Saturday, August 15, 2015

ವಿದಾಯ

ಸಖೀ....
ಒಲುಮೆಯಾ
ಮಿಲನವೊಂದು ಮುಗಿದು
ಪ್ರತಿಬಾರಿ ನೀನು
ನಿರ್ಗಮಿಸಿದಾಗಲೂ
ಶೂನ್ಯದತ್ತಲೇ
ಎನ್ನ ಗಮನ...

"ಏನಾಯ್ತು, ಹೀಗೇಕೆ"
ಎಲ್ಲರಾ ಕಳವಳದ ಮಾತು
ಗಾಯವಿಲ್ಲಾ
ನೋವಿನಾ ಗುರುತಿಲ್ಲಾ
ಪೇಲವ ನಗೆಯೊಂದೇ
ಎನ್ನ ಉತ್ತರಾ....

ಪ್ರತಿ ಇರುಳಿನ
ಎನ್ನ ಏಕಾಂತದಲಿ
ಎಲ್ಲಿಹಳು ಎನ್ನವಳು
ಎಂಬ ಪ್ರಶ್ನೆಯೊಡನೆ
ಮನದ ಭಿತ್ತಿಯಲಿ
ಮೂಡುವಾ ನಿನ್ನ ಪ್ರತಿಬಿಂಬ...

ವಿದಾಯದೊಂದಿಗೆ
ಕೊನೆಗೊಳ್ಳುವಾ
ನಮ್ಮ ಮಿಲನಗಳು....
ಪುನರ್ಮಿಲಕೆ
ಮುನ್ನುಡಿಯಾಗಲಿ
ನಮ್ಮ ವಿದಾಯಗಳು....

ಆತ್ಮಸಾಕ್ಷಿ


ಶ್ !!!
ಸ್ವಲ್ಪ ಸಹನೆಯಿಂದಿರಿ
ನಾಲ್ಕಾರು ನಿಮಿಷ
ಮೌನವಾಗಿ
ನಿಮ್ಮೊಳಗೆ ಅಡಗಿರುವ
ನಿಮ್ಮ ಆತ್ಮ
ಉಲಿವುದನೂ ಕೇಳಿ

ಬೋಧಿಸುವುದ ನಿಲ್ಲಿಸಿ
ಮರುಳು ಮಾಡುವ
ವಾಗ್ಬಾಣಗಳಿಗೆ ವಿರಾಮ ನೀಡಿ
ಪಾಂಡಿತ್ಯ, ಬಿರುದುಗಳ
ಕಳಚಿ
ನಿಮ್ಮತನದ ಪ್ರತಿಬಿಂಬ ನೋಡಿ

ಎಡ-ಬಲಗಳ ಮೀರಿ
ಹಾಡುಹಗಲೇ ಇರುಳನ್ನು ಹೊದ್ದ
ನೊಂದವರ
ಒಂದರೆಕ್ಷಣ ನೋಡಿ
ಅವರ ಬಾಳಿಕೆ ಬೆಳಕು ನೀಡಿ
ಇಲ್ಲವಾರದೇ
ಪಕ್ಕಕ್ಕೆ ಸರಿದು ಅವರನ್ನು ಸಾಗಲು ಬಿಡಿ

ದಯವಿಲ್ಲದ ನಿಮ್ಮ
ಧಾರ್ಮಿಕತೆಯ ಕತೆಗಳ
ಮೂಲೆಗಿಡಿ ಗಂಟು-ಮೂಟೆ ಕಟ್ಟಿ
ಹಸಿದವರ ಮುಂದೆ
ಉಲಿಯುವಾ ನಿಮ್ಮ ಪ್ರವಚನಕೆ
ಒಂದಿನಿತು ವಿರಾಮ ನೀಡಿ
ಹಸಿವು ತಣಿಸಬಹುದಾದರೂ
ಕಾಮಾಲೆ ಕಣ್ಣುಗಳ
ಪೊರೆಯ ಹರಿದು ಹಾಕಿ

ಶ್ !!!
ಸ್ವಲ್ಪ ಮೌನವಹಿಸಿ
ವಾಗ್ವಾದಗಳ ನಡುವೆ
ನಿಮ್ಮ ಗಮನಕ್ಕೆ ಬಾರದೇ
ಕೊನೆಯುಸಿರೆಳೆದ ಆತ್ಮಗಳಿಗೆ
ಚಿರಶಾಂತಿ ಕೋರಿ
ಅರೆ ನಿಮಿಷ ಕಣ್ಣು ಮುಚ್ಚಿ
ನಿಮ್ಮ ಪ್ರತಿಬಿಂಬವ
ನೀವೇ ನೋಡಿ.......

ವಿರಹಗಾನ

ವಿರಹಾ.....
ಶೀತಲ ಸಮರ
ಮಂಜುಗಟ್ಟಿದೆ ಮನಸು
ಬಿಸಿಯುಸಿರಲಿ ಬೆಸೆದು
ಕರಗಿಸಬೇಕು...

ಒಬ್ಬರಿಂದೊಬ್ಬರು
ವಿಮುಖರಾಗಿದ್ದರೂ
ಚಿತ್ತವೆಲ್ಲವೂ ತುಂಬಿದೆ
ಮನೋರಮೆಯ ಚಿತ್ರ...

ತೊರೆಯ ದಡಗಳ ಆಚೆ
ಸಂತ್ರಸ್ತ ಪ್ರೇಮದ ತುಣುಕುಗಳು
ತೆರೆ ಕರಗಿ ಒಂದಾಗಲು
ಬೇಕಿದೆ ನೀಳ ಬೆರಳುಗಳ ಸ್ಪರ್ಷ...

ಒಂದಿನಿತು ವಿರಹಾ
ಅದುವೇ ತರಹ ತರಹಾ
ನಿಟ್ಟುಸಿರಿನ ಬೇಗೆ
ಕರಗುತಿದೆ ಮಂಜಿನಾ ತೆರೆ.....

ಉಚ್ವಾಸ-ನಿಸ್ವಾಸ
ನಮ್ಮುಸಿರು ಪ್ರೀತಿಯೇ
ಮನದ ಮಾಲಿನ್ಯ ಕರಗಿ
ಮಾನಿನಿಯ ನೋಟದಲಿ ಲೀನವಾಗಬೇಕು...

ಲಹರಿ.....

ಅಂತರಾಳದ
ಬಿಂದುವಿನೊಳಗೆ
ಉದ್ಭವವಾದ ಭಾವಕಣ
ಸಮತೋಲಿತ ವಿಚಾರವಿದ್ದವಿಗೆ
ಬೆಳೆಯುತ್ತಾ, ಬೆಳೆಯುತ್ತಾ
ನಿಯಂತ್ರಣ ಮೀರಿ
ಬಿಂದುವಿಗೆ-ಬಿಂದುಗಳು ಸೇರಿಕೊಂದು
ರೇಖೆಯಾಗಿ...

ಒಂದೊಮ್ಮೆ ಸರಳವಾಗಿ ಮತ್ತೊಮ್ಮೆ
ವಕ್ರವಾಗಿ
ಒಂದಿನಿತು ಅಂತರವನಿತ್ತು
ಅಕ್ಷರಗಳಾಗಿ ಒಲಿದು
ಒಮ್ಮೊಮ್ಮೆ ನಿರಂತರವಾಗಿ ಹರಿದಾಡಿ...
ಚಿತ್ರಕಾರನಿಗೆ ಕಲಾಕೃತಿಯಾಗಿ
ನಾಟ್ಯರಾಣಿಗೆ
ನಿರ್ವಾತದಲಿ ಚಲಿಸುವಾ ಸಂಜ್ಞೆಯಾಗಿ
ಕೈ-ಕಾಲುಗಳೊಡಗೂಡಿ ಚಲಿಸುವಾ
ನಾಟ್ಯವಾಗಿ...
ಸೃಜನಶೀಲ ಸಾಹಿತಿಗೆ ಕಲೆಯಾಗಿ ಒಲಿದಿತ್ತು
ಗೊತ್ತು-ಗುರಿಯಿಲ್ಲದವನ
ಮನವೆಂಬ ಪರದೆಯಲಿ ಕಪ್ಪು-ಕಪ್ಪಾಗಿ
ಮತಿಗೇ ಗ್ರಹಣ ಹಿಡಿದಿತ್ತು...