Sunday, March 7, 2010

ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

ಅಲ್ಲಲ್ಲಿ ಚಲ್ಲಿಹುದು ವರ್ಣಗಳ ಚಿತ್ತಾರ
ಮಾಯದಾ ರೇಖೆಗಳ ಮೊದದಿಂ ಜಗದೊಡೆಯ
ಬಿಡಿಸಿದನು ವಿಧಿಲಿಖಿತದಂತೆ ಬದುಕಿನಾ ಚಿತ್ರ

ಮೂಡಣದಿ ಮೂಡುವಾ ಹೊನ್ನಕಿರಣದ ತೆರದಿ
ಮುನ್ನ ತಾ ಸೆಳೆವುದು ವರ್ಣಗಳ ಮೋಡಿಯಲಿ
ಬಾಲ್ಯದ ಆಟ ಹುಡುಗಾಟದಲಿ ಕಣ್ಮನವ ಸೆಳೆವುದು
ಚಂಚಲತೆಯ ಚಿತ್ರ

ಕನಸು ಕಾಮನೆಗಳ ಕೆರಳಿಸುವ ಯೌವನದ ರಂಗಿನಲಿ
ಸಪ್ತವರ್ಣಗಳ ಚಲ್ಲಿ ಸುಪ್ತ ಮನಸಿನಾಳದಲಿ
ಭಾವನೆಗಳ ಮೂಡಿಸಿ ಮತ್ತೆ ಮತ್ತೇರಿಸುವ
ಕನಸಿನಾ ಲೋಕದ ಕಾವ್ಯ ಚಿತ್ರ

ಹೆಣ್ಣು, ಹೊನ್ನು, ಮಣ್ಣುಗಳ ಹೊತ್ತು
ಮನದನ್ನೆ ಮಕ್ಕಳು ಬಂಧು ಮಿತ್ರರು ಎಲ್ಲರೊಡಗೂಡಿ
ನೋವು ನಲಿವುಗಳ ಸಮ್ಮಿಶ್ರಗೊಳಿಸಿ ಸ್ವರ್ಣ ಪಥದಲಿ ಸಾಗುವ
ಬರೆದನಾ ವಿಧಿಯು ಸಂಸಾರ ಚಿತ್ರ

ಬಾಳ ಮುಸ್ಸಂಜೆಯಲಿ ಬಣ್ಣಗಳು ಮಾಸಿ
ಬಾಲ್ಯ ಯೌವನದ ವರ್ಣಮಯ ನೆನಹುಗಳ
ಇಳಿವಯಸ್ಸಿನಲ್ಲಿ ಮೆಲುಕುತ್ತ ಮತ್ತೆ ಮತ್ತೆ
ಮನದಾಳದಲಿ ಮೂಡುವುದು ಮೂಲ ಚಿತ್ರ


ಭಿತ್ತಿ ಪರದೆಯ ಮೇಲೆ ಬಣ್ಣಗಳು ಅಳಿದಾಗ
ಉಳಿವುದೊಂದೇ ಸತ್ಯ
ಶೂನ್ಯ ಪರದೆಯ ಮೇಲೆ ಬಾಳಿ ಬದುಕಿದ ಕ್ಷಣವೂ
ಬರೀ ಮಾಯೆಯ ಆಟ
ಕಪ್ಪು ಪರದೆಯ ಮೇಲೆ ವಿಧಿ ಬರೆದ ಚಿತ್ರ

No comments:

Post a Comment