Sunday, June 11, 2017

ಕನವರಿಕೆ.....

ಕನಸುಗಳ ವ್ಯವಹಾರ
ನನಗೆ ಬಾಲ್ಯದಿಂದಲೇ ಬಂದಿದ್ದು
ಮಣ್ಣಿನ ಮನೆಯ 
ತೊಲೆಗಳ ಕೆಳಗೆ, ನಾಗೊಂದಿಯ ಮೇಲೆ
ಸಾಲು-ಸಾಲಾಗಿ ಅಲಂಕರಿಸಿದ
ದೇವರು ದಿಂಡರು, ಮಹಾತ್ಮರ ಫೋಟೋಗಳು
ಹಿರಿಯರು ಹೇಳುತ್ತಿದ್ದ
ರಮ್ಯ-ರಮಣೀಯ ರೋಮಾಂಚಕ
ನೀತಿಕಥೆಗಳು, ಪುರಾಣ-ಭಾಗವತ
ಕಾಗಕ್ಕ-ಗುಬ್ಬಕ್ಕನ ಕಥೆಗಳು
ಇವುಗಳನ್ನೆಲ್ಲಾ
ಹಸಿಗೋಡೆಯಂಥಹ ನನ್ನ ಅಂತಃಪಟಲದ ಮೇಲೆ
ಅಚ್ಹೊತ್ತಿದಂತೆ ಹೇಳುತ್ತಾ
ಕಂಡು ಕಾಣದ
ನಾಳೆಗಳ ಕನಸು ಬಿತ್ತಿದರು.....


ನಂತರ ನೋಡಿ ಶುರುವಾಗಿದ್ದು
ಬರೀ ವ್ಯವಹಾರ-ವ್ಯಾಪಾರ
ದೊಡ್ಡೋನಾದಮೇಲೆ
ನೀನು ಹಿಂಗಾಗಬೇಕು, ಹಂಗಾಗಬೇಕು
ಹೆಂಗೆಂಗೋ ಆಗಬೇಕು
ನನ್ನತನವೆಂಬುದರ ಬೆಲೆ ತೆತ್ತು
ಕನಸುಗಳ ಕೊಂಡು
ಮಸ್ತಕದ ಮಾಡಿಗೆ ತುರುಕಿದ್ದೇ-ತುರುಕಿದ್ದು
ಅವರು ಮಾರಿದರೋ, ನಾನೇ ಕೊಂಡುಕೊಂಡೆನೋ
ಇಂದಿಗೂ ಅರಿವಾಗದು......

ಈ ಕನಸುಗಳ ವ್ಯಾಪಾರಸ್ಥರಿಗೆ
ಮಾನವೀಯತೆ, ಸಂಸ್ಕಾರ, ಪ್ರೀತಿ
ಇಂಥಾದ್ದೆಲ್ಲಾ ಅಲರ್ಜಿಯಿರಬೇಕು
ಅಂಥಾ ಸರಕು
ಅವರೆಂದಿಗೂ ಮಾರಲಿಲ್ಲ
ನಾನು ಅಷ್ಟೇ
ಅಂತಹುದನ್ನು ಖರೀದಿಸಲು
ಕಿಂಚಿತ್ತೂ ಯೋಚಿಸಿರಲಿಲ್ಲಾ.....

ಕೊನೆಗೂ
ಏನೇನೋ ಆಗಲು ಹೋಗಿ, ಏನೋ ಆಗಿಬಿಟ್ಟೆ
ಇಂದಿಗೂ ಪಳೆಯುಳಿಕೆಯಾಗಿರುವ
ಕೆಲವು ಕನಸುಗಳು ಕೊಳೆತು ನಾರುತ್ತಿವೆ
ಬಿಡುಗಡೆಗಾಗಿ, ಬಟವಾಡೆ ಮಾಡಲು
ಇನ್ನಿಲ್ಲದಂತೆ ಯಾಚಿಸುತ್ತವೆ
ನಾನೋ ಕನಸುಗಳ ಮಟ್ಟಿಗೆ
ಇನ್ನಿಲ್ಲದ ಜಿಪುಣ-ಕೃಪಣ
ನನ್ನತನವ ಕಳೆದುಕೊಂಡು ಕೊಂಡಿರುವ
ಸರಕು ಹಾಗೆ ಬಿಡಲಾದೀತೇ
ಕೊಳೆಯಲಿ ನಾನು ಎನ್ನುವ ಮುಖವಾಡ ಕಳಚುವವರೆಗೆ......

No comments:

Post a Comment