Thursday, January 19, 2012

ಸಖೀ ಗೀತ

ಸಖೀ....

ಹೊನ್ನವರ್ಣದ ದ್ರಾಕ್ಷಿ
ಗೊಂಚಲಿನಂತೆ ಕಾಣುವ
ನಿನ್ನ ಕಾಲ್ಬೆರಳುಗಳು
ಹೆಜ್ಜೆ-ಹೆಜ್ಜೆಗೂ
ನುಲಿವ ಗೆಜ್ಜೆಗಳ ಹೊತ್ತು
ತಿರುಗುವ
ಆ ಪುಟ್ಟ ಪಾದಗಳು
ಅತ್ತಿತ್ತ ಸುಳಿದಾಡುವಾಗ
ಎನ್ನೆದೆಯಲ್ಲಿ ಕೋಲಾಹಲ
ಪಂಚಮ ಮಿಡಿಯುವುದು
ಹೃದಯ ವೀಣೆಯಲಿ

ಮಾತಾಡಲು
ಬಾಯ್ದೆರೆಯುವ ಮುನ್ನ
ಎಲ್ಲವನೂ ಹೇಳಿಬಿಡುವ
ಆ ನಿನ್ನ ಕಣ್ಣುಗಳು
ಎನ್ನ ಸನಿಹದಲಿ
ಕುಳಿತುಬಿಡು ಸಾಕು
ಮೌನಗೀತೆ ಮೊಳಗುವುದು
ಅಂತರಾಳದಿಂದ.... :)

Friday, December 30, 2011

ಸಖೀ ಗೀತ

ಸಖೀ.....
ಮತ್ತೊಂದು ಸಂಜೆ

ಪಡುವಣದಿ
ದಾಪುಗಾಲು ಇಡುತ್ತಿರುವ
ಭಾಸ್ಕರ
ದೂರದಿಗಂತದಾಚೆ
ಶರಧಿ ಭೂಮಿಯ ಸಂಗಮದಿ
ಮಿಲನದ ಕಲರವ

ರವಿತೇಜನ ರಭಸಕೆ
ಅಲೆಗಳ ನಲಿದಾಟ
ಭುಗಿಲೆದ್ದ ನೆನಪುಗಳು
ಎದೆಯಾಳದಿಂದ ಹೊಮ್ಮಿ
ನೀಲಾಕಾಶದಿ ಚಿಮ್ಮಿ
ಇರುಳಿನಲಿ ಬೆಳಗುವುದು
ತಾರೆಗಳ ರಂಗೋಲಿ

ನಿನ್ನ ಒಡನಾಟದ ಪ್ರತಿಕ್ಷಣ
ಅಚ್ಚೊತ್ತಿದೆ ಎನ್ನ ಅಂತರಂಗದಲಿ
ಹಿತವಾದ ನೋವು
ಹೃದಯದಲಿ ಬಾಧಿಸಿದೆ
ನೀನಿಲ್ಲವೆಂಬುದು ನೆಪಮಾತ್ರವಾಗಿ
ಅನುಕ್ಷಣವೂ ನಲಿಯುವೆ
ಮನದಾಳದಲ್ಲಿ.... :)

ಸಖೀ ಗೀತ

ಸಖೀ

ಒಡಲಾಳದಲ್ಲಿ
ಏನೋ ತಳಮಳ
ಭಾವ ತರಂಗಗಳ
ಸುಳಿಯಲ್ಲಿ
ಇಣುಕಿ ನೋಡಿದರೆ
ಆಳಕ್ಕಿಳಿದಂತೆ
ಪಾತಾಳ ದರ್ಶನ
ರಸಾತಳದಾಚೆಗೂ
ಕಾಣುವುದು
ನಿನ್ನದೇ ಪ್ರತಿರೂಪ

ಸುನಾಮಿ ಅಬ್ಬರವ
ಅವಿತಿಟ್ಟುಕೊಂಡು
ಬಿಮ್ಮು ತೋರಿಸುವ
ಶಾಂತ ಸಾಗರದ
ಮುಖವಾಡ
ಅಂತರಾಳದಲ್ಲಿ ತುಮುಲ
ಭುಗಿಲೇಳುವ ಸಮಯ
ಮುಸ್ಸಂಜೆಯಲಿ
ದಿಗಂತದಾಚೆ ಮೂಡುವುದು
ನಿನ್ನ ಪ್ರತಿಬಿಂಬ

ತೀರದಾಚೆ ನಿಂತು
ಕೈಬೀಸಿ ಕರೆಯುವ
ನಿನ್ನ ಪರಿಯು
ಉಕ್ಕಿ ಹರಿಯುವ ನದಿಯಲಿ
ಸೊಕ್ಕಿನಿಂದ ಜಿಗಿದು
ನಿನ್ನ ಸೇರುವ ಹಂಬಲ
ಗುರಿಯೊಂದೇ ಮಿಲನ
ಗಮಿಸುವ ದಾರಿಯತ್ತ
ಇಲ್ಲವೆನ್ನ ಗಮನ....

Friday, November 11, 2011

ಕವಿತೆ

ಅವಳು ಅನುಕ್ಷಣವೂ ಕಾಡುತ್ತಾಳೆ
ಅರುಣೋದಯದ ಸೊಬಗಿನಲ್ಲಿ
ಅದೇ ತಾನೆ
ಅರಳಿರುವ ಹೂವಿನ ಸೊಬಗಿನಲ್ಲಿ
ಕಣ್ಣಿಗೆ ಕಾಣದಿದ್ದರೂ
ಸೆಳೆಯುವ ಪರಿಮಳದಲ್ಲಿ

ಅವಳು ಕಾಣುತ್ತಾಳೆ
ಹೊಟ್ಟೆಪಾಡಿಗಾಗಿ ಓಡುವ
ದುಡಿಯುವ ಶ್ರಮಜೀವಿಗಳ ಕೈಗಳಲ್ಲಿ
ದಿನವಿಡೀ ದುಡಿದು ಜೀವಾಮೃತವನರಸುವ
ಕುಡುಕರ ದಾಹದ ಕಂಗಳಲಿ

ಅವಳು ಕಾಣುತ್ತಾಳೆ
ಹಸಿವಿನ ಪಾತ್ರೆ ಹೊತ್ತು ತಿರುಗುವ
ನಿರ್ಗತಿಕ ಭಿಕ್ಷುಕರ ನೋಟದಲ್ಲಿ
ಅಜೀರ್ಣವಾಗುವಷ್ಟು ತಿಂದು
ಅರಗಿಸಲು ಯತ್ನಿಸುವ ಜನರ ಪರಿಶ್ರಮದಲ್ಲಿ

ಅವಳು ಕಾಣುತ್ತಾಳೆ
ಪ್ರೇಮಿಯನು ಕಾಯುತ್ತಿರುವ
ಕಂಗಳ ನಿರೀಕ್ಷೆಯಲ್ಲಿ
ಸುಂದರಿಯರ ಮುಡಿಯನೇರಲು
ಕಾದಿರುವ ಹೂಮಾಲೆಯಲ್ಲಿ

ಅವಳು ಕಾಣುತ್ತಾಳೆ
ಭ್ರೂಣವನು ಹೊತ್ತು ತಿರುಗುವ
ಗರ್ಭಿಣಿಯ ಪ್ರಸವ ವೇದನೆಯಂತೆ
ಮನದಲ್ಲೇ ಮುಲುಕುತ್ತ
ಭಾವನೆಗಳ ಸೋಸಿ ಪದಗಳ ಮೂಸೆಗೆ
ಇಳಿಯುವ ಕವಿ ಹೃದಯದಲ್ಲಿ.....