ಅಂದು ಜರುಗಿದ ದುಷ್ಯಂತ-ಶಕುಂತಲೆಯರ ಪ್ರಣಯ ಭರತವರ್ಷದಲ್ಲಿ ದಾಖಲಿಸಲ್ಪಟ್ಟಿರುವ ಶ್ರೇಷ್ಠ ಪ್ರೇಮಕಾವ್ಯ. ಕಾಳಿದಾಸನ "ಅಭಿಜ್ಞಾನ ಶಾಕುಂತಲೆ " ನಿಮಗೆಲ್ಲರಿಗೂ ಗೊತ್ತು. ಆದರೆ ಇಲ್ಲಿ ನಾನು ನಿಮಗೆ ಹೇಳುತ್ತಿರುವುದು ಅಮಾಯಕ ಯುವತಿಯೊಬ್ಬಳನ್ನು ಪ್ರೀತಿಸಿ, ಬಾಳ ಪಯಣವು ಆರಂಭವಾಗುವ ಮೊದಲೇ ನಡುನೀರಿನಲ್ಲಿ ಕೈಕೊಟ್ಟು ಓಡಿ ಹೋಗಿರುವ ಆಧುನಿಕ ಯುವಕ ದುಷ್ಯಂತನೊಬ್ಬನ ಪ್ರೇಮಗಾಥೆ
ಶಕುಂತಲೆ
ನಮ್ಮ ಶಕುಂತಲೆ ಕಾಯುತ್ತಿದ್ದಾಳೆ
ಹೃದಯದರಸ
ದುಶ್ಯಂತನ ನಿರೀಕ್ಷೆಯಲ್ಲಿ
ಕೊಳದ ತಿಳಿನೀರಿನಂತೆ
ನಿರ್ಮಲವಾದ, ನಿಷ್ಕಲ್ಮಶ
ಮನಸಿನಾ ಹುಡುಗಿ
ಕುಡಿನೋಟದಾ ಕಲ್ಲನೆಸೆದು
ಹುಡುಗಿಯ ಮನದಾಳದಿ
ಮನೆ ಮಾಡಿದ, ಪ್ರೇಮಜಾಲವ ಬೀಸಿ
ಮನದೊಳಗೆ ಪ್ರೇಮ ಬೀಜಾಂಕುರಗೈದು
ಕಣ್ಣಿನಾಳದ ಕನಸುಗಳಿಗೆ ವರ್ಣಗಳ ಸುರಿದು
ಪ್ರೇಮಾಗ್ನಿಯಲಿ ತನು-ಮನಗಳ ತರ್ಪಣಗೈದ
ಆಸೆಗಣ್ಣಿನ ಹುಡುಗಿ,
ಚಿಗುರು ಮೀಸೆಯ ಹುಡುಗ
ವಿಹರಿಸಿದರು ಪ್ರೇಮಸಾಗರದಿ
ತೇಲುತ್ತ, ಮುಳುಗುತ್ತ
ದಡವ ಸೇರುವ ಮುನ್ನ
ಕಣ್ಮರೆಯಾದನೇ ಹೃದಯದರಸ
ಮನದಾಳದಿ ಮೊಳೆತ ಪ್ರೇಮ
ಸುಂದರ ಕನಸುಗಳ ಕನವರಿಸುತ್ತ
ಪ್ರಸವಿಸಿತು ಕಟುಸತ್ಯವ
ಶಕುಂತಲೆ ಕಾಯುತ್ತಿದ್ದಾಳೆ
ಹಲವು ವಸಂತಗಳಿಂದ
ದುಶ್ಯಂತನ ಆಗಮನಕ್ಕಾಗಿ
ಹಾ!!! ಮರೆತೆ
ಭರತನೂ ಕಾಯುತ್ತಿದ್ದಾನೆ
ತಾಯ ಆಸೆಗಳಿಗೆ ನೀರೆರೆಯುತ್ತ
ತಂದೆ ಎಂಬುವ ಪ್ರಾಣಿ
ಇಂದು-ನಾಳೆ
ಎಂದಾದರೂ ಬರುವನೆಂದು
No comments:
Post a Comment