Showing posts with label ಸಣ್ಣ ಕಥೆ. Show all posts
Showing posts with label ಸಣ್ಣ ಕಥೆ. Show all posts

Saturday, August 31, 2013

ಅತಿಥಿ

ಬಾಗಿಲು ತೆರೆದ ಮನೆಯೊಡತಿ "ಅವರಿಲ್ಲವಲ್ಲಾ..." ಎಂದುಸಿರಿದಾಗ, ಭಾರವಾದ ಮನಸು ಹೊತ್ತು ವಿಷಣ್ಣತೆಯಿಂದ ಹಿಂದಿರುವಷ್ಟರಲಿ ಯಾವುದೋ ಕುತೂಹಲಕ್ಕೆ ಇಣುಕಿ ನೋಡಿದ ಅವರು ನನಗೂ ಕಾಣಿಸಿದ ತಪ್ಪಿಗೆ, ಅನಿವಾರ್ಯವಾಗಿ ನನಗೆ ಮನೆಯೊಳಗೆ ಪ್ರವೇಶ ದೊರಕಿತು.

ಸ್ವಾಭಾವಿಕವಾಗಿ ಉಭಯಕುಶಲೋಪರಿ ಮಾತುಗಳಲ್ಲೇ "ಅವರು ಅಲ್ಲಿ ಇರಲಿಲ್ಲ" ಎನ್ನುವುದು ನನಗೂ ಅರಿಯಾಯ್ತು...

ವ್ಯಥೆ

ತೊರೆಯಲು ಮನಸಿಲ್ಲದೇ... ಹೊರಡುವ ಸಮಯವೆಂದು ಹಿಡಿದ ಕರವನ್ನು ಕೊಸರಿಕೊಂಡು ಸಾಗಿದ ಅವಳನ್ನು ಕಣ್ಣು ತುಂಬಿ ಮಂಜಾಗಿದ್ದರೂ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಭ್ರಮೆಯಲ್ಲಿ ಕಣ್ಮರೆಯಾಗುವವರೆಗೂ ನೋಡಿ... 
ಅವಳು ಮರೆಯಾಗುತ್ತಲೇ... 
ವಿದಾಯಕ್ಕೆ ನಿಟ್ಟುಸಿರಿನೊಂದಿಗೆ ವಿರಾಮ ಹಾಕಿದ...
ಅದುವರೆಗೂ ಸ್ಪಟಿಕದಂತೆ ಸ್ಪಷ್ಟವಾಗಿದ್ದ ನೋಟ ಮಂಜಾಗಿರುವುದುನ್ನು ಅರಿತು... ಕರಗಳಿಂದ ಕಣ್ಣೊರೆಸಿಕೊಂಡು... 
ಬೊಗಸೆಯಲಿ ಇಣುಕಿ ನೋಡಿದಾಗಲೇ... 
ಅವನಿಗೆ ಅಂಗೈಯಲ್ಲಿ ಪ್ರೇಮ ರೇಖೆ ಅವಳು ಕೊಸರಿಕೊಂಡು ಹೊರಟಾಗಲೇ ಅಳಿಸಿಹೋಗಿರುವುದು ಕಂಡು ಬಂತು....

ಕವಲು

ಅವನು ಹೇಗೋ ಏನೋ ಮಾಡಿಕೊಂಡು... 
ತನ್ನ ಹೃದಯಕೊಂದು ಮಿಡಿತ ತಂದುಕೊಂಡು... 
ಕಿರುಬೆರಳಿನಾಸರೆಯಲಿ ಕನಸಿನೂರಿನತ್ತ ಸಾಗುವಾಗ.... ಧೃತಿಗೆಟ್ಟು ನಿಂತಿದ್ದು ಕಂಡ ಕವಲು ದಾರಿಯಲಿ... 
ಗಮ್ಯ ಸೇರುವುದು ದುರ್ಭರವೆನಿಸಿ ಹಿಡಿದ ಕೈ-ಗಳ ಸಡಿಲಿಸಿ.... ಹಿಂತಿರುಗಿ ನೋಡಿದರೇ...
ಊರಿನತ್ತ ಮರಳಿ ಸಾಗಿದರೂ.... ಮನೆ ಸೇರಲು ಮತ್ತೆ ಕವಲು ದಾರಿಗಳು...
 
ಮನ ಒಂದಾದರೂ ಮನೆಯೊಂದಾದೀತೇ....
ಮುಂದೆ ಸಾಗುವುದು ಕಷ್ಟ... ಹಿಂದಿರುಗುವುದು ಕ್ಲಿಷ್ಟ....

ಕನವರಿಕೆ

ತಾನೇ ಹರಡಿರುವ ಬೆಳದಿಂಗಳನ್ನು ಗುಡಿಸುತ್ತಾ ಪಶ್ಚಿಮಾಭಿಮುಖವಾಗಿ ತನ್ನ ಗೂಡಿನೆಡೆಗೆ ಚಂದ್ರ ನಿಧಾನವಾಗಿ ಚಲಿಸುತ್ತಿರುವಾಗ, ಮರಗಳ ಮರೆಯಿಂದ ಅವಳು ಮಂದಗಮನೆಯಾಗಿ ಬಂದಳು, 

ಯಾಕಿಷ್ಟು ತಡವಾಯ್ತು ನಿನ್ನ ನಿರೀಕ್ಷೆಯಲಿ ತಾರೆಗಳನೆಲ್ಲಾ ಎಣಿಸಿ-ಗುಣಿಸಿದ್ದೇ ಬಂತು ಎಂದು ಕೇಳಬೇಕೆನಿಸಿದರೂ, ಸಿಕ್ಕ ಅಲ್ಪ ಸಮಯವನ್ನು ಕಾರಣ-ಸಬೂಬುಗಳಿಗೆ ವ್ಯಯ ಮಾಡುವುದು ಬೇಡವೆಂದೆಣಿಸಿ ಮುಗುಳ್ನಕ್ಕು ಅವಳನ್ನು ಸ್ವಾಗತಿಸಿದೆ...

ನೀನು ನನ್ನ ದೇಹಸಿರಿಯನ್ನು ನೋಡಿ ಪ್ರೀತಿಸಿರುವದಿಲ್ಲವೆಂದು ಗೊತ್ತು... ಆದರೂ ಹೇಳಿ ನೀವು ಪ್ರೀತಿಸುವುದು ನನ್ನ ರೂಪಲಾವಣ್ಯವೋ ಅಥವಾ ನಿಮಗೆ ಅಂತರಂಗ ಸೌಂದರ್ಯ ಇಷ್ಟವೋ ಎಂದು ಪಿಸುಮಾತಿನಲಿ ಅವಳು ಉಲಿದಳು. 

ಪ್ರೇಮ ಪಯಣದಲಿ ಮರಳಲಾರದಷ್ಟು ದೂರ ಸಾಗಿ ಬಂದಿದ್ದರೂ ಇದೇನು ಈ ಪ್ರಶ್ನೆ ಎಂದು ಕೇಳಬೇಕೆನಿಸಿದರೂ.... ಅವಳಾಗಲೇ ಎನ್ನ ಬಾಹುಗಳ ಸೇರಿದ್ದರಿಂದ.... ಸುಮ್ಮನಾಗಿ ನನಗೆ ನೀನು ಹೇಗಿದ್ದರೂ ಇಷ್ಟ ಸಖೀ ಎಂದೆ. ನಿಟ್ಟುಸಿರುನೊಂದಿಗೆ ಮೆಲ್ಲನೇ ಎದೆಗೊರಗಿದ ಮೊಗವನ್ನು ಅವಳು ಮೇಲೆತ್ತಿದಾಗ...

ಅವಳ ಮೊಗದಲ್ಲಿ ಮೀಸೆಗಳು ಮೂಡಿದ್ದವು... 
ನನ್ನ ಎದೆಯಲ್ಲಿ ನಡುಕ ಮೂಡುತ್ತಾ ಬೆನ್ನ ಹುರಿಯಲ್ಲಿ ಏನೋ ಅವ್ಯಕ್ತ ಕಂಪನ... 
ಅನತಿ ದೂರದ ಗುಡಿಯಲ್ಲಿ ಮೀಸೆ, ಕೋರೆಹಲ್ಲುಗಳಿಂದ ಅಲಂಕೃತವಾಗಿರುವ ಗ್ರಾಮದೇವಿಯ ಮುಖ ಕಣ್ಣಮುಂದೆ ಬಂತು...

ಹಾಗೂ-ಹೀಗೂ ಸಾವರಿಸಿಕೊಂಡು...
ನನಗೆ ನೀನು ಹೇಗಿದ್ದರೂ ಇಷ್ಟ ಸಖೀ ಎಂದು ಮತ್ತೊಮ್ಮೆ ಹೇಳಿದೆ....
ಏನಾಶ್ಚರ್ಯ !!!
ಅವಳ ಮೊಗದಲ್ಲೀಗ ಮೀಸೆಗಳು ಕಣ್ಮರೆಯಾಗಿ ಚಂದ್ರಿಕೆಯು ಬೆಳಗುತ್ತಿದ್ದಾಳೇ...
ಅಷ್ಟರಲ್ಲಾಗಲೇ ಚಂದ್ರ ಶರಧಿಯೊಡಲನ್ನು ಸೇರಿಕೊಂಡಿದ್ದ...

Saturday, August 17, 2013

ಸಂದೇಶ

ನನಗೆ ಗೊತ್ತು ಆ ಸಂದೇಶದಿಂದ ನಿನಗೆ ಕೋಪ ಬರಬಹುದು ಅಂತ... 
ಆದರೆ ಆ ಕ್ಷಣದಲ್ಲಿ ನನಗೆ ಅನಿಸಿದ್ದನ್ನು ನಾನು ಹೇಳಿದೆ... 
ನನ್ನ ವಿವರಣೆಯೂ ನಿನಗೆ ಸರಿ ಎನಿಸಲಿಲ್ಲ ಅಲ್ವಾ... 
ಮನದಲ್ಲಿ ತಳಮಳವಿದ್ದರೆ ಮಂಕು ಕವಿದು ಅನರ್ಥವಾಗುತ್ತದೆ... ಅದಕ್ಕೇ .... ಪುನಃ ಅದೇ ಸಾಲುಗಳನ್ನು...
ನಿಧಾನವಾಗಿ ಓದು ಅಂತ ಕಳುಹಿಸಿದೆ.....
ನೀನು ಅಂತವಳಲ್ಲ ನನಗೆ ಗೊತ್ತು ಸುಬ್ಬೀ...
...
ನನಗೆ ಪೆಟ್ಟು ಕೊಡೋದಿಕ್ಕೆ ಕೈ ಉಜ್ಜಿಕೋತಿದ್ದೀಯಾ...
ಕೆನ್ನೆ ಮುಂದೆ ಮಾಡಿದ್ದೇನೆ...
ನಿನಗೆ ಇಷ್ಟ ಬಂದದ್ದು ಕೊಡು...