ ಹೇಳುತ್ತದೆ
ನಲ್ಲ ನೀನೆಂದಿಗೂ ಕೃಷ್ಣನಾಗಲಾರೆ...

Thursday, March 31, 2011

ಪ್ರತಿಬಿಂಬ

ಕನ್ನಡ ಕಾವ್ಯಲೋಕದಲ್ಲಿ
ಒಮ್ಮೆ ಕಣ್ಣಾಡಿಸಿ
ನೆತ್ತಿಗೇರಿದ ನವರಸಗಳ
ಭಾವನೆಯನ್ನು
ಮೆಲುಕುಹಾಕುತ್ತಾ
ಎಲ್ಲವನೂ ಅರಿತು
ಅರಗಿಸಿಕೊಳ್ಳುವ ಭಂಗಿಯಲಿ
ಗದ್ದಕ್ಕೆ ಕೈಯೂರಿ
ಕುಳಿತಾಗ......

ಕಾನನದಿ
ಸಣ್ಣ ಝರಿಯೊಂದು
ಕಲ್ಲುಬಂಡೆಗಳ ಬಳಸಿ
ಸಾಗುವಾಗ ಕೇಳಿಸುವಂತೆ
ಕಿಲಕಿಲನೆ ನಕ್ಕ ಸದ್ದು
ತಲೆಯೆತ್ತಿ ನೋಡಿದರೆ
ಎನ್ನ ಕವಿತೆ
ಇಂದು ನಾ ನಿನ್ನ
ಸೆರೆಯಾಗಲಾರೆ ಕವೀ...
"ನೀ ಬರೆಯಲಾರೆ ಎನ್ನ"

ಎನ್ನ ಮುಂದೆಯೇ
ಮೈದಳೆದು ನಿಂತಿರುವ
ಕವಿತೆಯನ್ನು ಕಂಡು
ತಲೆತುಂಬ ತುಂಬಿ
ಮತ್ತೇರಿಸಿದ್ದ
ಕನ್ನಡ ಕಾವ್ಯಗಳ ಪದಗಳು
ಅಲ್ಲಿ-ಇಲ್ಲಿ ಎಲ್ಲೆಲ್ಲಿಯೂ ಬಿದ್ದು
ಒಡೆದ ಕನ್ನಡಿಯ
ಚೂರುಗಳಂತೆ ಚದುರಿಹೋಗಿ
ಭಾವಶೂನ್ಯವೆಲ್ಲ ಮನವ ಆವರಿಸಿ
ಮೈಮರೆತು ನಾ
ಕವಿತೆಯನು ನೋಡುತಿರೆ...

ಮತ್ತೆ ಮೈದಡವಿ
ಪ್ರೇಮದಿಂದಲೇ ನೋಡಿ
ಅವಳೇ ಪೋಣಿಸಿದಳೆನ್ನ
ಮನದ ಭಾವನೆಯ
ಮತ್ತೆ ಮೂಡಿತು ಮನದಿ
ಕವಿತೆಯಾ ಪ್ರತಿಬಿಂಬ....

Tuesday, March 29, 2011

ಪ್ರೇಮ ಸಿಂಚನ


ವಸುಂಧರೆಯ
ಸಾರ-ಸತ್ವವನೆಲ್ಲವನೂ
ತಾಯ ಬೇರಿನಿಂದ ಹೀರಿ...
ಮೈದಳೆದು ನಿಂತಿರುವೆ
ನಿನ್ನ ಪ್ರೀತಿಯನೇ ಹೊತ್ತು
ಶಿರಬಾಗಿ ನಿಂತಿರುವೆ
ನಿನ್ನ ಪ್ರೇಮಾಮೃತವು
ಅಂತರಂಗದಲಿ ತುಂಬಿ
ಸವಿ ಜೇನ ಸಿಂಚನವಾ
ಹರಿಸಿಹುದು ಹನಿಯಾಗಿ
ನೋಡುಬಾ ನಲ್ಲೆ
ಹೃದಯವೇ ತೆರೆದಿದೆ
ಹಸಿರಾಗಿ, ಪ್ರೀತಿಯ ಸಂಭ್ರಮ
ಮಂಜ ಹನಿಯಾಗಿ
ನಿನ್ನ ಪ್ರೀತಿಯ ಮೊಗ್ಗು
ಅರಳಿ ಮನಸೂರೆಗೊಳ್ಳುವ
ಪರಿಮಳವ ಚೆಲ್ಲಿ
ಅವರಿವರು ಕೈಹಾಕಿ
ಕಿತ್ತು ಮುಡಿಯುವ ಮುನ್ನ
ಎನ್ನ ಕಡೆಗೊಮ್ಮ ನೋಡು
ಎನ್ನ ಎದೆಯಲ್ಲಿ ಹುಟ್ಟಿದ
ಪ್ರೇಮ ಜ್ಯೋತಿಯನು
ನಿನ್ನೆದೆಯ ಪುಟ್ಟ ಗೂಡಿನಲ್ಲಿ ಬೆಳಗಿಸಿ
ಬೆಳಗು ಬಾ ಎನ್ನ ಜೀವನವಾ .....

ತೃಷೆ.....

ಒಡಲಿಗೇ ಕಿಚ್ಚನಿಡುವ
ಉರಿಬಿಸಿಲು
ಅಂತರಾಳದಲ್ಲಿ ಇರುವ
ತಂಪನೆಲ್ಲವ ಬಸಿದಿದೆ
ಅಲ್ಲಲ್ಲಿ ಬಾಯ್ದೆರೆದು
ಆಗಸದೆಡೆಗೆ
ನೋಡುತ್ತಿರುವ ಭೂಮಿ
ಮೇಲುಹೊದಿಕೆಯ ಹಸಿರು
ಮುಚ್ಚಲಾರದು
ಇಳೆಯ ತಾಪವನು
ನೀರಿಗಾಗಿ ಹಾತೊರೆಯುತ್ತಿರುವ
ಕೆರೆ, ಕಟ್ಟೆ ಭಾವಿಗಳು
ನದಿ, ತೊರೆ, ನಾಲೆಗಳು
ಗಂಟಲು ಒಣಗಿ
ಬಾಯಾರಿ ದನಿಯೆತ್ತದಿರುವ
ಪಶು ಪಕ್ಷಿ ಜೀವಿಗಳು
ಇಳಿದು ಬಾ... ವರುಣ
ಇಳೆಗೆ ತಂಪನೀಯುಬಾ
ತಣಿಸು ಬಾ
ಜೀವಿಗಳ ತೃಷೆಯಾ...
ಬಾ ವರುಣಾ... ಬಾ
ಇಳಿದು ಬಾ
ಇಳೆಯ ತೃಷೆಯ
ನೀಗುಬಾ ವರುಣಾ....

Friday, March 25, 2011

ವೇದನೆ-ನಿವೇದನೆ

ಇನ್ನೇನು ಎಲ್ಲವನ್ನೂ ಬಿಟ್ಟು

ಎಲ್ಲರನ್ನೂ ತೊರೆದು
ಮನದಾಳದಲ್ಲಿ
ನೆನಪುಗಳ ಬುತ್ತಿ ಕಟ್ಟಿಕೊಂಡು
ಸಾಗುವ ಸಮಯ

ಹೇಳಬೇಕಾದ ಮಾತುಗಳು
ಮನದಲ್ಲೇ ಉಳಿದು
ಹಳಹಳಿಸುತ್ತಾ ನಿಟ್ಟುಸಿರಿನ ಬಿಸಿಗೆ
ಹೃದಯದಲ್ಲಿ ಪ್ರೇಮ ಬೀಜ
ಬಾಡಿ ಹೋಗುವ ಸಮಯ

ನೀಲಾಕಾಶದಲ್ಲಿ ಒಮ್ಮೆಲೆ
ಮೋಡಗಳ ಸಾಲು
ಅಂತರಂಗದಲಿ ಪ್ರತಿಫಲಿಸುತ್ತಿದೆ
ಬಿರಬಿರನೆ ಸಾಗುವ ಅವಳೆಡೆಗೆ
ಹತಾಶೆಯ ನೋಟ

ಇಳೆಗೆ ತಂಪೆರೆಯುತ್ತಿರುವ
ಮೊದಲ ಮಳೆಯ ಹನಿ
ಹೃದಯಕ್ಕೂ ತಂಪೆರೆಯಲಿ
ಹೇಳಿ ಬಿಡು ಪ್ರೇಮದ ಅಳಲನ್ನು
ನುಡಿಯಿತು ಮನ

ಹನಿ ಪ್ರೀತಿಗಾಗಿ
ಹಾತೊರೆಯುವ ಮನ
ಮಳೆಯಲ್ಲಿ ತೊಯ್ದ ಕೆಸರು ರಸ್ತೆಯಲಿ
ಪ್ರೇಮ ನಿವೇಯದನೆಯ ಪಯಣದಿ
ಜಾರಿ ಬೀಳುವ ಭಯ

ಪುಸ್ತಕಗಳ ಎದೆಗೆ ಅವುಚಿಕೊಂಡು
ಹೃದಯದೊಳಗಿನ ಭಾವನೆಗಳ
ಮರೆಮಾಚಿ ಬರುತಿರುವ ಅವಳು
ನೆತ್ತಿಗೇರಿದ ಪ್ರೀತಿ ಕರಗದಿರಲೆಂದು
ತಲೆ ಮೇಲೆ ಪುಸ್ತಕಗಳ ಹೊತ್ತಿರುವ ನಾನು

ಸ್ಥಬ್ದವಾದ ಗಾಳಿಯಲಿ
ತುಂತುರು ಹನಿಗಳು
ಎದೆಯಲ್ಲೆಲ್ಲಾ ಗುಡುಗು-ಸಿಡಿಲ ಸದ್ದುಗಳು
ಗೆಳತೀ ನನ್ನ ಪ್ರೇಮವನೊಪ್ಪಿಕೋ
ಮಾತು ಶೂನ್ಯದಿಂದ ಬಂದಂತೆ

ನಿಂತ ನೆಲದಿ ಕಾಲ್ಬೆರಳುಗಳಿಂದ
ಎನ್ನ ಬಾಳ ರೇಖೆಗಳ ಬಿಡಿಸುತ್ತ ಅವಳು
ಮೆಲ್ಲಗೆ ತಲೆಯೆತ್ತಿ ನೋಡಿ
ಕಂಗಳಿಂದಲೇ ಪ್ರೇಮಧಾರೆ ಹರಿಸುವಾಗ
ಫಕ್ಕನೆ ಬೆಳಗಿದ ಕೋಲ್ಮಿಂಚು.......

ಕವಿತೆ

ಮನದಲ್ಲಿ ಇಂದೇಕೋ

ತಳಮಳ ಕ್ಷಣಗಳು
ಎಂದೋ ಒಂದು ದಿನ
ಎಲ್ಲೋ ನೋಡಿದ
ಸುಂದರಿಯ ಅಸ್ಪಷ್ಟ ಚಿತ್ರ
ಮತ್ತೆ ಮತ್ತೆ ಮೂಡುತಿದೆ

ಅವಳಿಗೂ ನನಗೂ
ಯಾವುದೇ ಸಂಬಂಧವಿಲ್ಲ
ಅನುಬಂಧವಿಲ್ಲ, ಬಂಧವೂ ಇಲ್ಲ
ರಾಗ-ದ್ವೇಷಗಳ ಭಾವನೆಯಿಲ್ಲ
ಆದರೂ ಕಾಡುತಿದೆ
ಅವಳ ನೆನಪು

ನೀರವ ರಾತ್ರಿಯಲಿ
ಸುರಿವ ಮಳೆಯಲ್ಲಿ
ಕೋಲ್ಮಿಂಚಿನಂತೆ ಗೋಚರಿಸಿ
ಮರುಕ್ಷಣವೇ ಮರೆಯಾದ
ಅವರ ಹೆಸರು, ಊರು-ಕೇರಿ
ಯಾವುದೂ ಅರಿಯದು ಎನ್ನ ಮನ

ಕೃಷ್ಣ ಸುಂದರಿಯ
ತುಂಟ ನಗು, ಓರೆ ನೋಟ
ವೈಯಾರದ ನಡೆ
ಬಳುಕುವ ಸೊಂಟ
ಮತ್ತೆ-ಮತ್ತೆ ಮನದಲ್ಲಿ
ಮೂಡಿದೆ ಇಂದು

ಸಂತೆಯಲ್ಲೋ, ಜಾತ್ರೆಯಲ್ಲೋ
ಬಸ್ ನಿಲ್ದಾಣದಲ್ಲೋ
ಯಾವ ತಾಣವದು
ಅವಳ ಭೇಟಿಯಾದದ್ದು
ಎಂಬ ತಲೆಬುಡದ ಅರಿವಿಲ್ಲದಿದ್ದರೂ
ಕಾಡುತಿದೆ ಅವಳ ನೆನಪು
ತಲೆಬರಹವಿಲ್ಲದ ಕವಿತೆಯಂತೆ

Tuesday, March 22, 2011

ವಾದ-ಸಂವಾದ

ನಾನು ಬರೆದ

ಕವಿತೆಗಳೆಂಬ ಅಕ್ಷರಮಾಲೆಯ
ಅಕ್ಷರಗಳು ನನ್ನನ್ನು
ಕೆಕ್ಕರಿಸಿ ನೋಡುತ್ತವೆ
ಬಳಸಿದ ಪದಗಳೆಲ್ಲ
ಮೆಲ್ಲನೆ ಗದರಿಸುತ್ತವೆ


ಅಕ್ಕರೆಯಿಂದ
ನನ್ನ ಕೈಹಿಡಿದು ನಡೆಸಿ
ಸ್ನೇಹ, ಪ್ರೀತಿಗೆ
ಭಾಷ್ಯವನೇ ಬರೆವ
ಸುಂದರ ಕಾವ್ಯಗಳು
ಒಮ್ಮೊಮ್ಮೆ
ಮುನಿಸಿಕೊಳ್ಳುತ್ತವೆ

ಕಾಗುಣಿತ ದೋಷವೂ
ಅಪಾರ್ಥ, ಅನರ್ಥವನೆ ಬಗೆವ
ಪದಗಳ ಜೋಡಣೆ
ಎಲ್ಲವೂ ಸೇರಿ
ನನ್ನ ಮನದಲ್ಲೆಲ್ಲ
ಕೋಲಾಹಲ ಸೃಷ್ಟಿಸುತ್ತವೆ


ಮಂಗನ ಕೈಯಲ್ಲಿ
ಸಿಲುಕಿರುವ ಮಾಣಿಕ್ಯದಂತೆ
ನನ್ನ ಕೈಚಳಕದಿ ಸಿಲುಕಿ
ನಲುಗುತ್ತಾ ಕೊರಗುತ್ತವೆ
ಮತ್ತೇನೂ ಮಾಡದೇ
ಸುಮ್ಮನೇ ಸದ್ದಿಲ್ಲದೇ ಬಿದ್ದಿರುತ್ತವೆ

ಬಿಗುಮಾನ

ನನಗೆ ಗೊತ್ತು

ಅವಳು ಹಾಗಲ್ಲವಂತ
ಅವಳಿಗೂ ಗೊತ್ತು
ನಾನು ಅಂಥವನಲ್ಲಾ ಅಂತ
ಆದರೂ ಒಮ್ಮೊಮ್ಮೆ
ನಮ್ಮ ಸಂವಾದಗಳು
ವಾದಕ್ಕೆ ಎಡೆಮಾಡಿಕೊಡುತ್ತವೆ


ಮನದಲ್ಲಿ ಬಿಗುಮಾನ
ಅವಳೇ ಮಾತನಾಡಿಸಲಿ
ಅಂತ ನಾನು
ನಾನೇಕೆ ಮಾತಾಡಲಿ
ಅಂತ ಅವಳು
ಆದರೆ ನಮ್ಮ ಸ್ನೇಹದ ಬಂಧ
ಇಷ್ಟಕ್ಕೇ ಮುರಿಯುವದಿಲ್ಲ

ನನ್ನ ಇಣುಕು ನೋಟ
ಮೀರಿ ಅವಳು ಇರಲಾರಳು
ಅವಳ ಓರೆಗಣ್ಣಿನ ನೋಟ
ನನ್ನೆದೆಯಲ್ಲಿ
ಪುಳಕವನ್ನೆಬ್ಬಿಸುತ್ತದೆ


ಬೆಚ್ಚನೆಯ ಸ್ನೇಹದಿ
ಕರಗಲಾರದೇ ಮುನಿಸು
ಬಿಗುಮಾನ ಮರೆತು
ಹಾಡು ಕೋಗಿಲೆಯೇ
ಋತುಮಾನ ಕಳೆದು
ಬಂತಿದೋ ವಸಂತ
ಅರಳಲಿ ಎಮ್ಮ ಹೃದಯಾ......

Wednesday, March 9, 2011

ಸಂವಹನ


ಅಲ್ಲಿ ದೂರದಲ್ಲಿರುವ
ಮಾಮರದ ಅಡಿಯಲ್ಲಿ
ಮ್ಲಾನವದನಳಾಗಿ
ಕಾದಿರುವಳು ಅವಳು
ಅಶೋಕವನದಲ್ಲಿ
ಕುಳಿತಿರುವ ಸೀತೆಯಂತೆ

ಮನದಾಳದಲ್ಲಿ ತುಂಬಿರುವ
ತುಮುಲಗಳನು
ಹಂಚಿಕೊಳ್ಳುವ ಹಂಬಲ
ಮೇಲ್ನೋಟಕ್ಕೆ ಶಾಂತಸಾಗರ
ಯಾವಾಗ ಸಿಡಿಯುವುದೋ
ಜ್ವಾಲಾಮುಖಿ
ವಸುಂಧರೆಯೂ ಅರಿಯಳು


ಅಲ್ಲಿ, ಅವಳ ಪಕ್ಕದಲ್ಲಿ
ಕುಳಿತು ಕುಶಲೋಪರಿ
ಸಂಭಾಷಣೆಯ ಕೇಳುವ
ವ್ಯವಧಾನವಿಲ್ಲವೆನಗೆ
ಆದರೂ ಹರಿಯುತಿದೆ ನಮ್ಮಿಬ್ಬರಲ್ಲಿ
ಭಾವನೆಗಳ ಸಂವಹನ


ಅವಳಿಗೂ ಗೊತ್ತು ....
ಮನದ ದುಗುಡವ ಹೇಳಲು
ಮಾತುಗಳೇ ಬೇಕೆ ?
ಅರಿಯುವ ಮನ ಬೇಕು ಎಂಬುದು
ಅದೇ ನಮ್ಮಿಬ್ಬರ ತಿಳುವಳಿಕೆ
ಕಾಲ ಮೆಲ್ಲಗೆ ಸರಿಯುತಿದೆ.........

Tuesday, March 8, 2011

ನಿನ್ನ ಸವಿ ನೆನಪು

ತದಿಗೆಯ ರಾತ್ರಿಯ
ನೀಲಾಕಾಶದಲ್ಲಿ
ಚಂದ್ರ ಬಿಂಬದ ಪಕ್ಕ
ಅನತಿ ದೂರದಲ್ಲಿ
ಮಿನುತ್ತಿರುವ ತಾರೆಯಂತೆ
ನಿನ್ನ ನೆನಪು


ಪೂರ್ಣ ಚಂದಿರನಿರುವ
ಹುಣ್ಣಿಮೆಯ ರಾತ್ರಿಯಲಿ
ಸಾಗರವು ಉಕ್ಕೇರುವಾಗ
ದಡವ ಚುಂಬಿಸುವ
ಅಲೆಗಳ ತೆರದಿ
ನಿನ್ನ ಸವಿ ನೆನಪು


ಮೂಡಣದಿ ಉದಯಿಸುವ
ಭಾಸ್ಕರನ ಕಿರಣ
ಮೋಡಗಳ ಮರೆಯಿಂದ
ಗಿಡಮರಗಳ ಸಂದಿನಿಂದ
ತೂರಿ ಬರುವಂತೆ
ನಿನ್ನ ಸವಿ ನೆನಪು

ದೂರದಲ್ಲೆಲ್ಲೋ ಅರಳಿದ
ಮಲ್ಲಿಗೆಯ ಪರಿಮಳ
ಮನವ ಮುದಗೊಳಿಸುವಂತೆ
ಮತ್ತೆ-ಮತ್ತೆ ಸೆಳೆವುದು
ನಿನ್ನ ಸವಿ ನೆನಪು


ಹೂವಿಂದ ಹೂವಿಗೆ ಹಾರಿ
ಮಕರಂದವನು ಹೀರಿ
ಸವಿ-ಜೇನ ಸಂಗ್ರಹಿಸುವ
ಭ್ರಮರದಂತೆ
ಮತ್ತೆ ಮತ್ತೆ ಮರುಕಳಿಸುವುದು
ನಿನ್ನ ಸವೀ.. ಸವಿ ನೆನಪು

Friday, March 4, 2011

ಪ್ರೇಯಸಿ

ತೋಟದಲ್ಲಿ ಅರಳಿರುವ
ಸೂಜಿ ಮಲ್ಲಿಗೆ ಹೂವಿನ
ಪರಿಮಳವು ಸೆಳೆವಂತೆ
ಅವಳ ನೆನಪು
ಸೂರ್ಯಕಾಂತಿಯ
ಸೊಬಗಿನಂತೆ ಅವಳ ನೋಟ
ಸುಳಿವುದೆನ್ನ ಸುತ್ತ
ಕೆಂಗುಲಾಬಿಯ ಚೆಲುವು
ಅವಳ ನಸುನಗುವು
ಸಂಪಿಗೆಯ ಕಂಪು
ಕೇದಿಗೆಯ ಘಮ-ಘಮ
ಆಗಾಗ ಕೈ ಕಚ್ಚುವ
ಮುಳ್ಳು ಮೊನೆ
ಅವಳ ಹುಸಿಗೋಪ

ನಮ್ಮ ಪ್ರೀತಿಯ ತೋಟದಿ
ಅರಳಿರುವ
ಆವ ಹೂವಾದರೇನು
ಭಾವ ನೂರಾದರೇನು
ಪರಿಮಳದ ಸೊಬಗು
ಎಂದಿಗೂ ಕುಂದದು
ಮಾತಿನಾ ಮಂಟಪ
ನಮ್ಮ ಸರಸ ಸಲ್ಲಾಪದಿ
ನವರಸಗಳ ಭಾವಗಳು ಸೇರಿ
ಸೆಳೆವುದೆನ್ನನು ಅನವರತ

Thursday, February 24, 2011

ಪ್ರೀತಿ

ಎನ್ನ ಮನದಾಳದಿ

ಪ್ರೇಮ ಬೀಜವನೆರಚಿ
ಮರೆಯಾಗಿ ಹೋದೆ ನೀನು
ಮೊಳಕೆಯೊಡೆಯುತಿದೆ ಪ್ರೀತಿ
ಅಂತರಂಗವ ಚಾಚಿ...
ಮತ್ತೆ ಮೂಡಿದೆ ಮೂಡಣದಿ
ಪ್ರೇಮ ರಶ್ಮಿಯ ರಂಗು
ಬಾನಿನ ಅಗಲಕೆ ತೆರೆದಿದೆ
ಎನ್ನ ಹೃದಯಾ
ಮನವು ಬಯಸುತಿದೆ
ರಂಗುರಂಗಿನ ಕಾಮನಬಿಲ್ಲು
ಹೃದಯ ಬಡಿತವು ಹಾಡಿದೆ
ಪ್ರೇಮಗೀತೆಯನು ಇಂದು
ಬಾ ಗೆಳತಿ ಬೇಗ
ಒಂದಾಗು ಎನ್ನ ಸ್ವರದೀ......


ನಿನ್ನ ಹನಿ ಪ್ರೀತಿ...
ಮುತ್ತಾಗಿ ಅರಳಿದೆ
ಎನ್ನ ಎದೆ ಚಿಪ್ಪಿನೊಳಗೆ
ಎದೆ ಬಡಿತದೊಡಗೂಡಿ
ಪ್ರೇಮ ರಾಗವ ಹಾಡಿ
ತಂತುಗಳ ಮೀಟುತಿದೆ
ಪ್ರೇಮ ರಾಗವ ಹಾಡುತಿದೆ
ಗೆಳತೀ......