ನಮ್ಮೂರೊಳಗ ಎಲ್ಲರೂ ನಮ್ಮಜ್ಜಗ ಮಾಸ್ತರ ಅಂತಲೇ ಕರೀತಿದ್ದರು. ಹಂಗ ನೋಡಿದ್ರ ಅವರಿಗೂ ಮಾಸ್ತರಿಕೆಗೂ ವೃತ್ತಿಯಿಂದ ಯಾವುದೇ ತರಹದ ಸಂಬಂಧ ಇರಲಿಲ್ಲ. ಆದರ ಅವರು ಕಲಿಯುವದಕ್ಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳ ಪ್ರೋತ್ಸಾಹ ಕೊಡುತಿದ್ದರು. ಸುಮಾರು 1970ರ ದಶಕದಲ್ಲಿ ಶಿಕ್ಷಣಕ್ಕ ಇನ್ನೂ ಅಂತಹ ಪ್ರಾಶಸ್ತ ಸಿಕ್ಕಿರಲಿಲ್ಲ, ಜನರಿಗೆ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸಬೇಕು, ಕಲಿಸಬೇಕು ಅನ್ನೂ ತಿಳುವಳಿಕೆ ಬಂದಿರಲಿಲ್ಲ. ಆ ಸಮಯದಲ್ಲಿ ಸದ್ದಿಲ್ಲದೇ ನಮ್ಮಜ್ಜ ಎಲ್ಲಾ ಹುಡುಗರನ್ನ ಶಾಲೆಗೆ ಕಳಿಸಿರಿ ಅಂತ ಊರೊಳಗ ಎಲ್ಲರಿಗೂ ಹೇಳತಿದ್ದಾ. ಬಡವರಿಗೆ ಶಾಲೆಯ ಫೀಸು ತುಂಬತಿದ್ದಾ, ಅಗತ್ಯ ಇದ್ದವರಿಗೆ ಪುಸ್ತಕ ಕೊಡಸತಿದ್ದಾ. ಒಟ್ಟಿಗೆ ಶಿಕ್ಷಣಕ್ಕ ಅಂದ್ರ ಅವನಿಗೆ ಒಂದು ತೆರನಾದ ಪ್ರೀತಿ. ಸಾಕ್ಷರತೆ ಎಲ್ಲರಿಗೂ ದೊರಕಬೇಕು ಅನ್ನೂದು ಅವನ ಸಿದ್ದಾಂತ ಆಗಿತ್ತು.
ನಾನು ನನ್ನ ಪ್ರಾಥಮಿಕ ವಿದ್ಯಾಭ್ಯಾಸ ಸಮಯದಲ್ಲಿ ಶಾಲೆಯೊಳಗ ಕಲಿತದ್ದಕ್ಕಿಂತ ನಮ್ಮಜ್ಜನ ಕೈಯೊಳಗ ಕಲಿತದ್ದ ಹೆಚ್ಚು. ಇವತ್ತಿಗೂ ನನ್ನ ಗಣಿತ ವಿಶೇಷವಾಗಿ ಹೇಳಬೇಕಂದ್ರ ನನ್ನ ಬಾಯಿಲೆಕ್ಕ ಮುಂತಾದವುಗಳ ಜಾಣ್ಮೆ ನಮ್ಮಜ್ಜನ ಕಠಿಣವಾದ ತರಬೇತಿಯ ಕೊಡುಗೆ ಅಂತ ನಾ ಹೇಳಬಲ್ಲೆ. ನನಗ ಇಷ್ಟ ಇದ್ದರೂ, ಇಲ್ಲದಿದ್ದರೂ ಸಹ ನಾನು ಅವರ ಕೈಯೊಳಗ ಕಲಿಯಬೇಕಾಗಿತ್ತು. ಯಾಕಂದ್ರ ಮಾಸ್ತರ ಅಂದ್ರ ನಮ್ಮೂರೊಳಗ ಎಲ್ಲರಿಗೂ ವಿಶೇಷ ಗೌರವ ಇತ್ತು. ನಮ್ಮಜ್ಜನ ಕಡೆ ಗಣಿತ ಹೇಳಿಸಿಕೊಳ್ಳಿಕ್ಕೆ ಊರಿನ ಎಲ್ಲಾ ಮನಿಯವರು ತಮ್ಮ ಮಕ್ಕಳನ ನಮ್ಮಜ್ಜನ ಕಡೆ ಕಲಿಸಾಕ ಕಳಿಸಿಕೊಡತಿದ್ರು. ಹಿಂಗಾಗಿ ನನ್ನ ಜೊತೆಗೆ ನನಗಿಂತ ದೊಡ್ಡವರೂ ನಮ್ಮಜ್ಜನ ಕೈಯೊಳಗ ತರಬೇತಿ ತಗೋತಿದ್ರು. ಆದರ ನಮ್ಮಜ್ಜ ಬಹಳ ಶಿಸ್ತಿನ ಮನುಷ್ಯಾ ಕಲಿಸೂದರೊಳಗ ಬಹಳ ಕಟ್ಟುನಿಟ್ಟು. ಎಷ್ಟಕ್ಕಾತಿ ಅಷ್ಟು ತಿಳಿಸಿ ಹೇಳತಿದ್ರು ನಡು-ನಡುವ ದಡ್ಡರಿಗೆ ಛಡಿಏಟಿನ ಶಿಕ್ಷೆ ಇರತಿತ್ತು. ಅವರು ಕೊಡು ಏಟಿಗೆ ಬಹಳ ಮಂದಿ ಅರ್ಧಕ್ಕ ಬಿಟ್ಟು ಹೋಗತಿದ್ದರು. ಆದರ ನಮ್ಮಜ್ಜ ಬಂದವರಿಗೆ ಕಲಿಸತಿದ್ದಾ, ಹೋದವರ ಮರಿತಿದ್ದಾ. ಅದು ಅವರವರ ಸಾಮರ್ಥ್ಯ ಅಂತ ಸುಮ್ಮನಾಗತಿದ್ದ. ಈ ರೀತಿ ಇರುವಾಗ ನನಗ ನನ್ನ ಜೊತೆ ಇರುವ ದೊಡ್ಡ ಹುಡುಗರ ಪುಸ್ತಕ ಉಚಿತವಾಗಿ ಸಿಗತಿದ್ದವು. ನಾನು ಯಾವುದೇ ಕ್ಲಾಸು ಇದ್ದರೂ ಸಹ ನನ್ನ ಕ್ಲಾಸಿನ ಅಭ್ಯಾಸದ ಜೊತೆಗೆ ನನಗಿಂತ ದೊಡ್ಡವರ ಪುಸ್ತಕದೊಳಗಿನ ಅಭ್ಯಾಸ ನನಗ ನಮ್ಮಜ್ಜ ಮಾಡಸತಿದ್ದ.
ನಾನು ಆಗ ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದೆ. ಯಾವ ಕ್ಲಾಸ್ ಓದಿದರೇನು ನನಗ ಯಾವಾಗಲೂ ಹಳೇ ಪುಸ್ತಕ ಮಾತ್ರ ಸಿಗತಿದ್ದವು. ಈಗಿನಂಗ ಅವಾಗ ಎಲ್ಲರೂ ಹೊಸ ಪುಸ್ತಕಾನ ತೊಗೋಬೇಕು ಅಂತ ಇರಲಿಲ್ಲ. ಇದೂ ಅಲ್ಲದ ನಂದು ಸರ್ಕಾರಿ ಶಾಲೆ ಈಗಿನಂಗ ಅವಾಗ ಎಲ್ಲರಿಗೂ ಉಚಿತ ಪುಸ್ತಕ ಕೊಡೂ ಯೋಜನಾ ಇರಲಿಲ್ಲ. ಹಳೇ ಪುಸ್ತಕ ಓದಿ-ಓದಿ ಅವನ್ನ ನೋಡಿ-ನೋಡಿ ನನಗ ಬಹಳ ಬೇಜಾರಾಗ್ತಿತ್ತು. ಆದ್ರ ನನಗ ನಮ್ಮಜ್ಜ ಹೊಸ ಪುಸ್ತಕ ಕೊಡಸ್ತಿರಲಿಲ್ಲ. ಕೇಳಿದ್ರ "ಪುಸ್ತಕ ಹಳೇದಾದ್ರೇನು ಹೊಸದಾದ್ರೇನು ಅದರೊಳಗ ಏನು ಇರಬೇಕು ಅದ ಇರತತಿ.... ಪುಸ್ತಕ ಹೆಂಗೈತಿ ಅಂತ ನೋಡಬೇಡ ಅದರೊಳಗಿನ ಜ್ಞಾನ ಏನದ ಅಂತ ನೋಡಬೇಕು" ಅಂತಿದ್ದಾ.
ಈ ಮಾತ ಎಲ್ಲರೂ ಒಪ್ಪಬೇಕಾದದ್ದೇ ಆದರ ಅದನ್ನ ಅರ್ಥ ಮಾಡಿಕೊಳ್ಳೋ ತಿಳುವಳಿಕೆನೂ ಇರಲಿಲ್ಲ ತಿಳಕೊಳ್ಳುವಂತ ವಯಸ್ಸೂ ಆಗಿರಲಿಲ್ಲ. ನನಗೂ ಎಲ್ಲಾರಂಗ ಹೊಸ ಪುಸ್ತಕ ಬೇಕು ಅನ್ನೂದ ನನಗ ಬಹಳ ಆಸೆ ಆಗ್ತಿತ್ತು. ಹಳೇ ಪುಸ್ತಕ ಇದ್ರೂ ಅವನ್ನ ಹೊಲದು (ಈಗಿನಂಗ ಅವಾಗ ಬೈಂಡಿಂಗ್ ಅಂಗಡಿ ಇರಲಿಲ್ಲ) ಗಟ್ಟಿ ಮಾಡಿ ಕೊಡತಿದ್ರು. ಹಿಂಗ ಇರುವಾಗ ಹೆಂಗಾದ್ರೂ ಮಾಡಿ ಹೊಸ ಪುಸ್ತಕ ಕೊಡಿಸಿಕೊಳ್ಳಬೇಕು ಅಂತ ನಾನು ಒಂದು ಐಡಿಯಾ ಮಾಡಿದೆ. ಪುಸ್ತಕ ಗಟ್ಟಿ ಇದ್ರ ಹೊಸಾದು ಕೊಡಸೂದಿಲ್ಲ ಅದಕ್ಕ ಅದನ್ನ ನಡುವ ಅಡ್ಡಡ್ಡ ಹರಿದು, ಹೊಸ ಪುಸ್ತಕ ಕೊಡಸ್ರಿ ಅಂತ ನಮ್ಮಜ್ಜಗ ಕೇಳಿದೆ. ಹೊಸ ಪುಸ್ತಕ ಬೇಕು ಕೊಡಸ್ರಿ ಅಂದ್ಯಾ, "ಈಗ್ಯಾಕ ಹೊಸ ಪುಸ್ತಕ ನಿನಗ ?" ಅಂದ್ರು, ಇಲ್ಲ ನನ್ನ ಪುಸ್ತಕ ಹರದತಿ ಅದಕ ಇದೊಂದ್ಸಲಾ ಹೊಸಾದು ಕೊಡಸ್ರಿ ಅಂತ ಕೇಳಿದೆ. "ಯಾರವ ನಿನ್ನ ಪುಸ್ತಕ ಹರದಾವ, ನಡಿ ನಾ ನಿನ್ನ ಶಾಲೆಗೆ ಬರ್ತೀನಿ, ನಮ್ಮ ಹುಡುಗನ ಪುಸ್ತಕ ಯಾರು ಹರದಾರ ಅಂತ ಕೇಳ್ತೀನಿ" ಅಂದ ನಮ್ಮಜ್ಜ.
ನಮ್ಮಜ್ಜಗ ನಮ್ಮೂರೊಳಗ ಯಾರೂ ಎದುರು ಮಾತಾದ್ತಿಲ್ಲಾ, ಶಾಲಿಯೊಳಗ ನಮ್ಮ ಶಿಕ್ಷಕರು ಮಾಸ್ತರ ಮೊಮ್ಮಗ ಮೇಲಾಗಿ ಅವರ ಕೈಯೊಳಗ ತಯಾರಾಗ್ಯಾನ, ಕ್ಲಾಸಿಗೇ ಫರ್ಸ್ಟ ಬರತಾನ ಅಂತ ನನಗೂ ಒಂದು ರೀತಿ ವಿಶೇಷ ಗೌರವ ಕೊಡತಿದ್ರು. ಇಷ್ಟಾಗಿ ಹೊಸಾ ಪುಸ್ತಕ ಕೊಡಸ್ರೀ ಅಂತ ಗಂಟಬಿದ್ರ, ಗಟ್ಟಿಯಾಗಿರೂ ಪುಸ್ತಕ ಹರಿದಿದ್ದ ಪ್ರಕರಣ ಇನ್ನ ಹೊರಬೀಳತೈತಿ ಅಂತ ನಾನು ಬ್ಯಾಡಬಿಡ್ರಿ ಇದರೊಳಗ ಈ ವರ್ಷ ಹೆಂಗರ ಕಳೀತಿನ ಅಂತ ಹೇಳಿ ಪ್ರಕರಣಕ್ಕ ಕೊನೆ ಹಾಡಿದೆ.
ಅವತ್ತ ನಮ್ಮಜ್ಜ ಹೇಳಿದಂತ ಮಾತು, ನನ್ನ ಮನಸಿನೊಳಗ ಬೇರೂರಿತು. ಪುಸ್ತಕ ಹರಿದ ಈ ಪ್ರಕರಣ ಪುಸ್ತಕಗಳ ಬಗ್ಗೆ ಪ್ರೀತಿ ಬೆಳೆಸಿತು, ಪುಸ್ತಕಗಳನ್ನು ಬಹಳ ಕಾಳಜೀಪೂರ್ವಕ ಇಟಕೋಬೇಕು ಅನ್ನೋ ಪಾಠ ಕಲಿಸಿತು. ಅಂದಿನಿಂದ ನನ್ನ ಎಲ್ಲಾ ಪಠ್ಯಪುಸ್ತಕಗಳು ಅತ್ಯಂತ ನೀಟಾಗಿ ಇಟ್ಟುಕೊಳ್ಳೊ ಹವ್ಯಾಸ ಬೆಳೀತು. ಇವತ್ತಿಗೂ ಪುಸ್ತಕ ಯಾವುದೇ ಇರಲಿ ಅದನ ಜತನದಿಂದ ಇಟ್ಕೊಳ್ಳೋದು ಇಂದಿಗೂ ನನಗ ಅಭ್ಯಾಸ ಆಗಿದೆ.....
No comments:
Post a Comment