Thursday, March 1, 2012

ನೋಟ

ಸಖೀ...

ಮೆಲ್ಲ-ಮೆಲ್ಲಗೆ
ನೀ ಬರುತಿರಲು
ಕಣ್ಣ ನೋಟಗಳು
ಸೇರಿದಾ ಕ್ಷಣ
ನಿನ್ನ ಮನದ
ಮಾತುಗಳೆಲ್ಲವೂ
ಎನ್ನ ಅಂತರಾಳಕ್ಕೆ
ತಲುಪುತ್ತವೆ....

ಆದರೂ
ನೀನು ನನ್ನೊಡನೆ
ಮಾತನಾಡುವಾಗ
ಆಲಿಸುವ ತೆರದಿ
ಕಣ್ರೆಪ್ಪೆ ಬಡಿಯದಂತೆ
ನಿನ್ನನ್ನೇ ನೋಡುತ್ತಾ
ನಿನ್ನ ಕಣ್ಣಿನಾಳದಿ
ನಾ ಕಳೆದುಹೋಗುತ್ತೇನೆ

ಸಖೀ ಗೀತ

ಸಖೀ......


ಮೆಲ್ಲ- ಮೆಲ್ಲಗೆ
ಸಂಜೆ ಕವಿಯುತಿರುವಂತೆ
ಮನದಲ್ಲೇನೋ ದುಗುಡ
ನಿರಾಶೆಯ ನಿನ್ನ ನಿರೀಕ್ಷೆಯಲ್ಲಿಯೇ
ಕವಿಯುತ್ತಿರುವ ನಿಶೆಯ ಕವಚ

ದೂರ-ದೂರ
ಬಾನಿನುದ್ದಗಲಕ್ಕೂ ಹಾರಾಡಿ
ಮರಳಿ ಗೂಡಿಗೆ ಬರುವಂತೆ
ಮತ್ತೆ-ಮತ್ತೆ
ಅಂತರಂಗದಲಿ ಮರುಕಳಿಸುತ್ತಿವೆ
ನಿನ್ನೊಡನಾಟದ ನೆನಹುಗಳು

ಆದರೂ ಬೆಳಗುತಿದೆ
ಎನ್ನ ಎದೆಯಾಳದಲ್ಲಿ
ನೀ ಹಚ್ಚಿರುವ ಪ್ರೀತಿಯ ಹಣತೆ....

ಸಖೀ ಗೀತ

ಸಖೀ...



ನೀನಿಲ್ಲ ಎನ್ನ ಬಳಿಯಲಿ
ಎಂದು ಪರಿತಪಿಸುವ
ಈ ತಾಳ ತಪ್ಪಿದ ಹೃದಯ
ಪುಳಕಗೊಳ್ಳುವುದೇಕೆ !!!
ನಿನ್ನ ನೆನಪಲಿ

ಅರಿವಿಲ್ಲದಂತೆ ನಸುನಗು
ಮೂಡುವುದೇಕೆ
ನಲ್ಲನ ಮೊಗದಲಿ

ವಿರಹದ ಬಿಸಿಯುಸಿರಿನಲ್ಲಿಯೂ
ತಂಪೆರೆಯುವುದೇಕೆ
ನಿನ್ನ ಸವಿನೆನಪು !!!

ಏಕಾಂತದಲ್ಲಿಯೂ
ಕಾಡುವುದೇಕೆ
ಆ ನಿನ್ನ ಪಿಸುಮಾತು !!!

ಕಣ್ಣು ಮುಚ್ಚಿದರೂ
ಕಾಣುವುದೇಕೆ ಎನ್ನ
ಚಂದ್ರಿಕೆಯ ಬಿಂಬ....

ಏಕೆ ????
ಹೀಗೇಕೆ ಹೇಳು ಸಖೀ..... :)

ವಿರಹ

ಸಖೀ.....

ವಿರಹದ ಉರಿಯಲ್ಲಿ
ಬೇಯಬೇಡ
ನಲ್ಲನಿಹನು ನಿನ್ನ
ಹೃದಯದೊಳಗೆ

ಕನ್ನಡಿಯೊಳಗೆ
ನೋಡಿಕೋ ನಿನ್ನ
ಮೊಗವನೊಮ್ಮೆ
ಅಲ್ಲಿಯೂ
ಕಾಣುವೆ ನಾನು

ನಿನ್ನ ಕಣ್ಣಾಲಿಗಳಿಂದ
ಜಾರಿ ಬೀಳದಿರಲಿ
ಅಗಲಿಕೆಯ ಕಂಬನಿ
ಸೋರಿದರೆ...
ಧರೆ ಸೇರಿಯೇನು ನಾನು... :)