Monday, December 10, 2012

ಕಣ್ಣು-ಮುಚ್ಚಾಲೆ

ಸನಿಹದಲ್ಲೆಲ್ಲಿಯೂ

ಇರದ ನಲ್ಲೆಯ
ನೆನೆಯುತ
ವಿರಹದ ಬೇಗೆಯಂದ
ಕಣ್ಣು ಮುಚ್ಚಿದರೆ
ಕಣ್ಣ ರೆಪ್ಪೆಗಳ
ಅಡಿಯಿಂದ ಪ್ರತ್ಯಕ್ಷ್ಯ
ಆಗುವುದೇ ಅವಳು........

ಪ್ರೀತಿ ಶುರುವಾಯ್ತು
ಮೊದಲ ನೋಟದಿಂದ
ನೂರು ಮಾತುಗಳು
ಹೇಳದ
ಕಥೆಯನೆಲ್ಲವ ಹೇಳಿ
ಕಣ್ಣ ಸನ್ನೆಯಲ್ಲೇ
ಒಪ್ಪಿಕೊಂಡು, ಅಪ್ಪಿಕೊಂಡು

ಇರದಿದ್ದರೇನು
ಹತ್ತಿರ
ಹೃದಯದ ಚಿಪ್ಪಿನೊಳಗೆ
ಸವಿನೆನಪುಗಳ ಬಂಧಿಸಿ
ಮತ್ತೆ ನಲ್ಲೆಯ
ಜೊತೆಯಲ್ಲಿ
ಕಣ್ಣಾಮುಚ್ಚಾಲೆಯಾಟ

ವಿಪರ್ಯಾಸ

ಪುಸ್ತಕದ

ಕೊನೆಯ ಪುಟದಲ್ಲಿ
ರಟ್ಟಿನ ಮೇಲೆ
ಬರೆದಿರುವ ಅವಳ ಹೆಸರು
ಹಲವು ಬಾರಿ ಬರೆದು
ಅವರಿವರು ನೋಡಿಯಾರು
ಎಂಬ ಅಳುಕಿನಲಿ
ಕಾಟು, ಗೀಟು ಹೊಡೆದು...
ಅಳುಕಿಸಲೆತ್ನಿಸಿ
ಅದರಲ್ಲಿಯೇ
ನವ್ಯಕಲೆಯನ್ನೂ ಮೀರಿಸುವ
ಚಿತ್ರವನೂ ಬಿಡಿಸಿ
ಅಕ್ಕ-ಪಕ್ಕ
ಯಾರೂ ಇಲ್ಲದಾಗ
ಮನದಲ್ಲಿ ಸಂಚಲನ ಮೂಡಿಸಿದ
ಚಂಚಲೆಯ ನೆನೆಯುತಾ
ಏಕಾಗ್ರಚಿತ್ತದಿಂದ
ರವಿವರ್ಮನಂತೆ ಅವಳ
ಚಿತ್ರವನೂ ಬಿಡಿಸಿ

ಕಾಲೇಜು ಕಟ್ಟೆಯನು
ಹಲವಾರು ಸಲ ಎಡವಿ
ಬಾಳ ಕಟ್ಟಿಕೊಳ್ಳುವ
ಹಂಬಲದಲಿ ಹಗಲಿರುಳು
ಅಲೆದಾಡಿ
ಹಸಿವು-ಬಾಯಾರಿಕೆಗಳ
ಹೊತ್ತು ತಿರುಗಿ
ಮರಳಿ ಗೂಡಿಗೆ ಬಂದಾಗ
ಕಿಲುಬು ಕಾಸು ಕಾಣದಿರುವಾಗ
ಹಗಲಿರುಳೂ ಉರುಹೊಡೆದು
ಗಳಿಸಿದ ಪದವಿಯನೆ ನೆನೆದು
ಹಳೆಯ ಪುಸ್ತಕಗಳನು
ರದ್ದಿ ಹಾಕುವ ಸಮಯದಿ
ಮತ್ತೆ ಪ್ರತ್ಯಕ್ಷವಾಯಿತು
ಕೊನೆಯ ಪುಟ
ಕಣ್ಮುಂದೆ ಮೂಡಿದ
ಅವಳು
ಪಿಸುಮಾತಿನಲಿ ಉಲಿದಳು
ಗೆಳೆಯಾ ಮರೆಯದಿರು
ಇದು ಬದುಕಿನ ಮೊದಲ ಪುಟ

ಬೆಳಕು

ಕಂಬಗಳ ನಡುವೆ

ತೂರಿ ಬರಿತಿರುವ
ಹಣತೆಯ ಬೆಳಕು
ಸೆಳೆಯುತ್ತಿದೆ

ನೆರಳುಗಳ ಮಧ್ಯದಲಿ
ಬೆಳಕಿನ ದಾರಿಯಲಿ
ಸಾಗುತಿರುವೆ...
ಗಮ್ಯವ ಹುಡುಕುತ್ತಾ

ಬೆಳಕು ಬೇಕು
ಮುಂದೆ ಸಾಗಲು
ನೆರಳಿನಾಟವ ಮೀರಿ
ಮುನ್ನಡೆಯಬೇಕು

ಸೂರಿನಡಿಯಿಂದ
ಪಾರಾಗುವ ಹಂಬಲ
ತೆರೆದ ಆಗಸದಿ ಮಿಣುಕುವ
ನಕ್ಷತ್ರಗಳ ಬೆಳಕಲಿ
ದಾರಿ ಬೆಳಗಬೇಕು

Wednesday, August 1, 2012

ಸಖೀಗೀತ

ಶ್ರಾವಣದ ಸಂಜೆ
ಇಂದು ಮಂಗಳವಾರ
ಹೊರಟಿಹಳು ಅವಳು

ಇಲ್ಲಿ ನಿಲ್ಲಲಾರದು
ಅವಳ ಪಯಣ
ನಾನಾದರೂ ಎಷ್ಟು ದಿನ
ಮತ್ತೆ ಸೇರುವ ಆಸೆಯೊಂದೇ

ಭಾವನೆಗಳನೆಲ್ಲ
ಗುಡಿಸಿ ಗೋಪುರ ಕಟ್ಟಿ
ಎನ್ನ ಮನದಿ ನಿರ್ಮಿಸಿದ
ಅಂತಃಪುರಕೆ ಸೇರುತಿಹಳು

ಖಾಲಿ-ಖಾಲಿ ಮನಸು
ಅಂತರಾಳದಲ್ಲಿ
ಅವಳದೇ ಪ್ರತಿಬಿಂಬ
ಅದೇ ಮುಗುಳ್ನಗು ಬೆಳಗುತಿಹುದು

ಇಲ್ಲಿ ಮಿಡಿಯುವ
ಎನ್ನ ಹೃದಯರಾಗಕೆ
ಎಲ್ಲಿ ಹೋದರೂ ಅಲ್ಲಿಂದಲೇ
ತಾಳ ಹಾಕುವುದು ಅವಳ ಹೃದಯ

ಕಾಣದಿದ್ದರೇನು ಇನ್ನು
ಕಣ್ಣೆದುರು ಅವಳು
ಕಣ್ಣು ಮುಚ್ಚಿದಾಕ್ಷಣ ನಗುವಳು
ಕಣ್ರೆಪ್ಪೆಯಾ ಮರೆಯಿಂದ