Sunday, June 11, 2017

ಅವ್ಯಕ್ತ

ಭೋರ್ಗರೆಯುತ್ತಾ ಬಂದು
ದಡದಲ್ಲಿರುವಾ ಬಂಡೆಗೆ ಅಪ್ಪಳಿಸಿದಾ
ಅಲೆಯ ಬಿಂದುವೊಂದರಲಿ 
ಸೂರ್ಯರಶ್ಮಿ
ಕಾಮನಬಿಲ್ಲು ಬಿತ್ತಿದ್ದು ವಿಸ್ಮಯವೆನಲ್ಲಾ


ತನ್ನೊಡಲ ಸುತ್ತ ತಾನೇ ಸುತ್ತುವ ಭೂಮಿ
ಹಠಬಿಡದೆ ಹಗಲಿರುಳು ದಡವ ಮುತ್ತಿಕ್ಕುವ ಶರಧಿ
ಸೂರ್ಯ-ಚಂದ್ರ ತಾರೆಗಳಿಗೆ ಆಶ್ರಯವಿತ್ತು
ಭೂಮಿ-ಶರಧಿಗಳ ಮೇಲೆ ವ್ಯಾಪಿಸಿರುವ ಅಗಾಧ ಆಗಸವ
ಬೆಸೆದಿರುವ ಕಾಮನಬಿಲ್ಲನು ನೋಡಿ
ಅಲ್ಲಿಯೇ ವಿಹರಿಸುತ್ತಿದ್ದ ಯುಗಳ ಜೋಡಿ
ಕಣ್ಣ ನೋಟದಲ್ಲಿಯೇ ನೂರು-ಸಹಸ್ರ ವರ್ಣದ
ಕನಸುಗಳ ಕನವರಿಸಿದ್ದೂ ವಿಸ್ಮಯವೆನಲ್ಲಾ

ವಿಸ್ಮಯ ಆವರಿಸಿದುದು
ತದೇಕಚಿತ್ತನಾಗಿ ವಿಸ್ಮೃತಿಯಲಿ ಕುಳಿತ
ಕುರುಚಲು ಗಡ್ಡದ ಕವಿಗೆ
ಬಂಡೆಗೆ ಅಪ್ಪಳಿಸಿದ ಅಲೆಯ ಬಿಂದುವಿನ
ಒಡಲಿನಲಿ ಕಾಮನಬಿಲ್ಲು ಹೇಗೆ ಬಂತು
ಮುತ್ತು-ರತ್ನಗಳಂತೆ ಕಡಲಾಳದಲಿ
ಕಾಮನಬಿಲ್ಲುಗಳು ಅಡಗಿರಬಹುದಾ
ಅಥವಾ
ಸೂರ್ಯರಶ್ಮಿ ನಭೋಮಂಡಲದಿಂದ ತಂದು
ಬಿಂದುವಿನೊಳಗೆ ಬಿತ್ತಿತಾ
ಶರಧಿಯ ಅಲೆಯೊಂದರ ಬಿಂದು
ಧಗಧಗನೆ ಉರಿಯುತ್ತ ಬೆಳಕು ನೀಡುವ
ಭಾಸ್ಕರನ ಒಡಲಿನಿಂದ ಹೊಮ್ಮಿದ ಕಿರಣ
ತೃಣಮಾತ್ರ ಇದ್ದರೂ
ಕ್ಷಣಮಾತ್ರದಿ ಕಾಮನಬಿಲ್ಲು ಅರಳಿಸಿದ್ದು
ವಿಸ್ಮಯವೋ ವಿಸ್ಮಯ 

ನನಗನಿಸಿದ್ದು

ತೆರೆಯ ಮರೆಯಲ್ಲಿ 
ಮೆರೆದಾಡುತ್ತಿರುವ ನೂರು ಭಾವಗಳು
ಅಂತರಂಗದಲಿ
ಹಾರಾಡುತ್ತಿರುವ ಬಣ್ಣ-ಬಣ್ಣದ ಚಿಟ್ಟೆಗಳು


ಎಲ್ಲಿ ಬಳಿಯಲಿ ಎದೆಯ ಬಣ್ಣ
ಎಲ್ಲಿ ಎರಚಲಿ ಕನಸುಗಳ ಬೀಜ
ಎಲ್ಲಿ ದಹಿಸಲಿ ಕಷ್ಟ-ನೋವು-ಸಂಕಟಗಳ
ಕಳೇಬರವ

ಎತ್ತ ಇಣುಕಿ ನೋಡಿದರೂ
ಕಾಣುವುದೆಲ್ಲ ಬಂಜರು
ಕನಸು ಮೊಳಕೆಯೊಡೆಯಲಾರದ
ಸಂಕಟಗಳ ಕಳೇಬರ ದಹಿಸಲಾರದ
ರಣಭೂಮಿಯೇ ಎಲ್ಲಾ

ಇಳಿಸಲಾರದೆ ಹೊರೆಯ
ಹೊತ್ತು ಸಾಗುತ್ತಿದ್ದೇನೆ
ಗೊತ್ತು ಗುರಿಯಿಲ್ಲದೆಡೆಗೆ
ಬದುಕು ಜಟಕಾ ಬಂಡಿ
ವಿಧಿಯಾದರ ಸಾಹೇಬ......

ಕನವರಿಕೆ.....

ಕನಸುಗಳ ವ್ಯವಹಾರ
ನನಗೆ ಬಾಲ್ಯದಿಂದಲೇ ಬಂದಿದ್ದು
ಮಣ್ಣಿನ ಮನೆಯ 
ತೊಲೆಗಳ ಕೆಳಗೆ, ನಾಗೊಂದಿಯ ಮೇಲೆ
ಸಾಲು-ಸಾಲಾಗಿ ಅಲಂಕರಿಸಿದ
ದೇವರು ದಿಂಡರು, ಮಹಾತ್ಮರ ಫೋಟೋಗಳು
ಹಿರಿಯರು ಹೇಳುತ್ತಿದ್ದ
ರಮ್ಯ-ರಮಣೀಯ ರೋಮಾಂಚಕ
ನೀತಿಕಥೆಗಳು, ಪುರಾಣ-ಭಾಗವತ
ಕಾಗಕ್ಕ-ಗುಬ್ಬಕ್ಕನ ಕಥೆಗಳು
ಇವುಗಳನ್ನೆಲ್ಲಾ
ಹಸಿಗೋಡೆಯಂಥಹ ನನ್ನ ಅಂತಃಪಟಲದ ಮೇಲೆ
ಅಚ್ಹೊತ್ತಿದಂತೆ ಹೇಳುತ್ತಾ
ಕಂಡು ಕಾಣದ
ನಾಳೆಗಳ ಕನಸು ಬಿತ್ತಿದರು.....


ನಂತರ ನೋಡಿ ಶುರುವಾಗಿದ್ದು
ಬರೀ ವ್ಯವಹಾರ-ವ್ಯಾಪಾರ
ದೊಡ್ಡೋನಾದಮೇಲೆ
ನೀನು ಹಿಂಗಾಗಬೇಕು, ಹಂಗಾಗಬೇಕು
ಹೆಂಗೆಂಗೋ ಆಗಬೇಕು
ನನ್ನತನವೆಂಬುದರ ಬೆಲೆ ತೆತ್ತು
ಕನಸುಗಳ ಕೊಂಡು
ಮಸ್ತಕದ ಮಾಡಿಗೆ ತುರುಕಿದ್ದೇ-ತುರುಕಿದ್ದು
ಅವರು ಮಾರಿದರೋ, ನಾನೇ ಕೊಂಡುಕೊಂಡೆನೋ
ಇಂದಿಗೂ ಅರಿವಾಗದು......

ಈ ಕನಸುಗಳ ವ್ಯಾಪಾರಸ್ಥರಿಗೆ
ಮಾನವೀಯತೆ, ಸಂಸ್ಕಾರ, ಪ್ರೀತಿ
ಇಂಥಾದ್ದೆಲ್ಲಾ ಅಲರ್ಜಿಯಿರಬೇಕು
ಅಂಥಾ ಸರಕು
ಅವರೆಂದಿಗೂ ಮಾರಲಿಲ್ಲ
ನಾನು ಅಷ್ಟೇ
ಅಂತಹುದನ್ನು ಖರೀದಿಸಲು
ಕಿಂಚಿತ್ತೂ ಯೋಚಿಸಿರಲಿಲ್ಲಾ.....

ಕೊನೆಗೂ
ಏನೇನೋ ಆಗಲು ಹೋಗಿ, ಏನೋ ಆಗಿಬಿಟ್ಟೆ
ಇಂದಿಗೂ ಪಳೆಯುಳಿಕೆಯಾಗಿರುವ
ಕೆಲವು ಕನಸುಗಳು ಕೊಳೆತು ನಾರುತ್ತಿವೆ
ಬಿಡುಗಡೆಗಾಗಿ, ಬಟವಾಡೆ ಮಾಡಲು
ಇನ್ನಿಲ್ಲದಂತೆ ಯಾಚಿಸುತ್ತವೆ
ನಾನೋ ಕನಸುಗಳ ಮಟ್ಟಿಗೆ
ಇನ್ನಿಲ್ಲದ ಜಿಪುಣ-ಕೃಪಣ
ನನ್ನತನವ ಕಳೆದುಕೊಂಡು ಕೊಂಡಿರುವ
ಸರಕು ಹಾಗೆ ಬಿಡಲಾದೀತೇ
ಕೊಳೆಯಲಿ ನಾನು ಎನ್ನುವ ಮುಖವಾಡ ಕಳಚುವವರೆಗೆ......

Saturday, April 29, 2017

ಸಖೀ ಗೀತ



ಇದು ಕವಿತೆಯಲ್ಲಾ
ಅವಳ
ಇರುವಿಕೆಯ ಗೈರುಹಾಜರಿಗೆ 
ಸಾಕ್ಷಿ ಮಾತ್ರ


ಪ್ರೇಮದನುಭಾವದಲಿ
ತನ್ಮಯವಾಗಿ ತನ್ನಿರವನ್ನೇ ಮರೆತು
ಕಳೆದುಹೋಗಿರುವಾ ಕವಿ
ವಿರಹದಾ ಬೇಗುದಿಯಲಿ ಮೈಮರೆತು
ಬರೆದ ಸಾಲುಗಳೆಲ್ಲಾ
"ಪಲ್ಲವಿ"ಯಲ್ಲಿಯೇ ಲೀನವಾಗಿ
"ಚರಣ"ಗಳು
ಪ್ರೇಮಿಯ ಶರಣಾಗತಿಯ ಸೂಚಿಸುವುದು
ಅವಳ ಗೈರುಹಾಜರಿಗೆ
ಸಾಕ್ಷಿ ಮಾತ್ರ

ಅದೋ ನೋಡಿ
ಅರುಣೋದಯಡಿ ಅರಳಿದಾ ಮಲ್ಲಿಗೆ
ಆ ದೇವನ ಪೂಜೆಗೂ ಸಲ್ಲದೆ
ಅವಳ ಮುಡಿಗೂ ಏರದೆ
ಬಳ್ಳಿಯಲ್ಲಿಯೇ ಬಾಡಿ ಉದುರಿ
ಧರಾಶಾಹಿಯಾಗಿರುವುದು
ಅವಳ ಗೈರುಹಾಜರಿಗೆ
ಸಾಕ್ಷಿ ಮಾತ್ರ

ಏಕಾಂತದಲಿ, ಜನಜಂಗುಳಿಯಲಿ
ಅವಳ ನೆನಪುಗಳ ದಾಳಿಗೆ ಸಿಲುಕಿ, ನಲುಗಿ
ಕಾರಣವಿಲ್ಲದೆ ಮೊಗದಲಿ ಮಂದಹಾಸ ಬೀರಿ
ಮರುಕ್ಷಣದಲ್ಲಿಯೇ
ವ್ಯಗ್ರನಾಗಿ ಹುಬ್ಬುಗಳ ಗಂಟಿಕ್ಕಿ
ಅನ್ಯಮನಸ್ಕತೆಯಿಂದಾ
ತನ್ನಿರವನ್ನೇ ಮರೆತು ಮೈಮರೆತು
ಶೂನ್ಯದಲಿ ಅವಳ ಪ್ರತಿರೂಪ ಕಾಣುವುದು
ಅವಳ ಗೈರುಹಾಜರಿಗೆ
ಸಾಕ್ಷಿ ಮಾತ್ರ