Monday, January 12, 2015

ಹಾಗೇ ಸುಮ್ಮನೇ.....

ಶರದೃತುವಿನ

ತಣ್ಣಗಿನ ಮುಂಜಾವು
ಉದ್ಯಾನವನದ ಮೂಲೆಯಲ್ಲಿ
ಥರಗುಟ್ಟುವ ಚಳಿಯಲ್ಲಿ ಬೆತ್ತಲಾಗಿ
ನಿಂತಿರುವ ಹೊಂಗೆಯ ಮರ
ವಾಯುವಿಹಾರಕ್ಕೆ
ಬಂದವರ ಪಾದದಡಿಯಲ್ಲಿ
ಚರಚರನೆ ಸದ್ದು ಮಾಡಿ ಕರಗುತ್ತಿರುವ
ಹಣ್ಣೆಲೆಗಳು
ವಸಂತನೊಡನಾಟದಲಿ
ಅರಳಿ, ಹೊರಳಿ
ಪ್ರೇಮಿಗಳ ಪಿಸುಮಾತು, ನರಳಿಕೆಗಳ
ಸಾಕ್ಷಿ
ನಿರ್ದಯವಾಗಿ ತುಳಿದು ಸಾಗುತ್ತಿರುವ
ಪಾದಗಳಡಿಯಲ್ಲಿ
ನಿಧಾನವಾಗಿ
ಮಣ್ಣಿನೊಳಗೊಂದಾಗುತ್ತಿವೆ
ಮರವೋ
ಮೂಕವೇದನೆಯನ್ನನುಭವಿಸುತ್ತಾ
ವೇಷ ಕಳಚಿದ ಪಾತ್ರಧಾರಿಯಂತೆ
ಬರುವ ವಸಂತನಿಗಾಗಿ
ಮತ್ತೆ ಮೆರೆಯುವ ಪಾತ್ರಕಾಗಿ
ಸಜ್ಜುಗೊಳ್ಳುತ್ತಿದೆ
ಗೋಧೂಳಿ ಸಮಯದಿ
ಬೋಳು ಹೊಂಗೆಯ ಮರದಡಿಯಲ್ಲಿ
ಲಲ್ಲೆಗರೆಯುವ ಪ್ರೇಮಿಗಳೂ
ವಿಷಾದಗಳ ಕಳಚಿ, ವಿಸ್ಮಯಗಳ ಪೋಣಿಸುತಾ
ಪಿಸುಮಾತಿನಲಿ
ತುಂಟ ನೋಟದಲಿ, ಮಂದಸ್ಮಿತವರಳಿಸಿ
ಬಣ್ಣ-ಬಣ್ಣದ ಕನಸು ಕಟ್ಟುತ್ತಿದ್ದಾರೆ
ಅವರಿಗೋ
ಋತುಮಾನಗಳ ಹಂಗಿಲ್ಲಾ....

No comments:

Post a Comment