Saturday, March 28, 2015

ಸೇತುವೆ

ಯಾರೋ ಬಂದರು

ಇನ್ಯಾರೋ ದಾಟಿ ಹೋದರು
ಅಸಂಖ್ಯ ಜೀವಿಗಳು, ಪ್ರಾಣಿಗಳು,
ಚರಾಚರಗಳನು ಹೊತ್ತು ಸಾಗುವಾ 
ವಾಹನಗಳ
ಅಲೆದಾಟಕ್ಕೆ ನಲುಗಿ
ಶಿಥಿಲಗೊಂಡಿದೆ ಎನ್ನ ಮನ
ಆದರೂ
ಎರಡು ದಡಗಳ
ಜೋಡಿಸುವ ಹಂಬಲ ತಣಿದಿಲ್ಲ


ಹರವಿಕೊಂಡಿರುವ
ಎನ್ನ ಆಸರೆಗೆ ಒರಗಿ
ಶುಕ-ಪಿಕ ಗಿಣಿ-ಗೊವಂಕಗಳ
ನೀನಾದಲಿ
ಪಿಸುಮಾತಿನಲಿ
ಪ್ರೇಮವನುಲಿದು ಒಲಿದು
ಒಂದಾದ ಜೀವಿಗಳ ನನೆದು
ಬಲಗೊಳ್ಳುತಿದೆ 
ಜೋಡಿಸುವ ಕೊಂಡಿಯಾಗಿಯೇ 
ಇರುವ ಹಂಬಲ

ಆದರೂ.....
ಕೈಹಿಡಿದು ನಡೆದು ಬಂದು
ಎನ್ನೆದೆಯ ಅಂಗಳದಿ ನಿಂದು
ಅಗೋಚರ ಸಂಬಂಧಗಳ ಸದ್ದಾಗದಂತೆ
ಮುರಿದು
ವಿರುದ್ಧ ದಿಸೆಗಳಿಗೆ ನಡೆಯುವಾ
ಜೀವಿಗಳ ನೆನೆದು
ಮನಸು ಆದ್ರಗೊಳ್ಳುತ್ತದೆ
ಜೀವನದ ಅನಿರೀಕ್ಷಿತ ತಿರುವುಗಳನ್ನು
ಅರಿಯಲಾರದೇ
ಕಣಿವೆಯೊಳಗೆ ಕೊನೆಗಾಣಿಸಿದ
ಜೀವಗಳ ನೆನೆದು ತಲ್ಲಣಗೊಳ್ಳುತ್ತದೆ.

ಗರಿಕೆ ಚಿಗುರುವಲ್ಲಿಯೇ
ಬೇಸಿಗೆಯಲಿ
ಬಿರುಕು ಮೂಡಿಸುವ ಭೂಮಿ
ವಸಂತ ಋತುವಿನಲಿ
ಮತ್ತೆ

ಹಸಿರು ಹೊದ್ದು ಮೆರೆಯುವಂತೆ

ನಾನೂ
ನಿಟ್ಟುಸಿರುಗಳ ನಡುವೆ
ಚಲಿಸುವ ಜೀವಿಗಳ ಸಹಿಸಿಕೊಂಡು 
ನಿಶ್ಚಲವಾಗಿ ನಿಂತಿದ್ದೇನೆ
ಜೀವ-ಜೀವಿಗಳಿಗೆ ಸೇತುವೆಯಾಗಿ

Monday, March 16, 2015

ತಲ್ಲಣ

ಈಗೀಗ !!!
ಹೆಚ್ಚಾಗಿ ಎಲ್ಲರೂ
ಫಲಕ ಕಳಚಿಬಿದ್ದು ನಿಂತಿರುವ
ಕಂಬದಂತಹ ಜನರು.....
ಮುಖವೂ ಇಲ್ಲ
ಮುಖವಾಡವೂ ಇಲ್ಲಾ
ಅವರಿವರ ಹಿಂಬಾಲಿಸುವ ಬಾಲಿಶತನದಿ
ಸ್ವಂತಿಕೆಯ ಫಲಕ ಕಳಚಿ
ವ್ಯಕ್ತಿತ್ವದ ದರ್ಶನವೂ ಇಲ್ಲಾ
ಮಾರ್ಗದರ್ಶನ ಗೋ.......ವಿಂದ
ತಂಬಾಕು, ಕಡ್ಡಿಪುಡಿ, ಗುಟ್ಕಾ ತಿಂದು
ಅಲ್ಲಿ-ಇಲ್ಲಿ ಕ್ಯಾಕರಿಸಿ ಉಗಿಯುವಂತೆ
ಬಾಯಿಚಪಲಕೆ
ಘಟಾನುಘಟಿಗಳ ಉದ್ಘೋಶಿಸುವ ಇವರು
ಧರ್ಮದ ಆಫೀಮು ಸೇವಿಸಿದ
ಧರ್ಮಾಂಧರಿಗಿಂತ
ಘಾತಕರು, ಜಗದೋದ್ಧಾರದ ಸೋಗಿನಲಿ ನಲಿಯುವ
ಸ್ವಯಂಘೋಷಿತ ದೇವಮಾನವರು
ಅವರಿವರನ್ನು ತೆಗಳುತ್ತಾ
ರಾತ್ರಿ ಬೆಳಗಾಗುವುದರೊಳಗೆ
ರಾರಾಜಿಸುವ ಹಮ್ಮೀರರು
ಅರ್ಧಂಬರ್ಧ ತುಂಬಿದ ಪಾತ್ರೆ ಚೆಲ್ಲುವದಿಲ್ಲವೇ
ತುಂಬಿದಕೊಡ
ತೃಷೆ ತಣಿಯಲು ಬಯಸುವ ಜೀವಗಳ
ಕಾಯುತ್ತ ಮೂಲೆಯಲಿ
ಮೌನಗೀತೆ ಹಾಡುತ್ತಿತ್ತು......