Friday, July 30, 2010

ಬೀಜ

ಎರಡು ಅಂಗುಲ ನೆಲದಾಳದಿಂದ

ಮೊಳಕೆಯೊಡೆದು ಹೆಮ್ಮರವಾಗಿ ಬೆಳೆದು
ಭುವಿಯನ್ನೇ ಹಸಿರಾಗಿಸುವ ಹುಮ್ಮಸ್ಸಿನಿಂದಾ
ನೀರ ಹನಿಗಾಗಿ ಹಾತೊರೆಯುತ್ತಿದೆ ಬೀಜವೊಂದು


ಆಗಸದಲ್ಲಿ ಹಾರುತಿರುವ


ಮೋಡಗಳೆಲ್ಲ ಹನಿ ನೀರನ್ನು ಸುರಿಸದೆ
ಹಾಗೆಯೇ ಸರಿದುಹೋಗುವದನ್ನು ಕಂಡು
ಬಿರಿದು ಬಾಯ್ದೆರೆದ ನೆಲದಾಳದಿಂದ
ಬಸವಳಿದು ಮಮ್ಮಲ ಮರುಗಿತು ಮನದಾಳದಿಂದ

ಕಲ್ಪನಾ

ಇಲ್ಲ ಸಲ್ಲದ ನೆವಗಳ ಹುಡುಕಿ,

ಮತ್ತೆ ಮತ್ತೆ
ಅವಳ ಸುತ್ತ ಸುಳಿಯುವುದಕ್ಕೆ
ಮನ ಹಾತೊರೆಯುತ್ತಿದೆ.

ಅವಳ ತುಂಟ ನಗೆಯೊಂದು
ಕವನದಾ ಸಾಲು
ಮನದಾಳದಿ ಇಳಿಯುವ
ಆ ಕುಡಿ ನೋಟವು
ಮತ್ತೊಂದು ಸಾಲು

ಪ್ರಾಸವೂ ಇಲ್ಲ
ಪಲ್ಲವಿಯೂ ಇಲ್ಲ
ಬರೆಯಲು ಯಾವ
ಪದಗಳೂ ಇಲ್ಲ
ಈ ಕವನ ಮುಗಿಯುವುದೂ ಇಲ್ಲ

ತಲ್ಲಣಿಸದಿರು .......


ಮುಂದುವೆರಯುವ ಮುನ್ನ :ಕವನಗಳನ್ನೇ ಬರೆಯಲು ಯಾಕೋ ನನ್ನ ಮನದಾಳದಲ್ಲಿ ಭಾವನೆಗಳು ಮೊಳಕೆಯೊಡೆಯಲಿಲ್ಲ. ಆದರೆ ಬಹಳಷ್ಟು ದಿನಗಳವರೆಗೆ  ಸುಮ್ಮನೇ ಕಾಲಹರಣ ಮಾಡುವ ಬದಲು ಇಲ್ಲಿ ಏನಾದರೂ ಬರೆಯಲೇ ಬೇಕು ಎನ್ನುವ ಹಂಬಲದೊಂದಿಗೆ ನಿಮ್ಮ ಮುಂದೆ ಒಂದು ಸಣ್ಣ ಕಥೆಯನ್ನು (ಕಾಲ್ಪನಿಕ) ಹೇಳುತ್ತಿದ್ದೇನೆ. 

ತಲ್ಲಣಿಸದಿರು .....

          ಧಡ್ ಧಡ್ ಧಡ್ ಬಾಗಿಲು ಬಡಿದ ಸಪ್ಪಳದಿಂದ ದಿಗ್ಗನೆ ಎದ್ದೆ, ಏನೋ ಒಂಥರಾ ಆಯೋಮಯ ಪರಿಸ್ಥಿತಿ, ಎಲ್ಲಿದ್ದೀನಿ ಅನ್ನೋದು ತಿಳಕೊಳ್ಳಾಕ ಅರೆಘಳಿಗೆ ಸಮಯ ಹಿಡೀತು. ನಿಂತ ಜಾಗಾ ಹೊಯ್ದಾಡೋದು ಅರಿವಿಗೆ ಬರೂಹೊತ್ತಿಗೆ ನಾನು ಟ್ರೇನ್ ಒಳಗ, ಅದೂ ಟಾಯಿಲೆಟ್ ಒಳಗ ಇರೂದು ತಿಳೀತು, ಆದ್ರ ಇಂಥ ಖಬರಗೇಡಿ ಪರಿಸ್ಥಿತಿ ಬಂದಿದ್ಯಾಕ !!! ಮತ್ತು ಮನಸು ವಿಚಾರದೊಳಗ ಮುಳುಗಿತು. ಬೆಳಿಗ್ಗೆದ್ದು ರಾಯಬಾಗಕ್ಕ ಆಫೀಸ್ ಕೆಲಸಕ್ಕ ಹೋಗಿ, ನನ್ನ ಕೆಲಸಾ ಮುಗಿಸಿಕೊಂಡ ಮತ್ತ ಮರಳಿ ರಾಣಿ ಚೆನ್ನಮ್ಮ ಟ್ರೇನ್ ಹಿಡದ ವಾಪಸ ಬರಾಕಹತ್ತಿದ್ದೆ. ಟ್ರೇನ್ ಇನ್ನೇನು ಸ್ಟೇಶನ್ ಬಿಡಬೇಕು ಅನ್ನೂದರೊಳಗ ಒಬ್ಬ ಹೆಂಗಸು ಮೂರು ತಿಂಗಳ ಮುದ್ದಾದ ಕೂಸಿನ್ನ ಎತ್ಕೊಂಡು ಟ್ರೇನ್ ಹತ್ತೂದಕ್ಕ ಓಡೋಡಿ ಬರ್ತಿದ್ದಳು, "ನಿಮಗ ಏನು ಹೇಳಿದ್ರೂ ತಿಳಿಯೂದಿಲ್ಲ, ಟೈಮ್ ಸೆನ್ಸ್ ಇಲ್ಲ-ಇಲ್ಲಾ ಮುಂಜಾನಿಂದ ಹೇಳಾಕತ್ಹೇನಿ, ಎಲ್ಲಾ ಕಟ್ಕೊಂಡು, ಲಗೂನ ರೆಡಿ ಆಗು ಅಂತ ಬಡಕೊಂಡ್ರೂ ಇದ ಕತಿ ನಿಂದು..." ಬಹುಶ ಆ ಹೆಂಗಸಿನ ಗಂಡ ಇರಬಹುದು ಗೊಣಗುತ್ತಾ ತನ್ನ ಕೈಯೊಳಗೂ ಒಂದು ಕೈಚೀಲ ಹಿಡಕೊಂಡು ಟ್ರೇನ್ ಹತ್ತಸಾಕ ಓಡೋಡಿ ಬರತಿದ್ದಾ. ಅಂತೂ ಇಂತೂ ಅವರು ನಮ್ಮ ಬೋಗಿ ಹತ್ತರ ಬರೂದನ್ನ ಅಂದಾಜಿಸಿ, ಬಾಗಿಲ ಹತ್ತರ ಹೋಗಿ, ಆ ಹೆಂಗಸಿನ ಕೈಯೊಳಗಿಂದ ಚೀಲ ನಾನು ತಗೊಂಡೆ. ತುಂಬು ಗರ್ಭಿಣಿ ನಡೆಯೂ ತರಹ ಸಾವಕಾಶ ಹೊಂಟಿದ್ದ ಟ್ರೇನು ತನ್ನ ವೇಗ ಪಡೆಯುವದರೊಳಗ, ಆ ಹೆಂಗಸು ತನ್ನ ಮಗುವಿನೊಂದಿಗೆ ಉಳಿದ ಎಲ್ಲ ಲಗೇಜುಗಳನ್ನು ತಗೊಂಡು ಟ್ರೇನ್ ಹತ್ತಿದಳು. "ಊರಿಗೆ ಹೋಗಿ ಮುಟ್ಟಿದ ತಕ್ಷಣ ಫೋನ್ ಮಾಡು !!! ಕೂಸಿನ್ನ ಹುಷಾರಾಗಿ ನೋಡ್ಕೋ" ಅಂತ ಗಂಡಸಿನ ಧ್ವನಿ ಕೇಳಿದಾದ, ಅವಾ ಈಕಿನ್ನ ಕಳಸಾಕ ಮಾತ್ರ ಬಂದಿದ್ದಾ ಅಂತ ನಾನು ಅನ್ಕೊಂಡೆ.

* * *


       ಅಲ್ಲಿ-ಇಲ್ಲಿ ತನಗ ಅವಳು ಜಾಗಾ ಹುಡುಕೂದ ನೋಡಿ, ನಾನು ಕುಂತಿದ್ದ, ಸೀಟಿನೊಳಗ ಇದ್ದಂತ ಮಂದಿ, ಇಲ್ಲೇ ಕೂತ್ಕೋ ತಂಗಿ ಅಂತ ಸೀಟು ಅಡ್ಜಷ್ಟ್ ಮಾಡಿ ಕೊಟ್ಟರು. ಮುದ್ದಾದ ಮಗುವಿನ ತುಂಟಾಟ, ಸುಂದರ ತರುಣಿಯೆಡೆಗೆ ಒಂದು ಕುತೂಹಲದ ನೋಟ ಇತ್ಯಾದಿಗಳಲ್ಲಿ ಪ್ರಯಾಣ ಸಾಗಿತು. ಈ ಮಧ್ಯದಲ್ಲಿ ಮಗುವಿಗೆ ಏನೋ ರೈಲಿನ ಗೌಜು-ಗೊಂದಲಗಳು ಸಹನೆಯಾಗಲಿಲ್ಲ ಅನಿಸುತ್ತದೆ. ಮಗು ಸ್ವಲ್ಪ ಕಿರಿಕಿರಿ ಮಾಡಲು ಸುರುಮಾಡಿತು. ಪಾಪ ಪುಟ್ಟ ಕೂಸು ಏನನ್ನೂ ಹೇಳಲು ಬಾರದು. ಅಷ್ಟರಲ್ಲಿ ಘಟಪ್ರಭಾ ರೈಲು ನಿಲ್ದಾಣ ಬಂತು. ಸ್ವಲ್ಪ ಈ ಮಗೂನ್ನ ನೋಡ್ಕೊಳ್ತೀರಾ ನಾನು ಇದಕ್ಕೆ ಹಾಲು, ಬಿಸ್ಕತ್ತು ಏನಾದರೂ ತರುತ್ತೇನೆ ಎಂದು ಆ ಮಹಿಳೆ ಹೇಳಿದಾಗ ನನಗೆ ಇಲ್ಲವೆನ್ನಲು ಆಗಲಿಲ್ಲ. ಆಯಿತು ನೀವು ತಗೊಂಡ್ಬನ್ನಿ ಎಂದು ಮಗುವನ್ನು ಎತ್ಕೊಂಡೆ. ಮುದ್ದಾನ ಮಗುವಿನ ಆ ನಗುವಿನಲ್ಲಿ ನನ್ನನ್ನೇ ಮರೆತೆ. ರೈಲಿನ ವಿಶಲ್ ಕೇಳುವವರೆಗೆ ನನಗೆ ಈ ಲೋಕದ ಅರಿವೇ ಇರಲಿಲ್ಲ. ರೈಲು ಸಾವಕಾಶವಾಗಿ ಚಲಿಸಲು ಆರಂಭಿಸಿದರೂ ಆ ಹೆಂಗಸು ಬಂದಿರಲಿಲ್ಲ. ಬಹುಶ ರೈಲು ಹತ್ತಿರಬಹುದು ಬಹಿರ್ದೆಶೆಗೆ ಹೋಗಿರಬಹುದು ಎಂದು ಭಾವಿಸಿ ಮತ್ತೆ ಮಗುವಿನ ತುಂಟ ನಗುವಿನಲ್ಲಿ ಲೀನನಾದೆ. ಅಷ್ಟರಲ್ಲಿ "ಹೋ ಏನಾದ್ರೂ ಮಾಡಿ, ನನ್ನ ಮಗು ಅಯ್ಯೋ ದೇವ್ರೆ ....." ಧ್ವನಿ ಕೇಳಿಸಿದಾಗ ನನಗೆ ವಾಸ್ತವಿಕ ಪ್ರಪಂಚದ ಅರಿವಿಗೆ ಬಂದಿದ್ದು. ರೈಲಿನೊಂದಿಗೆ ಅನತಿ ದೂರದಲ್ಲಿ ಆ ಹೆಂಗಸು ಓಡಿ ಬರುತ್ತಿದ್ದರೆ, ಮಗುವನ್ನು ಒಂದು ಕೈಯಲ್ಲಿ ಎತ್ತಿಕೊಂಡು ಬಾಗಿಲಿನೆಡೆಗೆ ಹೋಗಲು ನೋಡಿದೆ. ಆದರೆ ರೈಲಿನ ವೇಗ ಹೆಚ್ಚಾಗಿ ಆ ಮಹಿಳೆಯನ್ನು ಮೇಲೆ ಹತ್ತಿಸಿಕೊಳ್ಳುವುದೇ ಅಥವಾ ಈ ಮಗುವನ್ನು ಅವಳಿಗೆ ಕೊಡುವುದೇ ಎಂಬ ದ್ವಂದ್ವದಲ್ಲಿ ಇರುವಾಗಲೇ ರೈಲು ಸ್ಟೇಶನ್ ದಾಟಿ ಹೋಗಿತ್ತು. ಅದುವರೆಗೆ ನನ್ನ ಜೊತೆಗೆ ರಾಯಬಾಗದಿಂದ ಬಂದಿದ್ದ ಇತರ ಪ್ರಯಾಣಿಕರೂ ಅಲ್ಲಿಯೇ ಇಳಿದುಬಿಟ್ಟಿದ್ದರು. ಈಗ ಹೊಸ ಪ್ರಯಾಣಿಕರೊಂದಿಗೆ ನಾನು ಮುದ್ದಾದ ಕೂಸಿನೊಡನೆ ಏಕಾಂಗಿ. ರಾಯಬಾಗದಲ್ಲಿ ಓಡುತ್ತಿರುವ ರೈಲನ್ನು ಹತ್ತುವಾಗ ಆ ಹೆಂಗಸು ಮತ್ತು ಕೂಸನ್ನು ಮೇಲೆ ಹತ್ತಿಸುವಲ್ಲಿ ನೆರವಾಗಿದ್ದೆ. ಆದರೆ ಈಗ ಅದೇ ಹೆಂಗಸು ಪುನಃ ರೈಲು ಹತ್ತಲಾಗದೇ ಇದ್ದುದನ್ನು ಆದರೆ ಅವಳದೇ ಮುದ್ದಾದ ಮಗುವನ್ನು ಸಂಬಂಧಿಕರಿಲ್ಲದೇ ನನ್ನ ತೊಡೆಯ ಮೇಲೆ ಆಡುತ್ತಿರುವದನ್ನು ನನ್ನ ಮನಸ್ಸು ಇನ್ನೂ ಯೋಚಿಸುತ್ತಿತ್ತು.

* * *




       "ನಮಸ್ಕಾರ್ರೀ ಸರ್" ಪರಿಚಿತ ಧ್ವನಿ ಕೇಳಿದಾಗ ಪುನಃ ನಾನು ವಾಸ್ತವಕ್ಕೆ ಮರಳಿದೆ. "ಏನ್ರೀ ಸರ ವೈನಿ ಇಲ್ಲದ ಕೂಸಿನ್ನ ಕರಕೊಂಡ ಎಲ್ಲಿಗೆ ಹೋಗಿದ್ರಿ ?" ಅಂದಾಗ ನಾನು ಏನೋ ಹೇಳುವಷ್ಟರಲ್ಲಿ "ಅಲ್ರೀ ಸರ ವೈನಿ ಧಾರವಾಡದವರು, ಈ ಕಡೇಂದ ಕೂಸಿನ್ನ ಕರಕೊಂಡ ಎಲ್ಲಿಗೆ ಹೋಗಿದ್ರಿ ?" ಎರಡನೇ ಪ್ರಶ್ನೆ ತೂರಿಬಂತು. "ಇಲ್ಲ ಇದು ನನ್ನ ಮಗಾ ಅಲ್ಲ" ಎಂದು ಹೇಳುವಷ್ಟರಲ್ಲಿ "ಹೌದೇನ್ರಿ ಸರ, ಅಂದ್ರ ಇದು ನಿಮ್ಮ ಮಗಳಿರಬೇಕು ..." ಎಂದು ಅವರು ಕೇಳಿದರು. ಎಲಾ ಇವನ ಈ ಕೂಸು ಗಂಡೋ-ಹೆಣ್ನೋ ನೋಡಲೇ ಇಲ್ವಲ್ಲ ಅನಿಸಿತು. ಕೂಸು ಗಂಡಾದರೇನು ಹೆಣ್ಣಾದರೇನು ಭಾಳ ಮುದ್ದಾಗೆದ, ಅಲ್ಲದ ಅದು ಮಂದೀದು ಅದನ್ನೇನು ನೋಡುದಿರ್ತತಿ ಅಂತ ಮನಸಿನ್ಯಾಗ ನನ್ನಷ್ಟಕ್ಕ ನಾನ ಮಾತಾಡ್ತಿದ್ದೆ. "ಅಲ್ಲಾ ಸಾಹೇಬರದು ಮದುವಿ ಆಗಿ ಇನ್ನೂ ಒಂದು ವರ್ಷನೂ ಆಗಿಲ್ಲ .." ರಾಗವಾಗಿ ಇನ್ನೊಂದು ಧ್ವನಿ ಕೇಳಿಸಿತು. ಕೂಸು ಸಣ್ಣದಾಗಿ ನಕ್ಕಿತು ಆದರೆ ನನಗ ಒಂಥರಾ ನಾಚಿಕೆ ಬೆರೆತ ಅವಮಾನ ಅನಿಸಿ "ಇಲ್ರೀ ಇದು ನನ್ನ ಕೂಸು ಅಲ್ಲ, ಒಬ್ಬಾಕಿ ಹೆಂಗಸು ಎತ್ಕೊಳ್ಳಾಕ ಕೊಟ್ಟು ಹಾಲು -ಬಿಸ್ಕಿಟು ತರತೇನಿ ಅಂತ ಕೊಟ್ಟು ..." ಅಂತ ಇನ್ನೂ ನನ್ನ ಮಾತು ಬಾಯೊಳಗ ಇರುವಾಗಲೇ !!! "ಏನ್ರೀ ಸರ್ ವೈನಿ ಜೊತೆ ಏನರ ಜಗಳಾಡಿರೇನು ? ಹಿಂಗ್ಯಾಕ ಮಾತಾಡ್ತೀರಿ ನೀವು.... ಸಂಸಾರ ಅಂದಮ್ಯಾಲ ಸಣ್ಣ-ಪುಟ್ಟ ಜಗಳ-ಜಂಜಾಟ ಇರುವ... ಅಷ್ಟಕ್ಕ ಸ್ವಂತ ಕೂಸಿನ್ನ ನಂದು ಅಲ್ಲ ಅನಬಾರದು ನೋಡ್ರಿ" ಎಂದಾಗ ನನ್ನ ಜಂಘಾಬಲವೇ ಉಡುಗಿತು, ಕೈ-ಕಾಲು ಎಲ್ಲಾ ತಣ್ಣಗ ಅನಸಾಕ ಹತ್ತಿದವು. ಮುದ್ದಾದ ಕೂಸು ನನ್ನ ಮಾನಸಿಕ/ನೈತಿಕ ನೆಮ್ಮದಿಗೆ ಮೂಲ ತಂತಲ್ಲಾ ಅಂತ ಯೋಚಿಸುತ್ತಿರುವಾಗಲೇ "ಆತ್ರೀ ಸರ !!! ನಿಮ್ಮ ಕೂಸು ಅಲ್ಲಂದ್ರ ನೀವು ಹೇಳ್ತಿರೂ ಆ ಹೆಂಗಸ ಎಲ್ಲಿ ಅದ ? ಅದನ್ನರ ತೋರಿಸ್ರಿ ... ನಾವೇನರ ಪಾರ್ಟಿ-ಗೀರ್ಟಿ ಕೇಳ್ತಿವಂತ ಹಿಂಗ ಹೇಳಬ್ಯಾಡ್ರಿ" ಪುನಃ ಮಾತುಗಳು ನನ್ನ ಮನಸ್ಸಿಗೆ ಚುಚ್ಚಾಕ ಸುರು ಮಾಡಿದವು. ಉತ್ತರ ಕೊಟ್ರ ಮತ್ತ ಅಡ್ಡ ಪ್ರಶ್ನೆ ಅದಕ್ಕ ಇವರ ಉಸಾಬರಿನ ಬ್ಯಾಡ ಅಂತ ಸುಮ್ಮನಾದೆ. ಆದ್ರೂ ಕೂಡ ಈ ಸಣ್ಣ ಘಟನೆ ನನ್ನ ವೈಯಕ್ತಿಕ ಸಂಸಾರ ಜೀವನಕ್ಕ ಮೂಲ ಆಯಿತಲ್ಲ ಅಂತ ವಿಚಾರಸಿಕೊಂತ ಸುಮ್ಮನ ಕೂತ್ಕೊಂಡೆ.


* * *



         "ಏ ಯಪ್ಪಾ !!! ಬಾಗಲ ತಗಿತಿಯಿಲ್ಲೋ ? ಅಲ್ಲೇನು ನಿದ್ದಿ ಮಾಡಾಕ ಹತ್ತೀಯೇನು ? ಇಲ್ಲ ಏನರ ಲಫಡಾ-ಗಿಫಡಾ ಮಾಡಿ ಈ ಕೂಸಿನ್ನ ನಮ್ಮ ಕೈಯಾಗ ಕೊಟ್ಟು ದಾಟಿಗೋಬೇಕಂತ ಮಾಡಿಯೇನು ?" ಹೊರಗಿಂದ ಧ್ವನಿ ಅಪ್ಪಳಿಸಿದಾಗ ಮತ್ತ ಈ ತಾಪತ್ರಯದ ಪ್ರಪಂಚಕ್ಕ ಮರಳಿ ಟಾಯಿಲೆಟ್ ಬಾಗಲು ತೆಗೆದು "ಸಾರಿ ರೀ, ಏನೋ ಒಂಥರಾ ಹೊಟ್ಯಾಗ ತಳಮಳಾಕ ಹತ್ತಿತ್ತು ಅದಕ್ಕ ಸ್ವಲ್ಪ ಲೇಟಾತು" ಅಂತ ಬಾಗಲಾ ತೆಗೆದೆ. "ಈ ಬ್ರಿಟೀಷರು ನಮಗೆಲ್ಲಾ ಸ್ವಾತಂತ್ರ್ಯ ಕೊಟ್ಟು ಹೋಗೂಮುಂದ ಸಾರಿ !!! ಥ್ಯಾಂಕ್ಸ ಎರಡು ಪೀಡಾಗಳನ ಈ ದೇಶದೊಳಗ ಬಿಟ್ಟು ಹೋಗ್ಯಾರ ನೋಡ್ರಿ, ಸಾರಿ ಅಂದ್ರ ಮುಗೀತು ಮುಂದ ಏನೂ ಮಾತಾಡುಹಂಗಿಲ್ಲ" ಅಂತ ಇನ್ನೊಬ್ಬವನ ಜೊತೆಗೆ ಗೊಣಗಿದ "ಹಂಗೇನಿಲ್ರೀ ಈಗಿನ ಜಮಾನಾ ಹಿಂಗ ಅದ" ನಾವು ಏನು ಮಾತಾಡಿದ್ರೂ ಅಷ್ಟ ಅದ" ಅಂತ ಮಾತಾಡಿಕೊಳ್ಳತ ಅವರು ಕೂಸು ನನ್ನ ಕೈಯೊಳಗ ಕೊಟ್ಟು ಇಳದು ಹೋದರು. ಸಿಂಕಿನೊಳಗ ಕೈ ತೊಳೊಕೊಂಡು ಮತ್ತ ಕೂಸಿನ್ನ ತಗೊಂಡು ನನ್ನ ಜಾಗಾದಾಗ ಕೂತ್ಕೊಂಡೆ.



* * *

 
      ಪರಿಚಯದವರು ನನಗ ಏನೆಲ್ಲಾ ಮಾತಾಡಿದ್ರು ಈ ಕೂಸಿನ ದೆಸೆಯಿಂದ. ಇವರೆಲ್ಲಾ ನನಗ ಪರಿಚಯ ಅಂತ ಅನ್ನೂಕಿಂತ ನಮ್ಮ ಮಾವನ ಜೊತೆ ಕೆಲಸ ಮಾಡಿದವರು. ನನ್ನ ಮುಂದ ನನ್ನ ನೈತಿಕತೆ ಬಗ್ಗೆ ಈ ಥರಾ ಮಾತಾಡೋವವರು ಇನ್ನ ನಮ್ಮ ಮಾವನ ಮುಂದ ಏನೇನು ಕಥಿ ಹೇಳತಾರೋ ಅಂತ ಮನಸಿನೊಳಗ ಕಳವಳ ತುಂಬಿಕೊಂತು. ಮ್ಯಾಟ್ರಿಕ್ ಮುಗಿಸಿ ಅಲ್ಲಿ-ಇಲ್ಲಿ ಅಡ್ಯಾಡಿಕೊಂತ ಇರಬೇಕಾದರ, ದೂರದ ಸಂಬಂಧ ಅಂತ ನಮ್ಮ ಮಾವ ನನಗ ಏನೋ ಮಾಡಿ ಒಂದ ಕೆಲಸ ಕೊಡಿಸಿ, ಮತ್ಯಾಕ ಬಾಡಿಗಿ ಮನಿ ಮಾಡತಿ ಅಂತ ಹೇಳಿ ತನ್ನ ಮನಿಯೊಳಗ ಮನಿ ಅಳಿಯಾನ ಥರಾ ಇಟ್ಕೊಂಡಿದ್ದಾ. ಮದುವೆ ಆಗಿ ಇನ್ನೂ ಒಂದ ವರ್ಷ ಕಳೆದಿಲ್ಲಾ. ಹಿಟ್ಲರ್ ಥರಾ ಇರೋ ನಮ್ಮ ಮಾವನ ಮನಿಯೊಳ ನಾನು ಮಾತಾಡಿದ್ದಕ್ಕಿಂತ ಹೊರಗ ನನ್ನ ಕೆಲಸ-ಕಾರ್ಯದ ಮಾತ ಮಾತಾಡಿದ್ದ ಹೆಚ್ಚ. ಅಂಥಾದರೊಳಗ ಈ ಕೂಸು ನನಗ ಗಂಟ ಬಿದ್ದೈತಿ.. ಇದನ್ನ ಕರಕೊಂಡ ಇನ್ನ ನಾ ಮನಿಗೆ (ಮಾವನ ಮನಿಗೆ) ಹೋದ್ರ ನನ್ನ ಪರಿಸ್ಥಿತಿ ಏನಕ್ಕೈತಿ ಅನ್ನೂದು ವಿಚಾರ ಮಾಡಿದರ ಮೈಯೆಲ್ಲಾ ಬೆವರಾಕ ಸುರು ಆತು. ಆ ಹೆಂಗಸಿನ ಜೊತೆ ಇದ್ದಾಗ ಕಿರಿ-ಕಿರಿ ಮಾಡಿದ ಕೂಸು ಯಾಕೋ ಏನೋ ಇಷ್ಟೊತ್ತಾದರೂ ನನ್ನ ತೊಡೆಮ್ಯಾಲೆ ಆಟ ಆಡಿಕೊಂತ ತುಂಟ ನಗು ಬೀರಿಕೊಂತ ಸುಮ್ಮನ ಇತ್ತು. ಈ ಕೂಸು ಅಕೀದ ಹೌದೋ ಅಲ್ಲೋ ಯಾರಿಗೆ ಗೊತ್ತು. ಅಥವಾ ಅಕೀನೂ ಏನೋ ಲಫಡಾ ಮಾಡಿ ಬೇಕಂತ ನನಗ ತಗಲಿಸಿ ಹೋಗಿರಬೇಕು ಹಿಂಗ ಏನೇನೋ ಕೆಟ್ಟ ವಿಚಾರಗಳು ಮನಸಿನೊಳಗ ಕುಣ್ಯಾಕ ಹತ್ತಿದವು. ಮೆಲ್ಲಗೆ ಆಕಡೆ-ಈಕಡೆ ಸರಿದಾಡಿಕೊಂತ ತನ್ನ ಆಟ ಮುಂದುವರೆಸಿದ್ದ ಕೂಸು ನೋಡಿದ್ರ ನನ್ನ ತೊಡಿಮ್ಯಾಲೆ ಹಾವು ಸರಿದಾಡಿದಂಗ ಭಯ ಅನಿಸಿ, ಆ ಕೂಸಿನ ಕಡೆ ನೋಡುದ ಬಿಟ್ಟೆ. ಸ್ವಲ್ಪ ಹೊತ್ತಿನ ಮೊದಲ ನನ್ನ ಮನಿಸಿನ್ಯಾಗ ಅವ್ಯಕ್ತ ಆನಂದ ಪಸರಿಸಿದ್ದ ಕೂಸು ಈಗ ಅನವರತ ಭಯಕ್ಕ ಮೂಲ ಆಗಿತ್ತು.
* * *


       "ಚಾಯ್-ಚಾಯ್, ಗರಮಾ-ಗರಂ ಇಡ್ಲಿ-ವಡೆ, ಬೆಳಗಾವ ಕುಂದಾ" ಅಂತ ರೈಲಿನೊಳಗ ಗದ್ದಲ ಕೇಳಿಸಿಕೊಂಡು ಮೈಮ್ಯಾಲ ಖಬರು ಇಲ್ಲದ ಕೂತಂತವ ಬೆಳಗಾವಿ ಬಂತು ಅಂತ ಎದ್ದೆ. ಕಿಲ-ಕಿಲನೆ ಕೂಸು ನಕ್ಕಿದ್ದ ಒಂದು ಪ್ರಶ್ನ್ಯಾರ್ಥಕ ಚಿನ್ಹೆ ನನ್ನ ಮುಖದ ಮ್ಯಾಲೆ ಮೂಡಿಸಿತು. ಇದನ್ನ ಏನು ಮಾಡಬೇಕಪಾ ಇನ್ನ. ಅಂತ ಎದ್ದು, ಇಲ್ಲೇ ಬಿಟ್ಟುಹೋದರ ಯಾರ ಕೂಸೈತೋ ಏನೋ ? ನನಗ್ಯಾಕ ಇಲ್ಲದ ತಾಪತ್ರಯ ಅಂತ ಎರಡು ಹೆಜ್ಜೆ ಮುಂದ ಇಟ್ಟಾಗ... "ರೀ ಸಾಹೇಬರ ಕೂಸು ತೊಗೋರೀ ಇಲ್ಲಂದ್ರ ಕೆಳ ಬಿದ್ದಗಿದ್ದೀತು" ಮತ್ತೊಬ್ಬರು ಎಚ್ಚರಿಸಿದಾಗ, ಇದು ನನ್ನ ಜನ್ಮಜನ್ಮಾಂತರದ ಜೊತೆಗಾರ(ತಿ) ಇರಬೇಕು ಏನಾದರಾಗಲಿ ಅಂತ ಎತ್ಕೊಂಡು ಕೆಳಗ ಇಳಿದೆ. "ಓ ಅಲ್ಲೈತಿ ನೋಡು ... ಆ ಸಾಹೇಬ್ರು ಎತ್ಕೊಂಡಾರ" ಅಂತ ಒಬ್ಬರು ನನ್ನ ಕಡೆ ಓಡೋಡಿ ಬಂದ್ರು. ಎಲಾ ಇವರ ಇಷ್ಟೊತ್ತನ ಇದರಿಂದ ನನ್ನ ಮಾನಸಿಕ-ನೈತಿಕ ನೆಮ್ಮದಿ ಹಾಳಾತು. ಈಗ ಕೂಸಿನ ಕದ್ದಾವ ಇವ ಅಂತ ಮತ್ತೊಂದು ಸಮಸ್ಯೆ ಬಂತಲ್ಲಪಾ ಅಂತ ಅಳುಕಿಕೊಂತ ಕೈ-ಕಾಲು ನಡುತಿದ್ರೂ ಅವರಕಡೆ ಮೆಲ್ಲಗೆ ಸಾಗಿದೆ. "ಥ್ಯಾಂಕ್ಸ ರೀ ಸರ.. ಅಕಿಗೆ ರೈಲು ಹತ್ತಾಕ ಆಗಲಿಲ್ಲಂತ ನನಗ ಫೋನು ಮಾಡಿದಳು", "ಕೂಸಿಗೆ ಏನಾತೋ ಏನೋ... ಎತ್ಕೊಂಡವರು ಅಲ್ಲೇ ಏನರ ಬಿಟ್ಟು ಇಳದರ.... ಕೆಳಗ ಏನರ ಬಿದ್ದು ...." ಅಂತ ಹಂಗ ಅವರು ತಡವರಿಸಿಕೊಂತ ನನ್ನ ಕೈಯೊಳಗಿನ ಕೂಸು ಎತ್ಕೊಂಡರು. ಹೂವಿನಷ್ಟು ಹಗುರವಾಗಿದ್ದರೂ ನನ್ನ ಜೀವನಕ್ಕಿಂತ ಭಾರ ಅನಿಸಿದ ಆ ಕೂಸು ಅವರ ಕೈಯೊಳಗ ಹೋದದ್ದ ತಡಾ... ನನಗ ಗಾಳ್ಯಾಗ ತೇಲುವಂತಹ ಸಂತೋಷ. ಅವರು ಕೂಸು ಎತ್ಕೊಂಡು ದೂರ ಸಾಗಿದಂಗ ಕೂಸು ಮತ್ತ ಕಿಲ-ಕಿಲನೆ ನಕ್ಕಿತು.

***


ಈ ಸಲಾ ನನ್ನ ಮನಸು ಸಂತೋಷದಿಂದ ಅರಳಿತು. ಮತ್ತ ಮನಸಿನೊಳಗ "ಈ ಬ್ರಿಟೀಷರು ನಮಗೆಲ್ಲಾ ಸ್ವಾತಂತ್ರ್ಯ ಕೊಟ್ಟು ಹೋಗೂಮುಂದ ಸಾರಿ !!! ಥ್ಯಾಂಕ್ಸ ಎರಡು ಪೀಡಾಗಳನ ಈ ದೇಶದೊಳಗ ಬಿಟ್ಟು ಹೋಗ್ಯಾರ ನೋಡ್ರಿ, ಥ್ಯಾಂಕ್ಸ ಅಂದ್ರ ಮುಗೀತು ಮುಂದ ಏನೂ ಮಾತಾಡುಹಂಗಿಲ್ಲ" ಗೊಣಗಾಟ ಮುಂದುವರೆದಿತ್ತು.