Saturday, June 30, 2012

ಅನಿರೀಕ್ಷಿತ

ಗೆಳಯಾ...
ನೋಡ ನೋಡುತ್ತಿದ್ದಂತೆ
ಹಾಗೇಕೆ ರಸ್ತೆ ಬದಲಾಯಿಸಿದೆ ನೀನು
ಅರೆಕ್ಷಣದಿ ಕವಲು ದಾರಿಯಲಿ
ದೂರ ಸಾಗಿಬಿಟ್ಟೆವಲ್ಲಾ....

ದುಂಡಗಿನ ಜಗವು
ಮತ್ತೆ ಸೇರಿಸಿತಲ್ಲಾ
ಮತ್ತೊಮ್ಮೆ ಕಣ್ಣನೋಟದಿ
ಬಂಧಿಯಾದೆವಲ್ಲಾ...

ಮುಖದಲ್ಲಿ ಆವರಿಸಿದ ಸುಕ್ಕಿನ ಗೆರೆಗಳು
ಒಂದೊಂದು ಗೆರೆಯಡಿಯೂ
ನೂರು ನೆನಹುಗಳು
ಬೆಳ್ಳಿಕೂದಲಿನಡಿಯ ಸಿಕ್ಕುಗಳು
ಗಂಟಿಕ್ಕಿರುವ ನೆನಪಿನಾ ಬುತ್ತಿ

ಅಂದು ಕೈಜೋಡಿಸಿ
ಜಿಗಿಯುತ್ತಾ-ನೆಗೆಯುತ್ತಾ
ಬದುಕು ಎಂದರೇನೆಂದು
ಅರಿಯುವಾ ಮೊದಲೇ
ಕೈಬಿಡಿಸಿಕೊಂಡು ಪಯಣ ಸಾಗಿತಲ್ಲಾ...

ನಿನ್ನ ಕೈಹಿಡಿದಿರುವ ಆ ಪುಟ್ಟ ಪೋರಿ
ನನ್ನ ತೋಳಿನಾಸರೆಯಲಿ
ಬೆಚ್ಚಗೆ ಕುಳಿತಿರುವ ಎನ್ನ ಮಗು
ನಮ್ಮೀರ್ವರ ಕೈಗಳು
ಮತ್ತೆ ಸೇರದಂತೆ ಬಂಧಿಸಿವೆಯಲ್ಲಾ...

ಏನದು
ನಮ್ಮೀರ್ವರ ಸಂ-ಬಂಧ
ಮನದಲೆಲ್ಲೋ ವೀಣೆ ಮಿಡಿಯುತಿದೆ
ಮರೆತು ಹೋಗಿರುವ
ಬಾಳ ಸ್ವರವ ಹರಡುತಿದೆ

ಮತ್ತೆಂದೂ ಸೇರದು
ನಮ್ಮ ಕೈಗಳು
ಕುಣಿದು-ಕುಪ್ಪಳಿಸುವ ಕಾಲವಲ್ಲ
ಅಪ್ಪಳಿಸುತಿದೆ ಸಂ-ಸಾರ ಸಾಗರದ ತೆರೆಯು
ಅಲ್ಲಿಯೂ ಕಾಡುತಿದೆ ನಿನ್ನೊಲವಿನಾ ಸಂಗೀತ.....

No comments:

Post a Comment