Saturday, April 7, 2012

ಸಖೀಗೀತ

ಸಖೀ....
ನೀ ಎನ್ನ ಪಕ್ಕದಲ್ಲಿಯೇ
ಕುಳಿತಿದ್ದರೂ
ಎಳೆದು ಎದೆಗಪ್ಪಿಕೊಂಡು
ಎದೆಯಾಳದಲ್ಲಿ
ಹುದುಗಿಸಿಕೊಳ್ಳುವಾಸೆ ಎನಗೆ

ಅಂತರಾಳದ
ಕಣ-ಕಣದಲ್ಲಿಯೂ
ನೀನು ತುಂಬಿದ್ದರೂ
ಅರೆಕ್ಷಣವೂ ಕಾಣದಿರೆ
ಕಳೆದುಹೋದೀಯ
ಎಂಬ ಕಳವಳವು ಮನಕೆ

ಹೃದಯದಲಿ ಮಿಡಿಯುವ
ಒಂದೊಂದು ಬಡಿತವೂ
ನಿನ್ನ ಹೆಸರು ನುಡಿಯುವುದು
ನಿನ್ನುಸಿರಿನಲ್ಲಿಯೇ
ಮಿಳಿತಗೊಳ್ಳುವ ತವಕ ಮೂಡುವುದು

Thursday, March 1, 2012

ಸಖೀಗೀತ

ಸಖೀ...
ಇಂದೇಕೋ ಮತ್ತೆ
ಬರಡಾಗಿದೆ ಎನ್ನೆದೆಯ ತೋಟ
ಭಾವನೆಗಳೆಲ್ಲಾ ಖಾಲಿಯಾಗಿ
ಹೃದಯಬಡಿತವೂ ಕ್ಷೀಣವಾಗಿದೆ

ಹನಿ ನೀರಿಗಾಗಿ ಬಿರಿದ
ವಸುಂಧರೆಯಂತೆ ಕಾಯುತಿದೆ
ಆಗಸದೆಡೆಗೆ ಆಸೆಯಿಂದ
ನೋಡು ನೀ ಎನ್ನೆಡೆಗೆ
ಒಮ್ಮೆ ಪ್ರೀತಿಯಿಂದ

ನಿನ್ನ ನಸುನಗು ಅರಳಲಿ
ಎನ್ನೆದೆಯ ಮೇಲೆ....

ನೋಟ

ಎಷ್ಟು ದಿನವಾಯ್ತು ಗೆಳೆಯಾ....

ಅವಳ ಕಣ್ಣ ನೋಟದಲ್ಲಿಯೇ
ಮೂಡಿತ್ತು ಕವಿತೆಯ ಬಯಕೆ

ಸೂರ್ಯ ಚಂದ್ರರು ಮರೆಯಲಿಲ್ಲ
ಕಾಲದ ಗತಿಯ, ತಮ್ಮ ಪಥವ
ಮೋಡಗಳು ಮರೆಯಾದರೂ
ಅಂಚಿನಿಂದ ತೂರುವರು ಬೆಳಕಾ

ಘಳಿಗೆಗಳು ಕಳೆಯುತ್ತಿವೆ
ಹಗಲು-ರಾತ್ರಿ ಕಣ್ಣಿವೆಗಳನು ತೆರೆದು
ಕಾಯುತ್ತಿರುವೆ ನಿನ್ನ ಪಿಸುಮಾತಿಗೆ
ನೀನೇಕೆ ಉಲಿಯಲಾರೆ ಒಲುಮೆಯ ನುಡಿಯಾ

ನಾ ಬಲ್ಲೆ ನಿನ್ನ ಅಂತರಾಳದ ಪ್ರೀತಿ
ಆದರೂ ಮಲ್ಲಿಗೆ ಅರಳಿದಾಗಲೇ ಪರಿಮಳವು
ಅಕ್ಷರಗಳ ನಾ ನೀಡುವೆ ನಿನಗೆ
ಪ್ರೀತಿ-ಪ್ರೇಮದ ಅಕ್ಕರೆಯ ನೀ ಹರಿಸು

ಪರಶಿವನ ಮುಡಿಯಿಂದ ಹರಿದು ಬರಲಿಲ್ಲವೇ
ಭಾಗೀರಥಿ ಆ ಭಗೀರಥನ ತಪೋಬಲದಿಂದ
ಸುರಿಸು ನೀ ಪ್ರೇಮಧಾರೆ, ಹರಿಸು ಆ ಕಾವ್ಯಧಾರೆ
ನನ್ನೊಲವ ಬಲದಿಂದ, ನನ್ನೊಲವ ಬಲದಿಂದ....

ಸಂಧ್ಯಾ

ಬಾನ ತುದಿಯಿಂದ

ಜಾರುವ ಭಾಸ್ಕರನ
ಹೊಂಗಿರಣಗಳು...
ಕಾರ್ಮೋಡಗಳ ಮೇಲೆಲ್ಲಾ ಹರಡಿ
ಮೋಡದಂಚಿನಲಿ ಮೂಡಿದೆ
ಬಣ್ಣ ಬಣ್ಣದ ಚಿತ್ತಾರ

ಭಾಸ್ಕರನ ಬೆಚ್ಚನೆಯ
ಪ್ರೀತಿಯ ನೋಟವನು ಹೀರಿ
ಮೋಡಗಳ ಮೈಮನಗಳು ಪುಳಕಗೊಂಡು
ಹನಿಹನಿಯಾಗಿ ಸುರಿದಿದೆ ನೋಡಾ
ಪ್ರೇಮ ಕಾರಂಜಿ...

ಪ್ರೇಮಿಗಳ ಸಂದೇಶ
ಹೊತ್ತೊಯ್ಯುವ ಬಿಳಿಮೋಡಗಳು
ಭಾಸ್ಕರನ ಪ್ರೀತಿಗೆ ನಸುನಾಚಿ
ದೂರದಿಂದಲೇ ಮೆರೆದವು
ಅಂಚಿನಲೆಲ್ಲಾ ಕೆಂಪೇರಿ....

ದೂರ ದಿಗಂತದಲಿ
ಮತ್ತೆ ಬರುತಿರುವ ಭಾಸ್ಕರನ ಕಾಯುತ್ತ
ಅಲೆಗಳು ನಲಿದಾಡಿ ನುಲಿದಿವೆ
ಸಂತಸವ ಚಿಮ್ಮುತ್ತಾ
ವಸುಂಧರೆಯ ಒಡಲಿಗೆ.....