Saturday, October 3, 2015

ಏನೋ ತೋಚಿದ್ದು

ಈಗೀಗ
ನನಗರಿವಿಲ್ಲದಂತೆ
ಪ್ರವಾದಿಯೊಬ್ಬ
ನನ್ನಂತರಾಳದಲಿ
ಅವತರಿಸುತ್ತಾನೆ

ನನ್ನಂತರಂಗದ ಕೊಳೆ
ಕಳೆದುಬಿಡುವನೆಂದು
ನನಗೂ ಒಂಥರಾ ಖುಷಿಯೇ
ಆದರೇ....
ಅವನೋ ಆಗಾಗ
ರಾಜಕಾರಣಿಯಂತೆ
ಕಾರಣವಿಲ್ಲದೇ
ಬೊಗಳೆ ಬಿಡುತ್ತಾನೆ

ಹಿಂದೊಮ್ಮೆ ಓದಿರುವ
ಅವರಿವರಲ್ಲಿ ಕೇಳಿರುವ
ಸದ್ವಿಚಾರಗಳ ತುತ್ತೂರಿಯನ್ನು
ಒಂದಿನಿತು
ಜೋರಾಗಿಯೇ ಊದುತ್ತಾನೆ
ನನ್ನೊಳಗೆ
ಬಿತ್ತಿ ಬೆಳೆಸಬೇಕಾಗಿರುವ
ವಿಚಾರಗಳನೆಲ್ಲ
ಅವನು
ಅಲ್ಲಲ್ಲಿ ಎರಚಲು
ಹೊಂಚುಹಾಕುತ್ತಾನೆ

ನನಗೋ
ತೆರೆದುಕೊಳ್ಳುವ ಹಂಬಲ
ಪಾಚಿಗಟ್ಟಿದ ಕೊಳೆಯನ್ನು
ತೊಳೆದುಕೊಳ್ಳುವ ಹಂಬಲ
ಆದರೇನು
ಅವನು ಎನ್ನ ಬಾಯಿಗೆ
ಕೆಲಸಕೊಟ್ಟು
ಕಣ್ಣು, ಕಿವಿಯನ್ನು ಮುಚ್ಚಿದ್ದಾನೆ
ಎನ್ನೊಳಗಿನ ದುರ್ಘಂಧವನು
ಸಹಿಸದೇ
ಅವನು ಈಗೀಗ
ಮೂಗು ಮುಚ್ಚಿಕೊಂಡು
ಹಗಲಿರುಳೂ
ಪ್ರವಚನ ನೀಡುತ್ತಿದ್ದಾನೆ.......

ನನ್ನತನಕ್ಕೆ ತೆಳುವಾದ
ತೆರೆಯೆಳೆದು
ಅಂತರಾಳದಿ ಅವತರಿಸಿದ ಪ್ರವಾದಿ
ಜಗವ ಬೆಳಗುವ
ಹುಂಬತನದ ಹಂಬಲ ಮೆರೆಯುತ್ತಿದ್ದಾನೆ....

No comments:

Post a Comment