Monday, September 13, 2010

ವಿರಹಿ


ಅಗಲಿದ ನಲ್ಲೆಯ
ನೆನಪಿನ ದೋಣಿಯಲಿ
ಭವದ ಜಂಝಡಗಳ ಮೀರಿ
ದೂರ ದಿಗಂತದಾಚೆ ನಿರಂತರ
ಪಯಣಿಸುತ್ತಿರುವ ಯೋಗಿ

ಅಂತೆ-ಕಂತೆಗಳ ಯೋಚನೆಯಲ್ಲಿ
ಕಾಲನ ಕೈಯೊಳಗೂ ಸಿಗದೆ
ಅನುಕ್ಷಣವೂ ಕಾಲಾತೀತವಾಗಿ
ಸಂತೆಯಲ್ಲಿಯೂ ಏಕಾಂತವಾಗಿ
ಕನಸು ಕಾಣುವ ಹೋಗಿ


ನೂರು ಮನುಜರ ನಡುವೆ
ಹಲವು ಮನಸುಗಳ ಮಧ್ಯೆ
ಏಕಾಂಗಿಯಂತೆ
ನಲ್ಲೆಯೊಡನೆ ಭಾವನಾಲೋಕದಲಿ
ವಿಹರಿಸುವ ಭಾವಜೀವಿ

ನಿದ್ರಾಭಂಗ

ಮಧ್ಯ ರಾತ್ರಿಯಲಿ

ದಿಗ್ಗನೆ ಎದ್ದು ಕುಳಿತಾಗ
ನಿದ್ದೆ ಎಲ್ಲೋ ಕಳೆದುಹೋದಂತೆ

ಕಳೆದಿದ್ದು ಬರೀ ನಿದ್ದೆಯಲ್ಲ
ಕಳವಳದಿಂದ ನುಡಿಯಿತು
ಎನ್ನ ತಳಮಳಗೊಂಡ ಮನಸು

ದೂರದಲ್ಲಿ ಕೇಳಿಸುತ್ತಿರುವ
ಬೌಂವ್ ಎಂದು ಊಳಿಡುವ
ಬೀದಿನಾಯಿಯ ಗೋಳಿನ ರೋದನ

ತಾಳತಪ್ಪಿದ ಹೃದಯದ
ಆಳದಲಿ ಬೇರೂರಿರುವ ಭಯ ಬಡಿದೆಬ್ಬಿಸಿ
ನರನಾಡಿಗಳಲಿ ನಡುಕ ಹುಟ್ಟಿಸಿ


ದೇವರ ಮುಂದಿನ ನಂದಾದೀಪದ ಬೆಳಕಿನಲಿ
ಜಿರಳೆ, ಇಲಿ ಹುಳು-ಹುಪ್ಪಡಿಗಳ ನೆರಳು
ಕಣ್ಮುಚ್ಚಿದರೂ ಮನದಾಳಗಿ ಕಾಡಿ


ನೀರವ ರಾತ್ರಿಯ ಘೋರ ನಿಶಬ್ದದಲಿ
ನಿರಂತರವಾಗಿ ಕಾಲನ ಕುದುರೆಯ
ಕಟಕಟ ಸದ್ದಿನ ಗೋಡೆ ಗಡಿಯಾರ


ಈ ರಾತ್ರಿ ಕಳೆದು, ನಾಳೆಯಾದರೆ ಸಾಕು
ಕಳವಳಗೊಂಡ ಮನದಾಳದಿ
ಕ್ಷೀಣಗೊಂಡಂತೆ ಬೆಳಗುತ್ತಿರುವ ಆಶಾಕಿರಣ

Friday, September 3, 2010

ಎಲ್ಲಿರುವೆ

ಕಣ್ಣುಗಳು ಅರಸುತ್ತಿವೆ

ನಿನ್ನ ಇರುವಿಕೆಯನ್ನು
ನೂರಾರು ನಯನಗಳ ನಡುವೆ
ನಿನ್ನ ನೋಟವನ್ನು

ನಸುನಗುವ, ಹುಸಿಗೋಪದ
ತುಂಟ ನೋಟದ, ಮಂದಸ್ಮಿತವಾದ
ಕಾವ್ಯಲೋಕದ ಕಲ್ಪನೆಗಳ ಹೊತ್ತು
ಹಾಗೋ-ಹೀಗೋ ನಿನ್ನನ್ನು ಕಾಣಲು ಕಾತರಿಸುತ್ತ
ಅರಸುತ್ತಿವೆ ನನ್ನ ನಯನಗಳು

ನೀಲಿ ಬಾನಿನಲಿ ದಟ್ಟೈಸಿದ
ಕಾರ್ಮೋಡಗಳ ನಡುವೆ
ತೂರಿ ಬರುತಿಹ ಸೂರ್ಯರಶ್ಮಿಯ ತೆರದಿ
ಮಾನಿನಿಯರ ಮಧ್ಯೆ ಕಾಣುವ ಆಶೆಯಿಂದ
ಅರಸುತ್ತಿವೆ ನನ್ನ ನಯನಗಳು

ಇರುಳ ನೀಲಾಂಬರದಿ
ಅಗಣಿತ ತಾರೆಗಳ ತೋಟದಲಿ
ಬೆಳ್ಳಿಮೋಡಗಳ ನಡುವೆ
ರಾರಾಜಿಸುವ ಚಂದ್ರಬಿಂಬದಲಿ
ಅರಸುತ್ತಿವೆ ನನ್ನ ನಯನಗಳು


ಮಲ್ಲಿಗೆ, ಸಂಪಿಗೆ, ಗುಲಾಬಿಗಳ
ನಂದನದ ತೋಟದಲಿ ಬೀಸುವ ತಂಗಾಳಿ
ತಿಂಗಳಿನ ಬೆಳದಿಂಗಳಲಿ
ನಿನ್ನ ಇರುವಿಕೆಯನ್ನು ಅನವರತ
ಅರಸುತ್ತಿವೆ ನನ್ನ ನಯನಗಳು

ನಲ್ಲೆ

ಎನ್ನ ಹೃದಯವನು
ಕದ್ದೆ ನೀನು
ಮನಸ ಮನಸೂರೆಗೊಂಡೆ
ನನ್ನ ಭಾವನೆಗಳನೆಲ್ಲ
ಬರಸೆಳೆದುಕೊಂಡು
ಇಹ-ಪರವ ಮರೆಸಿದೆ
ಭಾವನೆಗಳಿಗೂ ಅಭಾವ
ಈಗ
ನನಗೆ ಅರಿವಾಗುತ್ತಿದೆ
ನಾನೇಕೆ ಬರೆಯಲಾರೆ
ಕವಿತೆ.