Friday, March 5, 2010

ಕಳೆದುಕೊಂಡದ್ದು

ಪ್ರತಿಯೊಬ್ಬ ವ್ಯಕ್ತಿಯೂ ಬಾಲ್ಯದಿಂದ ಯೌವನದ ಪಯಣದಲ್ಲಿ ತಮ್ಮ ಮೂಲ ಗುಣಾವಗುಣಗಳನ್ನು ಕಳೆದುಕೊಳ್ಳುತ್ತಾರೆ. ಕಾಲಾನುಕ್ರಮದಲ್ಲಿ ಸೃಷ್ಟಿಯ ವೈಪರೀತ್ಯಗಳ ಪರಿಣಾಮದಿಂದ ಹಾವು ಪೊರೆಯನ್ನು ಕಳಚಿಕೊಳ್ಳುವಂತೆ ನಾವು ಬಾಲ್ಯದ ನಿಷ್ಕಲ್ಮಶ ಪ್ರೇಮ, ಸ್ನೇಹ, ಸತ್ಯ-ನಿಷ್ಠೆ, ನೇರವಾದ ನಡೆ-ನುಡಿ ಇವೆಲ್ಲವನ್ನೂ ಈ ಸಂಸಾರದ ಆಗುಹೋಗುಗಳ ಮಧ್ಯದಲ್ಲಿ ಕಳೆದುಕೊಳ್ಳುತ್ತೇವೆ. ಬಾಲ್ಯದಲ್ಲಿ ಇದ್ದುದನ್ನು ಇದ್ದಂತೆಯೇ ಹೇಳುವ ಆ ಧೈರ್ಯ, ಸೃಷ್ಠಿ ಸೌಂದರ್ಯವನ್ನು ನೋಡುವ ನಿಷ್ಕಲ್ಮಶ ನೋಟ, ಆತ್ಮಸಾಕ್ಷಿಗೆ ಅನುಗುಣವಾದ ನಮ್ಮ ನಡೆ-ನುಡಿ ನಾವು ಪ್ರಾಯಕ್ಕೆ ಬರುತ್ತಿದ್ದಂತೆಯೇ ನಮಗರಿವಿಲ್ಲದಂತೆ ಕಣ್ಮರೆಯಾಗುತ್ತವೆ.

ಕಳೆದುಕೊಂಡಿದ್ದೇನು ???

ಕಳೆದುಕೊಂಡಿದ್ದೇವೆ ನಾವು
ನಮ್ಮತನವನು
ಬಾಲ್ಯದಿಂ ಯೌವನದ ಪಯಣದಲ್ಲಿ

ಕಳೆದುಕೊಂಡಿದ್ದೇವೆ ನಾವು
ಆತ್ಮಸಾಕ್ಷಿಯನ್ನು
ಮೇಲಿನವರನ್ನು ಮೆಚ್ಚಿಸಲು
ಸುಳ್ಳು ಗುಣಗಾನವನ್ನು ಮಾಡುತ್ತ
ಕೆಳಗಿನವರ ಮೆಚ್ಚುಗೆ ಗಳಿಸಲು
ಪೊಳ್ಳು ಆದರ್ಶಗಳನ್ನು ತೋರುತ್ತ

ಕಳೆದುಕೊಂಡಿದ್ದೇವೆ ನಾವು
ಶ್ರವಣ ತಾಳ್ಮೆಯನು
ಬುದ್ಧಿವಾದವನು ಹೇಳುವ ಗುರು-ಹಿರಿಯರ
ಹಿತನುಡಿಗಳಿಗೆ ಹಿತ್ತಾಳೆ ಕಿವಿಯಾಗಿ
ಅವರಿವರ ಸಮಯಸಾಧಕ
ಮುಖಸ್ತುತಿಗೆ ಮರುಳಾಗಿ

ಕಳೆದುಕೊಂಡಿದ್ದೇವೆ ನಾವು
ನಮ್ಮ ನೇರ ನಡೆ-ನುಡಿಯನ್ನು
ಬೆಳೆಸಿಕೊಂಡಿದ್ದೇವೆ
ಅವರಿವರನ್ನು ಮರುಳಾಗಿಸುವ
ಮಾತಿನ ಮೋಡಿಯನ್ನು

ಕಳೆದುಕೊಂಡಿದ್ದೇನೆ ನಾವು
ಆತ್ಮಸಾಕ್ಷಿ, ಸತ್ಯ-ನಿಷ್ಠೆಗಳ ಮೆರೆವ
ನಿರ್ಮಲ ನೋಟವನು
ಹೆಣ್ನು-ಹೊನ್ನು ಮಣ್ಣುಗಳ ಲೋಭದಲಿ
ವಿಷಯಾಸಕ್ತ ಕಾಮನೆಗಳ ಪೊರೆಯಲಿ
ಬೆಳೆಸಿಕೊಂಡಿದ್ದೇನೆ ಕಾಮಾಲೆ ದೃಷ್ಟಿಯನು

No comments:

Post a Comment