Sunday, September 6, 2009

ಕನ್ನಡ ಮಾತೆ

ನಮ್ಮ ಒಲುಮೆಯ ತಾಯೇ
ನನ್ನೆದೆಯಾಳದ ಹೂವೆ
ಕನ್ನಡತಿ ನಮ್ಮೊಡತಿ ಹರಸು ಬಾ
ಮಡಿಲ ಮಕ್ಕಳನು ಎದೆತುಂಬಿ

ಮಾತೃ ವಾತ್ಸಲ್ಯ ತುಂಬಿದ
ನಿನ್ನ ನುಡಿ ಸವಿ ಜೇನು

ಬೇಧ ಭಾವವ ತೋರದೆ
ಸಮತೆಯನು ಮೆರೆಯುವಳು ನಾಡ ಮಕ್ಕಳಲಿ
ತನ್ನ ಮಡಿಲಿನ ಮಕ್ಕಳೋ, ಪರನಾಡಿನ ಕುಡಿಗಳೋ
ಆಶ್ರಯವಿತ್ತು ಸಲುಹುವಳು ಅನುಗಾಲ

ಅವಳುಡುಗೆ ಅಂದವೋ
ಸಹ್ಯಾದ್ರಿ ಶ್ರೇಣಿಯ ಹಸಿರು ಹಾಸು
ಕರಾವಳಿಯ ತಟದಲ್ಲಿ ಸಾಗರವು ಅನುದಿನವು
ಪೂಜಿಸುವುದು ಮಾತೆಯ ಪಾದವ

ಅವಳ ಮಮತೆಯು ಉಕ್ಕಿ ಹರಿವುದು
ಕೃಷ್ಣೆ, ಕಾವೇರಿ, ತುಂಗಭದ್ರೆ
ಶರಾವತಿಯ ಹನಿ ಹನಿ ನೀರಿನಲಿ
ನಾಡ ಮಕ್ಕಳಿಗೆ ಸಾಕಿ ಸಲುಹುವುದು ಅನುಗಾಲ

ಕನ್ನಡದ ಮಾತೆ ಮನಸೂರೆಗೊಳ್ಳುವಳು
ಬೇಲೂರ ಬೀದಿಯಲಿ, ಹಳೇಬೀಡಿನ ಹಾದಿಯಲಿ
ಹಂಪಿ, ಐಹೊಳೆ ಬದಾಮಿಗಳಲಿ
ಅಂದವನು ಚಂದವನು ಸಾರುವುದು ಜಗಕೆಲ್ಲ

ಆವ ಜನುಮದ ಪುಣ್ಯವೋ
ಕನ್ನಡದ ಮಣ್ಣಿನಲಿ ಜನಿಸಿಹೆನು ನಾನು
ಧನ್ಯವೀ ಜನುಮ ಧನ್ಯವೀ ಜನುಮ
ಮತ್ತೆ ಜನಿಸುವೆ ಈ ನಾಡ ಮಣ್ಣಿನಲಿ

ತಾಯೇ ನಾ ಬೇಡುವೆನು,
ನೂರು ಜನುಮವ ನೀಡು ಕನ್ನಡದ ಮಣ್ಣಿನಲಿ
ಎನಿತು ಜನುಮವನೆತ್ತಿದರೇನು
ತಾಯ ಋಣ ತೀರದು, ತಾಯ ಋಣ ತೀರದು, ತಾಯ ಋಣ ತೀರದು. . . . . .

No comments:

Post a Comment