Thursday, January 12, 2017

ವಕ್ರೀಭವನ

ಏನು ನೋಡಿದ್ರೂ
ಕಾಣಿಸಿರುವದಕ್ಕಿಂತ
ಗ್ರಹಿಸಿದ್ದೇ ಬೇರೆ
ಅದಕ್ಕೇ
ಯಾಕೋ-ಏನೋ
ದೃಷ್ಟಿ ಮತ್ತು ದೃಷ್ಟಿಕೋನಕ್ಕೂ
ಸಮಾಗಮವಾಗುತ್ತಿಲ್ಲಾ

ಶರಧಿಯ
ಆ ಬದಿಯಲ್ಲಿ
ಮುಳುಗುತ್ತಿರುವ ಸೂರ್ಯ
ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ 
ಒಮ್ಮೊಮ್ಮೆ ಕಂಡರೆ
ಅದೇ ದೃಶ್ಯ 
ದಿನವೆಲ್ಲ ದುಡಿದ ದಿನಕರ
ದಣಿವಾರಿಕೊಳ್ಳಲು ಅಭ್ಯಂಗಕ್ಕಾಗಿ
ನೀರಿಗಿಳಿದಂತೆಯೂ
ಒಮ್ಮೊಮ್ಮೆ ಭಾವ ಮೊಳೆಯುತ್ತದೆ...........

ಅದು ಯಾಕೆ
ಸೂತಕದ ಮನೆಯ ದುಃಖ
ನಮಗೆ ತಟ್ಟುವದಿಲ್ಲಾ
ನಾನು ಹೇಳುವುದು ವಕ್ರೀಭವನವೇ ಕಾರಣ
ಏಕೆಂದರೇ.....
ಅವರ ನೋವು
ನನ್ನ ಮನದಲ್ಲಿ ಪ್ರತಿಫಲಿಸುವುದೇ ಇಲ್ಲಾ

ನಿಮಗೆ ಗೊತ್ತಾ
ಹಾದಿ-ಬೀದಿ ಅಲೆದು
ಭಿಕ್ಷೆ ಬೇಡಿ
ಹಲವರ ಕೈಗುಣವ ಸವಿದು
ಸಂತೃಪ್ತಿಯಿಂದ ತೇಗುವ 
ಭಿಕ್ಷುಕನ ಹಸಿವು
ಪಂಚತಾರಾ ಹೋಟೆಲುಗಳ ಭಕ್ಷ್ಯಗಳ
ಸವಿದರೂ
ಸ್ವಾದವನರಿಯದ ನಮ್ಮ 
ಹಸಿವಿನಲ್ಲಿ ಮೂಡುವುದೇ ಇಲ್ಲಾ
ಮತ್ತದೇ ಕಾರಣ
ನಮ್ಮ ದೃಷ್ಟಿ ಮತ್ತು ದೃಷ್ಟಿಕೋನ
ಹಾಗೂ ವಕ್ರೀಭವನ..............

No comments:

Post a Comment