Wednesday, September 9, 2009

ಸ್ನೇಹ

ಈ ಬದುಕಿನಲ್ಲಿ ಪ್ರಾಯಶಃ ನಾವೆಲ್ಲರೂ ಇಂತಹ ಅನುಭವಕ್ಕೆ ಬಂದಿರುತ್ತೇವೆ ಎಂಬುದು ನನ್ನ ಅನಿಸಿಕೆ. ಏನಿದು ಅಂತಹ ಮಾತು ? ಎಂಬ ಪ್ರಶ್ನೆ ಈಗಾಗಲೇ ನಿಮ್ಮ ಮನದಲ್ಲಿ ಮೂಡಿ ಕುತೂಹಲವನ್ನು ಕೆರಳಿಸುತ್ತಿರಬಹುದು ಅಲ್ಲವೇ ?
ಒಂದು ಸಲ ವಿಚಾರ ಮಾಡಿ ನೋಡಿ, ಮಾನವ ಸಮಾಜ ಜೀವಿ ಎಂಬುದಾಗಿ ನಮಗೆಲ್ಲಾ ಗೊತ್ತು. ಇದರಿಂದಾಗಿ ನಾವು ನಮ್ಮ ದೈನಂದಿನ ಬದುಕಿನಲ್ಲಿ ಹಲವಾರು ಜನರನ್ನು ಭೇಟಿಯಾಗುತ್ತೇವೆ. ಕೆಲವರು ಭೇಟಿಯು ಕ್ಷಣಿಕವಾಗಿ ಅವರ ನಮ್ಮ ಬದುಕಿನ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಇನ್ನೂ ಕೆಲವರು ನಮ್ಮ ಮನದಲ್ಲಿ ಆಳವಾಗಿ ಬೇರೂರುತ್ತಾರೆ. ಯಾವುದೇ ಸಂಬಂಧ ಸ್ನೇಹ, ಪ್ರೇಮ ಇಲ್ಲದಿದ್ದರೂ ನಾವು ಅವರನ್ನು ಬಯಸುತ್ತೇವೆ. ಅವರನ್ನು ಕಾಣದಿದ್ದರೆ ನಮಗೆ ಏನೋ ಒಂದು ತರಹ ಮನಸಿಕೆ ಕಸಿವಿಸಿಯಾಗುತ್ತದೆ. ಇಂತಹ ಜನರಲ್ಲಿ ನಮ್ಮ ದೈನಂದಿನ ಪ್ರಯಾಣ ಸ್ಥಳಗಳಂತಹ ಬಸ್/ರೈಲು ನಿಲ್ದಾಣಗಳಲ್ಲಿ ನಿಯಮಿತವಾಗಿ ಸಿಗುವವರು ಇರುತ್ತಾರೆ. ನಾವು ಅವರ ಬಗ್ಗೆ ಏನೂ ಅರಿಯದಿದ್ದರೂ ಸಹ ಅವರು ಕಾಣದಿದ್ದರೆ ಏನೋ ಒಂದು ತೆರನಾದ ಆತಂಕ, ಯಾಕೋ ಏನೋ ಇವತ್ತು ಅವರು ಬಂದಿಲ್ಲವಲ್ಲ, ಏನು ಕಾರಣ ಇರಬಹುದು ಎಂಬ ತವಕ. . . . .
ಇನ್ನು ಕೆಲವರು ನಮ್ಮ ಕಛೇರಿ ಸ್ಥಳದಲ್ಲಿ ಸಿಗುವವರು, ಇವರೆಲ್ಲಾ ತುಂಬಾ ಎನ್ನದಿದ್ದರೂ ಸಹ ಅಲ್ಪ-ಸ್ವಲ್ಪ ಪರಿಚಯ ಹೊಂದಿರುವವರು. ಈ ತರಹದ ಜನರು ನಮ್ಮ ಜೀವನದ ಅವಿಭಾಜ್ಯ ಭಾಗವಾಗುತ್ತಾರೆ. ಏನೋ ಒಂದು ತರಹದ ಬಂಧನ ನಮ್ಮ ಮಧ್ಯದಲ್ಲಿ ಬೆಸುಗೆಯಾಗುತ್ತದೆ. ಒಂದು ಸಲ ವಿಚಾರ ಮಾಡಿ ಇಂತಹ ಜನರು ನಮ್ಮ ನಿಮ್ಮ ಎಲ್ಲರ ಬಾಳಿನಲ್ಲಿಯೂ ಬಂದಿರುತ್ತಾರೆ.
ಈ ಸಂಬಂಧವನ್ನು ನಾವು ಸ್ನೇಹ ಎನ್ನಲಾಗದು !! ಏಕೆಂದರೆ ಸ್ನೇಹವು ತುಂಬಾ ಸಮಯದ ಸಾನಿಧ್ಯದ ನಂತರ ಎರಡು ವ್ಯಕ್ತಿಗಳ ಮಧ್ಯದಲ್ಲಿ ಪರಸ್ಪರ ತಿಳುವಳಿಕೆ, ಸಮಾನ ಯೋಚನೆಗಳು ಅಥವಾ ಸಮಾನ ಹವ್ಯಾಸಗಳು ಇದ್ದರೆ ಮಾತ್ರ ಬೆಳೆಯುತ್ತದೆ.
ಈ ಸಂಬಂಧವನ್ನು ನಾವು ಪ್ರೇಮ ಎನ್ನಲಾಗದು !! ಏಕೆಂದರೆ ಪ್ರೇಮ ಸಾಮಾನ್ಯವಾಗಿ ಎರಡು ಪರಸ್ಪರ ವಿರುದ್ಧ ಲಿಂಗಿಗಳ ಮಧ್ಯದಲ್ಲಿ ಉಂಟಾಗುವ ಸಂಬಂಧ. ಅಥವಾ ಅವಿವಾಹಿತ ಜೋಡಿಗಳ ಮಧ್ಯದಲ್ಲಿ ಸಂಭವಿಸಬಹುದಾದ ಒಂದು ಮಧುರ ಅನುಭಾವ.
ಆದರೂ ಸಹ ಈ ಬಂಧನಗಳು ನಮ್ಮನ್ನು ಯಾವುದೋ ಮೋಡಿಯಲ್ಲಿ ಬೆಸೆಯುತ್ತವೆ. ಕಛೇರಿಯಲ್ಲಿ ಕಾಲಿಡುತ್ತಿದ್ದಂತೆಯೇ ನಮಗೆ ಅವರನ್ನು ಕಾಣದಿದ್ದರೆ ಏನೋ ಒಂದು ತರಹದ ಕಸಿವಿಸಿಯಾಗುತ್ತದೆ.


ಓ ಎನ್ನ ಸ್ನೇಹವೇ ...
ನಿನ್ನ ನೆನಹು ಮುದಗೊಳಿಸುವುದು
ಎನ್ನ ಮನವ
ಸಂತಸವು ತುಂಬುವುದು ಅಂತರಾಳದಲಿ

ನಿನ್ನ ನೆನೆಯುತಲಿ
ಮನಸು ಮುದಗೊಳ್ಳುವುದು
ಸಂತಸವು ಉಕ್ಕುವುದು
ಹೃದಯಾಂತರಾಳದಲಿ

ನಿನ್ನ ನೋಟವು ಎನಗೆ
ಅಭಯವನು ನೀಡುವುದು
ನೂರು ಸಂಕಟಗಳನು
ಮೀರಿ ಮೆರೆಯಲು ಜಗದಿ

ಸ್ನೇಹವೋ, ಮೋಹವೋ,
ಕಾಮವೋ ನಾನರಿಯೆ
ಮನವು ಬಯಸುವುದು ನಿನ್ನ ಸಂಗವ
ಅನುದಿನವು ಅನುಕ್ಷಣವೂ

No comments:

Post a Comment