Tuesday, July 12, 2011

ದಾರಿ

ಭೂಮಿಯ ಮೇಲೆಲ್ಲಾ
ಗೆರೆ ಕೊರೆದಂತೆ ಕಾಣುವ ದಾರಿ
ನೇರವಾಗಿ, ಅಂಕು-ಡೊಂಕಾಗಿ...
ಜೇಡರ ಬಲೆಯಂತೆ
ನಡೆದವರ ಜಾಡು ದಾರಿಯೂ ಅರಿಯದು

ಅಲ್ಲಿ ಕೈಬೀಸಿ ಕರೆದವರ
ಕಾಯುತ್ತ ನಿಂತವರೂ ಇದ್ದರೂ
ಮುಂದೆ ಸಾಗದ ಅಸಹಾಯಕರಿಗೆ
ಕೈನೀಡಿ ಕರೆದೊಯ್ಯುವವರೂ ಇದ್ದರು
ಇದ್ಯಾವುದರ ಪರಿವೇ ಇಲ್ಲದಂತೆ
ಬಿದ್ದಿದೆ ದಾರಿ ಬಯಲಿನಲ್ಲಿ
ಸಂದಿ-ಗೊಂದಿಗಳಲ್ಲಿ


ಗೌತಮ ಮಧ್ಯರಾತ್ರಿಯಲಿ
ಎದ್ದು ಹೋಗಿದ್ದು ಇಲ್ಲಿಂದಲೇ
ಸೀತೆಯನು ಕದ್ದೊಯ್ದ ರಾವಣ
ರಾವಣನ ಅರಸುತ್ತ
ಸಾಗರೋಲ್ಲಂಘನ ಗೈದ ಹನುಮ
ದಾರಿಯನು ಗಮಿಸುತ್ತಲೇ
ಅಹಲ್ಯೆಯ ಶಾಪವಿಮೋಚನೆ
ಮಾಡಿದ ಮರ್ಯಾದಾಪುರುಷೋತ್ತಮ
ಎಲ್ಲರೂ ನಡೆದರು ಅವರವರ ದಾರಿಯಲಿ...

ನಡೆದವರು, ಮುನ್ನುಗ್ಗಿದವರು
ಮುಂದೆ ಸಾಗಿ ಗಮ್ಯ ಸೇರಿದರು
ಕಸಿವಿಸಿಯಿಂದ ಅಳುಕುತ್ತ, ತೆವಳುತ್ತ
ಸಾಗುವವರು, ಕವಲು ದಾರಿಯಲಿ ನಿಂತವರು
ಅಲ್ಲಲ್ಲಿ ಕಪ್ಪುಚುಕ್ಕೆಯಂತೆ ಗೋಚರಿಸುತಿಹರು
ಗಮಿಸಬೇಕು ದೂರವ
ನಿರ್ಗಮಿಸಬೇಕು ಗಮ್ಯದೆಡೆಗೆ......

2 comments:

  1. ಗಂಗಾಧರ್ ಸರ್.ಕಾವ್ಯ ತೆಕ್ಕೆಗೆ ಬಂತು. ಅದನ್ನು ಆಸ್ವಾಧಿಸುತ್ತಿದ್ದೇನೆ.ಈ ಕೆಳಗಿನ ಸಾಲುಗಳು ಉತ್ತಮ ಕಲ್ಪನೆ.
    ಗೌತಮ ಮಧ್ಯರಾತ್ರಿಯಲಿ
    ಎದ್ದು ಹೋಗಿದ್ದು ಇಲ್ಲಿಂದಲೇ
    ಸೀತೆಯನು ಕದ್ದೊಯ್ದ ರಾವಣ
    ರಾವಣನ ಅರಸುತ್ತ
    ಸಾಗರೋಲ್ಲಂಘನ ಗೈದ ಹನುಮ
    ದಾರಿಯನು ಗಮಿಸುತ್ತಲೇ
    ಅಹಲ್ಯೆಯ ಶಾಪವಿಮೋಚನೆ
    ಮಾಡಿದ ಮರ್ಯಾದಾಪುರುಷೋತ್ತಮ
    ಎಲ್ಲರೂ ನಡೆದರು ಅವರವರ ದಾರಿಯಲಿ.

    ReplyDelete
  2. ಗಂಗಾಧರರ ಅಭಿವ್ಯಕ್ತಿ ಸಶಕ್ತಿಯ ಕಾವ್ಯವಿದು.

    ದಾರಿ.

    ಕವನದ ಪರಿಪೂರ್ಣತೆಯನ್ನು ಸದಾ ಕಾಯ್ದುಕೊಂಡು, ದಾರಿಗಳ ವಿಶಿಷ್ಟತೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ ಸಾರ್.

    ಮೂರನೇ ಪ್ಯಾರಾದ ಗೌತಮ, ರಾವಣ, ಹನುಮ, ಅಹಲ್ಯೆ ಮತ್ತು ಶ್ರೀರಾಮನ ಉಲ್ಲೇಖಗಳು ಗಣನೀಯವಾಗಿ ಮೂಡಿಬಂದಿವೆ.

    ಭಾಷೆಯಲ್ಲಿ ಲಾಲಿತ್ಯವಿದೆ, ಕಾವ್ಯ ಲಕ್ಷಣಗಳೂ ಇವೆ. ಭೇಷ್!

    ReplyDelete