Monday, March 8, 2010

ನಾಗರೀಕತೆ

ದೂರ ಬೆಟ್ಟದಾಚೆ
ನದಿ ತೀರದಲ್ಲಿ
ಮಂಜು ಮುಸುಕಿದ ಹಾದಿಯಲ್ಲಿ
ಕಂಡೂ ಕಾಣದಂತಿರುವ
ಗೋಪುರದ ಬೀದಿಯಲಿ
ಎಡಬದಿಯ ಮೂರನೇ ಗುಡಿಸಲು
ನಮ್ಮದಾಗಿತ್ತು


ಹಸಿರು ತುಂಬಿದ ಸಹ್ಯಾದ್ರಿ ಸಾಲಿನ
ಮಂಜು ಮುಸುಕಿದ ಹಾದಿಯಲಿ
ಹರಿವ ನೀರಿನ ಜುಳು ಜುಳು ಸದ್ದು
ನದಿ ತೀರದ ಮರಳಿನಲ್ಲಿ
ಅಳಿಸಿ ಹೋದ ಆ ನೂರು ಹೆಜ್ಜೆಗಳು
ಗತಕಾಲದ ಹರಿರುಹೊನ್ನಿಗೆ
ಮೂಕ ಸಾಕ್ಷಿಯಾಗಿವೆ


ನಾಗರೀಕತೆ ಬೆಳೆದಿದೆ ಇಂದು
ಕೆಂಪು ಮಣ್ಣಿನ ಹಾದಿಯಲಿ
ಹಸಿರೆಲ್ಲ ಕಳೆದುಹೋಗಿದೆ
ಗುಡಿಸಲು ಕಾಣೆಯಾಗಿದೆ, ಹೆಂಚಿನ ಮನೆಯೂ
ಕಾಂಕ್ರೀಟು ಕಾಲಿಟ್ಟಿದೆ ಈಗ
ಠೀವಿಯಿಂದ ಮನೆ ಮನೆಯಲ್ಲಿಯೂ ಕಾಲಿಟ್ಟಿದೆ ಟಿವಿ


ಬೆಟ್ಟಗಳ ಬಗೆದು, ಗುಂಡಿಗಳ ತೋಡಿ
ನಾಡ ಸಿರಿಯೆಲ್ಲ ಲೂಟಿಯಾಗಿದೆ
ತೇಗ, ಹೊನ್ನಿ, ಮತ್ತಿ ಶ್ರೀಗಂಧ ಮರಗಳು
ಕಾಣೆಯಾಗಿವೆ ಮಾನವನ ದುರಾಸೆಗೆ
ಕಾಡು ಕಾಣದಾಗಿದೆ
ಕುರುಚಲು ಗಿಡ-ಮರಗಳ ಮಧ್ಯೆ

ಮರಳಿ ಬಾ

ಮರಳಿ ಬಾ


ಮರಳಿ ಬಾ ಇನಿಯ
ಮರೆತು ಹೋಗುವ ಮುನ್ನ


ಮನದಾಳದಿ ಬಿತ್ತಿರುವ
ಪ್ರೇಮ ಬೀಜ ಕುಡಿಯೊಡೆದು
ಮುಗಿಲ ನೋಡುವ ಮುನ್ನ
ಮರಳಿ ಬಾ ಇನಿಯ


ನೀ ದೂರ ಇದ್ದರೇನು
ಹೃದಯಾಂತರಾಳದಲಿ
ಎಡಬಿಡದೆ ಮೊರೆಯುವದು
ನಿನ್ನ ನೆನಪಿನ ಅಲೆಯು


ಕರಿಮೋಡದಂಚಿನಲಿ
ಹೊನ್ನಕಿರಣದ ತೆರದಿ
ಮಿಂಚಿ ಮಾಯವಾಗುತಿಹ
ಮನದಾಸೆ ಬಾಡುವ ಮುನ್ನ


ಮರಳಿ ಬಾ ಇನಿಯ

Sunday, March 7, 2010

ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

ಅಲ್ಲಲ್ಲಿ ಚಲ್ಲಿಹುದು ವರ್ಣಗಳ ಚಿತ್ತಾರ
ಮಾಯದಾ ರೇಖೆಗಳ ಮೊದದಿಂ ಜಗದೊಡೆಯ
ಬಿಡಿಸಿದನು ವಿಧಿಲಿಖಿತದಂತೆ ಬದುಕಿನಾ ಚಿತ್ರ

ಮೂಡಣದಿ ಮೂಡುವಾ ಹೊನ್ನಕಿರಣದ ತೆರದಿ
ಮುನ್ನ ತಾ ಸೆಳೆವುದು ವರ್ಣಗಳ ಮೋಡಿಯಲಿ
ಬಾಲ್ಯದ ಆಟ ಹುಡುಗಾಟದಲಿ ಕಣ್ಮನವ ಸೆಳೆವುದು
ಚಂಚಲತೆಯ ಚಿತ್ರ

ಕನಸು ಕಾಮನೆಗಳ ಕೆರಳಿಸುವ ಯೌವನದ ರಂಗಿನಲಿ
ಸಪ್ತವರ್ಣಗಳ ಚಲ್ಲಿ ಸುಪ್ತ ಮನಸಿನಾಳದಲಿ
ಭಾವನೆಗಳ ಮೂಡಿಸಿ ಮತ್ತೆ ಮತ್ತೇರಿಸುವ
ಕನಸಿನಾ ಲೋಕದ ಕಾವ್ಯ ಚಿತ್ರ

ಹೆಣ್ಣು, ಹೊನ್ನು, ಮಣ್ಣುಗಳ ಹೊತ್ತು
ಮನದನ್ನೆ ಮಕ್ಕಳು ಬಂಧು ಮಿತ್ರರು ಎಲ್ಲರೊಡಗೂಡಿ
ನೋವು ನಲಿವುಗಳ ಸಮ್ಮಿಶ್ರಗೊಳಿಸಿ ಸ್ವರ್ಣ ಪಥದಲಿ ಸಾಗುವ
ಬರೆದನಾ ವಿಧಿಯು ಸಂಸಾರ ಚಿತ್ರ

ಬಾಳ ಮುಸ್ಸಂಜೆಯಲಿ ಬಣ್ಣಗಳು ಮಾಸಿ
ಬಾಲ್ಯ ಯೌವನದ ವರ್ಣಮಯ ನೆನಹುಗಳ
ಇಳಿವಯಸ್ಸಿನಲ್ಲಿ ಮೆಲುಕುತ್ತ ಮತ್ತೆ ಮತ್ತೆ
ಮನದಾಳದಲಿ ಮೂಡುವುದು ಮೂಲ ಚಿತ್ರ


ಭಿತ್ತಿ ಪರದೆಯ ಮೇಲೆ ಬಣ್ಣಗಳು ಅಳಿದಾಗ
ಉಳಿವುದೊಂದೇ ಸತ್ಯ
ಶೂನ್ಯ ಪರದೆಯ ಮೇಲೆ ಬಾಳಿ ಬದುಕಿದ ಕ್ಷಣವೂ
ಬರೀ ಮಾಯೆಯ ಆಟ
ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

Friday, March 5, 2010

ಕಳೆದುಕೊಂಡದ್ದು

ಪ್ರತಿಯೊಬ್ಬ ವ್ಯಕ್ತಿಯೂ ಬಾಲ್ಯದಿಂದ ಯೌವನದ ಪಯಣದಲ್ಲಿ ತಮ್ಮ ಮೂಲ ಗುಣಾವಗುಣಗಳನ್ನು ಕಳೆದುಕೊಳ್ಳುತ್ತಾರೆ. ಕಾಲಾನುಕ್ರಮದಲ್ಲಿ ಸೃಷ್ಟಿಯ ವೈಪರೀತ್ಯಗಳ ಪರಿಣಾಮದಿಂದ ಹಾವು ಪೊರೆಯನ್ನು ಕಳಚಿಕೊಳ್ಳುವಂತೆ ನಾವು ಬಾಲ್ಯದ ನಿಷ್ಕಲ್ಮಶ ಪ್ರೇಮ, ಸ್ನೇಹ, ಸತ್ಯ-ನಿಷ್ಠೆ, ನೇರವಾದ ನಡೆ-ನುಡಿ ಇವೆಲ್ಲವನ್ನೂ ಈ ಸಂಸಾರದ ಆಗುಹೋಗುಗಳ ಮಧ್ಯದಲ್ಲಿ ಕಳೆದುಕೊಳ್ಳುತ್ತೇವೆ. ಬಾಲ್ಯದಲ್ಲಿ ಇದ್ದುದನ್ನು ಇದ್ದಂತೆಯೇ ಹೇಳುವ ಆ ಧೈರ್ಯ, ಸೃಷ್ಠಿ ಸೌಂದರ್ಯವನ್ನು ನೋಡುವ ನಿಷ್ಕಲ್ಮಶ ನೋಟ, ಆತ್ಮಸಾಕ್ಷಿಗೆ ಅನುಗುಣವಾದ ನಮ್ಮ ನಡೆ-ನುಡಿ ನಾವು ಪ್ರಾಯಕ್ಕೆ ಬರುತ್ತಿದ್ದಂತೆಯೇ ನಮಗರಿವಿಲ್ಲದಂತೆ ಕಣ್ಮರೆಯಾಗುತ್ತವೆ.

ಕಳೆದುಕೊಂಡಿದ್ದೇನು ???

ಕಳೆದುಕೊಂಡಿದ್ದೇವೆ ನಾವು
ನಮ್ಮತನವನು
ಬಾಲ್ಯದಿಂ ಯೌವನದ ಪಯಣದಲ್ಲಿ

ಕಳೆದುಕೊಂಡಿದ್ದೇವೆ ನಾವು
ಆತ್ಮಸಾಕ್ಷಿಯನ್ನು
ಮೇಲಿನವರನ್ನು ಮೆಚ್ಚಿಸಲು
ಸುಳ್ಳು ಗುಣಗಾನವನ್ನು ಮಾಡುತ್ತ
ಕೆಳಗಿನವರ ಮೆಚ್ಚುಗೆ ಗಳಿಸಲು
ಪೊಳ್ಳು ಆದರ್ಶಗಳನ್ನು ತೋರುತ್ತ

ಕಳೆದುಕೊಂಡಿದ್ದೇವೆ ನಾವು
ಶ್ರವಣ ತಾಳ್ಮೆಯನು
ಬುದ್ಧಿವಾದವನು ಹೇಳುವ ಗುರು-ಹಿರಿಯರ
ಹಿತನುಡಿಗಳಿಗೆ ಹಿತ್ತಾಳೆ ಕಿವಿಯಾಗಿ
ಅವರಿವರ ಸಮಯಸಾಧಕ
ಮುಖಸ್ತುತಿಗೆ ಮರುಳಾಗಿ

ಕಳೆದುಕೊಂಡಿದ್ದೇವೆ ನಾವು
ನಮ್ಮ ನೇರ ನಡೆ-ನುಡಿಯನ್ನು
ಬೆಳೆಸಿಕೊಂಡಿದ್ದೇವೆ
ಅವರಿವರನ್ನು ಮರುಳಾಗಿಸುವ
ಮಾತಿನ ಮೋಡಿಯನ್ನು

ಕಳೆದುಕೊಂಡಿದ್ದೇನೆ ನಾವು
ಆತ್ಮಸಾಕ್ಷಿ, ಸತ್ಯ-ನಿಷ್ಠೆಗಳ ಮೆರೆವ
ನಿರ್ಮಲ ನೋಟವನು
ಹೆಣ್ನು-ಹೊನ್ನು ಮಣ್ಣುಗಳ ಲೋಭದಲಿ
ವಿಷಯಾಸಕ್ತ ಕಾಮನೆಗಳ ಪೊರೆಯಲಿ
ಬೆಳೆಸಿಕೊಂಡಿದ್ದೇನೆ ಕಾಮಾಲೆ ದೃಷ್ಟಿಯನು