Saturday, March 16, 2013

ಹೀಂಗsssss ಒಮ್ಮೊಮ್ಮೆ....

ಒಬ್ಬ ವ್ಯಕ್ತಿಯ ಆಸಕ್ತಿ, ಹವ್ಯಾಸಗಳು ಎಷ್ಟೇ ಅಪರಿಮಿತವಾಗಿದ್ದರೂ ಅವುಗಳನ್ನು ವ್ಯಕ್ತಪಡಿಸುವ ಮಾಧ್ಯಮಗಳು ಅವಶ್ಯಕ, ತೋಚಿದ್ದನ್ನೆಲ್ಲ ಗೀಚುವ ವ್ಯಕ್ತಿಯಾಗಿರುವ ನಾನು, ನನ್ನ ಆಸಕ್ತಿಗೆ ಅನುಗುಣವಾದ, ಸೂಕ್ತವಾದ ಸ್ನೇಹಿತರು ಬಳಗವನ್ನು ಅವಲಂಬಿಸಿರುತ್ತೇನೆ. ಸಮಾನ ಮನಸ್ಕರ ವೇದಿಕೆಯೊಂದು ಪರಸ್ಪರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದರಲ್ಲಿ ಸಂಶಯವಿಲ್ಲ. ಹೀಗೆ ಒಂದು ವೇದಿಕೆಯಲ್ಲಿ ಸೇರಿದ ಗೆಳೆಯರ ಬಳಗ ಕೆಲವು ಅನವಶ್ಯಕ ಘಟನೆಗಳು, ಅಹಿತಕರ ಪ್ರತಿಕ್ರಿಯೆಗಳು ಮುಂತಾದ ಕಾರಣಗಳಿಂದ ಅನುಕೂಲಕರ ವಾತಾವರಣ ಅರಸಿ, ಅನ್ವೇಷಣೆಯಲ್ಲಿ ಪುನಃ ಮತ್ತೊಂದು ವೇದಿಕೆಯತ್ತ ಮುಖ ಮಾಡುವುದು ಬೆಳವಣಿಗೆಗೆ ಸರಿಯಾದ ವಿಚಾರವಾದರೂ ಇದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತ ಹೋದರೆ ಪಲಾಯನವಾದಕ್ಕೆ ಸಿಲುಕುವ ಅಪಾಯವಿರುತ್ತದೆ.
ಲೋಕದಲ್ಲಿ ವಿಧ-ವಿಧ ವ್ಯಕ್ತಿಗಳು, ವಿವಿಧ ಅಭಿಪ್ರಾಯಗಳು, ಪೂರಕ-ಮಾರಕ ಪ್ರತಿಕ್ರಿಯೆಗಳು ಸಹಜವಾದದ್ದು. ನಾವು ನಡೆಯುವಾಗ ರಸ್ತೆಯಲ್ಲಿ ಬಿದ್ದಿರುವ ಕಸ-ಕಡ್ಡಿ, ಮಲಿನ ಪದಾರ್ಥ, ಕಲ್ಲು-ಮುಳ್ಳು(ಮೆಟ್ರೋ ನಗರದಲ್ಲಿ ಇರುವದಿಲ್ಲ) ಗಳನ್ನು ದಾಟಿ ಮುನ್ನಡೆಯುವಂತೆ, ಬಾಳ ಪಯಣದಲ್ಲಿ ಋಣಾತ್ಮಕ ಅಂಶಗಳನ್ನು ನಿರ್ಲಕ್ಷಿಸಿ ಮುನ್ನಡೆಯಬೇಕು. ಹಾಗೆಯೇ ನಮ್ಮ ಪಯಣದಲ್ಲಿ ನಮ್ಮ ಮನಸ್ಸಿಗೆ ಮುದ ನೀಡುವ ಹೂವಿನ ಪರಿಮಳ, ಚಿಟ್ಟೆಗಳ ಹಾರಾಟ, ದೂರದಿಂದ ಕೇಳಿ ಬರುವ ಸಂಗೀತ, ಆಗಸದಲ್ಲಿ ಕಾಣುವ ಮೋಡಗಳ ಚಿತ್ತಾರ, ತುಂತುರು ಮಳೆ ಮುಂತಾದವುಗಳನ್ನು ಸವಿಯುವಂತೆ ಅನುಕೂಲಕರ ಸಂಗತಿಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ನಮಗೆ ಯಾವುದು ಸೂಕ್ತ ಎಂಬುದನ್ನು ನಾವು ನಿರ್ಧರಿಸಬೇಕು. ಕೆಲವು ಸಂದರ್ಭದಲ್ಲಿ ನಮಗೆ ಅನುಕೂಲಕರ ಪ್ರತಿಕ್ರಿಯೆ, ಅಭಿಪ್ರಾಯಗಳು ದೊರಕದಿದ್ದರೆ ಮನಸು ವಿಹ್ವಲಗೊಳ್ಳದಂತೆ ನಿಯಂತ್ರಿಸಿ, ಈ ತೆರನಾದ ಘಟನೆಗಳಿಗೆ ಕಾರಣವಾದ ಅಂಶಗಳನ್ನು ಅರಿಯುವ ಸಾಮರ್ಥ್ಯ ಪಡೆಯಬೇಕು. ಆತ್ಮಾವಲೋಕನದ ಇಂತಹ ಸಾಮರ್ಥ್ಯ ನಿಧಾನವಾಗಿ ಸಿದ್ಧಿಸುವುದಾದರೂ ಒಮ್ಮೆ ಮನೋ ನಿಯಂತ್ರಣ ಸಾಧಿಸಿದರೆ, ಪರನಿಂದೆ ನಮ್ಮನೆಂದೂ ಬಾಧಿಸದು.
ನಮ್ಮ ಎದುರಿಗೆ ಇರುವ ವ್ಯಕ್ತಿ ಆ ಇನ್ನೊಬ್ಬರು ಆ ರೀತಿಯಲ್ಲಿ ಋಣಾತ್ಮಕ ಪ್ರತಿಕ್ರಿಯೆ ನೀಡಲು ಕಾರಣವೇನು ? ಇಂತಹ ಸ್ಥಿತಿಗೆ ಕೇವಲ ಎರಡು ಸಾಧ್ಯತೆಗಳು ಇರುತ್ತವೆ. ಒಂದೋ ನಮ್ಮ ಅಭಿಪ್ರಾಯ, ಅಭಿವ್ಯಕ್ತಿ ದೋಷಪೂರಿತವಾಗಿರಬಹುದು ಇದನ್ನು ನಿವಾರಿಸಲು ಆತ್ಮಾವಲೋಕನ ಅವಶ್ಯಕ. ನಮ್ಮ ಬೆನ್ನಹಿಂಬದಿ ನಮಗೆ ಕಾಣದಿರುವಂತೆ, ನಮ್ಮ ದೋಷಗಳೂ ಸಹ ನಮಗೆ ಸ್ಪಷ್ಟವಾಗಿ ನಮಗೆ ಗೋಚರಿಸುವದಿಲ್ಲ. ಬೇರೆಯವರು ಹೇಳಿದ್ದನ್ನು ಕುರಿತು ಶಾಂತ ಮನಸಿನಿಂದ ಸ್ವಲ್ಪ ಯೋಚಿಸಿದರೆ, ನನ್ನತನವನ್ನು ಬಿಟ್ಟು ಅವರ ಸ್ಥಾನದಲ್ಲಿ ನಿಂತು ಯೋಚಿಸಿದರೆ, ಪ್ರಾಯಶಃ ನಮ್ಮ ದೋಷಗಳು ನಮಗೆ ಗೋಚರಿಸಬಹುದು. ಇನ್ನೊಂದು ಸಂಭಾವ್ಯತೆ ನಮ್ಮ ಎದುರಿನ ವ್ಯಕ್ತಿಯ ವಿಚಾರಗಳು ದೋಷಪೂರ್ಣವಾಗಿದ್ದರೆ ಒಂದೆರಡು ಸಾರಿ ಅವರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳಬಹುದು. ವೈಚಾರಿಕ ಸಂಗತಿಗಳನ್ನು ವಿವರಿಸುವ ನಮ್ಮ ಪ್ರಯತ್ನಗಳು ಫಲ ನೀಡದಿದ್ದರೆ, ಅವರ ಪಾಡಿಗೆ ಅವರನ್ನು ಬಿಟ್ಟು ನಮ್ಮ ಪಯಣ ಮುಂದುವರೆಸುವುದು ಸೂಕ್ತ.
"ಲೋಕೋಭಿನ್ನ ರುಚಿ" ಎಂಬುದನ್ನು ನಾವೆಲ್ಲ ಕೇಳಿದ್ದೇವೆ. ಅವರವರ ಭಾವಕ್ಕೆ ತಕ್ಕಂತೆ ರುಚಿ-ಅಭಿರುಚಿ ಬದಲಾಗುತ್ತ ಹೋಗುತ್ತವೆ. ರಸ್ತೆ ಬದಿಯಲ್ಲಿ ಕಳ್ಳೇಕಾಯಿ ಮಾರುವವನಿಂದ ಎರಡು ರೂಪಾಯಿಯ ಶೇಂಗಾ ಬೀಜ ತಿನ್ನುವ ವ್ಯಕ್ತಿಯ ಸಂತೃಪ್ತಿ ಹಾಗೂ ತಾರಾ ಮೌಲ್ಯದ ಹೋಟಲ್ ಒಂದರಲ್ಲಿ ಹೋಗಿ ವಿವಿಧ ತಿಂಡಿ-ತಿನಿಸುಗಳನ್ನು ತಿನ್ನುವ ವ್ಯಕ್ತಿಯ ಸಂತೃಪ್ತಿಯ ಮಟ್ಟ ಒಂದೇ ಆಗಿರುತ್ತದೆ. ಹೊಟ್ಟೆಗೆ ಏನಾದರೂ ಹಾಕಬೇಕು, ಬಡವನಿರಲಿ-ಸಿರಿವಂತನಿರಲಿ ಎಲ್ಲರದೂ ಹೊಟ್ಟೆಪಾಡಿನ ಜೀವನವೇ. ಹಸಿವು ಎನ್ನುವುದು ಕೆಲವರಿಗೆ ತೀವ್ರವಾಗಿರುತ್ತದೆ ಇನ್ನು ಕೆಲವರಿಗೆ ಹಸಿವಿನ ಭಾವನೆಗಳು ಬೇರೆಯಾಗಿರುತ್ತದೆ. ಬಡವನ ಹಸಿವು ಹೊಟ್ಟೆಹೊರೆಯುವುದಾದರೆ ಕೆಲವರಿಗೆ ಧನ-ಕನಕ ಗಳಿಸುವ ಹಸಿವು, ಕೆಲವರಿಗೆ ಹೆಸರು ಗಳಿಸುವ ಹಸಿವು ಹೀಗೇ ವ್ಯಕ್ತಿಯಿಂದ ವ್ಯಕ್ತಿಯ ರುಚಿ-ಅಭಿರುಚಿ ಬದಲಾವಣೆಗೊಳ್ಳುತ್ತವೆ.
ಎಲ್ಲರೂ ನಮ್ಮಂತೆಯೇ ಇರಬೇಕು, ನಮ್ಮ ಮಟ್ಟದ ಯೋಚನೆ-ಆಲೋಚನೆಯನ್ನು ಹೊಂದಬೇಕು, ನಮ್ಮ ವಿಚಾರ ಮೌಲ್ಯಗಳನ್ನು ಅರಿಯಬೇಕು-ಅನುಸರಿಬೇಕು ಎಂಬುವದು ಎಲ್ಲರೂ ಬಯಸುವ ವಿಷಯವೇ. ಇಂತಹ ವಾತಾವರಣ ನಿರ್ಮಾಣವಾಗಬೇಕಾದರೆ ಒಂದೋ ನಾವು ಅವರ ಮಟ್ಟದಲ್ಲಿ ಸಂವಹನ ನಡೆಸಬೇಕು ಇಲ್ಲವಾದರೆ ಅವರನ್ನು ನಮ್ಮ ಮಟ್ಟಕ್ಕೆ ಏರುವಂತೆ ಬೆಳವಣಿಗೆಗೆ ಪೂರಕವಾಗಿ ವಷಯಗಳನ್ನು ಮನದಟ್ಟಾಗುವಂತೆ ಹೇಳುವದನ್ನು ಕಲಿಯಬೇಕು. ಜೀವನದ ಪಾಠಶಾಲೆ ಮರಣದವರೆಗೂ ಕೊನೆಗೊಳ್ಳುವದಿಲ್ಲ ಅಲ್ಲವೇ......

ನೆನಪಿನಾಳದಿಂದ.....


ನಮ್ಮೂರೊಳಗ ಎಲ್ಲರೂ ನಮ್ಮಜ್ಜಗ ಮಾಸ್ತರ ಅಂತಲೇ ಕರೀತಿದ್ದರು. ಹಂಗ ನೋಡಿದ್ರ ಅವರಿಗೂ ಮಾಸ್ತರಿಕೆಗೂ ವೃತ್ತಿಯಿಂದ ಯಾವುದೇ ತರಹದ ಸಂಬಂಧ ಇರಲಿಲ್ಲ. ಆದರ ಅವರು ಕಲಿಯುವದಕ್ಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಪ್ರೋತ್ಸಾಹ ಕೊಡುತಿದ್ದರು. ಸುಮಾರು 1970ರ ದಶಕದಲ್ಲಿ ಶಿಕ್ಷಣಕ್ಕ ಇನ್ನೂ ಅಂತಹ ಪ್ರಾಶಸ್ತ ಸಿಕ್ಕಿರಲಿಲ್ಲ, ಜನರಿಗೆ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸಬೇಕು, ಕಲಿಸಬೇಕು ಅನ್ನೂ ತಿಳುವಳಿಕೆ ಬಂದಿರಲಿಲ್ಲ. ಆ ಸಮಯದಲ್ಲಿ ಸದ್ದಿಲ್ಲದೇ ನಮ್ಮಜ್ಜ ಎಲ್ಲಾ ಹುಡುಗರನ್ನ ಶಾಲೆಗೆ ಕಳಿಸಿರಿ ಅಂತ ಊರೊಳಗ ಎಲ್ಲರಿಗೂ ಹೇಳತಿದ್ದಾ. ಬಡವರಿಗೆ ಶಾಲೆಯ ಫೀಸು ತುಂಬತಿದ್ದಾ, ಅಗತ್ಯ ಇದ್ದವರಿಗೆ ಪುಸ್ತಕ ಕೊಡಸತಿದ್ದಾ.  ಒಟ್ಟಿಗೆ ಶಿಕ್ಷಣಕ್ಕ ಅಂದ್ರ ಅವನಿಗೆ ಒಂದು ತೆರನಾದ ಪ್ರೀತಿ. ಸಾಕ್ಷರತೆ ಎಲ್ಲರಿಗೂ ದೊರಕಬೇಕು ಅನ್ನೂದು ಅವನ ಸಿದ್ದಾಂತ ಆಗಿತ್ತು.
ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಸಮಯದಲ್ಲಿ ಶಾಲೆಯೊಳಗ ಕಲಿತದ್ದಕ್ಕಿಂತ ನಮ್ಮಜ್ಜನ ಕೈಯೊಳಗ ಕಲಿತದ್ದ ಹೆಚ್ಚು. ಇವತ್ತಿಗೂ ನನ್ನ ಗಣಿತ ವಿಶೇಷವಾಗಿ ಹೇಳಬೇಕಂದ್ರ ನನ್ನ ಬಾಯಿಲೆಕ್ಕ ಮುಂತಾದವುಗಳ ಜಾಣ್ಮೆ ನಮ್ಮಜ್ಜನ ಕಠಿಣವಾದ ತರಬೇತಿಯ ಕೊಡುಗೆ ಅಂತ ನಾ ಹೇಳಬಲ್ಲೆ. ನನಗ ಇಷ್ಟ ಇದ್ದರೂ, ಇಲ್ಲದಿದ್ದರೂ ಸಹ ನಾನು ಅವರ ಕೈಯೊಳಗ ಕಲಿಯಬೇಕಾಗಿತ್ತು. ಯಾಕಂದ್ರ ಮಾಸ್ತರ ಅಂದ್ರ ನಮ್ಮೂರೊಳಗ ಎಲ್ಲರಿಗೂ ವಿಶೇಷ ಗೌರವ ಇತ್ತು. ನಮ್ಮಜ್ಜನ ಕಡೆ ಗಣಿತ ಹೇಳಿಸಿಕೊಳ್ಳಿಕ್ಕೆ ಊರಿನ ಎಲ್ಲಾ ಮನಿಯವರು ತಮ್ಮ ಮಕ್ಕಳನ ನಮ್ಮಜ್ಜನ ಕಡೆ ಕಲಿಸಾಕ ಕಳಿಸಿಕೊಡತಿದ್ರು. ಹಿಂಗಾಗಿ ನನ್ನ ಜೊತೆಗೆ ನನಗಿಂತ ದೊಡ್ಡವರೂ ನಮ್ಮಜ್ಜನ ಕೈಯೊಳಗ ತರಬೇತಿ ತಗೋತಿದ್ರು. ಆದರ ನಮ್ಮಜ್ಜ ಬಹಳ ಶಿಸ್ತಿನ ಮನುಷ್ಯಾ ಕಲಿಸೂದರೊಳಗ ಬಹಳ ಕಟ್ಟುನಿಟ್ಟು. ಎಷ್ಟಕ್ಕಾತಿ ಅಷ್ಟು ತಿಳಿಸಿ ಹೇಳತಿದ್ರು ನಡು-ನಡುವ ದಡ್ಡರಿಗೆ ಛಡಿಏಟಿನ ಶಿಕ್ಷೆ ಇರತಿತ್ತು. ಅವರು ಕೊಡು ಏಟಿಗೆ ಬಹಳ ಮಂದಿ ಅರ್ಧಕ್ಕ ಬಿಟ್ಟು ಹೋಗತಿದ್ದರು. ಆದರ ನಮ್ಮಜ್ಜ ಬಂದವರಿಗೆ ಕಲಿಸತಿದ್ದಾ, ಹೋದವರ ಮರಿತಿದ್ದಾ. ಅದು ಅವರವರ ಸಾಮರ್ಥ್ಯ ಅಂತ ಸುಮ್ಮನಾಗತಿದ್ದ. ಈ ರೀತಿ ಇರುವಾಗ ನನಗ ನನ್ನ ಜೊತೆ ಇರುವ ದೊಡ್ಡ ಹುಡುಗರ ಪುಸ್ತಕ ಉಚಿತವಾಗಿ ಸಿಗತಿದ್ದವು. ನಾನು ಯಾವುದೇ ಕ್ಲಾಸು ಇದ್ದರೂ ಸಹ ನನ್ನ ಕ್ಲಾಸಿನ ಅಭ್ಯಾಸದ ಜೊತೆಗೆ ನನಗಿಂತ ದೊಡ್ಡವರ ಪುಸ್ತಕದೊಳಗಿನ ಅಭ್ಯಾಸ ನನಗ ನಮ್ಮಜ್ಜ ಮಾಡಸತಿದ್ದ.
ನಾನು ಆಗ ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಯಾವ ಕ್ಲಾಸ್ ಓದಿದರೇನು ನನಗ ಯಾವಾಗಲೂ ಹಳೇ ಪುಸ್ತಕ ಮಾತ್ರ ಸಿಗತಿದ್ದವು. ಈಗಿನಂಗ ಅವಾಗ ಎಲ್ಲರೂ ಹೊಸ ಪುಸ್ತಕಾನ ತೊಗೋಬೇಕು ಅಂತ ಇರಲಿಲ್ಲ. ಇದೂ ಅಲ್ಲದ ನಂದು ಸರ್ಕಾರಿ ಶಾಲೆ ಈಗಿನಂಗ ಅವಾಗ ಎಲ್ಲರಿಗೂ ಉಚಿತ ಪುಸ್ತಕ ಕೊಡೂ ಯೋಜನಾ ಇರಲಿಲ್ಲ. ಹಳೇ ಪುಸ್ತಕ ಓದಿ-ಓದಿ ಅವನ್ನ ನೋಡಿ-ನೋಡಿ ನನಗ ಬಹಳ ಬೇಜಾರಾಗ್ತಿತ್ತು. ಆದ್ರ ನನಗ ನಮ್ಮಜ್ಜ ಹೊಸ ಪುಸ್ತಕ ಕೊಡಸ್ತಿರಲಿಲ್ಲ. ಕೇಳಿದ್ರ "ಪುಸ್ತಕ ಹಳೇದಾದ್ರೇನು ಹೊಸದಾದ್ರೇನು ಅದರೊಳಗ ಏನು ಇರಬೇಕು ಅದ ಇರತತಿ.... ಪುಸ್ತಕ ಹೆಂಗೈತಿ ಅಂತ ನೋಡಬೇಡ ಅದರೊಳಗಿನ ಜ್ಞಾನ ಏನದ ಅಂತ ನೋಡಬೇಕು" ಅಂತಿದ್ದಾ.
ಈ ಮಾತ ಎಲ್ಲರೂ ಒಪ್ಪಬೇಕಾದದ್ದೇ ಆದರ ಅದನ್ನ ಅರ್ಥ ಮಾಡಿಕೊಳ್ಳೋ ತಿಳುವಳಿಕೆನೂ ಇರಲಿಲ್ಲ ತಿಳಕೊಳ್ಳುವಂತ ವಯಸ್ಸೂ ಗಿರಲಿಲ್ಲ. ನನಗೂ ಎಲ್ಲಾರಂಗ ಹೊಸ ಪುಸ್ತಕ ಬೇಕು ಅನ್ನೂದ ನನಗ ಬಹಳ ಆಸೆ ಆಗ್ತಿತ್ತು. ಹಳೇ ಪುಸ್ತಕ ಇದ್ರೂ ಅವನ್ನ ಹೊಲದು (ಈಗಿನಂಗ ಅವಾಗ ಬೈಂಡಿಂಗ್ ಅಂಗಡಿ ಇರಲಿಲ್ಲ) ಗಟ್ಟಿ ಮಾಡಿ ಕೊಡತಿದ್ರು. ಹಿಂಗ ಇರುವಾಗ  ಹೆಂಗಾದ್ರೂ ಮಾಡಿ ಹೊಸ ಪುಸ್ತಕ ಕೊಡಿಸಿಕೊಳ್ಳಬೇಕು ಅಂತ ನಾನು ಒಂದು ಐಡಿಯಾ ಮಾಡಿದೆ. ಪುಸ್ತಕ ಗಟ್ಟಿ ಇದ್ರ ಹೊಸಾದು ಕೊಡಸೂದಿಲ್ಲ ಅದಕ್ಕ ಅದನ್ನ ನಡುವ ಅಡ್ಡಡ್ಡ ಹರಿದು, ಹೊಸ ಪುಸ್ತಕ ಕೊಡಸ್ರಿ ಅಂತ ನಮ್ಮಜ್ಜಗ ಕೇಳಿದೆ. ಹೊಸ ಪುಸ್ತಕ ಬೇಕು ಕೊಡಸ್ರಿ ಅಂದ್ಯಾ, "ಈಗ್ಯಾಕ ಹೊಸ ಪುಸ್ತಕ ನಿನಗ ?" ಅಂದ್ರು, ಇಲ್ಲ ನನ್ನ ಪುಸ್ತಕ ಹರದತಿ ಅದಕ ಇದೊಂದ್ಸಲಾ ಹೊಸಾದು ಕೊಡಸ್ರಿ ಅಂತ ಕೇಳಿದೆ. "ಯಾರವ ನಿನ್ನ ಪುಸ್ತಕ ಹರದಾವ, ನಡಿ ನಾ ನಿನ್ನ ಶಾಲೆಗೆ ಬರ್ತೀನಿ, ನಮ್ಮ ಹುಡುಗನ ಪುಸ್ತಕ ಯಾರು ಹರದಾರ ಅಂತ ಕೇಳ್ತೀನಿ" ಅಂದ ನಮ್ಮಜ್ಜ. 
ನಮ್ಮಜ್ಜಗ ನಮ್ಮೂರೊಳಗ ಯಾರೂ ಎದುರು ಮಾತಾದ್ತಿಲ್ಲಾ, ಶಾಲಿಯೊಳಗ ನಮ್ಮ ಶಿಕ್ಷಕರು ಮಾಸ್ತರ ಮೊಮ್ಮಗ ಮೇಲಾಗಿ ಅವರ ಕೈಯೊಳಗ ತಯಾರಾಗ್ಯಾನ, ಕ್ಲಾಸಿಗೇ ಫರ್ಸ್ಟ ಬರತಾನ ಅಂತ ನನಗೂ ಒಂದು ರೀತಿ ವಿಶೇಷ ಗೌರವ ಕೊಡತಿದ್ರು. ಇಷ್ಟಾಗಿ ಹೊಸಾ ಪುಸ್ತಕ ಕೊಡಸ್ರೀ ಅಂತ ಗಂಟಬಿದ್ರ, ಗಟ್ಟಿಯಾಗಿರೂ ಪುಸ್ತಕ ಹರಿದಿದ್ದ ಪ್ರಕರಣ ಇನ್ನ ಹೊರಬೀಳತೈತಿ ಅಂತ ನಾನು ಬ್ಯಾಡಬಿಡ್ರಿ ಇದರೊಳಗ ಈ ವರ್ಷ ಹೆಂಗರ ಕಳೀತಿನ ಅಂತ ಹೇಳಿ ಪ್ರಕರಣಕ್ಕ ಕೊನೆ ಹಾಡಿದೆ.
ಅವತ್ತ ನಮ್ಮಜ್ಜ ಹೇಳಿದಂತ ಮಾತು, ನನ್ನ ಮನಸಿನೊಳಗ ಬೇರೂರಿತು. ಪುಸ್ತಕ ಹರಿದ ಈ ಪ್ರಕರಣ ಪುಸ್ತಕಗಳ ಬಗ್ಗೆ ಪ್ರೀತಿ ಬೆಳೆಸಿತು, ಪುಸ್ತಕಗಳನ್ನು ಬಹಳ ಕಾಳಜೀಪೂರ್ವಕ ಇಟಕೋಬೇಕು ಅನ್ನೋ ಪಾಠ ಕಲಿಸಿತು. ಅಂದಿನಿಂದ ನನ್ನ ಎಲ್ಲಾ ಪಠ್ಯಪುಸ್ತಕಗಳು ಅತ್ಯಂತ ನೀಟಾಗಿ ಇಟ್ಟುಕೊಳ್ಳೊ ಹವ್ಯಾಸ ಬೆಳೀತು. ಇವತ್ತಿಗೂ ಪುಸ್ತಕ ಯಾವುದೇ ಇರಲಿ ಅದನ ಜತನದಿಂದ ಇಟ್ಕೊಳ್ಳೋದು ಇಂದಿಗೂ ನನಗ ಅಭ್ಯಾಸ ಆಗಿದೆ.....

ಪಯಣ

ಬಸ್ಸಿನ ಬಾಗಿಲಿಗೆ ಅಡ್ಡಡ್ಡ ನಿಂತು ಕಂಡಕ್ಟರ್ ಹುಬ್ಬಳ್ಳಿ, ಹುಬ್ಬಳ್ಳಿ, ನಾನ್-ಸ್ಟಾಪ್ ಹುಬ್ಬಳ್ಳಿ ಅಂತ ಕರಿಯೂವಾಗ ಓಡಿ ಬಂದು ನಾನೂ ಬಸ್ ಹತ್ತಿದೆ, ಏನೇನೋ ತುರ್ತು ಕೆಲಸಗಳು, ಹೋಗಲೇಬೇಕು ಸರಿಯಾದ ಟೈಮಿಗೆ ಹೋಗದಿದ್ರ ಕೆಲಸ ಆಗೂದುಲ್ಲ. ಅಲ್ಲಿ ಹೋದ ಮ್ಯಾಲೆ ಅವರು ಸಿಗ್ತಾರೋ ಇಲ್ಲೋ, ಮನಸಿನ್ಯಾಗ ಚಿಂತೆಗಳ ಮೆರವಣಿಗೆ ನಡೆದಿರುವಾಗಲೇ... ಏನೋ ಪರಿಮಳ ಚುಂಬಕದಂತೆ ಎಳೆಯುತ್ತ ನನ್ನ ಕಲ್ಪನಾಲೋಕಕ್ಕೆ ಬ್ರೇಕ್ ಬಿತ್ತು. ಈಗಂತೂ ಹೊಂಟೇನಿ ಮುಂದ ಏನಾಕ್ಕತಿ ನೋಡೂಣು ಅನಕೊಂತ ಸೀಟಿಗಾಗಿ ಬಸ್ಸಿನ ತುಂಬ ಕಣ್ಣು ಹಾಯಿಸಿದೆ. ಎಲ್ಲೂ ಸೀಟ್ ಇಲ್ಲ ಒಂದ್ ಕಡೆ ಬಿಟ್ಟು... ಅಲ್ಲಿಂದಲೇ ಆ ಪರಿಮಳ ನನ್ನ ಸೆಳೆದದ್ದು ಸುಂದರವಾದ ತರುಣಿ, ಸೀದಾ ಹೇಳಬೇಕಂದ್ರ... ಕೈ-ತೊಳಕೊಂಡು ಮುಟ್ಟುವಂತಹ ಸುಂದ್ರಿ... ಹಂಗ ಮುಂದ ಸರದು ಮ್ಯಾಡಂ ಅಂತ ನಾನು ಅನ್ನೂದರೊಳಗ ತನ್ನ ಜಂಬದ ಚೀಲ ಸರಿಸಿ, ಬರ್ರೀ ಕುತಕೋರ್ರೀ ಅಂತ ಕೋಗಿಲೆ ಕಂಠ ಉಲಿಯಿತು... ಎಲಾ ಇವನ ಮದುವೆಯಾಗಿ ಹನ್ನೆರಡು ವರಷಾ ವನವಾಸದಂಗ ಸಂಸಾರ ಮಾಡ್ತಿದ್ರೂ ಇನ್ನೂ ಇದೆಂಥಾ ಆಕರ್ಷಣೆ ನನಗ ಅನಕೊಂತ ಆ ಸುಂದರೀ ಬಾಜೂಕ ಆಸೀನನಾದೆ...
ರಂಭಾ-ಊರ್ವಸಿಯರನ್ನು ಮೀರಿದ ಸುಂದ್ರಿ ಬಾಜೂಕ ಕುಳಿತಿದ್ರ ಮನಸಿನ್ಯಾಗ ಏನೋ ಪುಳಕ... ನೀವು ಎಲ್ಲಿಗೆ ಹೊರಟೀರಿ, ನನಗ ಹುಬ್ಬಳ್ಳಿಗೆ ಹೋಗಬೇಕಾಗೇದ, ಫಸ್ಟ ಟೈಮ್ ಹುಬ್ಬಳ್ಳಿಗೆ ಹೊಂಟೇನಿ, ಈ ಅಡ್ರೆಸ್ (ಕಾರ್ಡ್ ತೋರಿಸಿ) ಎಲ್ಲಿ ಬರ್ತದ ನನಗ ಹೇಳಿ, ಎಲ್ಲಿಗೆ ಇಳೀಬೇಕು ಅಂತ ಹೇಳ್ರೀ... ಫುಲ್-ಸ್ಟಾಪ್ ಇಲ್ಲದ ಅವಳ ಮಾತುಗಳು ಅಲ್ಲಲ್ಲ ವಿಚಾರಣೆಯ ಪ್ರಶ್ನೆಗಳು... ನಾನು ಎಲ್ಲಿಗೆ ಹೊಂಟೇನಿ ಅನ್ನೂದ ಹೇಳಾಕ ಬಿಡವಲ್ಲಳು...
ನಾನೂ ಹುಬ್ಬಳ್ಳಿಗೇ ಹೊರಟೇನಿ, ಹೇಳ್ತೇನಿ ಬಿಡ್ರಿ ಅಂತ ಮುಂದಿನ ಪ್ರಶ್ನೆಗೆ ಆಸ್ಪದ ಕೊಡದಂಗ ಮಾತ ಮುಗಿಸಿದೆ...
ಮಾತಾಡಿಕೊಂತ ಕುಂತ್ರ ಅಕಿ ಮುಖ ನೋಡಾಕ ಆಗೂದಿಲ್ಲ ಮತ್ತು ಈಗ ನೋಡದಿದ್ರ ಈ ಜನ್ಮದಾಗ ಮತ್ತೊಮ್ಮೆ ಇಂಥಾ ಸೌಂದರ್ಯ ಸಿಗೂದುಲ್ಲ ಅನಕೊಂತ ಕಳ್ಳನೋಟದಿಂದ ಅವಳ ಚೆಲುವು ನೋಡಾಕಹತ್ತಿದೆ....
ಹೊರಗ ಆಕಾಶದಾಗ ಮೋಡಗಳ ನಡುವ ತ್ರಾಸ್ ತಗೊಂಡು ಸೂರ್ಯನ ಕಿರಣ ಚಿತ್ತ-ಚಿತ್ತಾರ ಮಾಡ್ತಿದ್ರ, ಅವನೂ ಮರಿಯೊಳಗಿಂದ ಇಕಿನ್ನ ನೋಡಾಕ ಹತ್ಯಾನ ಅನ್ನೂ ಸಂಶಯ ನನಗ, ಬಸ್ಸಿನೊಳಗ ಎಲ್ಲಾರೂ ನನ್ನ ಕಡೆ ನೋಡಾಕ ಹತ್ಯಾರ ಅಂತ ಮನಸಿನ್ಯಾಗ ಒಂಥರಾ ಹಳವಂಡ...
ನನ್ನ ಮೌನವನ್ನ ತಿಳಕೊಂಡಂಗ ಸುಂದ್ರಿ ಸುಮ್ಮನಾಗಿ ಕಿಟಕಿಯೊಳಗಿನಿಂದ ಹೊರಗ ದೃಷ್ಟಿಹಾಯಿಸಿದಳು... ಕಿಟಕ್ಯಾಗಿಂದ ಬೀಸಿದ ತಂಗಾಳಿಗೆ ಅವಳ ಮುಂಗುರುಳು ಹಾರಿ ನನ್ನ ಮುಖಕ್ಕ ಕಚಗುಳಿ ಇಡತಿದ್ರ.... ಸುಂದ್ರೀ ಜೊತಿಗೆ.... ಸರಸ ಆಡಕೊಂತ ಮೋಡಗಳ ನಡುವ ನಾನ ಹೊಂಟೇನಿ ಅನ್ನೂ ಕನಸು...
ಆವಳ ಮುಂಗುರುಳು ಹಾರಿ ನನ್ನ ಮುಖದ ಮ್ಯಾಲೆ ಡ್ಯಾನ್ಸ್ ಮಾಡ್ತಿದ್ರ...
ಆ....
...
...
,,,,
ಆಆ....
.....
....
ಆಕ್ಷೀ.....
ಅವಳ ಮುಂಗುರುಳು ನನ್ನ ನಾಸಿಕದೊಳಗ ಕಚಗುಳಿ ಇಟ್ರ ಇನ್ನೇನಾಕೈತಿ...

Friday, March 8, 2013

ಸ್ತ್ರೀ

ಇಹಲೋಕದಲಿ
ಕಣ್ಣು-ಬಿಡುವ ಮೊದಲೇ
ಜೀವ ಮೊಳಕೆಯೊಡೆದಾಗ
ನವಿರಾಗಿ ನೇವರಿಸಿ
ಕರುಳ ಕುಡಿಯನು
ಹೆತ್ತು-ಹೊತ್ತು
ಒತ್ತಾಸೆಯಿಂ ಬೆಳೆಸಿ

ಮಾತೆಯಾ ಮಡಿಲಿನಲಿ
ಒಡಹುಟ್ಟಿ
ಒಡನಾಟದಿ ನಲಿಸಿ
ನೋವು-ನಲಿವಿಗೆ
ನಲ್ಮೆಯಿಂ ಸಂತೈಸಿ
ಬಾಳ ಪಯಣದಿ
ಜೊತೆಯಾಗಿ ನಿಂತು

ಮತ್ತೆ ಬೆಳಗಲು
ಮನೆಯ ಮಗಳಾಗಿ ಜನಿಸಿ
ಪುರುಷನಾ
ಸಲುಹಿ, ಸಂತೈಸಿ
ಪರಿಪೂರ್ಣಗೊಳಿಸುವ
ಪ್ರಕೃತಿ
ಇದೋ ನಿನಗೆ
ನನ್ನೊಲವ ಹಾರೈಕೆ......

ಜೀವಮಾನದಿ
ಬೆನ್ನೆಲುಬಾಗಿ ಜೊತೆನೀಡಿ
ಚೇತನಕೆ ಚೈತನ್ಯ ನೀಡುತ

ಜೀವನದ ಜೀವಾಳವಾಗಿರುವ ನಿನಗೆ
ಅನುದಿನವೂ, ಅನುಕ್ಷಣವೂ
ಒಲವಿನಾ ನಮನ
ಅದಕೂ ಏಕೆ ಬೇಕು
ತೋರಿಕೆಯದೊಂದು ದಿನ.....