ಶ್ !!!
ಸ್ವಲ್ಪ ಸಹನೆಯಿಂದಿರಿ
ನಾಲ್ಕಾರು ನಿಮಿಷ
ಮೌನವಾಗಿ
ನಿಮ್ಮೊಳಗೆ ಅಡಗಿರುವ
ನಿಮ್ಮ ಆತ್ಮ
ಉಲಿವುದನೂ ಕೇಳಿ
ಬೋಧಿಸುವುದ ನಿಲ್ಲಿಸಿ
ಮರುಳು ಮಾಡುವ
ವಾಗ್ಬಾಣಗಳಿಗೆ ವಿರಾಮ ನೀಡಿ
ಪಾಂಡಿತ್ಯ, ಬಿರುದುಗಳ
ಕಳಚಿ
ನಿಮ್ಮತನದ ಪ್ರತಿಬಿಂಬ ನೋಡಿ
ಎಡ-ಬಲಗಳ ಮೀರಿ
ಹಾಡುಹಗಲೇ ಇರುಳನ್ನು ಹೊದ್ದ
ನೊಂದವರ
ಒಂದರೆಕ್ಷಣ ನೋಡಿ
ಅವರ ಬಾಳಿಕೆ ಬೆಳಕು ನೀಡಿ
ಇಲ್ಲವಾರದೇ
ಪಕ್ಕಕ್ಕೆ ಸರಿದು ಅವರನ್ನು ಸಾಗಲು ಬಿಡಿ
ದಯವಿಲ್ಲದ ನಿಮ್ಮ
ಧಾರ್ಮಿಕತೆಯ ಕತೆಗಳ
ಮೂಲೆಗಿಡಿ ಗಂಟು-ಮೂಟೆ ಕಟ್ಟಿ
ಹಸಿದವರ ಮುಂದೆ
ಉಲಿಯುವಾ ನಿಮ್ಮ ಪ್ರವಚನಕೆ
ಒಂದಿನಿತು ವಿರಾಮ ನೀಡಿ
ಹಸಿವು ತಣಿಸಬಹುದಾದರೂ
ಕಾಮಾಲೆ ಕಣ್ಣುಗಳ
ಪೊರೆಯ ಹರಿದು ಹಾಕಿ
ಶ್ !!!
ಸ್ವಲ್ಪ ಮೌನವಹಿಸಿ
ವಾಗ್ವಾದಗಳ ನಡುವೆ
ನಿಮ್ಮ ಗಮನಕ್ಕೆ ಬಾರದೇ
ಕೊನೆಯುಸಿರೆಳೆದ ಆತ್ಮಗಳಿಗೆ
ಚಿರಶಾಂತಿ ಕೋರಿ
ಅರೆ ನಿಮಿಷ ಕಣ್ಣು ಮುಚ್ಚಿ
ನಿಮ್ಮ ಪ್ರತಿಬಿಂಬವ
ನೀವೇ ನೋಡಿ.......
No comments:
Post a Comment