Sunday, August 22, 2010

ಚಲನೆ

ಕೆರೆಯ ದಂಡೆ ಮೇಲೆ
ತೇಕುತ್ತ-ತೆವಳುತ್ತ
ಅಡಿಗಡಿಗೂ ಎಡವುತ್ತ
ನಡೆವುದನ್ನೇ ಮರೆತಂತೆ
ಹೆಜ್ಜೆಗಳ ಎಣಿಸುತ್ತ
ನಡೆಯುತ್ತಿರುವೆ ನಾನು
ಸಂಜೆಯ ನಡೆದಾಟಕೆ
ನಡೆದಾಡುವ ನಾಟಕಕೆ...
ಮೈಮನಗಳಿಗೆ ದಣಿವಾಗಿಸಿದ
ದೈನಂದಿನ ವ್ಯವಹಾರ
ಜಂಝಡಗಳನು,
ಮನಸಲ್ಲೇ ಮೆಲುಕು ಹಾಕುತ್ತ
ಹಿತ-ಸುಖಗಳನು ಮನದಲ್ಲಿ
ತೂರಿಸುತ
ನೋವು ಅಹಿತಗಳ
ತಲೆಯಿಂದಾಚೆಗೆ ತೂರಿ...
ಮತ್ತೆ ಮತ್ತೆ ಮನದಾಳದಿ
ಪುನರಾವಲೋಕನ ಗೈಯುತ್ತ
ಆತ್ಮವನು ಪುನಶ್ಚೇತನಗೊಳಿಸಲು
ಹೃನ್ಮನಗಳಿಗೆ ನವೋಲ್ಲಾಸ ತುಂಬಿ
ಸಂಸಾರ ಸಾಗರದಿ
ಮುಳುಗುತ್ತ, ತೇಲುತ್ತ ಮುನ್ನಡೆಯುವದೇ
ಜೀವನದ ನಡಿಗೆ
A Little Death In Dixie

Saturday, August 21, 2010

ತೃಷೆ....

ಐಷಾರಾಮಿ ಸೌಕರ್ಯಗಳ
ಸುಖವನ್ನು ಅನುಭವಿಸುತ್ತ
ಗಳಿಸಿದ್ದನ್ನೆಲ್ಲಾ ಉಳಿಸಿಕೊಳ್ಳಲು
ಹಗಲಿರುಳು ಶ್ರಮಿಸುತ್ತಾ....

ಹೊಟ್ಟೆಬಿರಿಯುವಷ್ಟು ತಿಂದು
ಬೀದಿಬದಿಯಲಿ ಬೀಸಾಕಿದ
ದೀನದಲಿತರ ತುತ್ತು ಕೂಳು...
ನೀರು-ಬೀರುಗಳು, ಪೆಪ್ಸಿ-ಕೋಲಾಗಳು
ಸೋಡಾ ಬೆರೆಸಿದ ಪರದೇಶಿ ಬ್ರ್ಯಾಂಡಿನ
ವಿಧ ವಿಧ ಪೇಯಗಳು
ಕಂಠ ಮಟ್ಟದವರೆಗೂ ಕುಡಿದು
ಕುಪ್ಪಳಿಸುವವರ ಕಾಲಸಂದುಗಳಲ್ಲಿ
ಪ್ರವಾಹದಂತೆ ಹರಿಯುತ್ತ
ಬಾಯಾರಿ, ಬಳಲಿ
ಹನಿ ನೀರಿಗೂ ಹಪಹಪಿಸುತ್ತ
ಆಜನ್ಮವೂ ತೀರದ ಬಡವರ ತೃಷೆ....

ಕೊಳೆಗೇರಿ ಪಕ್ಕದಲಿ
ಹರಿಯುವ ಚರಂಡಿ ನೀರಿನಲಿ
ಸಮ್ಮಿಳಿತಗೊಂಡು

ಹರಿಯುತಿರುವುದು ಅನವರತ
ಬಡವ-ಬಲ್ಲಿದರ ಬೇಧವನೂ ಮೀರಿ
ದೀನ-ದಲಿತರ, ಬಡವರ
ಕಣ್ಣೀರು, ಬೆವರುಗಳು ಸೇರಿ....

Wednesday, August 18, 2010

ಆಲದ ಮರ

ಆಕಾಶದೆತ್ತರಕೆ ಬೆಳೆದ
ಆಲದ ಮರ
ನಮ್ಮ ಸಂಸ್ಕೃತಿ, ಪರಂಪರೆ
ಸುತ್ತಲೂ ನೇತಾಡುತ್ತಿರುವ
ಬಿಳಲುಗಳು
ಪರಂಪರೆಯ ಹೆಸರಿನಲ್ಲಿ
ಪಸರಿಸಿರುವ
ಕಂದಾಚಾರ, ಮೂಢನಂಬಿಕೆಗಳು
ಮನವು ತೆರೆದುಕೊಳ್ಳುವುದು
ದಟ್ಟ ಹಸಿರೆಲೆಗಳ ಮಧ್ಯದಿಂದ
ಅಲ್ಲಲ್ಲಿ ತೂರಿಬರುತ್ತಿರುವ
ಸೂರ್ಯ ರಶ್ಮಿಯೆಡೆಗೆ
ಹೊಸತನದ ಜ್ಞಾನೋದಯಕೆ

ನಮ್ಮ ಪೂರ್ವಿಕರು ನೆಟ್ಟ
ಆಲದ ಮರ
ನಂಬಿಕೆಗಳ ನೀರುಣಿಸಿ

ತಾತ, ಮುತ್ತಾತಂದಿರು
ಬೆಳೆದಿದೆ ಇಂದು
ಭೂಮಿಯ ಉದ್ದಗಲಕೆ
ನಮಗದೇ ಆಲಯ, ಆಸರೆ
ನೂರು ನಿರ್ಭಂದಗಳು
ಮರದಾಚೆ ಹೋಗಲು
ಜ್ಞಾನದಾ ಬೆಳಕು
ಮೂಡುವುದೆಂತು ಮನದಿ
ನಮ್ಮ ತನು-ಮನ
ಹೃದಯಗಳು ತೆರೆದುಕೊಳ್ಳದೆ.....

Thursday, August 12, 2010

ಹೂ...


ಯಾರದೋ ಮುಡಿಯಿಂದ
ಇನ್ಯಾರದೋ ಕೈಯಿಂದ
ದಾರಿಯಲ್ಲಿ
ಜಾರಿ ಬಿದ್ದಿರುವ ಹೂವು
ಅವರಿವರ ಕಾಲ್ತುಳಿತಕ್ಕೆ
ಸಿಲುಕಿ
ನಶಿಸಿಹೋಗುತ್ತಿದೆ



ಬೀದಿ ಬದಿಯಲ್ಲಿ
ಕೊಳೆಗೇರಿ ಮಕ್ಕಳು
ಸಿರಿವಂತರ ಮನೆಯ
ತುತ್ತು ಕೂಳಿಗಾಗಿ, ಉಂಬಳಿಗಾಗಿ
ಹಂಬಲಿಸಿ ದುಡಿಯುತ್ತ
ಕಳೆದುಕೊಂಡಿರುವ
ಬಾಲ್ಯದ ಹಾಗೆ

ಎತ್ತಿ ಹಾಕುವುದಿಲ್ಲ ಯಾರೂ
ಅದನು ರಸ್ತೆ ಬದಿಗೆ
ಯಾರ ಮುಡಿಗೆ ಸೇರಿದೆಯೋ
ಪೂಜೆಗೆಂದು ಕೊಂಡೊಯ್ಯುವಾಗ
ಕೈಜಾರಿ ಬಿದ್ದರೆ, ಆವ ದೇವರ ಅಡಿಗೆ
ಸಲ್ಲಬೇಕಾತ್ತೋ
ಯಾರೂ ಅರಿಯರು