Saturday, April 7, 2012

ಸಖೀಗೀತ

ಸಖೀ....
ಕಣ್ಣ ಮುಂದೆ
ನೀನು ಕುಳಿತಿದ್ದರೂ
ಏನೋ ಕಳೆದುಕೊಂಡ ಭಾವ

ನೂರು ಮಾತುಗಳ
ಹೇಳುತಲಿದ್ದರೂ
ಮನದಲ್ಲಿ ಏನೋ
ಉಳಿದಿರುವ ಭಾವ

ನಿನ್ನ ಚಂಚಲ
ನಯನದಲಿ ತೂರಿ
ಹೃದಯದಾಳಕ್ಕಿಳಿದು
ಇರುವದೆಲ್ಲವನೂ ಹೇಳುವಾ ಬಯಕೆ

ಏನು ಕೊರತೆ
ಆವ ಬಯಕೆ ಅರಿಯಲಾರೆ ನಾ
ಲೀನವಾಗಬೇಕು ನಿನ್ನೊಳಗೆ
ನಾ ಕಳೆದು ಹೋಗಬೇಕು

ಮನದಲೇನೋ ಕಳವಳ
ಮಾಯಾಮೃಗದಂತೆ ಕಳೆದು
ಹೋದೀಯಾ ನೀನು ಎಂಬ ಭಾವ
ಬಾರೇ ಗೆಳತಿ, ಬಾರೇ
ಸೇರಿಕೋ ನೀ ಎನ್ನೆದೆಯ ಗೂಡ.......

ಪ್ರಸವ

ಪ್ರಕೃತಿ ನಳನಳಿಸಲು
ಕಾಲ ಬೇಕು, ಕಾಯ ಬೇಕು
ಪುರುಷನೋ
ಸದಾಕಾಲ ಸ್ರವಿಸುವವನು

ಮನೋರತಿಯಲ್ಲಿ
ನಮ್ಮಿಬ್ಬರ ಸಮಾಗಮ
ಅವಳು ಸ್ರವಿಸುವವರೆಗೆ
ನಾನೇನೂ ಸೃಷ್ಟಿಸಲಾರೆ

ಭಾವನೆಗಳ ಬೀಜವೆರಚಲು
ಅನುಗಾಲ ಸಿದ್ಧ ನಾನು
ಭೂಮಿ ಬೇಕು ಮೊಳಕೆಯೊಡೆಯಲು
ಭಾವಗಳು ಪದಗಳಾಗಲು

ಭಾವ ಬೀಜ ಎರಚುವ
ಕ್ಷಣವೇ ಬೇಕು ಅವಳ ಸಮಾಗಮ
ಏಕಕಾಲದ ನಾವಿಬ್ಬರೂ ಸ್ರವಿಸಿದರೇ
ಪ್ರಸವವೇದನೆ ಅವಳಿಗೆ
ಸೃಷ್ಟಿಯಾಗುವುದೊಂದು ಭಾವಬಿಂದು.....

ಸಖೀಗೀತ

ಸಖೀ....
ನಿನ್ನ ಕಂಗಳಲಿ
ನೋಡುತಿದ್ದರೇ
ಭಾವ ಲೋಕದಲಿ
ಕಳೆದು ಹೋಗುವೆ ನಾನು

ಮನದಾಳದಲಿ ಮೂಡುವ
ನೂರು ಭಾವಗಳ ಪೋಣಿಸಿ
ಅಲ್ಲೊಂದು ಇಲ್ಲೊಂದು
ಪದಗಳನು ಜೋಡಿಸಿ
ಕವಿತೆಯನು ಬರೆಯುವೆ ನಾ....

ಮಂದಗಮನೆಯಾಗಿ ಬರುವ
ನಲ್ಲೆಯಾ ಸೊಗಸದು
ಮಲ್ಲಿಗೆನೂ ಮೀರಿಸಿದೆ
ಮಂದಹಾಸವು ಅರಳಿದೆ
ಪರಿಮಳದ ತೆರದಿ

ಬಾಡದಿರಲೆಂದೂ
ನೀ ಮುಡಿದ ಮಲ್ಲಿಗೆ
ಮುಸುಕಾಗದಿರಲೀ
ನಿನ್ನ ಮುಗುಳ್ನಗೆ.......

ಸಖೀಗೀತ

ಮನದಾಳದಲ್ಲಿ
ಮೌನವೇ
ಹಾಸಿ-ಹೊದ್ದು ಮಲಗಿದೆ

ಹಾಯ್, ಹಲೋ, ಹೇಗಿದ್ದೀರಿ
ಬಾಯಿಮಾತುಗಳೆಲ್ಲ
ಕಾಟಾಚಾರ ಕಳೆಯುತ್ತಿವೆ

ಮುಖದಲ್ಲಿ
ಮೂಡಿರುವ ಮಂದಹಾಸ
ಕುಂದಿಲ್ಲದಂತೆ ಬೆಳಗುತ್ತಿದೆ

ಮುಗುಳ್ನಗುವಿನ ಕೊಂಕು ಅರಸಿ
ಅಂತರಾಳದಿ
ಇಣುಕಿ ನೋಡಲು ಅವಳಿಲ್ಲ

ಕಂಗಳು ಅರಸುತ್ತಿವೆ
ಅವರಿವರ ನೆರಳಿನಲ್ಲಿ
ಅವಳ ಪ್ರತಿಬಿಂಬವನು

ನೆನಪಿನಂಗಳದಿ
ಅವಳು ಇರುವುದೇನೋ
ಸಮಾಧಾನ......

ಹಾಗೇ ಸುಮ್ಮನೇ.....

ಅದು ಹಾಗೆಯೇ...
ಮನದೊಳಗೆ ಅಡಗಿರುವ
ಅವಳ ಪ್ರತಿಬಿಂಬ
ಕಣ್ಮುಂದೆ ಕಾಣಲು
ಬಯಸಿ
ಕಾದು ಕುಳಿತಿದ್ದಷ್ಟೇ ಬಂತು
ಬರಲಿಲ್ಲ ಅವಳು

ಅತ್ತಿತ್ತ ಸುತ್ತಮುತ್ತ
ಸುಳಿದಾಡಿದರೂ
ನನ್ನತ್ತ ಬರಲಾರದೇ
ತೊಳಲಾಡುವ ಅವಳು
ಅವಳು ಬರದಿದ್ದರೂ
ನಿರೀಕ್ಷೆಯಲಿ
ಪ್ರತಿ ಕ್ಷಣವನ್ನೂ
ಯುಗಗಳಾಗಿಸುವ
ನನ್ನ ಪರಿಪಾಟ....

ಅದು ಹಾಗೆಯೇ
ಯುಗಾಂತರದಿಂದ
ನಡೆದು ಬಂದಿದೆ
ಕಾಲವನು ಕರಗಿಸುತ್ತಾ
ಅವಳಿಗಾಗಿ
ಕಾಯುತ್ತ ಕುಳಿತಾಗ
ಅವಳೆಂದಿಗೂ ಬರುವದಿಲ್ಲ
ಅವಳ ನೆನಪುಗಳು
ತೊಲಗೆಂದರೂ
ಮನದಾಳದಿಂದ ಕರಗುವದಿಲ್ಲ....

ಸಖೀಗೀತ

ಸಖೀ....
ಏನು ಬೇಕು
ಏಕೆ ಮಾತಾಡಬೇಕು
ಯಾವುದಕ್ಕೂ
ಉತ್ತರವಿಲ್ಲ ಎನ್ನಲಿ
ಸ್ವಚ್ಛಂದ ಆಗಸದ ತೆರದಿ
ಅಂತರಾಳ
ಬರಿದೋ ಬರಿದು

ಹೇಳಲೇ ಬೇಕು
ಎಂಬ ತುಡಿತ
ಗಂಟಲಿನಾಳದಲ್ಲಿ
ಸಿಲುಕಿದ ಮಾತುಗಳು
ಮನದಲ್ಲಿ ಅಲೆ-ಅಲೆಯಾಗಿ
ಮರುಕಳಿಸುತ್ತಿರುವ
ಭಾವಬಿಂದುಗಳಿಗೆ
ಪದಗಳು ಸಿಗುತಿಲ್ಲ

ನೀನು ಎದುರಾದರೆ
ಕಣ್ಣುಗಳಲ್ಲಿ
ಬರೀ ಯಾಚನೆ
ನೀನು ಮರೆಯಾದರೇ
ಶೂನ್ಯದತ್ತ ನೋಟ
ಕಣ್ನುಚ್ಚಿ ಕುಳಿತಾಗ
ಕಾಣುವ ಚಂದ್ರಬಿಂಬ
ಅದೊಂದೇ ಸಮಾಧಾನ..... :)

ಪ್ರಕೃತಿ

ಬೆಟ್ಟದ ಮೇಲೆ
ಕಿರೀಟ ತುರಾಯಿಯಂತೆ
ಸಾಲು ಸಾಲು
ಮರಗಳ ತೋಪು
ಮುಂಜಾನೆ, ಮಧ್ಯಾಹ್ನ
ಸಂಜೆ ಹೊತ್ತಿನಲ್ಲಿ
ಸೂರ್ಯರಶ್ಮಿಯು
ಗಿಡ-ಮರಗಳ ರೆಂಬೆಕೊಂಬೆಗಳು
ದಟ್ಟಹಸಿರಿನ ನಡುವೆ
ತೂರಿ ಬುರುವಾಗ
ಮೂಡುವ ಸಪ್ತವರ್ಣದ ಚಿತ್ರ

ಅವರು ಬಂದರು
ಮೊದ-ಮೊದಲು
ಅಲ್ಲಲ್ಲಿ ಮುರಿದು ಬಿದ್ದ
ರೆಂಬೆ-ಕೊಂಬೆಗಳ ಎತ್ತಿಕೊಂಡರು
ಅವರಿವರ ಮನೆಯ ಪಡಸಾಲೆಯಲ್ಲಿ
ಕುರ್ಚಿ-ಮಂಚಗಳು
ಮೋಜು ಮಾಡಲು ಮೇಜವಾನಿಗಳು
ಅಲಂಕರಿಸಿದವು
ಉಳಿದ ತುಂಡುಗಳೆಲ್ಲ
ಅನ್ನ ಬೇಯಿಸಲು ಬೂದಿಯಾದವು

ಮತ್ತೊಬ್ಬರು
ಬೆಟ್ಟದ ಮೇಲೆ ಇರುವ
ದೇವಳಕೆ ಸಾಗುವ ಕಾಲು ದಾರಿಯಲ್ಲಿ
ನೆರಳಾಗಿದ್ದ ಮರಗಳನು
ಟಾರು ರಸ್ತೆಯನು ಮಾಡಲು
ಭಕ್ತಿಯಿಂದ ಕತ್ತರಿಸಿದರು
ಕೆಲಕಾಲ ಹಕ್ಕಿಪಿಕ್ಕಿಗಳೆಲ್ಲ
ಮೌನವಾಗಿ ರೋದಿಸಿದವು
ಮತ್ತೆ ಮಾನವನ ಆಕ್ರಮಣಕೆ
ಭಯಬಿದ್ದು ಬೇರೆ ನೆಲೆ
ಅರಸುತ್ತ ಮರೆಯಾದವು

ಬೆಟ್ಟದ ದೇವರ ಮಹಿಯೆನು
ಸಾರಲೊಬ್ಬ ಪೂಜಾರಿ
ತನಗೊಂದು ಗೂಡು ಮಾಡಲು
ಬೋಳಿಸಿದ ಕೆಲವು ಮರಗಳನು
ಮಂತ್ರಿ-ಮಹೋದಯರು
ಭಟ್ಟಂಗಿಗಳ ಮಾತು ಕೇಳಿ
ಮಾಡಿದರು
ಚಂಡಿಕಾ ಹೋಮ
ಮರಗಳೆಲ್ಲವೂ ಆಹುತಿಯಾದವು
ಬಯಲಾಯಿತು ಬೆಟ್ಟ
ಪುಣ್ಯ ಕ್ಷೇತ್ರವನು ಜಗಕೆಲ್ಲ
ತೋರಿಸಲು ಸಾರಿದರು ಕೋಟಿ-ಕೋಟಿ

ದರಕಾರವಿಲ್ಲದ ಸರಕಾರಿ ಕೆಲಸ
ಕಾಮಗಾರಿಯಲಿ
ಎಲ್ಲೋ ಕೇಳಿದ ಟಣ್-ಟಣ್ ಸದ್ದು
ಮಂತ್ರಿಮಹೋದಯರ
ಚಮಚಾಗಳಿಗೆ ಗಣಿಗಾರಿಕೆಯ ಹಸಿವು
ಬೆತ್ತಲಾದ ಬೆಟ್ಟದಾ
ಬುಡಕ್ಕೇ ಗುದ್ದಲಿ-ಸಲಿಕೆ
ಪಿಕಾಸುಗಳ ಪೂಜೆ
ಜೆಸಿಬಿ ಯಂತ್ರಗಳ ಸದ್ದು
ದೂರದಿಂದ ಕೇಳಿಸುತ್ತಿದೆ
ಪೂಜೆಯ ಘಂಟೆ
ಯಂತ್ರರಾಕ್ಷಸರ ಸದ್ದು
ಯಾರಿಗೂ ಕೇಳುತ್ತಿಲ್ಲ
ಪ್ರಕೃತಿಯ ನರಳಾಟ......

ಸಖೀಗೀತ

ಸಖೀ....
ನೀ ಎನ್ನ ಪಕ್ಕದಲ್ಲಿಯೇ
ಕುಳಿತಿದ್ದರೂ
ಎಳೆದು ಎದೆಗಪ್ಪಿಕೊಂಡು
ಎದೆಯಾಳದಲ್ಲಿ
ಹುದುಗಿಸಿಕೊಳ್ಳುವಾಸೆ ಎನಗೆ

ಅಂತರಾಳದ
ಕಣ-ಕಣದಲ್ಲಿಯೂ
ನೀನು ತುಂಬಿದ್ದರೂ
ಅರೆಕ್ಷಣವೂ ಕಾಣದಿರೆ
ಕಳೆದುಹೋದೀಯ
ಎಂಬ ಕಳವಳವು ಮನಕೆ

ಹೃದಯದಲಿ ಮಿಡಿಯುವ
ಒಂದೊಂದು ಬಡಿತವೂ
ನಿನ್ನ ಹೆಸರು ನುಡಿಯುವುದು
ನಿನ್ನುಸಿರಿನಲ್ಲಿಯೇ
ಮಿಳಿತಗೊಳ್ಳುವ ತವಕ ಮೂಡುವುದು