Saturday, June 30, 2012

ಬಿಸಿಲ ಪಾಡು

ಮನೆಯ ಮುಂದೆ
ಅಂಗಳದಲ್ಲಿ
ಹೂ-ಗಿಡಗಳ ಮೇಲೆ
ಬಡ ಹೆಂಗಸಿನ
ಹರಿದ ಸೀರೆಯಂತೆ
ಹರವಿದ ರಸ್ತೆಯ ಮೇಲೆ
ಹರಡಿದ ಬಿಸಿಲು

ದಾಹಕ್ಕೆ
ಬಾಯ್ದೆರೆದ ಭೂಮಿ
ಚಿವ್ ಗುಟ್ಟುವ ಗುಬ್ಬಚ್ಚಿ
ನೊಸಲಿನಲಿ
ಬೆವರ ಹನಿಯನು ಧರಿಸಿ
ಬಾಯಾರಿ
ಒಡಲ ಬೇಗೆಯನು
ತಣ್ಣಗಾಗಿಸಲು
ಭಿಕ್ಷೆ ಬೇಡುವ ಹುಡುಗ

ರಸ್ತೆಬದಿಯಲಿ
ಬಿದ್ದಿರುವ ಕಸ, ಕೊಳೆ
ಅತ್ತಿಂದಿತ್ತ ಹಾರಾಡುವ
ಅವರಿವರು ಏನೇನೋ
ತಿಂದು ಬೀಸಾಕಿದ
ಕಾಗದದ ಚೂರುಗಳು
ಬಿಸಿಲ ಧಗೆಗೆ
ಗಿಡ-ಮರಗಳು
ಮೈಕೊಡವಿದಾಗ
ಉದುರಿರುವ ತರಗೆಲೆಗಳ ರಾಶಿ

ಮಳೆ ಬೇಕು
ಇಳೆಗೆ, ಹಕ್ಕಿ-ಪಕ್ಷಿಗಳಿಗೆ
ತಲೆ ಮೇಲೆ ಕೈ-ಹೊತ್ತು
ಕುಳಿತಿರುವ ಅನ್ನದಾತನಿಗೆ
ದಣಿದು ಬಾಯಾರಿದ
ಬಡ ಜೀವಗಳಿಗೆ
ವರ್ಷಧಾರೆಯ ಸಿಂಚನವಾಗಲಿ
ತಣ್ಣಗಾಗಿಸಲಿ ಬೆಂದ
ಮನಸುಗಳಿಗೆ, ಭೂತಾಯಿಗೆ

No comments:

Post a Comment