Sunday, April 4, 2010

ಶಕುಂತಲೆ

ಅಂದು ಜರುಗಿದ ದುಷ್ಯಂತ-ಶಕುಂತಲೆಯರ ಪ್ರಣಯ ಭರತವರ್ಷದಲ್ಲಿ ದಾಖಲಿಸಲ್ಪಟ್ಟಿರುವ ಶ್ರೇಷ್ಠ ಪ್ರೇಮಕಾವ್ಯ. ಕಾಳಿದಾಸನ "ಅಭಿಜ್ಞಾನ ಶಾಕುಂತಲೆ " ನಿಮಗೆಲ್ಲರಿಗೂ ಗೊತ್ತು. ಆದರೆ ಇಲ್ಲಿ ನಾನು ನಿಮಗೆ ಹೇಳುತ್ತಿರುವುದು ಅಮಾಯಕ ಯುವತಿಯೊಬ್ಬಳನ್ನು ಪ್ರೀತಿಸಿ, ಬಾಳ ಪಯಣವು ಆರಂಭವಾಗುವ ಮೊದಲೇ ನಡುನೀರಿನಲ್ಲಿ ಕೈಕೊಟ್ಟು ಓಡಿ ಹೋಗಿರುವ ಆಧುನಿಕ ಯುವಕ ದುಷ್ಯಂತನೊಬ್ಬನ ಪ್ರೇಮಗಾಥೆ

ಶಕುಂತಲೆ

ನಮ್ಮ ಶಕುಂತಲೆ ಕಾಯುತ್ತಿದ್ದಾಳೆ
ಹೃದಯದರಸ
ದುಶ್ಯಂತನ ನಿರೀಕ್ಷೆಯಲ್ಲಿ

ಕೊಳದ ತಿಳಿನೀರಿನಂತೆ
ನಿರ್ಮಲವಾದ, ನಿಷ್ಕಲ್ಮಶ
ಮನಸಿನಾ ಹುಡುಗಿ

ಕುಡಿನೋಟದಾ ಕಲ್ಲನೆಸೆದು
ಹುಡುಗಿಯ ಮನದಾಳದಿ
ಮನೆ ಮಾಡಿದ, ಪ್ರೇಮಜಾಲವ ಬೀಸಿ

ಮನದೊಳಗೆ ಪ್ರೇಮ ಬೀಜಾಂಕುರಗೈದು
ಕಣ್ಣಿನಾಳದ ಕನಸುಗಳಿಗೆ ವರ್ಣಗಳ ಸುರಿದು
ಪ್ರೇಮಾಗ್ನಿಯಲಿ ತನು-ಮನಗಳ ತರ್ಪಣಗೈದ

ಆಸೆಗಣ್ಣಿನ ಹುಡುಗಿ,
ಚಿಗುರು ಮೀಸೆಯ ಹುಡುಗ
ವಿಹರಿಸಿದರು ಪ್ರೇಮಸಾಗರದಿ

ತೇಲುತ್ತ, ಮುಳುಗುತ್ತ
ದಡವ ಸೇರುವ ಮುನ್ನ
ಕಣ್ಮರೆಯಾದನೇ ಹೃದಯದರಸ

ಮನದಾಳದಿ ಮೊಳೆತ ಪ್ರೇಮ
ಸುಂದರ ಕನಸುಗಳ ಕನವರಿಸುತ್ತ
ಪ್ರಸವಿಸಿತು ಕಟುಸತ್ಯವ

ಶಕುಂತಲೆ ಕಾಯುತ್ತಿದ್ದಾಳೆ
ಹಲವು ವಸಂತಗಳಿಂದ
ದುಶ್ಯಂತನ ಆಗಮನಕ್ಕಾಗಿ

ಹಾ!!! ಮರೆತೆ
ಭರತನೂ ಕಾಯುತ್ತಿದ್ದಾನೆ
ತಾಯ ಆಸೆಗಳಿಗೆ ನೀರೆರೆಯುತ್ತ

ತಂದೆ ಎಂಬುವ ಪ್ರಾಣಿ
ಇಂದು-ನಾಳೆ
ಎಂದಾದರೂ ಬರುವನೆಂದು

ವಿರಹ ....

ವಿರಹ

ದೂರ ಎಷ್ಟಾದರೇನು
ಎಲ್ಲೆಯನು ಮೀರಿ ಹೋದರೇನು
ನಲ್ಲೆಯಾ ನೆನಹುಗಳು
ನೆರಳಂತೆ ಬೆಂಬತ್ತಿ
ಕಾಡುತಿಹವು ಹಗಲಿರುಳು

ದೇಶ ಯಾವುದಾರದರೇನು
ಪರದೇಶಿಯಾದರೇನು
ಕಾಲ ಮಿತಿಗಳನು ಮೀರಿ
ಅನುಗಾಲ ಕೇಳುವೆ ವಿರಹಗಾನವನು
ಹೃದಯದಾಳದಿಂದ

ಸಾಗರದ ಅಲೆಗಳಂತೆ
ಅವಿರತವಾಗಿ ಅಪ್ಪಳಿಸುತ್ತಿವೆ
ನೂರು-ಸಾವಿರ ಸಾರಿ ನಿರಂತರವಾಗಿ
ಭೋರ್ಗರೆವ ಸದ್ದು ಅಡಗಿಹುದು
ಮನದಾಳದಿ ಒಮ್ಮ ಇಣುಕಿನೋಡು

ಮನಸು ಬರಿದಾಗಿದೆ
ಹೃದಯದಿ ರಕ್ತ ಸೋರುತಿದೆ
ಮತ್ತೆ ಏನೇನೂ ಆಗಿದೆ, ಆದರೆ
ವಿರಹವೊಂದೇ ಕೊರೆಯುತಿದೆ
ಅನುದಿನವೂ ಅನುಕ್ಷಣವೂ

ಜಾತಿ-ಬೇಧಗಳ ಮೀರಿ ....

ಅದೇ ತಾನೇ
ಜನ್ಮಪಡೆದು
ಅಚ್ಚರಿಯ ಕಂಗಳಲಿ
ಜಗವ ನೋಡುತಿರುವ
ಹಸುಳೆಯನು ಕಂಡು
ಹೇಳಲಾಗದು
ಜಾತಿ, ಕುಲ ಗೋತ್ರಗಳನು

ನಸುನಗುವ ಹಸುಳೆಯೂ
ಅರಿಯದು
ತಾನು ರಾಮನೋ, ರಹೀಮನೋ
ಅಥವಾ ಬೇರೆ ಇನ್ಯಾರೋ....
ಎಂಬುದನು

ಮರಣಗೊಂಡು
ಪಂಚಭೂತಗಳಲ್ಲಿ ಮತ್ತು
ಮಣ್ಣಿನಲಿ ಲೀನವಾದ
ಮಹನೀಯರೆಲ್ಲ
ಅಸ್ಥಿಗಳನು ಅಗೆದು ನೋಡಿ
ಹೇಳಲಾಗದು ಅವರ ಭೂತಕಾಲದ
ಜಾತಿ, ಕುಲ ಗೋತ್ರಗಳನು

ನಶಿಸಿಹೋಗಿರುವ ಜೀವದ
ಕುಲಗೋತ್ರಗಳನು
ಹೇಳಲಾರೆ ನೀನು
ಅಸ್ಥಿಗಳೂ ಅರಿಯವು
ತಮ್ಮ ಗತಕಾಲದ ಅಸ್ಥಿತ್ವವನು

ಮಹಾತಾಯಿ ಮಡಿಲಿಂದ
ಭೂತಾಯ ಒಡಲನ್ನು
ಸೇರುವಾ ಈ ಬಾಳ ಪಯಣದಲಿ
ಜಾತಿ-ಬೇಧಗಳ ಮೀರಿ
ಬಾಳುವವನೇ ನಿಜ ಮನುಜ ನೋಡಾ .......

ಬುದ್ಧ ಭ್ರಮಣ

ಗೌತುಮ ಬುದ್ಧ
ಮಧ್ಯ ರಾತ್ರಿಯಲ್ಲಿ
ಎದ್ದು ಹೋಗಿದ್ದು . . . . .




ಸಂಸಾರ ತಾಪತ್ರಯಗಳನು
ತಾಳಲಾರದೆ ಹೋಗಲಿಲ್ಲ
ಹೆಂಡತಿ ಮಕ್ಕಳ ಕಾಟವನು
ತಾಳಲಾರದೆಯೂ ಅಲ್ಲ






ನಿದ್ರೆ ಬರಲಿಲ್ಲವೆಂದಲ್ಲ
ಸಕಲ ಸುಖ, ಐಶ್ವರ್ಯಗಳ ತೊರೆದು
ಬುದ್ಧಿ ಭ್ರಮಣೆಯಿಂದ
ಖಂಡಿತವಾಗಿಯೂ ಇಲ್ಲ


ರಾಜಭೋಗಗಳ ಬಿಟ್ಟು
ತನ್ನವರೆಲ್ಲರನು ತೊರೆದು
ಕಾಳ ರಾತ್ರಿಯಲಿ ಕಣ್ಮರೆಯಾದರೂ
ಲೋಕದಲಿ ಬೆಳಕಾಗಿ ನಿಂತ


ಅಹಿಂಸೆ, ಸಹಬಾಳ್ವೆ ಶಾಂತಿ
ಸಂದೇಶಗಳ ಸಾರಿ
ಮೇಲು ಕೀಳುಗಳನು ಮೀರಿ
ಸಾರಿದ "ಬುದ್ಧಂ ಶರಣಂ ಗಚ್ಛಾಮಿ"


ಯುಗಯುಗಾಂತರದಲಿ ಅಳಿಯದಂತಹ
ಬೌಧ್ಧ ಧರ್ಮವ ಸಾರುತ
ನಸುನಗುತ ನಿಂತ
ಜಗಕೆಲ್ಲ ಬೆಳಕಾಗಿ