Friday, April 17, 2015

ನಿಲ್ದಾಣ

ಅವರಿವರು
ಬರುವುದೂ-ಹೋಗುವುದೂ
ಉಚ್ವಾಸ-ನಿಶ್ವಾಸದಂತೆ ನಿರಂತರವಾಗಿದೆ
ಬಂದವರು ಹೋಗಲೇಬೇಕೆನ್ನುವ
ಪ್ರಕೃತಿಯ ನಿಯಮ
ತಲತಲಾಂತರದಿಂದಲೂ ತಪ್ಪಲೇ ಇಲ್ಲಾ

ಬಂದವರು
ಹೋಗುವುದು ಶತಸಿದ್ಧವೆಂದು
ಅರಿತ ಮನಸಿಗೆ
ಬಯಸಿದ್ದನ್ನು ಹಿಡಿದಿಟ್ಟುಕೊಳ್ಳಲಾಗದ ಸಂಕೋಚ
ಪಡೆಯಲೇಬೇಕು
ಎನ್ನುವ ಹಂಬಲವೇ ಇಲ್ಲದಿರೆ
ಬರಲಾರದೇ ಇರುವುದರೆಡೆಗೆ ನಿರೀಕ್ಷೆಯೂ ಇಲ್ಲಾ

ನಿಂತಲ್ಲೇ
ಅತಳ-ಸುತಳ-ಪಾತಾಳ ಲೋಕವ
ಸುತ್ತಿ ಸಂಭ್ರಮಿಸುವ ಮನಕೆ
ಆಶ್ರವಿತ್ತು
ಬರುವುದು-ಹೋಗುವುದರ ನಡುವೆ
ಸ್ಥಾಯಿ ನಿಂತಿರುವ ತನುವಿಗೆ
ಸಂಭ್ರಮವೂ ಇಲ್ಲಾ, ಸೂತಕವೂ ಇಲ್ಲಾ

ಆದರೂ....
ಬಂದು-ಹೋಗುವವರೆಡೆಗೆ ಗಮನವಿತ್ತು
ಸುಖ, ನೆಮ್ಮದಿ, ನೋವು, ವಿರಹ ಏನೇನೋ
ಭಾವಗಳ ಧರಿಸಿ ಸರಿದ
ಮುಖಗಳು ಭಿತ್ತಿಯ ಪರದೆಯ ಮೇಲೆ
ಅಚ್ಚೊತ್ತಿರುವುದು ಅಳಿಸಲಾಗುತ್ತಿಲ್ಲಾ
ನೆನಪಿನಂಗಳದಿ ಅರಳಿರುವ ಹೂವುಗಳ
ಬಣ್ಣವೂ ಬಾಡಿಲ್ಲ
ಮುಖಗಳೋ ಮುಖವಾಡಗಳೋ ಅರಿವಿಗೂ ಬಂದಿಲ್ಲಾ.....