Wednesday, June 4, 2014

ಸ್ವಗತ

ನಾನು
ನಾನೇ !! ಎಂಬುದಕ್ಕೆ
ಪುರಾವೆ ಹುಡುಕುತ್ತಿದ್ದೇನೆ
ಗುರುತಿನ ಚೀಟಿಗಳಲ್ಲಿ
ಮರೆತಿರುವ ಪುಟಗಳಲ್ಲಿ
ಗೊತ್ತು ಗುರಿಯಿಲ್ಲದೇ ಸಾಗುವಾ
ಬೀದಿಗಳಲ್ಲಿ.....

ಹೊರಟಲ್ಲೆಲ್ಲಾ ಹೊಸ ಸುಳಿವು
ಕೈಗೆ ತಾಕಿದ್ದರಲ್ಲೆಲ್ಲಾ
ಕಾಣುವ ಬಹುರೂಪಿ ಮುಖವಾಡಗಳು
ಎದುರಿಗೆ ಸಿಗುವಾ
ಯಾವ್ಯಾವದೋ ಮುಖಗಳ
ದಿಟ್ಟಿಸಿ ನೋಡಿದಾಗ ಎನ್ನ
ಅಣಕಿಸುತ್ತವೆ....

ಗುರುತು ಪರಿಚಯವಿಲ್ಲದ
ಅಪರಿಚಿತರು ಎದುರಾಗಿ
ಅರಿತೋ ಅರಿಯದೆಯೋ ನಕ್ಕಾಗ !!
ಮೈ-ಪರಚಿಕೊಂಡು ನಾನು
ಹುಸಿನಗೆಯ ಬೀರಿ ಮುನ್ನಡೆದ
ಅವನು !!!
ಯಾರೆಂಬುದನು ಅರಿಯಬೇಕಿದೆ....

ನಾಮವೊಂದಾದರೇ
ನನ್ನತನವೇನು ಸಾಬೀತಾಗುವುದೇ
ಭಾವ-ಚಿತ್ರದ ಹುಸಿನಗು
ಅಂತರಾಳದ ಕಲುಷಿತ ಭಾವಗಳ
ಮರೆಮಾಚಿ
ಅಟ್ಟಹಾಸ ಮಾಡುತಿದೆ....

ಆತ್ಮೀಯರ ಕರೆಗೆ ಓಗೊಡುವ ನಾನು,
ಪುಳಕಗೊಳ್ಳುವ ನನ್ನ ಪಂಚೇದ್ರಿಯಗಳು
ಇಲ್ಲಸಲ್ಲದವರ ಕಿರಿ-ಕಿರಿಯ ಕರೆಗೆ
ಓಗೊಡುವ !!!
ನನ್ನ ನಾಟಕೀಯತೆಯ ನಡುವೆ

ಪಾತ್ರದ ಬಣ್ಣ ಕಳಚಿದಾಗ
ಕಾಣಬಹುದಾದ ನನ್ನನು
ಹುಡುಕಿ
ನನ್ನತನಕ್ಕೆ ಪುರಾವೆ ಕೇಳಬೇಕಿದೆ....

Tuesday, May 20, 2014

ಯಶೋಧರೆ

ಅಂತರಾಳದ
ಜಗುಲಿಯ ಮಧ್ಯದಲಿ
ನಂದಾದೀಪದ ಬೆಳಕು
ಎಣ್ಣೆ-ಬತ್ತಿ, ಹಣತೆಗಳ
ಹಂಗಿಲ್ಲದೇ
ಎಣೆಯಿಲ್ಲದೇ ಬೆಳಗುತಿದೆ

ಸಿದ್ಧಾರ್ಥ
ಮಧ್ಯರಾತ್ರಿಯಲಿ
ಎದ್ದು ಹೋದಾಗಿನಿಂದ.....
ಇರುಳಿನಲಿ
ಮರೆಯಾಗಿ ಹೋದವನ
ದಾರಿಯ ದಿಕ್ಕು-ದೆಸೆಯ ಊಹಿಸಿ
ಬಿಕ್ಕಳಿಸಿದ ಸದ್ದು
ಅವರು ಸಾಗಿದ ದಾರಿಗೆ
ತಡೆಯೊಡ್ಡದಿರಲೆಂದು ಹಗಲಿರುಳೂ
ದುಃಖ ತಡೆಹಿಡಿದು
ಗಂಟಲಿನ ನರಗಳು ಗಂಟುಗಟ್ಟಿವೆ
ಒಂದಿನಿತು ದಿನವಿತ್ತು
ಮರಳಿ ಬರುವನೆಂಬ ಆಶಾಕಿರಣ
ಕಾಲಚಕ್ರದಡಿಯಲಿ ನಲುಗಿ
ಜಗವನೆಲ್ಲಾ ಬೆಳಗಿದ ಬುದ್ಧನ ನೆನೆದು
ನಡುಹಗಲಿನಲ್ಲಿಯೇ
ಅಂಧಕಾರವ ನುಂಗಿರುವೆ.....
ಆದರೂ ಎನ್ನೆದೆಯಲ್ಲಿ ನಂದಾದೀಪ
ಬೆಳಗುತಿದೆ ಅನವರತ....

ಚರಮ-ಗೀತೆ

ಜಾತಸ್ಯ
ಮರಣಂ ಧೃವಂ
ಸಾಯಲಿಕ್ಕಾದರೂ ಬದುಕಬೇಕು
ತುರ್ತು ನಿಗಾ ಘಟಕದಲಿ
ಉನ್ಮತ್ತನಾಗಿ ಉಸಿರಾಡುತ್ತಿರುವ
ರೋಗಿಯೊಬ್ಬನ ಬಯಕೆ

ಕಾಲನ ಕರೆಯನ್ನು ಧಿಕ್ಕರಿಸಲು
ಗುಳಿಗೆ, ಮಾತ್ರೆಗಳು, ಸಿರಿಂಜು-ಸಲೈನುಗಳು
ಕೊಳೆತ ಅಂಗವನ್ನು ಕತ್ತರಿಸಿ
ಹೊಲೆಯುವಾ ಶಸ್ತ್ರ-ಉಪಕರಣಗಳ
ಪೈಪೋಟಿಯ ಸದ್ದು
ನಾಲ್ಕಾರು ಮುಖವಾಡಗಳ ನಡುವೆ
ಗೋಚರಿಸುವ ಜೋಡಿಕಣ್ಣುಗಳು
ಬದುಕಬೇಕೆಂಬ ಏಕಮೇವಾದ್ವಿತೀಯ ಆಸೆ
ಆಸ್ಪತ್ರೆಯ ಮಾಸಲು ಹಾಸಿಗೆಯನ್ನು
ಅಂಟಿಕೊಳ್ಳುವವರೆಗೆ
ಬದುಕಿದ್ದಾದರೂ ಏನು ???

ಅಗಣಿತ ಸಂಪತ್ತು ಎಣಿಸಲು ಯಂತ್ರಗಳು
ಗುಡಿಸಲು ವಾಸಿಗಳ ಒಕ್ಕಲೆಬ್ಬಿಸಿ
ನಿರ್ಮಿಸಿದ ನಿರ್ಜೀವ ಬಂಗಲೆಗಳು
ನಿತ್ಯ-ಹರಿದ್ವರ್ಣ ಫಲವತ್ತಾದ
ಭೂಮಿಯನ್ನು ಕಬಳಿಸಿ ಕಟ್ಟಿದ
ಹಸಿರು ಹಾಸಿನ ಫಾರ್ಮ್-ಹೌಸುಗಳು
ಸ್ನೇಹ, ಪ್ರೀತಿ ಬಾಂಧವ್ಯದ ಸೋಂಕಿಲ್ಲದ
ಸಂ-ಬಂಧಗಳು
ಎಲ್ಲವೂ ಲೆಕ್ಕಾಚಾರ
ಸರಳ ಅಂಕಗಣಿತವಾದರೂ
ಕೂಡಿಕೆ, ಹೂಡಿಕೆ ಗುಣಾಕಾರದಿ
ಕಳೆದು ಹೋದ ಬದುಕಿಗೆ ಅರ್ಥವಿಲ್ಲಾ....

ಯಾಕೋ ಈಗೀಗ ನೆನಪಾಗುತ್ತಿದೆ
ಎಣ್ಣೆ ಕಾಣದ ತಲೆಯನ್ನು ಕೆರೆಯುತ್ತಾ
ಮರ್ವಾದೆ ಎಂಬುದನು ಮುಚ್ಚಲು ಚಡ್ಡಿಯೊಂದಿದೆ
ಎಂಬುದನೂ ಅರಿಯದೇ
ಸೋರುತ್ತಿರುವ ಸಿಂಬಳವನ್ನೂ ಲೆಕ್ಕಿಸದೇ
ಐಸ್ ಕಟ್ಟಿ ಮಾರುತ್ತಾ ಅಲೆಯುವಾ
ಶಂಕ್ರಣ್ಣನ ಡಬ್ಬದಿಂದ ಸೋರುವಾ
ಕೆಂಪು ಹನಿಗಳನ್ನು ಬೊಗಸೆಯೊಡ್ಡಿ ಹಿಡಿದು ನೆಕ್ಕುವಾ
ಮರವನ್ನೇರಿ ಹುಣಸೆ ಕಿತ್ತು
ಓರಗೆಯವರ ಮನೆಯಿಂದ ಉಪ್ಪು, ಕಾರ, ಬೆಳ್ಳುಳ್ಳಿ ತಂದು
ಕುಟ್ಟಿ ಕಡ್ಡಿಗೆ ಅಂಟಿಸಿ ಸೊರ್ರ್-ಸೊರ್ರ್ ಸವಿದಿರುವ
ಕ್ಷಣಗಳು
ಮುಚ್ಚಿರುವ ಕಣ್ಣುಗಳ ಹಿಂದೆ ನಲಿದಾಡುತ್ತಿವೆ....

ಕುಶಲೋಪರಿಯ ನೆವದಲಿ
ಬಂದು ಮುತ್ತಿಕ್ಕಿರುವ ಬಂಧು-ಬಾಂಧವರ
ಪಿಸುಮಾತುಗಳು
ಭಗವಂತ ಎಲ್ಲವನೂ ಕೊಟ್ಟ ಇನ್ನೇನು ಬೇಕು
ಬದುಕು ನಾಲ್ಕಾರು ದಿನಗಳ ಸಂತೆ ಎನ್ನುವ ವೇದಾಂತ
ಹುಸಿ-ನಗುವ ಹೊತ್ತು ಹೊಗಳುವಾ
ಮುಖವಾಡಗಳು....
ಸಾಯಲಿರುವ ಆನೆಯ ಮೌಲ್ಯ ಕಟ್ಟುವಾ ನೋಟಗಳು
ಕಣ್ಣು ಮುಚ್ಚಿದರೇ ಮತ್ತದೇ ಬಾಲ್ಯದ ನೆನಪುಗಳು
ಸಾಯಲಿಕ್ಕಾದರೂ ಬದುಕಬೇಕು.......

Tuesday, February 25, 2014

ಹಾಗೇ ಸುಮ್ಮನೇ....

ಗಲ್ಲು ಶಿಕ್ಷೆಗೆ ಆಣಿಯಾಗಿ
ಕೊನೆಯ ಕ್ಷಣಗಳನೆಣಿಸುತ
ಭಾವರಾಹಿತ್ಯದಿ
ನಿಟ್ಟುಸಿರು ಬಿಡುವ ಕೈದಿಯಂತೆ
ಅನಾಥವಾಗಿ ಬಿದ್ದಿರುವ ಕಾಗದ....
ಎನ್ನ ಮನದ ಅಳಲು
ಅದರೊಡಲಾಳದ ಕಳವಳಗಳಿಗೆ
ಆಯಾಮಗಳು ಹಲವು....

ಅದೂ-ಇದೂ ಬರೆದು
ಶೋಧನೆ, ಸಂಶೋಧನೆಯ
ವಿಮರ್ಶೆ, ಪರಾಮರ್ಶೆಯ ಹೆಸರಿನಲಿ
ಎದೆ ಮೇಲೆ ಬಿದ್ದ ಅಕ್ಷರಗಳ
ಜೊತೆಗೆ
ಉದ್ದ-ಅಡ್ಡ, ಅಕ್ಕ-ಪಕ್ಕ
ಎಲ್ಲೆಂದರಲ್ಲಿ ಗೀಚಿಸಿಕೊಂಡು
ನಾಲ್ಕಾರು ಕರಗಳ ಸೋಕಿ
ರದ್ದಿಯಾಗಿ
ಜೀವಾವಧಿ ನಿತ್ಯ ಸಾಯುವ ಬದಲು
ಗಲ್ಲು ಶಿಕ್ಷೆಯನೇನೋ ಬಯಸೀತು....

ಆದರೇ
ಎನ್ನ ಮನದಲಿ ಕೈದಿಗೆ ತೋರುವ
ತೃಣ ಮಾತ್ರ ಕನಿಕರವೂ ಮೂಡದು
ಅದರ ಕೊನೆಯಾಸೆ ಕೇಳಲಾರೆ
ಒಂದು ವೇಳೆ ಕೇಳಿದರೇ
ಹೇಳೀತು
ಮಕ್ಕಳ ಕೈಯೊಳಗೆ ಕೊಟ್ಟರೇ
ಬಾನಿನುದ್ದಲಕೂ
ಹಾರುವ ಗಾಳಿಪಟವೋ
ಹರಿವ ನೀರಿನ ಮೇಲೆ ನಲಿದಾಡುವ
ಹಾಯಿ ದೋಣಿಯೋ ಆಗಿ
ಮಕ್ಕಳ ಮುಖದ ಮಂದಸ್ಮಿತದಲಿ
ಕೊನೆಯುಸಿರೆಳೆಯುವಾ
ಹುನ್ನಾರ ಹೂಡೀತೆಂಬ ಕಳವಳ....

ಅದಕೇ...
ಏನೇನೋ ಮಣ್ಣಂಗಟ್ಟಿ ಪದಗಳನೆರಚಿ
ಅದರ ಹಣೆಬರಹ ಬರೆಯುವ ತವಕ
ನವರಸಗಳ ಸೋಸಿ
ನಾಲ್ಕಾರು ಸಾಲುಗಳ ಬರೆದು
ಕವಿತೆಯೆಂಬ ಭಾವವನು ಮೆರೆಸಿಯೇನು...
ಆದುವೇ...
ಅದರ ಚರಮಗೀತೆ....

Tuesday, February 18, 2014

ಸಖೀ ಗೀತ

ಅವಳನ್ನು
ಬಿಟ್ಟು !!!
ಅವಳ ಗೊಡವೆಯಿಲ್ಲದೇ
ಗೋಡೆಯ ಮೇಲೆ
ಅವಳಿಲ್ಲದ ಬಣ್ಣಗಳ
ಚಿತ್ರ ಬಿಡಿಸಬೇಕೆಂದೆ....

ಚಿತ್ತದ ಕಣ-ಕಣದಲ್ಲಿ
ಅವಳೇ
ತುಂಬಿರುವಾಗ
ನಾಲ್ಕಾರು ದಿನ
ಗೋಡೆಯೆಲ್ಲಾ
ಬಯಲಾಗಿತ್ತು.....

ನಿಟ್ಟುಸಿರಿನೊಂದಿಗೆ
ಹೊರಸೂಸುವ
ಅವಳ ನೆನಪು
ನಮ್ಮೀರ್ವರ ನಡುವಿನ
ಅವಿನಾಭಾವ ಸಂಬಂಧಕೆ
ಮೂಕ ಸಾಕ್ಷಿಯಾಗಿತ್ತು....

ಟೈಂ-ಪಾಸ್

ಮನದ
ಗೋಜಲುಗಳಿಗೆ
ಭಾವ ತುಂಬಿಸುತ
ಸುಮ್ಮನೆ
ಅದು-ಇದು ಬರೆಯೋದು
ಭಾವನೆಗೂ ಪದಗಳಿಗೂ
ತಾಳೆಯಾಗದೇ
ತೊಳಲಾಟದಲಿ
ಪರ-ಪರನೆ ಹರಿದು
ಹಸಿದಿರುವ,
ತುಂಬಿದ್ದರೂ ಹೊಟ್ಟೆಬಾನಂತೆ
ಬಾಯ್ದೆರೆದಿರುವ
ಕಸದ ಬುಟ್ಟಿಗೆ ಎಸೆಯೋದು
ಆಕಸ್ಮಿಕವೆಂಬಂತೆ
ಅಥವಾ
ಅಸಹನೆಯಿಂದ
ಕೊನೆಗೆ
ಬರೆದಿರುವುದನ್ನೇ
ಕವಿತೆಯೆಂದು ಗೋಡೆಗೆ
ಬಳಿಯೋದು......

ಸಖೀ ಗೀತ

ಸಖೀ....
ಶರಧಿಯ
ಯೋಚನೆಯೇ ಬೇಡ....
ನಿನ್ನ ಕಣ್ಣಾಲಿಗಳೇ ಸಾಕು...
ಅನುರಾಗದಲಿ
ಮುಳುಗಲು, ತೇಲಲು....

ನಿನ್ನೀ ನಯನಗಳೇ ಇರಬಹುದು
ಸಂವೇದನೆಯ
ಗ್ರಹಿಸಿ, ಸಂಗ್ರಹಿಸಿ
ರಸಪೂರಣಗೊಳಿಸಿ
ರಸವತ್ತಾದ
ಕವಿತೆಯನುಣಬಡಿಸುವದು....

ಪಯಣ

ಯಾಕೋ ಏನೋ
ಥಟ್ಟನೆ
ಹಿಂತಿರುಗಿ ನೋಡಿದಾಗ
ಅಲ್ಲಲ್ಲಿ ಬಿದ್ದಿರುವ
ನಿನ್ನೆಗಳು.....

ಶಿಥಿಲಾವಸ್ಥೆಯಲಿ
ಹಾಳು ಕೊಂಪೆಯಂತೆ
ಕೈಕಾಲು ಮುರಿದುಕೊಂಡು
ಭಗ್ನಾವಸ್ಥೆಯಲಿ ಚದುರಿ
ಅನಾಥ ಶವಗಳ
ತೆರದಿ
ಹರಡಿಕೊಂಡಿರುವ
ನೋವುಗಳು.....

ಎಂದೋ
ಬೀಸಿದ ಬಿರುಗಾಳಿಗೆ
ಸಿಕ್ಕ ತರಗೆಲೆಗಳು
ಗಗನಚುಂಬಿಯಾಗಿ ಹಾರಾಡಿ
ಮತ್ತೆ
ಧರೆಗುರುಳಿ
ಮಣ್ಣಿಗೆ ಲೀನವಾಗಿ
ಅಲ್ಲಿಯೇ ಚಿಗುರೊಡೆದು
ಮಂಜ ಹನಿ ಹೊತ್ತು ಸಿಂಗಾರಗೊಂಡ
ಗರಿಕೆಗಳ ಅಂಚು.....

ನಿಟ್ಟುಸಿರು ಹೊಮ್ಮಿ
ಕಣ್ಣಾಲಿಗಳು ತುಂಬಿ
ಕಾಣುವುದೆಲ್ಲವೂ ಕಣ್ಮರೆಯಾಗಿ
ಹೆಜ್ಜೆಗಳು ಹಿಡಿದ ದಾರಿಯೇ
ಗುರಿಯಾಗಿ
ಸಾಗುತಿದೆ ಪಯಣ......

ಸಖೀ ಗೀತ

ಸಖೀ....
ನಿನ್ನಿರುವಿಕೆಯನ್ನು
ಬಯಸಿ ಪರಿತಪಿಸಲು
ಮೈಲು, ಹರದಾರಿಗಳ ದೂರವೇ
ಬೇಕು ಅಂತಲ್ಲ

ನಿನ್ನಿರುವಿಕೆಯನ್ನು
ಬಯಸಿ ಪರಿತಪಿಸಲು
ಅಲ್ಪ-ಸ್ವಲ್ಪ
ಅಥವಾ ಸುದೀರ್ಘ ಅವಧಿಯ
ವಿರಹವೂ ಕಾರಣವೇನಲ್ಲ

ಆದರೂ....
ಪ್ರತಿಕ್ಷಣವೂ ಎನ್ನ ಹೃದಯ,
ಎನ್ನುಸಿರು...
ಅನುಗಾಲ
ನಿನ್ನ ಜೊತೆಗಾಗಿ ಬಯಸಿ
ಮಿಡಿಯುತ್ತದೆ.....