Saturday, August 15, 2015

ಕನವರಿಕೆ

ಸುಮ್ಮನೇ
ಅತ್ತಿತ್ತ ಚಲಿಸುವ
ನಯನಗಳು
ಕಾಣುವ ನೋಟ
ಮನದಲ್ಲಿ ಮೂಡದು
ಮನದಲ್ಲಿಯ ಚಿತ್ರಣ
ನೋಟದಲ್ಲಿ ಕಾಣದು
ಅವಳು
ಅಲ್ಲಿ ಇಲ್ಲವೆಂಬುದು
ಅರಿತೂ
ಮತ್ತೆ ಮತ್ತೆ ಇಣುಕಿ
ನೋಡುವ ನಯನಗಳು

ಮನದಲ್ಲಿ ಮಂಥನ
ಅವಳೊಡನೆ ಒಡನಾಟ
ಎಲ್ಲವನೂ ಅರಿತ
ಮನಸುಗಳು
ಅರ್ಥವಿಲ್ಲದ ಮಾತುಗಳು
ಆಗಾಗ ಮುಂಗುರುಳ
ಸರಿಸುವ
ಅವಳ ಕೈಬೆರಳು
ಕಣ್ಣೆದುರು ಅವಳಿಲ್ಲವಲ್ಲ
ಅಂತರಾಳದ ಚಿತ್ರಕೆ
ಅಳಿವಿಲ್ಲವಲ್ಲ

ಮನದಲ್ಲೇ
ಮುದಗೊಳಿಸುವ
ಅವಳ ಸುಳಿದಾಟದ
ಭ್ರಮೆಯ ಕಂಪು
ಕನವರಿಕೆಯಲ್ಲಿಯೂ
ಕೇಳುತ್ತಿರುವ
ಅವಳ ಕಾಲ್ಗೆಜ್ಜೆ,
ಕೈಬಳೆಗಳ ಸದ್ದು
ಕಣ್ಣೆದುರು ಇರದಿದ್ದರೇನಂತೆ
ಅಳಿಯಲಾರದು
ಅಂತರಂಗದ ಮಂಥನ

ನಿರೀಕ್ಷೆ

ಸಖೀ...
ನಾನು ನಿರೀಕ್ಷಿಸುತ್ತಿದ್ದೇನೆ
ನಮ್ಮಿಬ್ಬರ ಮಿಲನವನ್ನು
ಬರಗೆಟ್ಟವನಂತೆ ಕಾಯುತ್ತಿದ್ದೇನೆ
ನಿನ್ನ ಬರವನ್ನು....

ಮನಸು ಕಲ್ಲಾಗಿಸಿ
ನಮ್ಮ ಪ್ರೀತಿಗೆ ಕವಚ ತೊಡಿಸಿ
ಕಾಯುತ್ತಿದ್ದೇನೆ ನಾನು
ಶಾಪಗ್ರಸ್ಥ ಅಹಲ್ಯೆಯಂತೆ....

ನಿನ್ನೊಂದಿಗೆ ಕಳೆದಿರುವ ಕ್ಷಣಗಳ
ಸವಿನೆನಪುಗಳಲಿ ಲೀನವಾಗಿ
ಕಾಯುತ್ತಿದ್ದೇನೆ ನಾನು
ಅಶೋಕವನದ ಸೀತೆಯಂತೆ....

ಕಾಲಚಕ್ರದಡಿ ಹಣ್ಣಾಗಿ
ನನ್ನತನ ಕ್ಷಣ-ಕ್ಷಣವೂ ಕರಗಿಹೋಗಿ
ಹೃನ್ಮಗಳಲಿ ನಿನ್ನನ್ನೇ ಹೊತ್ತು
ಕಾಯುತ್ತಿದ್ದೇನೆ ನಾನು ಶಬರಿಯಂತೆ....

ಸಖೀ....
ನಿನ್ನನ್ನು ನನ್ನೊಳಗೇ ಅವಿತಿಟ್ಟುಕೊಂಡು
ಕಳೆದುಹೋಗಿರುವ ನನ್ನನು
ನಿನ್ನ ಕಣ್ಣಾಲಿಗಳಲಿ ಕಾಣಲು
ನಾನು ಕಾಯುತ್ತಿದ್ದೇನೆ ನಿನಗಾಗಿ...

ವಿದಾಯ

ಸಖೀ....
ಒಲುಮೆಯಾ
ಮಿಲನವೊಂದು ಮುಗಿದು
ಪ್ರತಿಬಾರಿ ನೀನು
ನಿರ್ಗಮಿಸಿದಾಗಲೂ
ಶೂನ್ಯದತ್ತಲೇ
ಎನ್ನ ಗಮನ...

"ಏನಾಯ್ತು, ಹೀಗೇಕೆ"
ಎಲ್ಲರಾ ಕಳವಳದ ಮಾತು
ಗಾಯವಿಲ್ಲಾ
ನೋವಿನಾ ಗುರುತಿಲ್ಲಾ
ಪೇಲವ ನಗೆಯೊಂದೇ
ಎನ್ನ ಉತ್ತರಾ....

ಪ್ರತಿ ಇರುಳಿನ
ಎನ್ನ ಏಕಾಂತದಲಿ
ಎಲ್ಲಿಹಳು ಎನ್ನವಳು
ಎಂಬ ಪ್ರಶ್ನೆಯೊಡನೆ
ಮನದ ಭಿತ್ತಿಯಲಿ
ಮೂಡುವಾ ನಿನ್ನ ಪ್ರತಿಬಿಂಬ...

ವಿದಾಯದೊಂದಿಗೆ
ಕೊನೆಗೊಳ್ಳುವಾ
ನಮ್ಮ ಮಿಲನಗಳು....
ಪುನರ್ಮಿಲಕೆ
ಮುನ್ನುಡಿಯಾಗಲಿ
ನಮ್ಮ ವಿದಾಯಗಳು....

ಆತ್ಮಸಾಕ್ಷಿ


ಶ್ !!!
ಸ್ವಲ್ಪ ಸಹನೆಯಿಂದಿರಿ
ನಾಲ್ಕಾರು ನಿಮಿಷ
ಮೌನವಾಗಿ
ನಿಮ್ಮೊಳಗೆ ಅಡಗಿರುವ
ನಿಮ್ಮ ಆತ್ಮ
ಉಲಿವುದನೂ ಕೇಳಿ

ಬೋಧಿಸುವುದ ನಿಲ್ಲಿಸಿ
ಮರುಳು ಮಾಡುವ
ವಾಗ್ಬಾಣಗಳಿಗೆ ವಿರಾಮ ನೀಡಿ
ಪಾಂಡಿತ್ಯ, ಬಿರುದುಗಳ
ಕಳಚಿ
ನಿಮ್ಮತನದ ಪ್ರತಿಬಿಂಬ ನೋಡಿ

ಎಡ-ಬಲಗಳ ಮೀರಿ
ಹಾಡುಹಗಲೇ ಇರುಳನ್ನು ಹೊದ್ದ
ನೊಂದವರ
ಒಂದರೆಕ್ಷಣ ನೋಡಿ
ಅವರ ಬಾಳಿಕೆ ಬೆಳಕು ನೀಡಿ
ಇಲ್ಲವಾರದೇ
ಪಕ್ಕಕ್ಕೆ ಸರಿದು ಅವರನ್ನು ಸಾಗಲು ಬಿಡಿ

ದಯವಿಲ್ಲದ ನಿಮ್ಮ
ಧಾರ್ಮಿಕತೆಯ ಕತೆಗಳ
ಮೂಲೆಗಿಡಿ ಗಂಟು-ಮೂಟೆ ಕಟ್ಟಿ
ಹಸಿದವರ ಮುಂದೆ
ಉಲಿಯುವಾ ನಿಮ್ಮ ಪ್ರವಚನಕೆ
ಒಂದಿನಿತು ವಿರಾಮ ನೀಡಿ
ಹಸಿವು ತಣಿಸಬಹುದಾದರೂ
ಕಾಮಾಲೆ ಕಣ್ಣುಗಳ
ಪೊರೆಯ ಹರಿದು ಹಾಕಿ

ಶ್ !!!
ಸ್ವಲ್ಪ ಮೌನವಹಿಸಿ
ವಾಗ್ವಾದಗಳ ನಡುವೆ
ನಿಮ್ಮ ಗಮನಕ್ಕೆ ಬಾರದೇ
ಕೊನೆಯುಸಿರೆಳೆದ ಆತ್ಮಗಳಿಗೆ
ಚಿರಶಾಂತಿ ಕೋರಿ
ಅರೆ ನಿಮಿಷ ಕಣ್ಣು ಮುಚ್ಚಿ
ನಿಮ್ಮ ಪ್ರತಿಬಿಂಬವ
ನೀವೇ ನೋಡಿ.......

ವಿರಹಗಾನ

ವಿರಹಾ.....
ಶೀತಲ ಸಮರ
ಮಂಜುಗಟ್ಟಿದೆ ಮನಸು
ಬಿಸಿಯುಸಿರಲಿ ಬೆಸೆದು
ಕರಗಿಸಬೇಕು...

ಒಬ್ಬರಿಂದೊಬ್ಬರು
ವಿಮುಖರಾಗಿದ್ದರೂ
ಚಿತ್ತವೆಲ್ಲವೂ ತುಂಬಿದೆ
ಮನೋರಮೆಯ ಚಿತ್ರ...

ತೊರೆಯ ದಡಗಳ ಆಚೆ
ಸಂತ್ರಸ್ತ ಪ್ರೇಮದ ತುಣುಕುಗಳು
ತೆರೆ ಕರಗಿ ಒಂದಾಗಲು
ಬೇಕಿದೆ ನೀಳ ಬೆರಳುಗಳ ಸ್ಪರ್ಷ...

ಒಂದಿನಿತು ವಿರಹಾ
ಅದುವೇ ತರಹ ತರಹಾ
ನಿಟ್ಟುಸಿರಿನ ಬೇಗೆ
ಕರಗುತಿದೆ ಮಂಜಿನಾ ತೆರೆ.....

ಉಚ್ವಾಸ-ನಿಸ್ವಾಸ
ನಮ್ಮುಸಿರು ಪ್ರೀತಿಯೇ
ಮನದ ಮಾಲಿನ್ಯ ಕರಗಿ
ಮಾನಿನಿಯ ನೋಟದಲಿ ಲೀನವಾಗಬೇಕು...

ಲಹರಿ.....

ಅಂತರಾಳದ
ಬಿಂದುವಿನೊಳಗೆ
ಉದ್ಭವವಾದ ಭಾವಕಣ
ಸಮತೋಲಿತ ವಿಚಾರವಿದ್ದವಿಗೆ
ಬೆಳೆಯುತ್ತಾ, ಬೆಳೆಯುತ್ತಾ
ನಿಯಂತ್ರಣ ಮೀರಿ
ಬಿಂದುವಿಗೆ-ಬಿಂದುಗಳು ಸೇರಿಕೊಂದು
ರೇಖೆಯಾಗಿ...

ಒಂದೊಮ್ಮೆ ಸರಳವಾಗಿ ಮತ್ತೊಮ್ಮೆ
ವಕ್ರವಾಗಿ
ಒಂದಿನಿತು ಅಂತರವನಿತ್ತು
ಅಕ್ಷರಗಳಾಗಿ ಒಲಿದು
ಒಮ್ಮೊಮ್ಮೆ ನಿರಂತರವಾಗಿ ಹರಿದಾಡಿ...
ಚಿತ್ರಕಾರನಿಗೆ ಕಲಾಕೃತಿಯಾಗಿ
ನಾಟ್ಯರಾಣಿಗೆ
ನಿರ್ವಾತದಲಿ ಚಲಿಸುವಾ ಸಂಜ್ಞೆಯಾಗಿ
ಕೈ-ಕಾಲುಗಳೊಡಗೂಡಿ ಚಲಿಸುವಾ
ನಾಟ್ಯವಾಗಿ...
ಸೃಜನಶೀಲ ಸಾಹಿತಿಗೆ ಕಲೆಯಾಗಿ ಒಲಿದಿತ್ತು
ಗೊತ್ತು-ಗುರಿಯಿಲ್ಲದವನ
ಮನವೆಂಬ ಪರದೆಯಲಿ ಕಪ್ಪು-ಕಪ್ಪಾಗಿ
ಮತಿಗೇ ಗ್ರಹಣ ಹಿಡಿದಿತ್ತು...