Wednesday, August 1, 2012

ಸಖೀಗೀತ

ಶ್ರಾವಣದ ಸಂಜೆ
ಇಂದು ಮಂಗಳವಾರ
ಹೊರಟಿಹಳು ಅವಳು

ಇಲ್ಲಿ ನಿಲ್ಲಲಾರದು
ಅವಳ ಪಯಣ
ನಾನಾದರೂ ಎಷ್ಟು ದಿನ
ಮತ್ತೆ ಸೇರುವ ಆಸೆಯೊಂದೇ

ಭಾವನೆಗಳನೆಲ್ಲ
ಗುಡಿಸಿ ಗೋಪುರ ಕಟ್ಟಿ
ಎನ್ನ ಮನದಿ ನಿರ್ಮಿಸಿದ
ಅಂತಃಪುರಕೆ ಸೇರುತಿಹಳು

ಖಾಲಿ-ಖಾಲಿ ಮನಸು
ಅಂತರಾಳದಲ್ಲಿ
ಅವಳದೇ ಪ್ರತಿಬಿಂಬ
ಅದೇ ಮುಗುಳ್ನಗು ಬೆಳಗುತಿಹುದು

ಇಲ್ಲಿ ಮಿಡಿಯುವ
ಎನ್ನ ಹೃದಯರಾಗಕೆ
ಎಲ್ಲಿ ಹೋದರೂ ಅಲ್ಲಿಂದಲೇ
ತಾಳ ಹಾಕುವುದು ಅವಳ ಹೃದಯ

ಕಾಣದಿದ್ದರೇನು ಇನ್ನು
ಕಣ್ಣೆದುರು ಅವಳು
ಕಣ್ಣು ಮುಚ್ಚಿದಾಕ್ಷಣ ನಗುವಳು
ಕಣ್ರೆಪ್ಪೆಯಾ ಮರೆಯಿಂದ

Saturday, June 30, 2012

ಕಾವ್ಯ ಕನ್ನಿಕೆ

ಅವಳು, ಅವಳೆನಗೆ
ಜೀವಂತ ಕವಿತೆ
ನನ್ನ ಬಾಳಿನ ಜೀವಂತಿಕೆ
ಅವಳೊಂದು ಜೀವಂತ ಕವನ

ಸುತ್ತ ಸುಳಿಯು ತಂಗಾಳಿಗೆ
ಅತ್ತಿತ್ತ ಹಾರುವ
ಅವಳ ಮುಂಗುರುಳು
ಅವಳೊಂದು ಜೀವಂತ ಕವನ

ಜಗದ ಎಲ್ಲವನ್ನೂ
ಅಚ್ಚರಿಯಿಂದ ನೋಡುವ
ಅವಳ ಆ ಕಣ್ಣುಗಳು
ಅವಳೊಂದು ಜೀವಂತ ಕವನ

ಎನ್ನ ಹೃದಯಕ್ಕೆ
ತಂಪನ್ನೀಯುವ
ಅವಳ ಮಂದಹಾಸ
ಅವಳೊಂದು ಜೀವಂತ ಕವನ

ಸೃಷ್ಟಿಯ ಸೌಂದರ್ಯವನ್ನೇ
ಹೊತ್ತು ತಿರುಗುವ
ಅವಳ ಸುಂದರ ಮೈಮಾಟ
ಅವಳೊಂದು ಜೀವಂತ ಕವನ

ಒಂದಿನಿತೂ ಬೇಸರಿಸದಂತೆ
ಎಲ್ಲವನ್ನೂ ಚುರುಕಾಗಿ ಮಾಡುವ
ಅವಳ ಚಲನ-ವಲನ
ಅವಳೊಂದು ಜೀವಂತ ಕವನ

ಅತ್ತಿಂದಿತ್ತ ಓಡಾಡುವಾಗ
ಬೆನ್ನ ಹಿಂದೆ ಓಲಾಡುವ
ಅವಳ ಹೆರಳು
ಅವಳೊಂದು ಜೀವಂತ ಕವನ

ಸುತ್ತ ಸುಳಿಯುವ
ತಂಗಾಳಿಯಂತೆ ಮುದನೀಡುವ
ಅವಳ ಒಯ್ಯಾರ
ಅವಳೊಂದು ಜೀವಂತ ಕವನ

ಸಖೀಗೀತ

ಸಖೀ....
ನೀನಿಲ್ಲದ ಮನೆ
ಕಾರಿರುಳ ಆಗಸದಂತೆ
ಮನದಲ್ಲಿಯೂ ಬೆಳಕಿಲ್ಲ
ಮನೆಯೂ ಅಮವಾಸ್ಯೆ
ಚಂದ್ರಿಕೆಯಿಲ್ಲ

ಆದರೂ ನಭೋಮಂಡಲದಿ
ಮೆರೆಯುವ ನೂರು
ತಾರೆಗಳ ತೆರದಿ ಮಿನುಗುವ
ಚಂಚಲೆಯರ ನಯನಗಳು
ಮಿಣುಕುತ್ತವೆ ಚಂದ್ರಿಕೆಯಂತಲ್ಲ

ಎದೆಯಾಳದಲಿ
ಭುಗಿಲೇಳುವ ವಿರಹದಾ ತಾಪ
ಮೇಲೆ ನಿನ್ನ ಸವಿನೆನಪುಗಳ
ತಣ್ಣನೆಯ ಗಾಳಿ
ಕಣ್ಣು ಮುಚ್ಚಿದಾಗಲೆಲ್ಲ ಕಾಣುವ
ಚಂದ್ರಿಕೆಯ ಬಿಂಬ

ನೀನಿಲ್ಲ ಮನೆಯಲಿ
ಮನದಾಳದಿ ಮಿನುಗುವ
ಚಂದ್ರಿಕೆಯ ನೆನಹುಗಳು
ವಿರಹದ ಬೇಗೆಯಲ್ಲಿಯೂ
ಎನ್ದ ಮನದುಂಬಿರುವ ನೀನು
ಇಲ್ಲಿ ಇಲ್ಲವೆಂದು ಹೇಗೆ ಹೇಳಲಿ.......

ಹಾಗೇ ಸುಮ್ಮನೇ....

ಅಂದು ಹಾಗೆಯೇ ಇತ್ತು
ಅವಳು ಬರುವ ದಾರಿಯಲಿ
ರಸ್ತೆ ಬದಿಯ ಮರಗಳಿಂದ
ಉದುರಿದ ಹೂರಾಶಿ

ಮಂದ ಮಾರುತದಿ
ಪರಿಮಳವೂ ಹರಡುತಿತ್ತು
ಮೆಲ್ಲಗೆ
ಅವಳ ಮುಗುಳ್ನಗೆಯ ಸೊಬಗಿನಲಿ

ಇಂದಿಗೂ ಅರಳಿದೆ
ಅವಳ ಪ್ರೀತಿ ಎನ್ನ
ಮನದೊಳಗೆ, ಮನೆಯೊಳಗೆ
ಅನುರಾಗದ ಪರಿಮಳ
ಮೈಮನಗಳಲಿ ತುಂಬಿದೆ

ಹಸಿರಾಗಿದೆ ಮನದಿ
ಆ ದಿನಗಳ ನೆನಪು
ಹಳತಾಗಿಲ್ಲ ಇನ್ನೂ ಆ ಸೊಬಗು
ಅನುಕ್ಷಣವೂ ಕಳೆದು
ಹೋಗುತ್ತಿದ್ದೇನೆ ಅವಳ ಪ್ರೇಮರಾಗದಲಿ