Saturday, August 31, 2013

ಕನವರಿಕೆ

ತಾನೇ ಹರಡಿರುವ ಬೆಳದಿಂಗಳನ್ನು ಗುಡಿಸುತ್ತಾ ಪಶ್ಚಿಮಾಭಿಮುಖವಾಗಿ ತನ್ನ ಗೂಡಿನೆಡೆಗೆ ಚಂದ್ರ ನಿಧಾನವಾಗಿ ಚಲಿಸುತ್ತಿರುವಾಗ, ಮರಗಳ ಮರೆಯಿಂದ ಅವಳು ಮಂದಗಮನೆಯಾಗಿ ಬಂದಳು, 

ಯಾಕಿಷ್ಟು ತಡವಾಯ್ತು ನಿನ್ನ ನಿರೀಕ್ಷೆಯಲಿ ತಾರೆಗಳನೆಲ್ಲಾ ಎಣಿಸಿ-ಗುಣಿಸಿದ್ದೇ ಬಂತು ಎಂದು ಕೇಳಬೇಕೆನಿಸಿದರೂ, ಸಿಕ್ಕ ಅಲ್ಪ ಸಮಯವನ್ನು ಕಾರಣ-ಸಬೂಬುಗಳಿಗೆ ವ್ಯಯ ಮಾಡುವುದು ಬೇಡವೆಂದೆಣಿಸಿ ಮುಗುಳ್ನಕ್ಕು ಅವಳನ್ನು ಸ್ವಾಗತಿಸಿದೆ...

ನೀನು ನನ್ನ ದೇಹಸಿರಿಯನ್ನು ನೋಡಿ ಪ್ರೀತಿಸಿರುವದಿಲ್ಲವೆಂದು ಗೊತ್ತು... ಆದರೂ ಹೇಳಿ ನೀವು ಪ್ರೀತಿಸುವುದು ನನ್ನ ರೂಪಲಾವಣ್ಯವೋ ಅಥವಾ ನಿಮಗೆ ಅಂತರಂಗ ಸೌಂದರ್ಯ ಇಷ್ಟವೋ ಎಂದು ಪಿಸುಮಾತಿನಲಿ ಅವಳು ಉಲಿದಳು. 

ಪ್ರೇಮ ಪಯಣದಲಿ ಮರಳಲಾರದಷ್ಟು ದೂರ ಸಾಗಿ ಬಂದಿದ್ದರೂ ಇದೇನು ಈ ಪ್ರಶ್ನೆ ಎಂದು ಕೇಳಬೇಕೆನಿಸಿದರೂ.... ಅವಳಾಗಲೇ ಎನ್ನ ಬಾಹುಗಳ ಸೇರಿದ್ದರಿಂದ.... ಸುಮ್ಮನಾಗಿ ನನಗೆ ನೀನು ಹೇಗಿದ್ದರೂ ಇಷ್ಟ ಸಖೀ ಎಂದೆ. ನಿಟ್ಟುಸಿರುನೊಂದಿಗೆ ಮೆಲ್ಲನೇ ಎದೆಗೊರಗಿದ ಮೊಗವನ್ನು ಅವಳು ಮೇಲೆತ್ತಿದಾಗ...

ಅವಳ ಮೊಗದಲ್ಲಿ ಮೀಸೆಗಳು ಮೂಡಿದ್ದವು... 
ನನ್ನ ಎದೆಯಲ್ಲಿ ನಡುಕ ಮೂಡುತ್ತಾ ಬೆನ್ನ ಹುರಿಯಲ್ಲಿ ಏನೋ ಅವ್ಯಕ್ತ ಕಂಪನ... 
ಅನತಿ ದೂರದ ಗುಡಿಯಲ್ಲಿ ಮೀಸೆ, ಕೋರೆಹಲ್ಲುಗಳಿಂದ ಅಲಂಕೃತವಾಗಿರುವ ಗ್ರಾಮದೇವಿಯ ಮುಖ ಕಣ್ಣಮುಂದೆ ಬಂತು...

ಹಾಗೂ-ಹೀಗೂ ಸಾವರಿಸಿಕೊಂಡು...
ನನಗೆ ನೀನು ಹೇಗಿದ್ದರೂ ಇಷ್ಟ ಸಖೀ ಎಂದು ಮತ್ತೊಮ್ಮೆ ಹೇಳಿದೆ....
ಏನಾಶ್ಚರ್ಯ !!!
ಅವಳ ಮೊಗದಲ್ಲೀಗ ಮೀಸೆಗಳು ಕಣ್ಮರೆಯಾಗಿ ಚಂದ್ರಿಕೆಯು ಬೆಳಗುತ್ತಿದ್ದಾಳೇ...
ಅಷ್ಟರಲ್ಲಾಗಲೇ ಚಂದ್ರ ಶರಧಿಯೊಡಲನ್ನು ಸೇರಿಕೊಂಡಿದ್ದ...

No comments:

Post a Comment