Wednesday, January 30, 2013

ಸಂಗಾತಿ

ಅವಳು
ನಾಕ-ನರಕ
ಎಲ್ಲಿಯಾದರೂ ಸರಿ
ನಾನು ಹೋದಲ್ಲೆಲ್ಲಾ
ಬರುವುದಾಗಿ ಹೇಳಿ
ನನ್ನ ಜೊತೆಯಲ್ಲಿಯೇ
ಹೆಜ್ಜೆ ಹಾಕುವಳು

ನೆರಳು
ತಾನೇನೂ ಕಡಿಮೆಯಲ್ಲ
ಅಂತ
ನನ್ನ ಹೆಜ್ಜೆಯಿಂದಲೇ
ಒಡಮೂಡಿ
ಹಿಂಬಾಲಿಸುತ್ತಿತ್ತು

ಬಾಳ ಪಯಣದಲ್ಲಿ
ಕತ್ತಲು ಕವಿದಾಗ
ನೆರಳು ಕಣ್ಮರೆಯಾಗಿತ್ತು
ಕೈಹಿಡಿದು ಬರುವ ಅವಳು
ಮೃದುವಾಗಿ ಕೈಯೊತ್ತಿ
ನಸುನಕ್ಕು
ಪಿಸುಮಾತಿನಲಿ
ಮೆಲ್ಲಗೆ ಉಲಿದಳು
ಇನಿಯಾ.....
ನಾನಿಲ್ಲವೇ ಜೊತೆಗೆ

ಅವಳು

ಅವಳು

ನೆರಳಿಗಿಂತಲೂ ಮಿಗಿಲು
ಅನವರತ ಜೊತೆಗಿರುವಳು
ಹಗಲಿರುಳು
ಅವಳು.....
ವಿಕ್ರಮನ ಹೆಗಲೇರಿದ
ಬೇತಾಳನಿಗೂ ಮಿಗಿಲು

ವಿಕ್ರಮನಿಗಾದರೋ
ಹೊತ್ತು ಸಾಗುವ
ನೋವು ಮರೆಯಲು
ಬೇತಾಳನ ಕಥೆಯಿತ್ತು
ಕೊನೆಗೊಮ್ಮೆ
ಬಿಡುಗಡೆಯಿತ್ತು
ಬೇತಾಳನ ಪ್ರಶ್ನೆಗೆ
ಉತ್ತರಿಸಿದಾಗ

ಅವಳು ಹಾಗಲ್ಲ
ಕೊನೆಯುಸಿರವರೆಗೂ
ಬೆಂಬತ್ತಿರುವ ಅವಳು
ದೂರದರ್ಶನದ
ಧಾರಾವಾಹಿಯಂತೆ
ತಲೆ-ತಲಾಂತರ ಕಳೆದರೂ
ಮುಗಿಯದು ಅವಳ
ಕಥಾಸಾಗರ

ಪ್ರಶ್ನೆಗಳೋ !!!
ಎಂದೂ ಮುಗಿಯದ
ಅಕ್ಷಯ ಪಾತ್ರೆ
ಉತ್ತರಿಸಲು ತತ್ತರಿಸಿ
ಮುನ್ನಡೆಯುತ್ತಿರುವೆ
ಮೂಕ ಯಕ್ಷನಂತೆ..... :)