Tuesday, May 20, 2014

ಯಶೋಧರೆ

ಅಂತರಾಳದ
ಜಗುಲಿಯ ಮಧ್ಯದಲಿ
ನಂದಾದೀಪದ ಬೆಳಕು
ಎಣ್ಣೆ-ಬತ್ತಿ, ಹಣತೆಗಳ
ಹಂಗಿಲ್ಲದೇ
ಎಣೆಯಿಲ್ಲದೇ ಬೆಳಗುತಿದೆ

ಸಿದ್ಧಾರ್ಥ
ಮಧ್ಯರಾತ್ರಿಯಲಿ
ಎದ್ದು ಹೋದಾಗಿನಿಂದ.....
ಇರುಳಿನಲಿ
ಮರೆಯಾಗಿ ಹೋದವನ
ದಾರಿಯ ದಿಕ್ಕು-ದೆಸೆಯ ಊಹಿಸಿ
ಬಿಕ್ಕಳಿಸಿದ ಸದ್ದು
ಅವರು ಸಾಗಿದ ದಾರಿಗೆ
ತಡೆಯೊಡ್ಡದಿರಲೆಂದು ಹಗಲಿರುಳೂ
ದುಃಖ ತಡೆಹಿಡಿದು
ಗಂಟಲಿನ ನರಗಳು ಗಂಟುಗಟ್ಟಿವೆ
ಒಂದಿನಿತು ದಿನವಿತ್ತು
ಮರಳಿ ಬರುವನೆಂಬ ಆಶಾಕಿರಣ
ಕಾಲಚಕ್ರದಡಿಯಲಿ ನಲುಗಿ
ಜಗವನೆಲ್ಲಾ ಬೆಳಗಿದ ಬುದ್ಧನ ನೆನೆದು
ನಡುಹಗಲಿನಲ್ಲಿಯೇ
ಅಂಧಕಾರವ ನುಂಗಿರುವೆ.....
ಆದರೂ ಎನ್ನೆದೆಯಲ್ಲಿ ನಂದಾದೀಪ
ಬೆಳಗುತಿದೆ ಅನವರತ....

ಚರಮ-ಗೀತೆ

ಜಾತಸ್ಯ
ಮರಣಂ ಧೃವಂ
ಸಾಯಲಿಕ್ಕಾದರೂ ಬದುಕಬೇಕು
ತುರ್ತು ನಿಗಾ ಘಟಕದಲಿ
ಉನ್ಮತ್ತನಾಗಿ ಉಸಿರಾಡುತ್ತಿರುವ
ರೋಗಿಯೊಬ್ಬನ ಬಯಕೆ

ಕಾಲನ ಕರೆಯನ್ನು ಧಿಕ್ಕರಿಸಲು
ಗುಳಿಗೆ, ಮಾತ್ರೆಗಳು, ಸಿರಿಂಜು-ಸಲೈನುಗಳು
ಕೊಳೆತ ಅಂಗವನ್ನು ಕತ್ತರಿಸಿ
ಹೊಲೆಯುವಾ ಶಸ್ತ್ರ-ಉಪಕರಣಗಳ
ಪೈಪೋಟಿಯ ಸದ್ದು
ನಾಲ್ಕಾರು ಮುಖವಾಡಗಳ ನಡುವೆ
ಗೋಚರಿಸುವ ಜೋಡಿಕಣ್ಣುಗಳು
ಬದುಕಬೇಕೆಂಬ ಏಕಮೇವಾದ್ವಿತೀಯ ಆಸೆ
ಆಸ್ಪತ್ರೆಯ ಮಾಸಲು ಹಾಸಿಗೆಯನ್ನು
ಅಂಟಿಕೊಳ್ಳುವವರೆಗೆ
ಬದುಕಿದ್ದಾದರೂ ಏನು ???

ಅಗಣಿತ ಸಂಪತ್ತು ಎಣಿಸಲು ಯಂತ್ರಗಳು
ಗುಡಿಸಲು ವಾಸಿಗಳ ಒಕ್ಕಲೆಬ್ಬಿಸಿ
ನಿರ್ಮಿಸಿದ ನಿರ್ಜೀವ ಬಂಗಲೆಗಳು
ನಿತ್ಯ-ಹರಿದ್ವರ್ಣ ಫಲವತ್ತಾದ
ಭೂಮಿಯನ್ನು ಕಬಳಿಸಿ ಕಟ್ಟಿದ
ಹಸಿರು ಹಾಸಿನ ಫಾರ್ಮ್-ಹೌಸುಗಳು
ಸ್ನೇಹ, ಪ್ರೀತಿ ಬಾಂಧವ್ಯದ ಸೋಂಕಿಲ್ಲದ
ಸಂ-ಬಂಧಗಳು
ಎಲ್ಲವೂ ಲೆಕ್ಕಾಚಾರ
ಸರಳ ಅಂಕಗಣಿತವಾದರೂ
ಕೂಡಿಕೆ, ಹೂಡಿಕೆ ಗುಣಾಕಾರದಿ
ಕಳೆದು ಹೋದ ಬದುಕಿಗೆ ಅರ್ಥವಿಲ್ಲಾ....

ಯಾಕೋ ಈಗೀಗ ನೆನಪಾಗುತ್ತಿದೆ
ಎಣ್ಣೆ ಕಾಣದ ತಲೆಯನ್ನು ಕೆರೆಯುತ್ತಾ
ಮರ್ವಾದೆ ಎಂಬುದನು ಮುಚ್ಚಲು ಚಡ್ಡಿಯೊಂದಿದೆ
ಎಂಬುದನೂ ಅರಿಯದೇ
ಸೋರುತ್ತಿರುವ ಸಿಂಬಳವನ್ನೂ ಲೆಕ್ಕಿಸದೇ
ಐಸ್ ಕಟ್ಟಿ ಮಾರುತ್ತಾ ಅಲೆಯುವಾ
ಶಂಕ್ರಣ್ಣನ ಡಬ್ಬದಿಂದ ಸೋರುವಾ
ಕೆಂಪು ಹನಿಗಳನ್ನು ಬೊಗಸೆಯೊಡ್ಡಿ ಹಿಡಿದು ನೆಕ್ಕುವಾ
ಮರವನ್ನೇರಿ ಹುಣಸೆ ಕಿತ್ತು
ಓರಗೆಯವರ ಮನೆಯಿಂದ ಉಪ್ಪು, ಕಾರ, ಬೆಳ್ಳುಳ್ಳಿ ತಂದು
ಕುಟ್ಟಿ ಕಡ್ಡಿಗೆ ಅಂಟಿಸಿ ಸೊರ್ರ್-ಸೊರ್ರ್ ಸವಿದಿರುವ
ಕ್ಷಣಗಳು
ಮುಚ್ಚಿರುವ ಕಣ್ಣುಗಳ ಹಿಂದೆ ನಲಿದಾಡುತ್ತಿವೆ....

ಕುಶಲೋಪರಿಯ ನೆವದಲಿ
ಬಂದು ಮುತ್ತಿಕ್ಕಿರುವ ಬಂಧು-ಬಾಂಧವರ
ಪಿಸುಮಾತುಗಳು
ಭಗವಂತ ಎಲ್ಲವನೂ ಕೊಟ್ಟ ಇನ್ನೇನು ಬೇಕು
ಬದುಕು ನಾಲ್ಕಾರು ದಿನಗಳ ಸಂತೆ ಎನ್ನುವ ವೇದಾಂತ
ಹುಸಿ-ನಗುವ ಹೊತ್ತು ಹೊಗಳುವಾ
ಮುಖವಾಡಗಳು....
ಸಾಯಲಿರುವ ಆನೆಯ ಮೌಲ್ಯ ಕಟ್ಟುವಾ ನೋಟಗಳು
ಕಣ್ಣು ಮುಚ್ಚಿದರೇ ಮತ್ತದೇ ಬಾಲ್ಯದ ನೆನಪುಗಳು
ಸಾಯಲಿಕ್ಕಾದರೂ ಬದುಕಬೇಕು.......