ಕಿಷ್ಕಿಂಧೆಯಂಥಾ
ನನ್ನ ರೂಮಿನ
ಧೂಳಿನ ಕಣಗಳ ಮೇಲೆ
ನೀನಂದು ಅಡಿಯಿಟ್ಟು
ನನ್ನ ಮನದೊಳಗೆ
ಇಣುಕಿ ನೋಡಿದ ಕ್ಷಣದಿಂದ
ನೀ ನೆಟ್ಟ ಪ್ರೇಮದ ಬೀಜ
ಮೊಳಕೆಯೊಡೆದು
ನಳನಳಿಸುತ್ತಿದೆ ಇಂದಿಗೂ
ನಿನ್ನ ಪಾದದ ಗುರುತು
ಅಚ್ಚಳಿಯದಂತೆ ಉಳಿಸಿದೆ
ಎನ್ನ ಮನೆಯನು ಬೆಳಗುವವರೆಗೆ
ಮುರುಕು ಕುರ್ಚಿಯಲ್ಲಿ
ನೀನು ಕುಳಿತು
ಅಂದು ಆಡಿದ
ಮೊದಲ ಮಾತು
ಮನದಾಳದಿ ಹಸಿರಾಗಿದೆ ಇಂದಿಗೂ
ನಿನ್ನ ವೈಯ್ಯಾರಕೆ
ಉದುರಿದ ಮಲ್ಲಿಗೆ ಹೂವು
ಒಣಗಿದರೇನಂತೆ
ಎನ್ನ ಹೃದಯದಿ
ಇನ್ನೂ ಹಸನಾಗಿದೆ
ಪ್ರೇಮದ ಸುವಾಸನೆಯ
ಹರಿಸುತ ಅನವರತ
No comments:
Post a Comment