Friday, September 3, 2010

ಎಲ್ಲಿರುವೆ

ಕಣ್ಣುಗಳು ಅರಸುತ್ತಿವೆ

ನಿನ್ನ ಇರುವಿಕೆಯನ್ನು
ನೂರಾರು ನಯನಗಳ ನಡುವೆ
ನಿನ್ನ ನೋಟವನ್ನು

ನಸುನಗುವ, ಹುಸಿಗೋಪದ
ತುಂಟ ನೋಟದ, ಮಂದಸ್ಮಿತವಾದ
ಕಾವ್ಯಲೋಕದ ಕಲ್ಪನೆಗಳ ಹೊತ್ತು
ಹಾಗೋ-ಹೀಗೋ ನಿನ್ನನ್ನು ಕಾಣಲು ಕಾತರಿಸುತ್ತ
ಅರಸುತ್ತಿವೆ ನನ್ನ ನಯನಗಳು

ನೀಲಿ ಬಾನಿನಲಿ ದಟ್ಟೈಸಿದ
ಕಾರ್ಮೋಡಗಳ ನಡುವೆ
ತೂರಿ ಬರುತಿಹ ಸೂರ್ಯರಶ್ಮಿಯ ತೆರದಿ
ಮಾನಿನಿಯರ ಮಧ್ಯೆ ಕಾಣುವ ಆಶೆಯಿಂದ
ಅರಸುತ್ತಿವೆ ನನ್ನ ನಯನಗಳು

ಇರುಳ ನೀಲಾಂಬರದಿ
ಅಗಣಿತ ತಾರೆಗಳ ತೋಟದಲಿ
ಬೆಳ್ಳಿಮೋಡಗಳ ನಡುವೆ
ರಾರಾಜಿಸುವ ಚಂದ್ರಬಿಂಬದಲಿ
ಅರಸುತ್ತಿವೆ ನನ್ನ ನಯನಗಳು


ಮಲ್ಲಿಗೆ, ಸಂಪಿಗೆ, ಗುಲಾಬಿಗಳ
ನಂದನದ ತೋಟದಲಿ ಬೀಸುವ ತಂಗಾಳಿ
ತಿಂಗಳಿನ ಬೆಳದಿಂಗಳಲಿ
ನಿನ್ನ ಇರುವಿಕೆಯನ್ನು ಅನವರತ
ಅರಸುತ್ತಿವೆ ನನ್ನ ನಯನಗಳು

No comments:

Post a Comment