Sunday, June 11, 2017

ಬಿಂಬ

ಅಪರಿಚಿತರನ್ನು
ಹುಡುಕಬೇಕಿದೆ ಈಗ
ಪೂರ್ವಾಪರಗಳನ್ನು
ಅರಿಯದೇ
ಎನ್ನ ಪ್ರತಿಬಿಂಬವನು
ಇದ್ದದ್ದು ಇದ್ದ ಹಾಗೆ
ಬಿಡಿಸುವಾ
ಅನಾಮಧೇಯರನ್ನು
ಹುಡುಕಬೇಕಿದೆ

ನಾಲ್ಕಾರು
ಮಾತುಗಳಾಡಿ
ಎನ್ನ ತುಮುಲ, ತರಲೆ
ತೆವಲು, ತಳಮಳಗಳ
ಮಳೆಯನ್ನು ಸುರಿಸಿ
ಎಲ್ಲಿಯೋ
ಅವಿತಿರುವ ಎನ್ನ
ನಿಜರೂಪವ ತೋರಿ
ಬಿಂಬವ ಬಿಡಿಸಲು
ಕೋರಬೇಕಿದೆ

ಬಲ್ಲವರು, ಪರಿಚಿತರು
ತಮಗೆ ಗೊತ್ತಿರುವಂತೆ
ಗೊತ್ತಿರಬಹುದೆಂಬ ಭಾವಗಳ
ಪೂರ್ವಾಗ್ರಹ ಪೀಡಿತ
ಬಣ್ಣ ಬಳಿದು
ಅವರಿಗಿಷ್ಟವಾದಂತೆ
ಎನ್ನ ಬಿಂಬವನು ಬಿಡಿಸಿ
ಮೂಲ ಬಣ್ಣವನ್ನೇ
ಮರೆಮಾಚಿದ್ದಾರೆ
ಅವರಿವರು ಬಿಡಿಸಿರುವ
ಚಿತ್ರದಲಿ
ನನ್ನ ನಾನೇ ಹುಡುಕಬೇಕಿದೆ

ಅವ್ಯಕ್ತ

ಭೋರ್ಗರೆಯುತ್ತಾ ಬಂದು
ದಡದಲ್ಲಿರುವಾ ಬಂಡೆಗೆ ಅಪ್ಪಳಿಸಿದಾ
ಅಲೆಯ ಬಿಂದುವೊಂದರಲಿ 
ಸೂರ್ಯರಶ್ಮಿ
ಕಾಮನಬಿಲ್ಲು ಬಿತ್ತಿದ್ದು ವಿಸ್ಮಯವೆನಲ್ಲಾ


ತನ್ನೊಡಲ ಸುತ್ತ ತಾನೇ ಸುತ್ತುವ ಭೂಮಿ
ಹಠಬಿಡದೆ ಹಗಲಿರುಳು ದಡವ ಮುತ್ತಿಕ್ಕುವ ಶರಧಿ
ಸೂರ್ಯ-ಚಂದ್ರ ತಾರೆಗಳಿಗೆ ಆಶ್ರಯವಿತ್ತು
ಭೂಮಿ-ಶರಧಿಗಳ ಮೇಲೆ ವ್ಯಾಪಿಸಿರುವ ಅಗಾಧ ಆಗಸವ
ಬೆಸೆದಿರುವ ಕಾಮನಬಿಲ್ಲನು ನೋಡಿ
ಅಲ್ಲಿಯೇ ವಿಹರಿಸುತ್ತಿದ್ದ ಯುಗಳ ಜೋಡಿ
ಕಣ್ಣ ನೋಟದಲ್ಲಿಯೇ ನೂರು-ಸಹಸ್ರ ವರ್ಣದ
ಕನಸುಗಳ ಕನವರಿಸಿದ್ದೂ ವಿಸ್ಮಯವೆನಲ್ಲಾ

ವಿಸ್ಮಯ ಆವರಿಸಿದುದು
ತದೇಕಚಿತ್ತನಾಗಿ ವಿಸ್ಮೃತಿಯಲಿ ಕುಳಿತ
ಕುರುಚಲು ಗಡ್ಡದ ಕವಿಗೆ
ಬಂಡೆಗೆ ಅಪ್ಪಳಿಸಿದ ಅಲೆಯ ಬಿಂದುವಿನ
ಒಡಲಿನಲಿ ಕಾಮನಬಿಲ್ಲು ಹೇಗೆ ಬಂತು
ಮುತ್ತು-ರತ್ನಗಳಂತೆ ಕಡಲಾಳದಲಿ
ಕಾಮನಬಿಲ್ಲುಗಳು ಅಡಗಿರಬಹುದಾ
ಅಥವಾ
ಸೂರ್ಯರಶ್ಮಿ ನಭೋಮಂಡಲದಿಂದ ತಂದು
ಬಿಂದುವಿನೊಳಗೆ ಬಿತ್ತಿತಾ
ಶರಧಿಯ ಅಲೆಯೊಂದರ ಬಿಂದು
ಧಗಧಗನೆ ಉರಿಯುತ್ತ ಬೆಳಕು ನೀಡುವ
ಭಾಸ್ಕರನ ಒಡಲಿನಿಂದ ಹೊಮ್ಮಿದ ಕಿರಣ
ತೃಣಮಾತ್ರ ಇದ್ದರೂ
ಕ್ಷಣಮಾತ್ರದಿ ಕಾಮನಬಿಲ್ಲು ಅರಳಿಸಿದ್ದು
ವಿಸ್ಮಯವೋ ವಿಸ್ಮಯ 

ನನಗನಿಸಿದ್ದು

ತೆರೆಯ ಮರೆಯಲ್ಲಿ 
ಮೆರೆದಾಡುತ್ತಿರುವ ನೂರು ಭಾವಗಳು
ಅಂತರಂಗದಲಿ
ಹಾರಾಡುತ್ತಿರುವ ಬಣ್ಣ-ಬಣ್ಣದ ಚಿಟ್ಟೆಗಳು


ಎಲ್ಲಿ ಬಳಿಯಲಿ ಎದೆಯ ಬಣ್ಣ
ಎಲ್ಲಿ ಎರಚಲಿ ಕನಸುಗಳ ಬೀಜ
ಎಲ್ಲಿ ದಹಿಸಲಿ ಕಷ್ಟ-ನೋವು-ಸಂಕಟಗಳ
ಕಳೇಬರವ

ಎತ್ತ ಇಣುಕಿ ನೋಡಿದರೂ
ಕಾಣುವುದೆಲ್ಲ ಬಂಜರು
ಕನಸು ಮೊಳಕೆಯೊಡೆಯಲಾರದ
ಸಂಕಟಗಳ ಕಳೇಬರ ದಹಿಸಲಾರದ
ರಣಭೂಮಿಯೇ ಎಲ್ಲಾ

ಇಳಿಸಲಾರದೆ ಹೊರೆಯ
ಹೊತ್ತು ಸಾಗುತ್ತಿದ್ದೇನೆ
ಗೊತ್ತು ಗುರಿಯಿಲ್ಲದೆಡೆಗೆ
ಬದುಕು ಜಟಕಾ ಬಂಡಿ
ವಿಧಿಯಾದರ ಸಾಹೇಬ......

ಕನವರಿಕೆ.....

ಕನಸುಗಳ ವ್ಯವಹಾರ
ನನಗೆ ಬಾಲ್ಯದಿಂದಲೇ ಬಂದಿದ್ದು
ಮಣ್ಣಿನ ಮನೆಯ 
ತೊಲೆಗಳ ಕೆಳಗೆ, ನಾಗೊಂದಿಯ ಮೇಲೆ
ಸಾಲು-ಸಾಲಾಗಿ ಅಲಂಕರಿಸಿದ
ದೇವರು ದಿಂಡರು, ಮಹಾತ್ಮರ ಫೋಟೋಗಳು
ಹಿರಿಯರು ಹೇಳುತ್ತಿದ್ದ
ರಮ್ಯ-ರಮಣೀಯ ರೋಮಾಂಚಕ
ನೀತಿಕಥೆಗಳು, ಪುರಾಣ-ಭಾಗವತ
ಕಾಗಕ್ಕ-ಗುಬ್ಬಕ್ಕನ ಕಥೆಗಳು
ಇವುಗಳನ್ನೆಲ್ಲಾ
ಹಸಿಗೋಡೆಯಂಥಹ ನನ್ನ ಅಂತಃಪಟಲದ ಮೇಲೆ
ಅಚ್ಹೊತ್ತಿದಂತೆ ಹೇಳುತ್ತಾ
ಕಂಡು ಕಾಣದ
ನಾಳೆಗಳ ಕನಸು ಬಿತ್ತಿದರು.....


ನಂತರ ನೋಡಿ ಶುರುವಾಗಿದ್ದು
ಬರೀ ವ್ಯವಹಾರ-ವ್ಯಾಪಾರ
ದೊಡ್ಡೋನಾದಮೇಲೆ
ನೀನು ಹಿಂಗಾಗಬೇಕು, ಹಂಗಾಗಬೇಕು
ಹೆಂಗೆಂಗೋ ಆಗಬೇಕು
ನನ್ನತನವೆಂಬುದರ ಬೆಲೆ ತೆತ್ತು
ಕನಸುಗಳ ಕೊಂಡು
ಮಸ್ತಕದ ಮಾಡಿಗೆ ತುರುಕಿದ್ದೇ-ತುರುಕಿದ್ದು
ಅವರು ಮಾರಿದರೋ, ನಾನೇ ಕೊಂಡುಕೊಂಡೆನೋ
ಇಂದಿಗೂ ಅರಿವಾಗದು......

ಈ ಕನಸುಗಳ ವ್ಯಾಪಾರಸ್ಥರಿಗೆ
ಮಾನವೀಯತೆ, ಸಂಸ್ಕಾರ, ಪ್ರೀತಿ
ಇಂಥಾದ್ದೆಲ್ಲಾ ಅಲರ್ಜಿಯಿರಬೇಕು
ಅಂಥಾ ಸರಕು
ಅವರೆಂದಿಗೂ ಮಾರಲಿಲ್ಲ
ನಾನು ಅಷ್ಟೇ
ಅಂತಹುದನ್ನು ಖರೀದಿಸಲು
ಕಿಂಚಿತ್ತೂ ಯೋಚಿಸಿರಲಿಲ್ಲಾ.....

ಕೊನೆಗೂ
ಏನೇನೋ ಆಗಲು ಹೋಗಿ, ಏನೋ ಆಗಿಬಿಟ್ಟೆ
ಇಂದಿಗೂ ಪಳೆಯುಳಿಕೆಯಾಗಿರುವ
ಕೆಲವು ಕನಸುಗಳು ಕೊಳೆತು ನಾರುತ್ತಿವೆ
ಬಿಡುಗಡೆಗಾಗಿ, ಬಟವಾಡೆ ಮಾಡಲು
ಇನ್ನಿಲ್ಲದಂತೆ ಯಾಚಿಸುತ್ತವೆ
ನಾನೋ ಕನಸುಗಳ ಮಟ್ಟಿಗೆ
ಇನ್ನಿಲ್ಲದ ಜಿಪುಣ-ಕೃಪಣ
ನನ್ನತನವ ಕಳೆದುಕೊಂಡು ಕೊಂಡಿರುವ
ಸರಕು ಹಾಗೆ ಬಿಡಲಾದೀತೇ
ಕೊಳೆಯಲಿ ನಾನು ಎನ್ನುವ ಮುಖವಾಡ ಕಳಚುವವರೆಗೆ......