Saturday, August 31, 2013

ಅತಿಥಿ

ಬಾಗಿಲು ತೆರೆದ ಮನೆಯೊಡತಿ "ಅವರಿಲ್ಲವಲ್ಲಾ..." ಎಂದುಸಿರಿದಾಗ, ಭಾರವಾದ ಮನಸು ಹೊತ್ತು ವಿಷಣ್ಣತೆಯಿಂದ ಹಿಂದಿರುವಷ್ಟರಲಿ ಯಾವುದೋ ಕುತೂಹಲಕ್ಕೆ ಇಣುಕಿ ನೋಡಿದ ಅವರು ನನಗೂ ಕಾಣಿಸಿದ ತಪ್ಪಿಗೆ, ಅನಿವಾರ್ಯವಾಗಿ ನನಗೆ ಮನೆಯೊಳಗೆ ಪ್ರವೇಶ ದೊರಕಿತು.

ಸ್ವಾಭಾವಿಕವಾಗಿ ಉಭಯಕುಶಲೋಪರಿ ಮಾತುಗಳಲ್ಲೇ "ಅವರು ಅಲ್ಲಿ ಇರಲಿಲ್ಲ" ಎನ್ನುವುದು ನನಗೂ ಅರಿಯಾಯ್ತು...

ಸಂ-ಶೋಧನೆ

ಮನವ
ಮುದಗೊಳಿಸಲು
ಏನೋ !!
ಅರಸುತ್ತಿರುವ
ನೋಟ...

ಇಲ್ಲಿಯೇ ಇತ್ತು
ಕೈಗೆಟುವಂತೆ !!
ಎಲ್ಲಿ ಹೋಯಿತೋ
ಎಂದು
ಹುಡುಕುತ್ತಿರುವ
ಕರಗಳು....

ಒಂದೆಡೆಗೆ
ನಿಲ್ಲದೇ
ಜೀವನವಿಡೀ
ನೆಮ್ಮದಿಯನರಸಿ
ಅಲೆಯುವಾ
ಕಾಲುಗಳು....

ನನ್ನದಲ್ಲದ
ಸಂಗತಿಯೊಳಗೆ ತೂರಿ
ನನ್ನತನವನು
ಅರಸುತ್ತಿರುವ ಮನ

ಎಲ್ಲ ಗೋಜಲುಗಳ
ನಡುವೆ
ಕಳೆದು ಹೋಗಿರುವ
ನಾನು.....

ಸಖೀ ಗೀತ

ಸಖೀ....
ತೆರಳುವುದಕ್ಕೂ
ಪೂರ್ವದಲಿ ಎನ್ನ
ಎದೆಯೊಳಗೆ ಮುಖ
ಹುದುಗಿಸಿ
ಬಿಟ್ಟ ನಿಟ್ಟುಸಿರುನ
ಕಾವು
ಇನ್ನೂ ಇದೆ....

ಅರೆಗಳಿಗೆಯಾದರೂ
ಸಿಕ್ಕ ಅನುಭೂತಿಗೆ
ಅನುಗಾಲದಿಂದ
ಹೆಪ್ಪುಗಟ್ಟಿದ
ನೋವು ಕರಗಿ
ಆ...
ಜೀವದುಂಬಿದ ಕಂಗಳಿಂದ
ಉದುರಿದ
ಕಂಬನಿಗಳು
ಎನ್ನೆದೆಯ ಚಿಪ್ಪಿನೊಳಗೆ
ಮುತ್ತಾಗಿವೆ...

ವ್ಯಥೆ

ತೊರೆಯಲು ಮನಸಿಲ್ಲದೇ... ಹೊರಡುವ ಸಮಯವೆಂದು ಹಿಡಿದ ಕರವನ್ನು ಕೊಸರಿಕೊಂಡು ಸಾಗಿದ ಅವಳನ್ನು ಕಣ್ಣು ತುಂಬಿ ಮಂಜಾಗಿದ್ದರೂ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಭ್ರಮೆಯಲ್ಲಿ ಕಣ್ಮರೆಯಾಗುವವರೆಗೂ ನೋಡಿ... 
ಅವಳು ಮರೆಯಾಗುತ್ತಲೇ... 
ವಿದಾಯಕ್ಕೆ ನಿಟ್ಟುಸಿರಿನೊಂದಿಗೆ ವಿರಾಮ ಹಾಕಿದ...
ಅದುವರೆಗೂ ಸ್ಪಟಿಕದಂತೆ ಸ್ಪಷ್ಟವಾಗಿದ್ದ ನೋಟ ಮಂಜಾಗಿರುವುದುನ್ನು ಅರಿತು... ಕರಗಳಿಂದ ಕಣ್ಣೊರೆಸಿಕೊಂಡು... 
ಬೊಗಸೆಯಲಿ ಇಣುಕಿ ನೋಡಿದಾಗಲೇ... 
ಅವನಿಗೆ ಅಂಗೈಯಲ್ಲಿ ಪ್ರೇಮ ರೇಖೆ ಅವಳು ಕೊಸರಿಕೊಂಡು ಹೊರಟಾಗಲೇ ಅಳಿಸಿಹೋಗಿರುವುದು ಕಂಡು ಬಂತು....

ಕವಲು

ಅವನು ಹೇಗೋ ಏನೋ ಮಾಡಿಕೊಂಡು... 
ತನ್ನ ಹೃದಯಕೊಂದು ಮಿಡಿತ ತಂದುಕೊಂಡು... 
ಕಿರುಬೆರಳಿನಾಸರೆಯಲಿ ಕನಸಿನೂರಿನತ್ತ ಸಾಗುವಾಗ.... ಧೃತಿಗೆಟ್ಟು ನಿಂತಿದ್ದು ಕಂಡ ಕವಲು ದಾರಿಯಲಿ... 
ಗಮ್ಯ ಸೇರುವುದು ದುರ್ಭರವೆನಿಸಿ ಹಿಡಿದ ಕೈ-ಗಳ ಸಡಿಲಿಸಿ.... ಹಿಂತಿರುಗಿ ನೋಡಿದರೇ...
ಊರಿನತ್ತ ಮರಳಿ ಸಾಗಿದರೂ.... ಮನೆ ಸೇರಲು ಮತ್ತೆ ಕವಲು ದಾರಿಗಳು...
 
ಮನ ಒಂದಾದರೂ ಮನೆಯೊಂದಾದೀತೇ....
ಮುಂದೆ ಸಾಗುವುದು ಕಷ್ಟ... ಹಿಂದಿರುಗುವುದು ಕ್ಲಿಷ್ಟ....

ಕನವರಿಕೆ

ತಾನೇ ಹರಡಿರುವ ಬೆಳದಿಂಗಳನ್ನು ಗುಡಿಸುತ್ತಾ ಪಶ್ಚಿಮಾಭಿಮುಖವಾಗಿ ತನ್ನ ಗೂಡಿನೆಡೆಗೆ ಚಂದ್ರ ನಿಧಾನವಾಗಿ ಚಲಿಸುತ್ತಿರುವಾಗ, ಮರಗಳ ಮರೆಯಿಂದ ಅವಳು ಮಂದಗಮನೆಯಾಗಿ ಬಂದಳು, 

ಯಾಕಿಷ್ಟು ತಡವಾಯ್ತು ನಿನ್ನ ನಿರೀಕ್ಷೆಯಲಿ ತಾರೆಗಳನೆಲ್ಲಾ ಎಣಿಸಿ-ಗುಣಿಸಿದ್ದೇ ಬಂತು ಎಂದು ಕೇಳಬೇಕೆನಿಸಿದರೂ, ಸಿಕ್ಕ ಅಲ್ಪ ಸಮಯವನ್ನು ಕಾರಣ-ಸಬೂಬುಗಳಿಗೆ ವ್ಯಯ ಮಾಡುವುದು ಬೇಡವೆಂದೆಣಿಸಿ ಮುಗುಳ್ನಕ್ಕು ಅವಳನ್ನು ಸ್ವಾಗತಿಸಿದೆ...

ನೀನು ನನ್ನ ದೇಹಸಿರಿಯನ್ನು ನೋಡಿ ಪ್ರೀತಿಸಿರುವದಿಲ್ಲವೆಂದು ಗೊತ್ತು... ಆದರೂ ಹೇಳಿ ನೀವು ಪ್ರೀತಿಸುವುದು ನನ್ನ ರೂಪಲಾವಣ್ಯವೋ ಅಥವಾ ನಿಮಗೆ ಅಂತರಂಗ ಸೌಂದರ್ಯ ಇಷ್ಟವೋ ಎಂದು ಪಿಸುಮಾತಿನಲಿ ಅವಳು ಉಲಿದಳು. 

ಪ್ರೇಮ ಪಯಣದಲಿ ಮರಳಲಾರದಷ್ಟು ದೂರ ಸಾಗಿ ಬಂದಿದ್ದರೂ ಇದೇನು ಈ ಪ್ರಶ್ನೆ ಎಂದು ಕೇಳಬೇಕೆನಿಸಿದರೂ.... ಅವಳಾಗಲೇ ಎನ್ನ ಬಾಹುಗಳ ಸೇರಿದ್ದರಿಂದ.... ಸುಮ್ಮನಾಗಿ ನನಗೆ ನೀನು ಹೇಗಿದ್ದರೂ ಇಷ್ಟ ಸಖೀ ಎಂದೆ. ನಿಟ್ಟುಸಿರುನೊಂದಿಗೆ ಮೆಲ್ಲನೇ ಎದೆಗೊರಗಿದ ಮೊಗವನ್ನು ಅವಳು ಮೇಲೆತ್ತಿದಾಗ...

ಅವಳ ಮೊಗದಲ್ಲಿ ಮೀಸೆಗಳು ಮೂಡಿದ್ದವು... 
ನನ್ನ ಎದೆಯಲ್ಲಿ ನಡುಕ ಮೂಡುತ್ತಾ ಬೆನ್ನ ಹುರಿಯಲ್ಲಿ ಏನೋ ಅವ್ಯಕ್ತ ಕಂಪನ... 
ಅನತಿ ದೂರದ ಗುಡಿಯಲ್ಲಿ ಮೀಸೆ, ಕೋರೆಹಲ್ಲುಗಳಿಂದ ಅಲಂಕೃತವಾಗಿರುವ ಗ್ರಾಮದೇವಿಯ ಮುಖ ಕಣ್ಣಮುಂದೆ ಬಂತು...

ಹಾಗೂ-ಹೀಗೂ ಸಾವರಿಸಿಕೊಂಡು...
ನನಗೆ ನೀನು ಹೇಗಿದ್ದರೂ ಇಷ್ಟ ಸಖೀ ಎಂದು ಮತ್ತೊಮ್ಮೆ ಹೇಳಿದೆ....
ಏನಾಶ್ಚರ್ಯ !!!
ಅವಳ ಮೊಗದಲ್ಲೀಗ ಮೀಸೆಗಳು ಕಣ್ಮರೆಯಾಗಿ ಚಂದ್ರಿಕೆಯು ಬೆಳಗುತ್ತಿದ್ದಾಳೇ...
ಅಷ್ಟರಲ್ಲಾಗಲೇ ಚಂದ್ರ ಶರಧಿಯೊಡಲನ್ನು ಸೇರಿಕೊಂಡಿದ್ದ...

ಮೋಹನ ರಾಗ

ಪಾರಿಜಾತದ
ಬಾಹುಗಳಲಿ ವಿರಮಿಸುತ್ತಿರುವ
ಮೋಹನನ ಶಲ್ಯ...
ಅಲ್ಲಿಯೇ
ಕೊಂಚ ದೂರ
ಮುರಳಿಯೊಡನೆ ನವಿಲುಗರಿ

ಕಾಣುವನೆಂದು
ಕಣ್ಣರಳಿಸಿ ನೋಡಿದರೇ
ಮೋಹನನಿಲ್ಲ, ರಾಧೆಯೂ ಇಲ್ಲಾ...
ರಮಿಸುತ್ತಿರಬೇಕು ಮೋಹನ
ರಾಧೆಯ ಪರಿ-ಪರಿಯಾಗಿ
ರಸಮಯ ಸಮಯದಿ ಸರಸವಾಡುತ್ತಾ
ವಿರಮಿಸುತ್ತಿರಬೇಕು
ರಾಧೆಯ ಒಡಲಿನಲಿ

ಮುರಳಿಯೂ ಮುನಿಸಿಕೊಂಡು
ಮೌನದಲಿ ರೋದಿಸುತ್ತಿದೆ
ಮೋಹನನ ಅಧರಗಳು ತನ್ನ
ಚುಂಬಿಸದೇ
ರಾಧೆಯೊಡನಾಟದಲಿ ಮೈ-ಮರೆತಿರುವ
ಪರಮಾತ್ಮನ ನೆನೆದು

ಪಾರಿಜಾತದಿಂದುದುರಿದಾ
ಹೂವುಗಳು ಹೇಳುವ ಕಥೇಯೇ ಬೇರೆ
ಪರಮಾತ್ಮ ಅಲ್ಲಿಯೇ ಇದ್ದ
ರಾಧೆಯೊಡನೆ ಒಡನಾಟವಾಡುತ್ತಾ....
ಅಮರ ಪ್ರೇಮಿಗಳಡಿಯಲಿ ಸಿಲುಕಿ
ಒಲುಮೆಯಾಟದಿ ಸಿಕ್ಕು ಘಾಸಿಕೊಂಡರೂ
ಮುದಗೊಂಡು ನುಡಿಯುತಿವೆ
ಪ್ರೀತಿ ಅಮರ....
ರಾಧೆಯೂ......

ಹನಿ

ನನ್ನೊಡನೆ
ಆಗಸದಿಂದ ಉದುರಿದ
ಹನಿಗಳಲಿ....

ಹಲವು
ಭೂತಾಯ ಮಡಿಲು
ಸೇರಿ
ಅವರಿವರ ಹಸಿವು
ತಣಿಸುವಾ
ಕಾಳು
ಮೊಳಕೆಯೊಡೆಯಲು
ಕಾರಣವಾದವು

ಕೆಲವು
ಕಾದ ರಸ್ತೆಗಳ
ಮೇಲುರುಳಿ
ಚುರ್ರನೆ ಅವಿಯಾಗಿ
ಮತ್ತೆ
ಮೋಡಗಳ ಸೇರಿದವು

ಅದೇನು
ಮಾಯೆಯೋ....
ನಾನು
ಶರಧಿಯಂತರಾಳದಿ
ಬಾಯ್ದೆರೆದು
ಕುಳಿತಿರುವ
ನಿನ್ನೊಡಲ
ಸೇರಿ ಮುತ್ತಾದೆ.....

Saturday, August 17, 2013

ಬೆಳಕು

ಸಂಧ್ಯಾಕಾಲದ
ಭಾಸ್ಕರನ ಪ್ರತಿಫಲಿಸುತ್ತಾ
ಮಂದಗಮನೆಯಾಗಿ
ಸಾಗಿ ಬರುತ್ತಿರುವ
ಅವಳ ಕಣ್ಣುಗಳಲ್ಲಿ
ಮೂಡಿದೆ...
ಅರುಣೋದಯದ ಬೆಳಕು

ಅವನ ಬದುಕಿನ
ಬೆಳಗೂ-ಬೈಗೂ
ಹೊತ್ತು ತಿರುಗುತ್ತಿರುವ
ಚಂಚಲೆಯ
ಸುತ್ತಲೇ...
ಸುತ್ತುವುದು ಅವನ ಧ್ಯಾನ....

"ಅವನಿ"ಗೆ
ಅವಳೇ ಬಾಳ ಬೆಳಕು

ಕನವರಿಕೆ...

ನಿನ್ನ ಸನಿಹವನ್ನು ತೊರೆದು
ನಾನು ಬದುಕುವುದಾದರೇ....

ಗ್ರಹಣವೇ ಆಪೋಷನಗೊಂಡ ಸೂರ್ಯನಂತೆ
ಇರುಳ ರಂಗೋಲಿಯಲಂತೆ
ದಿನಗಳೆಲ್ಲಾ ಖಾಲಿ-ಖಾಲಿ...
ಕನಸುಗಳು, ಕನವರಿಕೆಗಳಿಲ್ಲದಾ
ಸುದೀರ್ಘ ಇರುಳುಗಳು

ನಿನ್ನೊಡನಾಟದಿ ನಾ-ನೆಲ್ಲವನೂ ನೋಡಬಲ್ಲೆ
ಮೊದಲಿಗೂ ಪ್ರೇಮಸಾಗರದಿ
ಒಲವಿನಾ ಅಲೆಗಳ ಸೆಳೆತಕೆ ಸಿಲುಕಿ
ನಾ ತೇಲಿರುವುದುಂಟು, ಮುಳುಗಿರುವುದುಂಟು
ಆದರೇ....
ತೀವ್ರತೆಯ ಪರಿಣಾಮವಿಂತಿರಲಿಲ್ಲಾ

ನಮಗೀರ್ವರಿಗೂ ಅರಿವಿದೆ
ನಮ್ಮ ಕನಸುಗಳೆಂದಿಗೂ ಮಧುರ
ಕಾಲಾತೀತ ಮಂಜುಳಗಾನ
ಕರೆದೊಯ್ಯುವವು ನಮ್ಮನು ಗಂಧರ್ವಲೋಕಕೆ

ಜೊತೆಯಾಗಿ ಸಾಗುವ ಬಾ, ಕೈ-ಹಿಡಿದು
ಒಪ್ಪಿಕೋ ಎನ್ನ, ಅಪ್ಪಿಕೋ ಎನ್ನ
ನಿನ್ನೊಡನಾಟವಿರದೇ
ನಾ.... ಬದುಕಲಾರೆ...

ಸಖೀ ಗೀತ

ಇತ್ತ ನೋಡು ಸಖೀ
ನಿನ್ನ ಚಂಚಲ ಕಣ್ಣುಗಳ ತಿರುಗಿಸಿ
ಸವಿನೆನಪುಗಳ ಹೊತ್ತು
ಬಳಲುತ್ತ ಸಾಗಿರುವ ಜೀವಕೆ
ನಿನ್ನ ನೋಟವೇ ಸಂಜೀವಿನಿ...

ಸುತ್ತಲೂ ಚೆಲ್ಲಿದೆ
ಪ್ರಕೃತಿಯ ಚೆಲುವು
ಚೆಲುವೆ ನೀನೇ ಪ್ರಕೃತಿ
ಈ ಪುರುಷನಿಗೆ
ಹಸಿರಾಗುವೆ ನಿನ್ನ ಬಾಳಿನಲಿ
ಉಸಿರಾಗು ನೀ ಎನ್ನ ಪ್ರೇಮದಲಿ....

ಸಂದೇಶ

ನನಗೆ ಗೊತ್ತು ಆ ಸಂದೇಶದಿಂದ ನಿನಗೆ ಕೋಪ ಬರಬಹುದು ಅಂತ... 
ಆದರೆ ಆ ಕ್ಷಣದಲ್ಲಿ ನನಗೆ ಅನಿಸಿದ್ದನ್ನು ನಾನು ಹೇಳಿದೆ... 
ನನ್ನ ವಿವರಣೆಯೂ ನಿನಗೆ ಸರಿ ಎನಿಸಲಿಲ್ಲ ಅಲ್ವಾ... 
ಮನದಲ್ಲಿ ತಳಮಳವಿದ್ದರೆ ಮಂಕು ಕವಿದು ಅನರ್ಥವಾಗುತ್ತದೆ... ಅದಕ್ಕೇ .... ಪುನಃ ಅದೇ ಸಾಲುಗಳನ್ನು...
ನಿಧಾನವಾಗಿ ಓದು ಅಂತ ಕಳುಹಿಸಿದೆ.....
ನೀನು ಅಂತವಳಲ್ಲ ನನಗೆ ಗೊತ್ತು ಸುಬ್ಬೀ...
...
ನನಗೆ ಪೆಟ್ಟು ಕೊಡೋದಿಕ್ಕೆ ಕೈ ಉಜ್ಜಿಕೋತಿದ್ದೀಯಾ...
ಕೆನ್ನೆ ಮುಂದೆ ಮಾಡಿದ್ದೇನೆ...
ನಿನಗೆ ಇಷ್ಟ ಬಂದದ್ದು ಕೊಡು...

ವಿದಾಯ

ಸಮಯ
ಮುಗಿದ ನಂತರ
ಹೊರಡಲೇ ಬೇಕು.

ನಿಲ್ಲುವ ಹಾಗಿಲ್ಲಾ,
ಸ್ವಲ್ಪ ಹೊತ್ತು
ಕುಳಿತಿರಬಹುದಾದರೂ
ಹೊತ್ತು ಕಳೆಯುವ
ಜಾಗವಿದಲ್ಲಾ.

ಹೊರಡುವ ಸಮಯ
ಹೊರಟೆ ಅಷ್ಟೇ !!!

ಎಲ್ಲಿಗೆ ಹೋಗುವುದು
ತಲೆಯಿಂದ ಕಾಲುಗಳಿಗೆ
ಸೂಚನೆಯೇನೂ ಬಂದಿಲ್ಲ
ಕಾಲುಗಳು
ತಮ್ಮ ಹೆಜ್ಜೆ-ಹೆಜ್ಜೆಯಲಿ
ದೂರವನು
ಕ್ರಮಿಸುತ್ತಾ ಸಾಗಿವೆ...

ಸೇರಬೇಕಾಗಿರುವ
ಗಮ್ಯದ ಬಗೆಗೆ
ಸೂಚನೆ
ದೊರಕುವವರೆಗೆ
ಸುಮ್ಮನೇ
ಗೊತ್ತು-ಗುರಿಯಿಲ್ಲದಾ
ಅಲೆದಾಟ...

ಸಖೀ ಗೀತ

ಸಖೀ...

ಮುನಿಯದಿರು, ಕೊರಗದಿರು
ಗೋಪಿಕೆಯರೊಡನಾಟದಿ
ಮುರಳಿ ಮರೆತಿಹನೆಂದು....

ಜಗದುದ್ದಗಲ ತಿರುಗಿದರೂ
ತಿರುಗಿ ಬರುವೆ
ನಿನ್ನೊಲವ ಸೆಳೆತಕೆ....

ತಿರುಗಿ ನೋಡು
ಎನ್ನ ಕಣ್ಣಾಲಿಗಳಲಿ
ಮೂಡಿದೇ ನಿನ್ನದೇ ಬಿಂಬ...

ವಿರಹಾ....

ಒಲುಮೆಯಾ
ಮಿಲನವೊಂದು ಮುಗಿದು
ಪ್ರತಿಬಾರಿ ನೀನು
ನಿರ್ಗಮಿಸಿದಾಗಲೂ
ಶೂನ್ಯದತ್ತಲೇ
ಎನ್ನ ಗಮನ...

"ಏನಾಯ್ತು, ಹೀಗೇಕೆ"
ಎಲ್ಲರಾ ಕಳವಳದ ಮಾತು
ಗಾಯವಿಲ್ಲಾ
ನೋವಿನಾ ಗುರುತಿಲ್ಲಾ
ಪೇಲವ ನಗೆಯೊಂದೇ
ಎನ್ನ ಉತ್ತರಾ....

ಪ್ರತಿ ಇರುಳಿನ
ಎನ್ನ ಏಕಾಂತದಲಿ
ಎಲ್ಲಿಹಳು ಎನ್ನವಳು
ಎಂಬ ಪ್ರಶ್ನೆಯೊಡನೆ
ಮನದ ಭಿತ್ತಿಯಲಿ
ಮೂಡುವಾ ನಿನ್ನ ಪ್ರತಿಬಿಂಬ...

ವಿದಾಯದೊಂದಿಗೆ
ಕೊನೆಗೊಳ್ಳುವಾ
ನಮ್ಮ ಮಿಲನಗಳು....
ಪುನರ್ಮಿಲಕೆ
ಮುನ್ನುಡಿಯಾಗಲಿ
ನಮ್ಮ ವಿದಾಯಗಳು....

ವಿರಹಾ.....

ಶೀತಲ ಸಮರ
ಮಂಜುಗಟ್ಟಿದೆ ಮನಸು
ಬಿಸಿಯುಸಿರಲಿ ಬೆಸೆದು
ಕರಗಿಸಬೇಕು...

ಒಬ್ಬರಿಂದೊಬ್ಬರು
ವಿಮುಖರಾಗಿದ್ದರೂ
ಚಿತ್ತವೆಲ್ಲವೂ ತುಂಬಿದೆ
ಮನೋರಮೆಯ ಚಿತ್ರ...

ತೊರೆಯ ದಡಗಳ ಆಚೆ
ಸಂತ್ರಸ್ತ ಪ್ರೇಮದ ತುಣುಕುಗಳು
ತೆರೆ ಕರಗಿ ಒಂದಾಗಲು
ಬೇಕಿದೆ ನೀಳ ಬೆರಳುಗಳ ಸ್ಪರ್ಷ...

ಒಂದಿನಿತು ವಿರಹಾ
ಅದುವೇ ತರಹ ತರಹಾ
ನಿಟ್ಟುಸಿರಿನ ಬೇಗೆ
ಕರಗುತಿದೆ ಮಂಜಿನಾ ತೆರೆ.....

ಉಚ್ವಾಸ-ನಿಸ್ವಾಸ
ನಮ್ಮುಸಿರು ಪ್ರೀತಿಯೇ
ಮನದ ಮಾಲಿನ್ಯ ಕರಗಿ
ಮಾಲಿನಿಯ ನೋಟದಲಿ ಲೀನವಾಗಬೇಕು...

Wednesday, August 7, 2013

ಸಖೀ ಗೀತ

ನನ್ನ ಕನಸುಗಳು
ಕನವರಿಕೆಗಳು
ಸದಾ ಕಾಲ
ಏಕಾಗ್ರಚಿತ್ತದಿಂದ
ಅವಳ ಸುತ್ತಲೇ
ಸುಳಿದಾಡುತ್ತವೆ....

ಬರೆಯಬೇಕೆಂಬ
ಬಯಕೆಯಿಂದ
ಬಿಳಿಯ ಕಾಗದ
ಕೈಗೆತ್ತಿಕೊಳ್ಳುತ್ತಲೇ
ಅಕ್ಷರಗಳಿಗೂ ಮೊದಲು
ಅವಳ
ಪ್ರತಿಬಿಂಬ ಮೂಡುತ್ತದೆ

ಹಾಗೋ ಹೀಗೋ
ಭಾವಗಳಿಗೆ ಪದಗಳ ಹೆಕ್ಕಿ
ಹೊಂದಿಸುವಾಗ
ಮತ್ತದೇ
ಅವಳ ತುಂಟ-ನೋಟ
ಮಂದಸ್ಮಿತ ಭಾವ
ಕವಿತೆಯಾಗುತ್ತದೆ....

Thursday, August 1, 2013

ದುಂಬಿ

ಎದೆ ತುಂಬ
ಜೇನ ಸ್ಪುರಿಸಿ
ದುಂಬಿಗಾಗಿ
ಕಾದಿತ್ತು
ಹೂವೊಂದು...

ಗೋಕುಲದಾ
ಕಡೆಯಿಂದಾ
ಹಾರಿ ಬಂದ
ದುಂಬಿಯೋ....
ಹೂವಿನಾ
ಎದೆ ಬಗೆದು
ಅಮೃತವಾ ಹೀರಿ...

ಹಿಂತಿರುಗಿ
ನೋಡದೇ...
ಮತ್ತೆ ನಡೆದಿತ್ತು
ಅರಳಿ ನಿಂತ
ಮತ್ತೊಂದು
ಹೂವಿನೆಡೆಗೆ....

ಏನೋ ತೋಚಿದ್ದು....

ಬಾನು
ಯಾವಾಗಲೂ
ಬಯಲು
ಭಾನುವಿನ ಆಟೋಟಕೆ....

ಬಾನಿನಲಿ
ಏನೂ ಇಲ್ಲಾ
ಹಗಲು ಬೆಳಗುವ
ಭಾಸ್ಕರ
ಇರುಳಿನಲಿ
ಅಲಂಕರಿಸುವ
ಚಂದ್ರ ತಾರೆಗಳು

ಆಗಾಗ
ಸೂರ್ಯ-ಚಂದ್ರರ
ಮರೆ ಮಾಚುವಾ
ಮೋಡಗಳು
ಯಾವುದೂ...
ಬಾನಿನದಲ್ಲಾ

ಬಾನು
ಬಯಲೇ
ಆಕಾಶ ಕಾಯಗಳ
ನೇತು ಹಾಕಿರುವ
ಗೋಡೆಯಂತೇ....