Monday, December 10, 2012

ವಿಪರ್ಯಾಸ

ಪುಸ್ತಕದ

ಕೊನೆಯ ಪುಟದಲ್ಲಿ
ರಟ್ಟಿನ ಮೇಲೆ
ಬರೆದಿರುವ ಅವಳ ಹೆಸರು
ಹಲವು ಬಾರಿ ಬರೆದು
ಅವರಿವರು ನೋಡಿಯಾರು
ಎಂಬ ಅಳುಕಿನಲಿ
ಕಾಟು, ಗೀಟು ಹೊಡೆದು...
ಅಳುಕಿಸಲೆತ್ನಿಸಿ
ಅದರಲ್ಲಿಯೇ
ನವ್ಯಕಲೆಯನ್ನೂ ಮೀರಿಸುವ
ಚಿತ್ರವನೂ ಬಿಡಿಸಿ
ಅಕ್ಕ-ಪಕ್ಕ
ಯಾರೂ ಇಲ್ಲದಾಗ
ಮನದಲ್ಲಿ ಸಂಚಲನ ಮೂಡಿಸಿದ
ಚಂಚಲೆಯ ನೆನೆಯುತಾ
ಏಕಾಗ್ರಚಿತ್ತದಿಂದ
ರವಿವರ್ಮನಂತೆ ಅವಳ
ಚಿತ್ರವನೂ ಬಿಡಿಸಿ

ಕಾಲೇಜು ಕಟ್ಟೆಯನು
ಹಲವಾರು ಸಲ ಎಡವಿ
ಬಾಳ ಕಟ್ಟಿಕೊಳ್ಳುವ
ಹಂಬಲದಲಿ ಹಗಲಿರುಳು
ಅಲೆದಾಡಿ
ಹಸಿವು-ಬಾಯಾರಿಕೆಗಳ
ಹೊತ್ತು ತಿರುಗಿ
ಮರಳಿ ಗೂಡಿಗೆ ಬಂದಾಗ
ಕಿಲುಬು ಕಾಸು ಕಾಣದಿರುವಾಗ
ಹಗಲಿರುಳೂ ಉರುಹೊಡೆದು
ಗಳಿಸಿದ ಪದವಿಯನೆ ನೆನೆದು
ಹಳೆಯ ಪುಸ್ತಕಗಳನು
ರದ್ದಿ ಹಾಕುವ ಸಮಯದಿ
ಮತ್ತೆ ಪ್ರತ್ಯಕ್ಷವಾಯಿತು
ಕೊನೆಯ ಪುಟ
ಕಣ್ಮುಂದೆ ಮೂಡಿದ
ಅವಳು
ಪಿಸುಮಾತಿನಲಿ ಉಲಿದಳು
ಗೆಳೆಯಾ ಮರೆಯದಿರು
ಇದು ಬದುಕಿನ ಮೊದಲ ಪುಟ

No comments:

Post a Comment