Monday, September 27, 2010

ತೂರಿ ಬಂದ ಕಲ್ಲು

ಎಲ್ಲಿಂದಲೋ
ತೂರಿ ಬಂದ ಕಲ್ಲು
ಅಂತರಂಗವ ಕಲಕಿ
ರತ್ನಗರ್ಭವನೂ ಛೇಧಿಸಿ
ಮುನ್ನುಗ್ಗಿದೆ ಮನದಾಳದಿ

ಅಂತರಂಗದಿ ಹೂತಿರುವ
ದುಗುಡ-ದುಮ್ಮಾನಗಳ
ಕೊಳೆಯ ಕಣ-ಕಣಗಳನ್ನು
ಮೇಲಕ್ಕೆ ಚಿಮ್ಮಿಸಿ
ಕದಡಿದೆ ತಿಳಿನೀರಿನಂತ ಮನವ

ಎನಿತು ಕಾಲದಿಂದ
ತಿಳಿನೀರ ತೆರೆಯ ಹಿಂದೆ
ಮನದಾಳದಿ ಅಮುಕಿ
ಹುದುಗಿಸಿರುವ ನೋವುಗಳನು
ಮತ್ತೆ ಮುಕ್ತಗೊಳಿಸಿದೆ

ಕಾಲನ ಕೈಚಳ ತಡೆವರಾರು ?
ಸೆಳೆವುದು ಕೊಳೆಯ ಕಣಗಳನು
ಭಾರವಾದುದೆಲ್ಲವೂ ತಳದೆಡೆಗೆ
ಸೆಳೆವುದು ನಿಸರ್ಗ ನಿಯಮ
ಮತ್ತೆ ತಿಳಿನೀರ ತೋರುತ್ತ ಮೆರೆವುದು ಅನವರತ

Monday, September 13, 2010

ವಿರಹಿ


ಅಗಲಿದ ನಲ್ಲೆಯ
ನೆನಪಿನ ದೋಣಿಯಲಿ
ಭವದ ಜಂಝಡಗಳ ಮೀರಿ
ದೂರ ದಿಗಂತದಾಚೆ ನಿರಂತರ
ಪಯಣಿಸುತ್ತಿರುವ ಯೋಗಿ

ಅಂತೆ-ಕಂತೆಗಳ ಯೋಚನೆಯಲ್ಲಿ
ಕಾಲನ ಕೈಯೊಳಗೂ ಸಿಗದೆ
ಅನುಕ್ಷಣವೂ ಕಾಲಾತೀತವಾಗಿ
ಸಂತೆಯಲ್ಲಿಯೂ ಏಕಾಂತವಾಗಿ
ಕನಸು ಕಾಣುವ ಹೋಗಿ


ನೂರು ಮನುಜರ ನಡುವೆ
ಹಲವು ಮನಸುಗಳ ಮಧ್ಯೆ
ಏಕಾಂಗಿಯಂತೆ
ನಲ್ಲೆಯೊಡನೆ ಭಾವನಾಲೋಕದಲಿ
ವಿಹರಿಸುವ ಭಾವಜೀವಿ

ನಿದ್ರಾಭಂಗ

ಮಧ್ಯ ರಾತ್ರಿಯಲಿ

ದಿಗ್ಗನೆ ಎದ್ದು ಕುಳಿತಾಗ
ನಿದ್ದೆ ಎಲ್ಲೋ ಕಳೆದುಹೋದಂತೆ

ಕಳೆದಿದ್ದು ಬರೀ ನಿದ್ದೆಯಲ್ಲ
ಕಳವಳದಿಂದ ನುಡಿಯಿತು
ಎನ್ನ ತಳಮಳಗೊಂಡ ಮನಸು

ದೂರದಲ್ಲಿ ಕೇಳಿಸುತ್ತಿರುವ
ಬೌಂವ್ ಎಂದು ಊಳಿಡುವ
ಬೀದಿನಾಯಿಯ ಗೋಳಿನ ರೋದನ

ತಾಳತಪ್ಪಿದ ಹೃದಯದ
ಆಳದಲಿ ಬೇರೂರಿರುವ ಭಯ ಬಡಿದೆಬ್ಬಿಸಿ
ನರನಾಡಿಗಳಲಿ ನಡುಕ ಹುಟ್ಟಿಸಿ


ದೇವರ ಮುಂದಿನ ನಂದಾದೀಪದ ಬೆಳಕಿನಲಿ
ಜಿರಳೆ, ಇಲಿ ಹುಳು-ಹುಪ್ಪಡಿಗಳ ನೆರಳು
ಕಣ್ಮುಚ್ಚಿದರೂ ಮನದಾಳಗಿ ಕಾಡಿ


ನೀರವ ರಾತ್ರಿಯ ಘೋರ ನಿಶಬ್ದದಲಿ
ನಿರಂತರವಾಗಿ ಕಾಲನ ಕುದುರೆಯ
ಕಟಕಟ ಸದ್ದಿನ ಗೋಡೆ ಗಡಿಯಾರ


ಈ ರಾತ್ರಿ ಕಳೆದು, ನಾಳೆಯಾದರೆ ಸಾಕು
ಕಳವಳಗೊಂಡ ಮನದಾಳದಿ
ಕ್ಷೀಣಗೊಂಡಂತೆ ಬೆಳಗುತ್ತಿರುವ ಆಶಾಕಿರಣ

Friday, September 3, 2010

ಎಲ್ಲಿರುವೆ

ಕಣ್ಣುಗಳು ಅರಸುತ್ತಿವೆ

ನಿನ್ನ ಇರುವಿಕೆಯನ್ನು
ನೂರಾರು ನಯನಗಳ ನಡುವೆ
ನಿನ್ನ ನೋಟವನ್ನು

ನಸುನಗುವ, ಹುಸಿಗೋಪದ
ತುಂಟ ನೋಟದ, ಮಂದಸ್ಮಿತವಾದ
ಕಾವ್ಯಲೋಕದ ಕಲ್ಪನೆಗಳ ಹೊತ್ತು
ಹಾಗೋ-ಹೀಗೋ ನಿನ್ನನ್ನು ಕಾಣಲು ಕಾತರಿಸುತ್ತ
ಅರಸುತ್ತಿವೆ ನನ್ನ ನಯನಗಳು

ನೀಲಿ ಬಾನಿನಲಿ ದಟ್ಟೈಸಿದ
ಕಾರ್ಮೋಡಗಳ ನಡುವೆ
ತೂರಿ ಬರುತಿಹ ಸೂರ್ಯರಶ್ಮಿಯ ತೆರದಿ
ಮಾನಿನಿಯರ ಮಧ್ಯೆ ಕಾಣುವ ಆಶೆಯಿಂದ
ಅರಸುತ್ತಿವೆ ನನ್ನ ನಯನಗಳು

ಇರುಳ ನೀಲಾಂಬರದಿ
ಅಗಣಿತ ತಾರೆಗಳ ತೋಟದಲಿ
ಬೆಳ್ಳಿಮೋಡಗಳ ನಡುವೆ
ರಾರಾಜಿಸುವ ಚಂದ್ರಬಿಂಬದಲಿ
ಅರಸುತ್ತಿವೆ ನನ್ನ ನಯನಗಳು


ಮಲ್ಲಿಗೆ, ಸಂಪಿಗೆ, ಗುಲಾಬಿಗಳ
ನಂದನದ ತೋಟದಲಿ ಬೀಸುವ ತಂಗಾಳಿ
ತಿಂಗಳಿನ ಬೆಳದಿಂಗಳಲಿ
ನಿನ್ನ ಇರುವಿಕೆಯನ್ನು ಅನವರತ
ಅರಸುತ್ತಿವೆ ನನ್ನ ನಯನಗಳು

ನಲ್ಲೆ

ಎನ್ನ ಹೃದಯವನು
ಕದ್ದೆ ನೀನು
ಮನಸ ಮನಸೂರೆಗೊಂಡೆ
ನನ್ನ ಭಾವನೆಗಳನೆಲ್ಲ
ಬರಸೆಳೆದುಕೊಂಡು
ಇಹ-ಪರವ ಮರೆಸಿದೆ
ಭಾವನೆಗಳಿಗೂ ಅಭಾವ
ಈಗ
ನನಗೆ ಅರಿವಾಗುತ್ತಿದೆ
ನಾನೇಕೆ ಬರೆಯಲಾರೆ
ಕವಿತೆ.

ವಯ್ಯಾರಿ

ತುಟಿಗಳ ಮೇಲೆ

ತುಂಟ ನಗುವನು ಬೀರಿ
ಕಳ್ಳ ನೋಟದಿ
ಹೃದಯವನು ಮೀಟಿ
ಮನಕೆ ಮುದನೀಡುತ್ತ
ಮಿಂಚಿ ಮರೆಯಾಗುವ
ವಯ್ಯಾರಿ ಹನಿಗವನ

ಏಳು-ಬೀಳುಗಳ
ಬಾಳ ಪಯಣದಲಿ ಸಂಗಾತಿಯಾಗಿ
ಜೀವನಕೆ ಆಸರೆಯಾಗಿ, ಉಸಿರಾಗಿ
ಸಮರಸದಿ ಬಾಳುವ
ಹಗಲಿರುಳು ಬಾಳಿನಲಿ
ನವರಸಗಳನೀಯುವ
ಹೃದಯದರಸಿ ಮಹಾಕಾವ್ಯ

ಎಲ್ಲಿ ಹೋದೆ ಗೆಳತಿ

ಕಣ್ಣಂಚಿನಿಂದ ಈಚೆಗೆ

ದೂರ ದಿಗಂತದಾಚೆಗೆ
ಇಲ್ಲಿ-ಅಲ್ಲಿ, ಎಲ್ಲೆಲ್ಲಿಯೂ
ನಿನ್ನ ಕಾಣದೆ
ನಿನ್ನಿರವನ್ನು ಅರಸುತ್ತ
ಕೊರಗಿವೆ ಎನ್ನ ಕಣ್ಣುಗಳು

ಎಲ್ಲಿ ಹೋದೆ ಗೆಳತಿ
ಎಂದು ಚಿಂತಿಸುತ
ತಲೆಯ ಮೇಲೊಂದು ಕೈಕೊಟ್ಟು
ಕಣ್ಮುಚ್ಚಿ ಯೋಚಿಸಲು
ಅರೆರೆ !!!
ನೀನು ಕಣ್ಣೆವೆಗಳ ಅಡಿಯಲ್ಲೇ
ಅಡಗಿ ಕುಳಿತಿರುವೆಯಲ್ಲ

ನಿಶಬ್ದ

ನಿಶಬ್ದ

ಪ್ರಕೃತಿಯ ಪುರಾತನ ಕವನ
ರಾಗ-ತಾಳಗಳ
ಪ್ರಾಸ-ಪಲ್ಲವಿಗಳ
ಭಾಷೆ-ಪ್ರಾಂತ್ಯಗಳ
ಹಂಗಿಲ್ಲದ ನಿತ್ಯನೂತನ ಕವನ

ದಟ್ಟ ಕಾನನದಿ
ತೆಂಗಿನಾ ತೂಗಿಗೆ
ಕಂಗಿನಾ ಬಾಗಿಗೆ
ತರು-ಲತೆಗಳ ವಯ್ಯಾರಕೆ
ಮಲ್ಲಿಗೆಯ ಬಳುಕಿಗೆ
ಸಂಪಿಗೆಯ ಥಳುಕಿಗೆ
ನಲಿವ ಗುಲಾಬಿಯ ತಾಳಕೆ
ಮೇಳೈಸುವ ಏಕಮೇವ ಕಾವ್ಯ


ಹರಿಯುವ ನದಿಯ
ಅಲೆಗಳ ಕಲರವಕೆ
ಭೋರ್ಗರೆವ ಜಲಪಾತದ
ರುದ್ರ ರಮಣೀಯತೆಗೆ
ಅಂತ್ಯವೇ ಇಲ್ಲದ
ಅನಂತ ಸಾಗರದ ಅಲೆಗಳಾಟಕೆ
ಸುತ್ತಲೂ ಸುಳಿಯುವ ತಂಗಾಳಿಯ
ಮೌನ ಸಂಗೀತಕೆ
ಮೇಳೈಸುವ ಏಕಮೇವ ಕಾವ್ಯ

ನಾಳೆಗಳು ಬರಲಿ

ನಾಳೆಗಳು ಬರಲಿ

ಬೆಂದು ಬಸವಳಿದ ತನುಮನಕೆ
ಚೇತನವ ತರಲಿಹಲವು ನೋವುಗಳ ಮರೆಸಿ


ನಲಿವಿನ ಆಸೆಗಳಿಗೆ ನೀರೆರೆಯಲಿ
ಮತ್ತೆ ನಾಳೆಗಳು ಬರಲಿ

ಕಣ್ಣಿನಾಳದಿ ಕರಗಿಹೋದ ಕನಸುಗಳಿಗೆ
ಬಣ್ಣವನು ತುಂಬಲಿ
ಬಾಳಿನ ದುಗುಡ-ದುಮ್ಮಾನಗಳು
ಕಳೆಯಲಿ
ಮತ್ತೆ ನಾಳೆಗಳು ಬರಲಿ

ಆಸೆಗಳು ಪೂರೈಸಲಿ
ಬಯಕೆಗಳು ಈಡೇರಲಿ
ಹೊಸ-ಹೊಸ ಬಯಕೆಗಳು
ಮತ್ತೆ ಮನದಾಳದಿ ಮೊಳಕೆಯೊಡೆಯಲಿ
ಮತ್ತೆ ನಾಳೆಗಳು ಬರಲಿ

ಚಿಂತೆಯ ಕಾರ್ಮೋಡಗಳು
ಕರಗಿ ನೀರಾಗಲಿ
ದುಗುಡದ ಅಂಧಕಾರವ ಕಳೆದು
ತೂರಿಬರಲಿ ಸೂರ್ಯರಶ್ಮಿಯ ಆಶಾಕಿರಣ
ಮತ್ತೆ ನಾಳೆಗಳು ಬರಲಿ


ನೂರು ಚಿಂತೆಗಳಿಂದ ಮುದುಡಿದ
ಮುಖದಲಿ ಮುಗುಳ್ನಗೆ ಮೂಡಲಿ
ಸಂತಸವು ಚಿಮ್ಮಲಿ ಬಾನೆತ್ತರಕೆ
ನವಜೀವನವು ಮೂಡಲಿ
ಮತ್ತೆ ನಾಳೆಗಳು ಬರಲಿ