Saturday, June 30, 2012

ಕಾವ್ಯ ಕನ್ನಿಕೆ

ಅವಳು, ಅವಳೆನಗೆ
ಜೀವಂತ ಕವಿತೆ
ನನ್ನ ಬಾಳಿನ ಜೀವಂತಿಕೆ
ಅವಳೊಂದು ಜೀವಂತ ಕವನ

ಸುತ್ತ ಸುಳಿಯು ತಂಗಾಳಿಗೆ
ಅತ್ತಿತ್ತ ಹಾರುವ
ಅವಳ ಮುಂಗುರುಳು
ಅವಳೊಂದು ಜೀವಂತ ಕವನ

ಜಗದ ಎಲ್ಲವನ್ನೂ
ಅಚ್ಚರಿಯಿಂದ ನೋಡುವ
ಅವಳ ಆ ಕಣ್ಣುಗಳು
ಅವಳೊಂದು ಜೀವಂತ ಕವನ

ಎನ್ನ ಹೃದಯಕ್ಕೆ
ತಂಪನ್ನೀಯುವ
ಅವಳ ಮಂದಹಾಸ
ಅವಳೊಂದು ಜೀವಂತ ಕವನ

ಸೃಷ್ಟಿಯ ಸೌಂದರ್ಯವನ್ನೇ
ಹೊತ್ತು ತಿರುಗುವ
ಅವಳ ಸುಂದರ ಮೈಮಾಟ
ಅವಳೊಂದು ಜೀವಂತ ಕವನ

ಒಂದಿನಿತೂ ಬೇಸರಿಸದಂತೆ
ಎಲ್ಲವನ್ನೂ ಚುರುಕಾಗಿ ಮಾಡುವ
ಅವಳ ಚಲನ-ವಲನ
ಅವಳೊಂದು ಜೀವಂತ ಕವನ

ಅತ್ತಿಂದಿತ್ತ ಓಡಾಡುವಾಗ
ಬೆನ್ನ ಹಿಂದೆ ಓಲಾಡುವ
ಅವಳ ಹೆರಳು
ಅವಳೊಂದು ಜೀವಂತ ಕವನ

ಸುತ್ತ ಸುಳಿಯುವ
ತಂಗಾಳಿಯಂತೆ ಮುದನೀಡುವ
ಅವಳ ಒಯ್ಯಾರ
ಅವಳೊಂದು ಜೀವಂತ ಕವನ

ಸಖೀಗೀತ

ಸಖೀ....
ನೀನಿಲ್ಲದ ಮನೆ
ಕಾರಿರುಳ ಆಗಸದಂತೆ
ಮನದಲ್ಲಿಯೂ ಬೆಳಕಿಲ್ಲ
ಮನೆಯೂ ಅಮವಾಸ್ಯೆ
ಚಂದ್ರಿಕೆಯಿಲ್ಲ

ಆದರೂ ನಭೋಮಂಡಲದಿ
ಮೆರೆಯುವ ನೂರು
ತಾರೆಗಳ ತೆರದಿ ಮಿನುಗುವ
ಚಂಚಲೆಯರ ನಯನಗಳು
ಮಿಣುಕುತ್ತವೆ ಚಂದ್ರಿಕೆಯಂತಲ್ಲ

ಎದೆಯಾಳದಲಿ
ಭುಗಿಲೇಳುವ ವಿರಹದಾ ತಾಪ
ಮೇಲೆ ನಿನ್ನ ಸವಿನೆನಪುಗಳ
ತಣ್ಣನೆಯ ಗಾಳಿ
ಕಣ್ಣು ಮುಚ್ಚಿದಾಗಲೆಲ್ಲ ಕಾಣುವ
ಚಂದ್ರಿಕೆಯ ಬಿಂಬ

ನೀನಿಲ್ಲ ಮನೆಯಲಿ
ಮನದಾಳದಿ ಮಿನುಗುವ
ಚಂದ್ರಿಕೆಯ ನೆನಹುಗಳು
ವಿರಹದ ಬೇಗೆಯಲ್ಲಿಯೂ
ಎನ್ದ ಮನದುಂಬಿರುವ ನೀನು
ಇಲ್ಲಿ ಇಲ್ಲವೆಂದು ಹೇಗೆ ಹೇಳಲಿ.......

ಹಾಗೇ ಸುಮ್ಮನೇ....

ಅಂದು ಹಾಗೆಯೇ ಇತ್ತು
ಅವಳು ಬರುವ ದಾರಿಯಲಿ
ರಸ್ತೆ ಬದಿಯ ಮರಗಳಿಂದ
ಉದುರಿದ ಹೂರಾಶಿ

ಮಂದ ಮಾರುತದಿ
ಪರಿಮಳವೂ ಹರಡುತಿತ್ತು
ಮೆಲ್ಲಗೆ
ಅವಳ ಮುಗುಳ್ನಗೆಯ ಸೊಬಗಿನಲಿ

ಇಂದಿಗೂ ಅರಳಿದೆ
ಅವಳ ಪ್ರೀತಿ ಎನ್ನ
ಮನದೊಳಗೆ, ಮನೆಯೊಳಗೆ
ಅನುರಾಗದ ಪರಿಮಳ
ಮೈಮನಗಳಲಿ ತುಂಬಿದೆ

ಹಸಿರಾಗಿದೆ ಮನದಿ
ಆ ದಿನಗಳ ನೆನಪು
ಹಳತಾಗಿಲ್ಲ ಇನ್ನೂ ಆ ಸೊಬಗು
ಅನುಕ್ಷಣವೂ ಕಳೆದು
ಹೋಗುತ್ತಿದ್ದೇನೆ ಅವಳ ಪ್ರೇಮರಾಗದಲಿ

ಸಖೀಗೀತ

ಸಖೀ....
ಮರೆತು-ಬಿಡು ಎನ್ನ
ನೀನು ಅಂತ ಹೇಳುತ್ತಲೇ
ಅವಶೇಷಗಳ ಅಡಿಯಲ್ಲಿ
ಶವವಾಗಿ ಅಡಗಿ ಕುಳಿತಿರುವ
ಆ ನೆಹುಗಳಿಗೆಲ್ಲ
ಮರು ಜೀವ ಕೊಟ್ಟಿಯಲ್ಲಾ....

ಕವಲು ದಾರಿಯಲಿ
ಬಹುದೂರ ಸಾಗಿದರೂ
ಮತ್ತೆ ಮತ್ತೆ ನಿನ್ನ ನೆನಪು
ಮರುಕಳಿಸುವುದಲ್ಲಾ.....

ಹೊರಡುವ ಮುಂದೆ
ನಿನ್ನ ಕಣ್ಣಂಚಿನಿಂದ
ಜಾರಿದ ಕಂಬನಿಯನು ಹೊತ್ತು
ಈ ಜೀವ ಭಾರವಾಯಿತಲ್ಲಾ....

ಜಗವನೆಲ್ಲ ಅಲೆದರೂ
ಗೂಟಕೆ ಕಟ್ಟಿರುವ ದನದಂತೆ
ನಿನ್ನ ನೆನಹುಗಳ ಸುಳಿಯಲ್ಲಿ
ಈ ಜೀವ ಸುತ್ತುವದಲ್ಲಾ....

ಸೇರದಾ ದಾರಿಯಲಿ
ಸಾಗಿ ನಡೆದರೂ ನಾವು
ಮತ್ತೊಂದು ಜನುಮದಿ
ಮತ್ತೆ ಸೇರುವಾಸೆಯನು
ಈ ಹೃದಯ ಅನವರತ ಮಿಡಿಯುವದಲ್ಲಾ....

ಸಖೀಗೀತ

ಸಖೀ....
ಮೌನಕ್ಕೆ
ಶರಣಾಗಿದ್ದೇನೆ ನಾನು
ಈಗೀಗ
ನೀನಿಲ್ಲದ ಕ್ಷಣಗಳ
ಎಣಿಸುವಾಗ

ಮೌನವೇ
ಲೇಸೆನಗೆ ಇಂದು
ನಾನು ನನ್ನೊಳಗೆ
ಅವಿತಿಟ್ಟುಕೊಂಡಿರುವ
ನಿನ್ನೊಲವ ಸವಿಯಲು

ಪ್ರೇಮ ಸಾಗರದಿ
ನಾವೀರ್ವರೂ ಹೆಕ್ಕಿ ತೆಗೆದ
ಮುತ್ತುಗಳ ಹೊಂದಿಸಿ
ಭಾವನೆಗಳ ಪೋಣಿಸುತ
ನಿನಗೆಂದೇ
ಮಾಲೆ ಕಟ್ಟುತ್ತಿದ್ದೇನೆ ಮನದಿ.....

ಅನಿರೀಕ್ಷಿತ

ಗೆಳಯಾ...
ನೋಡ ನೋಡುತ್ತಿದ್ದಂತೆ
ಹಾಗೇಕೆ ರಸ್ತೆ ಬದಲಾಯಿಸಿದೆ ನೀನು
ಅರೆಕ್ಷಣದಿ ಕವಲು ದಾರಿಯಲಿ
ದೂರ ಸಾಗಿಬಿಟ್ಟೆವಲ್ಲಾ....

ದುಂಡಗಿನ ಜಗವು
ಮತ್ತೆ ಸೇರಿಸಿತಲ್ಲಾ
ಮತ್ತೊಮ್ಮೆ ಕಣ್ಣನೋಟದಿ
ಬಂಧಿಯಾದೆವಲ್ಲಾ...

ಮುಖದಲ್ಲಿ ಆವರಿಸಿದ ಸುಕ್ಕಿನ ಗೆರೆಗಳು
ಒಂದೊಂದು ಗೆರೆಯಡಿಯೂ
ನೂರು ನೆನಹುಗಳು
ಬೆಳ್ಳಿಕೂದಲಿನಡಿಯ ಸಿಕ್ಕುಗಳು
ಗಂಟಿಕ್ಕಿರುವ ನೆನಪಿನಾ ಬುತ್ತಿ

ಅಂದು ಕೈಜೋಡಿಸಿ
ಜಿಗಿಯುತ್ತಾ-ನೆಗೆಯುತ್ತಾ
ಬದುಕು ಎಂದರೇನೆಂದು
ಅರಿಯುವಾ ಮೊದಲೇ
ಕೈಬಿಡಿಸಿಕೊಂಡು ಪಯಣ ಸಾಗಿತಲ್ಲಾ...

ನಿನ್ನ ಕೈಹಿಡಿದಿರುವ ಆ ಪುಟ್ಟ ಪೋರಿ
ನನ್ನ ತೋಳಿನಾಸರೆಯಲಿ
ಬೆಚ್ಚಗೆ ಕುಳಿತಿರುವ ಎನ್ನ ಮಗು
ನಮ್ಮೀರ್ವರ ಕೈಗಳು
ಮತ್ತೆ ಸೇರದಂತೆ ಬಂಧಿಸಿವೆಯಲ್ಲಾ...

ಏನದು
ನಮ್ಮೀರ್ವರ ಸಂ-ಬಂಧ
ಮನದಲೆಲ್ಲೋ ವೀಣೆ ಮಿಡಿಯುತಿದೆ
ಮರೆತು ಹೋಗಿರುವ
ಬಾಳ ಸ್ವರವ ಹರಡುತಿದೆ

ಮತ್ತೆಂದೂ ಸೇರದು
ನಮ್ಮ ಕೈಗಳು
ಕುಣಿದು-ಕುಪ್ಪಳಿಸುವ ಕಾಲವಲ್ಲ
ಅಪ್ಪಳಿಸುತಿದೆ ಸಂ-ಸಾರ ಸಾಗರದ ತೆರೆಯು
ಅಲ್ಲಿಯೂ ಕಾಡುತಿದೆ ನಿನ್ನೊಲವಿನಾ ಸಂಗೀತ.....

ಬಿಸಿಲ ಪಾಡು

ಮನೆಯ ಮುಂದೆ
ಅಂಗಳದಲ್ಲಿ
ಹೂ-ಗಿಡಗಳ ಮೇಲೆ
ಬಡ ಹೆಂಗಸಿನ
ಹರಿದ ಸೀರೆಯಂತೆ
ಹರವಿದ ರಸ್ತೆಯ ಮೇಲೆ
ಹರಡಿದ ಬಿಸಿಲು

ದಾಹಕ್ಕೆ
ಬಾಯ್ದೆರೆದ ಭೂಮಿ
ಚಿವ್ ಗುಟ್ಟುವ ಗುಬ್ಬಚ್ಚಿ
ನೊಸಲಿನಲಿ
ಬೆವರ ಹನಿಯನು ಧರಿಸಿ
ಬಾಯಾರಿ
ಒಡಲ ಬೇಗೆಯನು
ತಣ್ಣಗಾಗಿಸಲು
ಭಿಕ್ಷೆ ಬೇಡುವ ಹುಡುಗ

ರಸ್ತೆಬದಿಯಲಿ
ಬಿದ್ದಿರುವ ಕಸ, ಕೊಳೆ
ಅತ್ತಿಂದಿತ್ತ ಹಾರಾಡುವ
ಅವರಿವರು ಏನೇನೋ
ತಿಂದು ಬೀಸಾಕಿದ
ಕಾಗದದ ಚೂರುಗಳು
ಬಿಸಿಲ ಧಗೆಗೆ
ಗಿಡ-ಮರಗಳು
ಮೈಕೊಡವಿದಾಗ
ಉದುರಿರುವ ತರಗೆಲೆಗಳ ರಾಶಿ

ಮಳೆ ಬೇಕು
ಇಳೆಗೆ, ಹಕ್ಕಿ-ಪಕ್ಷಿಗಳಿಗೆ
ತಲೆ ಮೇಲೆ ಕೈ-ಹೊತ್ತು
ಕುಳಿತಿರುವ ಅನ್ನದಾತನಿಗೆ
ದಣಿದು ಬಾಯಾರಿದ
ಬಡ ಜೀವಗಳಿಗೆ
ವರ್ಷಧಾರೆಯ ಸಿಂಚನವಾಗಲಿ
ತಣ್ಣಗಾಗಿಸಲಿ ಬೆಂದ
ಮನಸುಗಳಿಗೆ, ಭೂತಾಯಿಗೆ

ಸಖೀಗೀತ

ಸಖೀ....
ಭಿತ್ತಿಯ ಮೇಲೆ
ನಿನ್ನದೇ ಚಿತ್ತಾರ
ಕಾರಿರುಳ ಅಮವಾಸ್ಯೆಯ
ಆಗಸದಿ ಮಿನುಗುವ
ನೂರು-ಸಾವಿರ ತಾರೆಗಳ ತೆರದಿ
ಎತ್ತ ನೋಡಿದರೂ
ಮನದಲ್ಲಿ ಬೆಳಕು

ಚಂದ್ರಿಕೆಯ ಮೀರಿಸುವ
ನಿನ್ನ ಚೆಲುವು
ಕೃಷ್ಣ-ಶುಕ್ಲ ಪಕ್ಷಾತೀತ
ನಿನ್ನೊಲುಮೆಯ ಬೆಳಕು
ಎನ್ನ ಹಗಲು ಬೆಳಗುವದು
ನಿನ್ನ ತುಂಟ ನೋಟದಿ
ಇರುಳಿನಲಿ
ನಿನ್ನೊಲುಮೆಯ ಕ್ಷೀರಧಾರೆ

ಸಖೀಗೀತ

ಸಖೀ....
ಎನ್ನ ಮೌನದೊಳಗೂ
ನಿನ್ನ ಪಿಸುಮಾತುಗಳು
ಪ್ರತಿಧ್ವನಿಸುತ್ತವೆ....

ಮೌನದ ಮನೆಯೊಳಗೆ
ಮೂಲೆ-ಮೂಲೆಯಲ್ಲಿಯೂ
ನಿನ್ನದೇ ಒಡನಾಟ..

ಏಕಾಂತದಲಿ
ಎನ್ನ ಅಂತರಂಗದಲಿ
ನಿನ್ನದೇ ಪ್ರತಿರೂಪ....

ವಾಚಾಳಿತನವ ತೊರೆದಾಗ
ಪ್ರಪಂಚವೆಲ್ಲವ ಮರೆತು
ಮೌನದೊಳಗೆ ನಿನ್ನೊಡನೆ ಸಂಭಾಷಣೆ.....

ಹಾಗೇ ಸುಮ್ಮನೇ....

ಮನದಾಳದಿ
ಪ್ರೀತಿಯ ಮಳೆಗಾಲ
ಸುರಿದರೇನು
ಬೆಚ್ಚನೆಯ ಅನುಭೂತಿ
ಜೊತೆಗಿದ್ದರೆ ಮಾತ್ರ
ಭಾವನೆಗಳು
ಮೊಳಕೆಯೊಡೆಯುವುದು.....

ಮೌನದಲಿ ಕುಳಿತ
ಯುಗಳ ಜೋಡಿಯ
ಕಂಗಳು ಮಾತನಾಡುವಾಗ
ಅವುಗಳನೆಲ್ಲಾ ಪದಗಳ
ಮೂಸೆಯಲಿ ಸೆರೆಹಿಡಿಯಲು
ಮನದ ಶಬ್ದಕೋಶದಲಿ
ಬರೀ ಹುಡುಕಾಟ....

ಏನೋ ತೋಚಿದ್ದು

ಕಿಟಕಿಯಿಂದಾ
ತೂರಿ ಬರುವ ತಂಗಾಳಿಯಲಿ
ಕುಳಿತ ಕುರ್ಚಿಯ
ಎಡ-ಬಲ ಕಾಲಡಿಯಲ್ಲಿ
ಬಿರುಬಿಸಿಲಿನಲಿ
ನಳನಳಿಸುತ್ತಿರುವ ಹೂವಿನಲ್ಲಿ
ಹನಿ ನೀರಿಗಾಗಿ
ಹಪಹಪಿಸಿ ಬಾಯ್ದೆರೆದಿರುವ
ಭೂಮಿಯ ಕೊರಕಲಿನಲ್ಲಿ
ಎಲ್ಲೆಲ್ಲೂ ಚೆಲ್ಲಿವೆ


ಚೆಲ್ಲಾಪಿಲ್ಲಿಯಾಗಿ ಹರಡಿವೆ
ಅಕ್ಷರಗಳು
ಬೀಸುವ ಗಾಳಿಗೆ
ಚೆದುರಿಹೋದ ಕಾಗದದ
ತುಂಡುಗಳಂತೆ
ಎಲ್ಲಿ ನೋಡಿದರೂ
ಭಾವನೆಗಳು ಚದುರುತ್ತಿವೆ
ಕವಿತೆಯ ತುಣುಕುಗಳಂತೆ

ಒಪ್ಪವಾಗಿ ಓರಣವಾಗಿ
ಜೋಡಿಸಿ
ಭಾವನೆಗಳ ಪೋಣಿಸಿ
ಪುಟ್ಟ ಕವಿತೆಯೊಂದನ್ನು
ಬರೆಯಲೂ ಸಿಗದಂತ
ಚಂಚಲ ಮನಸು.....

ಬದುಕು

ಕಣ್ಣು ಹಾಯಿಸಿದಷ್ಟೂ
ಕಾಲಡಿಯಲಿ ಬಿದ್ದಿರುವ
ಬದುಕು....

ಅಕ್ಕಪಕ್ಕದಲಿ
ಅವರಿವರು ಬಂದು
ಸೇರಿದ ಪಯಣಿಗರು

ಆಗಾಗ ಧುತ್ತನೆ
ಎದುರಾಗುವ
ಕವಲು ದಾರಿಗಳು

ಮುಂದೆ ಸಾಗಬೇಕು
ಗಮ್ಯವು ಕಾಣದು
ಗುರಿಯ ತಲುಪಲು

ಎಡವಿದಾಗ ಎತ್ತಿ ಹಿಡಿದು
ಮುನ್ನಡೆಸಲು
ಸಂಗಾತಿಗಳು ಬೇಕು

ಸಖೀಗೀತ

ಸಖೀ
ನೀ ಎನ್ನೆದುರು
ಬಂದಾಗ
ಮಾತು ಮರೆತಂತೆ
ಮಾತನಾಡಲೂ ಬಾರದ
ಹಸುಳೆಯಂತೆ
ಕಣ್ಣುಗಳೇ ಮಾತನಾಡಲಿ
ಎನ್ನುವ ಹಂಬಲ

ಮೇರು ಶಿಖರವನೇರಿ
ಜಗವನೆಲ್ಲಾ ಕಂಡು
ಮೂಕವಿಸ್ಮಿತವಾಗುವ ಭಾವ
ಅಂತರಾಳದ ಭಾವನೆಗಳು
ಪದಗಳ ಹಂಗಿಲ್ಲದೇ
ಹರಿಯಲಿ ಎನ್ನುವಾ ಹಂಬಲ

ನೀ ನುಡಿಯಲಾರೆ
ಆದರೂ ಆರಿವುದೆನ್ನ ಮನ
ನಮ್ಮಿಬ್ಬರ
ನೋಟಗಳ ಮಂಥನದಲ್ಲಿ
ಉಕ್ಕಿ ಹರಿಯುವ
ಸಂತಸವೆಲ್ಲಾ ಪ್ರೇಮಾಮೃತ
ಮನಗಳು ಮಾತನಾಡುವಾಗ
ಮಾತುಗಳು ಬೇಕೇ !!!!

ಪಯಣ

ಕಾಲಡಿಯಲ್ಲಿ
ಭೂಮಿ ಜಾರುತಿದೆ
ಕಾಲಚಕ್ರದ
ಸುಳಿಗೆ ಸಿಲುಕಿ
ಜನ್ಮದಾರಭ್ಯದಿಂದ
ತೆವಳುತ್ತಾ ಸಾಗಿ
ಮಂಡಿಯೂರಿ
ಮತ್ತೆ
ಎದ್ದು ಓಡಾಡುವ
ಕಾಲಾಂತರದಿ

ಎಲ್ಲರೂ ನಕ್ಕು
ಗಲ್ಲ ಚಿವುಟಿ
ಮುಖದ ಚಂದ್ರಬಿಂಬದ
ಮಂದಹಾಸಕ್ಕೆ ಸೋತು
ಮುನ್ನಡೆಯುವ
ಕಾಲವೆಂದೋ
ಕಳೆದುಹೋಗಿದೆ

ಅತ್ತಿತ್ತ ಓಲಾಡುತ್ತಾ
ಎದ್ದು-ಬಿದ್ದು ನಡೆಯುವಾಗ
ಕೈಹಿಡಿದು ಮೇಲೆತ್ತಿ
ಮು್ನ್ನಡೆಸಿದವರು
ಯಾರು-ಯಾರೋ
ಹಿಂದಿರುಗಿ ನೋಡಿದಾಗ
ಅವರೆಲ್ಲರ ನೆರಳುಗಳು

ಹಸಿದು ಹಂಬಲಿಸಿ
ಕಂಬನಿಯ ಸುರಿಸಿದಾಗ
ಎತ್ತಿ ಬಿಗಿದಪ್ಪಿಕೊಂಡು
ಕೈತುತ್ತ ನೀಡಿ
ಉಂಬುದನೆ ಖುಷಿಯಿಂದ
ನೋಡಿ ನಲಿದವರು
ಬರೀ ನೆನಪುಗಳ ಲೋಕದಲ್ಲಿ

ಆಗಸದಗಲ
ಬಿದ್ದ ಬದುಕು
ಕಣ್ಣು ಹಾಯಿಸಿದತ್ತ ದಾರಿ
ಗಮ್ಯವರಿಯದ ಪಾಡು
ಗಮನಿಸಲರಿಯದ ಭಾವ
ಗುರುವು ಬೇಕು
ಸಂಗಾತಿ ಬೇಕು
ಗುರಿಯೆಡೆಗೆ ಸಾಗಲು....

ನಿರೀಕ್ಷೆ

ಸುಮ್ಮನೇ
ಅತ್ತಿತ್ತ ಚಲಿಸುವ
ನಯನಗಳು
ಕಾಣುವ ನೋಟ
ಮನದಲ್ಲಿ ಮೂಡದು
ಮನದಲ್ಲಿಯ ಚಿತ್ರಣ
ನೋಟದಲ್ಲಿ ಕಾಣದು
ಅವಳು
ಅಲ್ಲಿ ಇಲ್ಲವೆಂಬುದು
ಅರಿತೂ
ಮತ್ತೆ ಮತ್ತೆ ಇಣುಕಿ
ನೋಡುವ ನಯನಗಳು

ಮನದಲ್ಲಿ ಮಂಥನ
ಅವಳೊಡನೆ ಒಡನಾಟ
ಎಲ್ಲವನೂ ಅರಿತ
ಮನಸುಗಳು
ಅರ್ಥವಿಲ್ಲದ ಮಾತುಗಳು
ಆಗಾಗ ಮುಂಗುರುಳ
ಸರಿಸುವ
ಅವಳ ಕೈಬೆರಳು
ಕಣ್ಣೆದುರು ಅವಳಿಲ್ಲವಲ್ಲ
ಅಂತರಾಳದ ಚಿತ್ರಕೆ
ಅಳಿವಿಲ್ಲವಲ್ಲ

ಮನದಲ್ಲೇ
ಮುದಗೊಳಿಸುವ
ಅವಳ ಸುಳಿದಾಟದ
ಭ್ರಮೆಯ ಕಂಪು
ಕನವರಿಕೆಯಲ್ಲಿಯೂ
ಕೇಳುತ್ತಿರುವ
ಅವಳ ಕಾಲ್ಗೆಜ್ಜೆ,
ಕೈಬಳೆಗಳ ಸದ್ದು
ಕಣ್ಣೆದುರು ಇರದಿದ್ದರೇನಂತೆ
ಅಳಿಯಲಾರದು
ಅಂತರಂಗದ ಮಂಥನ.....