Monday, December 10, 2012

ಸುಮ್ಮನೇ

ಏನು ಮಾಡ್ತಿದ್ದೀರಿ

ಆಗಂತುಕರೊಬ್ಬರ ಉವಾಚ
ಸುಮ್ಮನೇ ಕುಳಿತಿರುವೆ
ಎಂದೆನಾದರೂ
ಉತ್ತರಿಸುವಾಗ ತಡವರಿಸಿದೆ

ಮನಸಿಗೆ ಕಸಿವಿಸಿ
ಸುಮ್ಮನೆ ಕುಳಿತದ್ದು ಯಾರು...
ಜಡವಾದ ದೇಹ ಮಾತ್ರ
ಮಸನೆಂದೂ ಜಡವಾಗಲಿಲ್ಲ
ಶೂನ್ಯ ಕವಿದರೂ
ಹುಡುಕಾಟ ನಿಲ್ಲುವುದಿಲ್ಲ

ಹುಚ್ಚುಗುದುರೆಯನೇರಿ
ಲಂಗು ಲಗಾಮಿಲ್ಲದೇ
ಕಾಲ-ದೇಶಗಳ ಗಡಿಯನ್ನು ದಾಟಿ
ಅಖಿಲಾಂಡ ಬ್ರಹ್ಮಾಂಡವನು
ಕಲ್ಪನಾತೀತ ವೇಗದಲ್ಲಿ
ತಿರುಗುತ್ತಿರುತ್ತದೆ

ನಿರೀಕ್ಷೆ

ಏಕಾಂಗಿಯಾಗಿ

ಅನಂಗರ ನಡುವೆ
ಬಸ್ ಸ್ಟಾಪಿನಲ್ಲಿ ನಿಂತು
ಬೆದರಿದ ಹರಿಣದಂತೆ
ಅತ್ತಿತ್ತ ನೋಡುತ್ತಿರುವ
ಚಂಚಲಗಣ್ಣುಗಳ ಚೆಲುವೆ

ಆಗಾಗ ತಿರುಗಿ
ಉತ್ತರ ದಿಕ್ಕಿನೆಡೆಗೆ
ನಿರೀಕ್ಷೆಯ ನೋಟ...
ಬಾರದಿರುವ ಇನಿಯನ ನೆನೆದು
ಬರುವ ನಿಟ್ಟುಸಿರೇ ಉತ್ತರ

ಒಂಟಿ ಚೆಲುವೆಯ
ಸುತ್ತ ಸುಳಿದಾಡುವ
ಚಪಲ ಚೆನ್ನಿಗರಾಯರ
ಸಹಸ್ರಾಕ್ಷನಂತೆ ಇರಿಯುವ
ಕಾಮಾಲೆ ಕಣ್ಣುಗಳ ನೋಟ

ಬದುಕನ್ನೇ ಬೊಗಸೆಯಲಿಟ್ಟು
ಹನಿ ಪ್ರೀತಿಗಾಗಿ ಕನವರಿಸಿ
ಕಾಯುವುದೊಂದೇ ಭಾಗ್ಯ
ನುಂಗಬಾರದೇ ಅವನಿ
ಸೆಳೆಯಲಾರದೇ ಆಗಸ
ಸಾಕು ಈ ಕಾಯುವ ಕೆಲಸ

ಕಣ್ಣು-ಮುಚ್ಚಾಲೆ

ಸನಿಹದಲ್ಲೆಲ್ಲಿಯೂ

ಇರದ ನಲ್ಲೆಯ
ನೆನೆಯುತ
ವಿರಹದ ಬೇಗೆಯಂದ
ಕಣ್ಣು ಮುಚ್ಚಿದರೆ
ಕಣ್ಣ ರೆಪ್ಪೆಗಳ
ಅಡಿಯಿಂದ ಪ್ರತ್ಯಕ್ಷ್ಯ
ಆಗುವುದೇ ಅವಳು........

ಪ್ರೀತಿ ಶುರುವಾಯ್ತು
ಮೊದಲ ನೋಟದಿಂದ
ನೂರು ಮಾತುಗಳು
ಹೇಳದ
ಕಥೆಯನೆಲ್ಲವ ಹೇಳಿ
ಕಣ್ಣ ಸನ್ನೆಯಲ್ಲೇ
ಒಪ್ಪಿಕೊಂಡು, ಅಪ್ಪಿಕೊಂಡು

ಇರದಿದ್ದರೇನು
ಹತ್ತಿರ
ಹೃದಯದ ಚಿಪ್ಪಿನೊಳಗೆ
ಸವಿನೆನಪುಗಳ ಬಂಧಿಸಿ
ಮತ್ತೆ ನಲ್ಲೆಯ
ಜೊತೆಯಲ್ಲಿ
ಕಣ್ಣಾಮುಚ್ಚಾಲೆಯಾಟ

ವಿಪರ್ಯಾಸ

ಪುಸ್ತಕದ

ಕೊನೆಯ ಪುಟದಲ್ಲಿ
ರಟ್ಟಿನ ಮೇಲೆ
ಬರೆದಿರುವ ಅವಳ ಹೆಸರು
ಹಲವು ಬಾರಿ ಬರೆದು
ಅವರಿವರು ನೋಡಿಯಾರು
ಎಂಬ ಅಳುಕಿನಲಿ
ಕಾಟು, ಗೀಟು ಹೊಡೆದು...
ಅಳುಕಿಸಲೆತ್ನಿಸಿ
ಅದರಲ್ಲಿಯೇ
ನವ್ಯಕಲೆಯನ್ನೂ ಮೀರಿಸುವ
ಚಿತ್ರವನೂ ಬಿಡಿಸಿ
ಅಕ್ಕ-ಪಕ್ಕ
ಯಾರೂ ಇಲ್ಲದಾಗ
ಮನದಲ್ಲಿ ಸಂಚಲನ ಮೂಡಿಸಿದ
ಚಂಚಲೆಯ ನೆನೆಯುತಾ
ಏಕಾಗ್ರಚಿತ್ತದಿಂದ
ರವಿವರ್ಮನಂತೆ ಅವಳ
ಚಿತ್ರವನೂ ಬಿಡಿಸಿ

ಕಾಲೇಜು ಕಟ್ಟೆಯನು
ಹಲವಾರು ಸಲ ಎಡವಿ
ಬಾಳ ಕಟ್ಟಿಕೊಳ್ಳುವ
ಹಂಬಲದಲಿ ಹಗಲಿರುಳು
ಅಲೆದಾಡಿ
ಹಸಿವು-ಬಾಯಾರಿಕೆಗಳ
ಹೊತ್ತು ತಿರುಗಿ
ಮರಳಿ ಗೂಡಿಗೆ ಬಂದಾಗ
ಕಿಲುಬು ಕಾಸು ಕಾಣದಿರುವಾಗ
ಹಗಲಿರುಳೂ ಉರುಹೊಡೆದು
ಗಳಿಸಿದ ಪದವಿಯನೆ ನೆನೆದು
ಹಳೆಯ ಪುಸ್ತಕಗಳನು
ರದ್ದಿ ಹಾಕುವ ಸಮಯದಿ
ಮತ್ತೆ ಪ್ರತ್ಯಕ್ಷವಾಯಿತು
ಕೊನೆಯ ಪುಟ
ಕಣ್ಮುಂದೆ ಮೂಡಿದ
ಅವಳು
ಪಿಸುಮಾತಿನಲಿ ಉಲಿದಳು
ಗೆಳೆಯಾ ಮರೆಯದಿರು
ಇದು ಬದುಕಿನ ಮೊದಲ ಪುಟ

ಬೆಳಕು

ಕಂಬಗಳ ನಡುವೆ

ತೂರಿ ಬರಿತಿರುವ
ಹಣತೆಯ ಬೆಳಕು
ಸೆಳೆಯುತ್ತಿದೆ

ನೆರಳುಗಳ ಮಧ್ಯದಲಿ
ಬೆಳಕಿನ ದಾರಿಯಲಿ
ಸಾಗುತಿರುವೆ...
ಗಮ್ಯವ ಹುಡುಕುತ್ತಾ

ಬೆಳಕು ಬೇಕು
ಮುಂದೆ ಸಾಗಲು
ನೆರಳಿನಾಟವ ಮೀರಿ
ಮುನ್ನಡೆಯಬೇಕು

ಸೂರಿನಡಿಯಿಂದ
ಪಾರಾಗುವ ಹಂಬಲ
ತೆರೆದ ಆಗಸದಿ ಮಿಣುಕುವ
ನಕ್ಷತ್ರಗಳ ಬೆಳಕಲಿ
ದಾರಿ ಬೆಳಗಬೇಕು