Tuesday, February 25, 2014

ಹಾಗೇ ಸುಮ್ಮನೇ....

ಗಲ್ಲು ಶಿಕ್ಷೆಗೆ ಆಣಿಯಾಗಿ
ಕೊನೆಯ ಕ್ಷಣಗಳನೆಣಿಸುತ
ಭಾವರಾಹಿತ್ಯದಿ
ನಿಟ್ಟುಸಿರು ಬಿಡುವ ಕೈದಿಯಂತೆ
ಅನಾಥವಾಗಿ ಬಿದ್ದಿರುವ ಕಾಗದ....
ಎನ್ನ ಮನದ ಅಳಲು
ಅದರೊಡಲಾಳದ ಕಳವಳಗಳಿಗೆ
ಆಯಾಮಗಳು ಹಲವು....

ಅದೂ-ಇದೂ ಬರೆದು
ಶೋಧನೆ, ಸಂಶೋಧನೆಯ
ವಿಮರ್ಶೆ, ಪರಾಮರ್ಶೆಯ ಹೆಸರಿನಲಿ
ಎದೆ ಮೇಲೆ ಬಿದ್ದ ಅಕ್ಷರಗಳ
ಜೊತೆಗೆ
ಉದ್ದ-ಅಡ್ಡ, ಅಕ್ಕ-ಪಕ್ಕ
ಎಲ್ಲೆಂದರಲ್ಲಿ ಗೀಚಿಸಿಕೊಂಡು
ನಾಲ್ಕಾರು ಕರಗಳ ಸೋಕಿ
ರದ್ದಿಯಾಗಿ
ಜೀವಾವಧಿ ನಿತ್ಯ ಸಾಯುವ ಬದಲು
ಗಲ್ಲು ಶಿಕ್ಷೆಯನೇನೋ ಬಯಸೀತು....

ಆದರೇ
ಎನ್ನ ಮನದಲಿ ಕೈದಿಗೆ ತೋರುವ
ತೃಣ ಮಾತ್ರ ಕನಿಕರವೂ ಮೂಡದು
ಅದರ ಕೊನೆಯಾಸೆ ಕೇಳಲಾರೆ
ಒಂದು ವೇಳೆ ಕೇಳಿದರೇ
ಹೇಳೀತು
ಮಕ್ಕಳ ಕೈಯೊಳಗೆ ಕೊಟ್ಟರೇ
ಬಾನಿನುದ್ದಲಕೂ
ಹಾರುವ ಗಾಳಿಪಟವೋ
ಹರಿವ ನೀರಿನ ಮೇಲೆ ನಲಿದಾಡುವ
ಹಾಯಿ ದೋಣಿಯೋ ಆಗಿ
ಮಕ್ಕಳ ಮುಖದ ಮಂದಸ್ಮಿತದಲಿ
ಕೊನೆಯುಸಿರೆಳೆಯುವಾ
ಹುನ್ನಾರ ಹೂಡೀತೆಂಬ ಕಳವಳ....

ಅದಕೇ...
ಏನೇನೋ ಮಣ್ಣಂಗಟ್ಟಿ ಪದಗಳನೆರಚಿ
ಅದರ ಹಣೆಬರಹ ಬರೆಯುವ ತವಕ
ನವರಸಗಳ ಸೋಸಿ
ನಾಲ್ಕಾರು ಸಾಲುಗಳ ಬರೆದು
ಕವಿತೆಯೆಂಬ ಭಾವವನು ಮೆರೆಸಿಯೇನು...
ಆದುವೇ...
ಅದರ ಚರಮಗೀತೆ....

Tuesday, February 18, 2014

ಸಖೀ ಗೀತ

ಅವಳನ್ನು
ಬಿಟ್ಟು !!!
ಅವಳ ಗೊಡವೆಯಿಲ್ಲದೇ
ಗೋಡೆಯ ಮೇಲೆ
ಅವಳಿಲ್ಲದ ಬಣ್ಣಗಳ
ಚಿತ್ರ ಬಿಡಿಸಬೇಕೆಂದೆ....

ಚಿತ್ತದ ಕಣ-ಕಣದಲ್ಲಿ
ಅವಳೇ
ತುಂಬಿರುವಾಗ
ನಾಲ್ಕಾರು ದಿನ
ಗೋಡೆಯೆಲ್ಲಾ
ಬಯಲಾಗಿತ್ತು.....

ನಿಟ್ಟುಸಿರಿನೊಂದಿಗೆ
ಹೊರಸೂಸುವ
ಅವಳ ನೆನಪು
ನಮ್ಮೀರ್ವರ ನಡುವಿನ
ಅವಿನಾಭಾವ ಸಂಬಂಧಕೆ
ಮೂಕ ಸಾಕ್ಷಿಯಾಗಿತ್ತು....

ಟೈಂ-ಪಾಸ್

ಮನದ
ಗೋಜಲುಗಳಿಗೆ
ಭಾವ ತುಂಬಿಸುತ
ಸುಮ್ಮನೆ
ಅದು-ಇದು ಬರೆಯೋದು
ಭಾವನೆಗೂ ಪದಗಳಿಗೂ
ತಾಳೆಯಾಗದೇ
ತೊಳಲಾಟದಲಿ
ಪರ-ಪರನೆ ಹರಿದು
ಹಸಿದಿರುವ,
ತುಂಬಿದ್ದರೂ ಹೊಟ್ಟೆಬಾನಂತೆ
ಬಾಯ್ದೆರೆದಿರುವ
ಕಸದ ಬುಟ್ಟಿಗೆ ಎಸೆಯೋದು
ಆಕಸ್ಮಿಕವೆಂಬಂತೆ
ಅಥವಾ
ಅಸಹನೆಯಿಂದ
ಕೊನೆಗೆ
ಬರೆದಿರುವುದನ್ನೇ
ಕವಿತೆಯೆಂದು ಗೋಡೆಗೆ
ಬಳಿಯೋದು......

ಸಖೀ ಗೀತ

ಸಖೀ....
ಶರಧಿಯ
ಯೋಚನೆಯೇ ಬೇಡ....
ನಿನ್ನ ಕಣ್ಣಾಲಿಗಳೇ ಸಾಕು...
ಅನುರಾಗದಲಿ
ಮುಳುಗಲು, ತೇಲಲು....

ನಿನ್ನೀ ನಯನಗಳೇ ಇರಬಹುದು
ಸಂವೇದನೆಯ
ಗ್ರಹಿಸಿ, ಸಂಗ್ರಹಿಸಿ
ರಸಪೂರಣಗೊಳಿಸಿ
ರಸವತ್ತಾದ
ಕವಿತೆಯನುಣಬಡಿಸುವದು....

ಪಯಣ

ಯಾಕೋ ಏನೋ
ಥಟ್ಟನೆ
ಹಿಂತಿರುಗಿ ನೋಡಿದಾಗ
ಅಲ್ಲಲ್ಲಿ ಬಿದ್ದಿರುವ
ನಿನ್ನೆಗಳು.....

ಶಿಥಿಲಾವಸ್ಥೆಯಲಿ
ಹಾಳು ಕೊಂಪೆಯಂತೆ
ಕೈಕಾಲು ಮುರಿದುಕೊಂಡು
ಭಗ್ನಾವಸ್ಥೆಯಲಿ ಚದುರಿ
ಅನಾಥ ಶವಗಳ
ತೆರದಿ
ಹರಡಿಕೊಂಡಿರುವ
ನೋವುಗಳು.....

ಎಂದೋ
ಬೀಸಿದ ಬಿರುಗಾಳಿಗೆ
ಸಿಕ್ಕ ತರಗೆಲೆಗಳು
ಗಗನಚುಂಬಿಯಾಗಿ ಹಾರಾಡಿ
ಮತ್ತೆ
ಧರೆಗುರುಳಿ
ಮಣ್ಣಿಗೆ ಲೀನವಾಗಿ
ಅಲ್ಲಿಯೇ ಚಿಗುರೊಡೆದು
ಮಂಜ ಹನಿ ಹೊತ್ತು ಸಿಂಗಾರಗೊಂಡ
ಗರಿಕೆಗಳ ಅಂಚು.....

ನಿಟ್ಟುಸಿರು ಹೊಮ್ಮಿ
ಕಣ್ಣಾಲಿಗಳು ತುಂಬಿ
ಕಾಣುವುದೆಲ್ಲವೂ ಕಣ್ಮರೆಯಾಗಿ
ಹೆಜ್ಜೆಗಳು ಹಿಡಿದ ದಾರಿಯೇ
ಗುರಿಯಾಗಿ
ಸಾಗುತಿದೆ ಪಯಣ......

ಸಖೀ ಗೀತ

ಸಖೀ....
ನಿನ್ನಿರುವಿಕೆಯನ್ನು
ಬಯಸಿ ಪರಿತಪಿಸಲು
ಮೈಲು, ಹರದಾರಿಗಳ ದೂರವೇ
ಬೇಕು ಅಂತಲ್ಲ

ನಿನ್ನಿರುವಿಕೆಯನ್ನು
ಬಯಸಿ ಪರಿತಪಿಸಲು
ಅಲ್ಪ-ಸ್ವಲ್ಪ
ಅಥವಾ ಸುದೀರ್ಘ ಅವಧಿಯ
ವಿರಹವೂ ಕಾರಣವೇನಲ್ಲ

ಆದರೂ....
ಪ್ರತಿಕ್ಷಣವೂ ಎನ್ನ ಹೃದಯ,
ಎನ್ನುಸಿರು...
ಅನುಗಾಲ
ನಿನ್ನ ಜೊತೆಗಾಗಿ ಬಯಸಿ
ಮಿಡಿಯುತ್ತದೆ.....